ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ: ಉಡುಪಿಯಲ್ಲಿ ಮಧ್ವರಾಜ್ ಗೆ ಮತ್ತೆ ಗೆಲ್ಲುವ ತವಕ

By Sachhidananda Acharya
|
Google Oneindia Kannada News

ಒಂದು ಕಾಲದಲ್ಲಿ ದಕ್ಷಿಣ ಕನ್ನಡದ ಭಾಗವೇ ಆಗಿದ್ದ ಉಡುಪಿ ಈಗ ಪ್ರತ್ಯೇಕ ಜಿಲ್ಲೆಯಾಗಿದೆ. ಉಡುಪಿಯ ನಗರ ಪ್ರದೇಶ ಮತ್ತು ಒಂದಷ್ಟು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರವೇ ಉಡುಪಿ.

ಉಡುಪಿ ಹಲವು ಕಾರಣಗಳಿಗೆ ವಿಶ್ವ ವಿಖ್ಯಾತಿಯನ್ನು ಪಡೆದಿದೆ. ಉಡುಪಿಯ ಅಷ್ಟಮಠಗಳು, ಮುದ್ರಣ ಮತ್ತು ಪತ್ರಿಕೋದ್ಯಮಗಳಿಗೆ ಹೆಸರಾದ ಮಣಿಪಾಲ, ಮಣಿಪಾಲ ಶಿಕ್ಷಣ ಸಂಸ್ಥೆಗಳು, ಹೆಸರಾಂತ ಎಂಜಿಎಂ ಕಾಲೇಜು, ಸುಂದರ ಮಲ್ಪೆ ಬೀಚ್, ಸೈಂಟ್ ಮೆರೀಸ್ ದ್ವೀಪ, ಕೋಡಿ ಬೇಂಗ್ರೆ ಕಡಲ ಕಿನಾರೆ ಜತೆಗೆ 'ಉಡುಪಿ' ಬ್ರಾಹ್ಮಣರ ಹೋಟೆಲ್ ಗಳಿಗೂ ಖ್ಯಾತಿಯನ್ನು ಪಡೆದಿದೆ.

ಕ್ಷೇತ್ರ ಪರಿಚಯ: ಕಾರ್ಕಳದಲ್ಲಿ ಸುನಿಲ್ ಕುಮಾರ್ ಗೆ ಸಿಗುತ್ತಾ 3ನೇ ಗೆಲುವು?ಕ್ಷೇತ್ರ ಪರಿಚಯ: ಕಾರ್ಕಳದಲ್ಲಿ ಸುನಿಲ್ ಕುಮಾರ್ ಗೆ ಸಿಗುತ್ತಾ 3ನೇ ಗೆಲುವು?

ಇಲ್ಲಿನ ಮಲ್ಪೆ ಬಂದರು ಹಲವು ಮೀನುಗಾರರಿಗೆ ಉದ್ಯೋಗ ನೀಡಿದ್ದರೆ, ಬೀಚು ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವೂ ಹೌದು. ಉಡುಪಿ ಒಂದು ರೀತಿಯಲ್ಲಿ ಚಿಕ್ಕ, ಚೊಕ್ಕ ನಗರ. ವಿಂಡೋಸ್ ಹಾಗೂ ಮ್ಯಾಕ್ ಆಪರೇಟಿಂಗ ಸಿಸ್ಟಂಗಳಿಗೆ ಕೆಲಸ ಮಾಡುವ ಪ್ರಖ್ಯಾತ ಸಾಫ್ಟ್ ವೇರ್ ಕಂಪೆನಿ 'ರೋಬೊಸಾಫ್ಟ್' ಉಡುಪಿಯಲ್ಲೇ ಹುಟ್ಟಿ ಬೆಳೆದ ಕಂಪೆನಿ ಎಂಬುದು ಇಲ್ಲಿನವರಿಗೆ ಹೆಮ್ಮೆಯ ವಿಚಾರ. ಜತೆಗೆ ಉಡುಪಿ ಹಲವು ಬ್ಯಾಂಕ್ ಗಳಿಗೆ ತವರೂ ಹೌದು.

Karnataka Assembly Election 2018: Udupi Constituency Profile

ಈ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷದ ಪ್ರಮೋದ್ ಮಧ್ವರಾಜ್. ಬಹಳ ದೀರ್ಘ ಅವಧಿಗೆ ಈ ಕ್ಷೇತ್ರವನ್ನು ಅವರ ತಾಯಿ ಮನೋರಮಾ ಮಧ್ವರಾಜ್ ಕೂಡಾ ಪ್ರತಿನಿಧಿಸಿದ್ದರು ಎಂಬುದು ವಿಶೇಷ.

ಈ ಕ್ಷೇತ್ರದಲ್ಲಿ ಕರ್ನಾಟಕದ ಮಾಜಿ ಗೃಹ ಸಚಿವ, ಬಿಜೆಪಿಯ ಮೇರು ನಾಯಕ, ದಿವಂಗತ ವಿ.ಎಸ್ ಆಚಾರ್ಯ ಮತ್ತು ಮನೋರಾಮಾ ಮಧ್ವರಾಜ್ ನಡುವೆ ನಡೆಯುತ್ತಿದ್ದ ಸ್ಪರ್ಧೆ ರಾಜ್ಯದ ಗಮನ ಸೆಳೆಯುತ್ತಿತ್ತು.

ಕ್ಷೇತ್ರ ಪರಿಚಯ: ಬೈಂದೂರಲ್ಲಿ ಗೋಪಾಲ ಪೂಜಾರಿಗೆ ಸಿಗುವುದೇ 5ನೇ ಗೆಲುವು?ಕ್ಷೇತ್ರ ಪರಿಚಯ: ಬೈಂದೂರಲ್ಲಿ ಗೋಪಾಲ ಪೂಜಾರಿಗೆ ಸಿಗುವುದೇ 5ನೇ ಗೆಲುವು?

1972ರಲ್ಲೇ ಇಲ್ಲಿ ಭಾರತೀಯ ಜನಸಂಘದಿಂದ (ಬಿಜೆಪಿಯ ಹಿಂದಿನ ರೂಪ) ಕಣಕ್ಕಿಳಿದಿದ್ದ ವಿ.ಎಸ್ ಆಚಾರ್ಯ ಮತ್ತು ಕಾಂಗ್ರೆಸ್ ನ ಮನೋರಮಾ ಮಧ್ವರಾಜ್ ನಡುವೆ ಸ್ಫರ್ಧೆ ಏರ್ಪಟ್ಟಿತ್ತು. ಈ ಚುನಾವಣೆಯಲ್ಲಿ ಮಧ್ವರಾಜ್ ಗೆಲುವಿನ ನಗೆ ಬೀರಿದ್ದರು. 1978ರಲ್ಲೂ ಮಧ್ವರಾಜ್ ಗೆದ್ದರು.

ಆದರೆ 1983ರಲ್ಲಿ ಇಲ್ಲಿ ವಿ.ಎಸ್ ಆಚಾರ್ಯರು ಗೆದ್ದು ಬಿಜೆಪಿ ಪಾಲಿಗೆ ಗೆಲುವಿನ ಖಾತೆ ತೆರೆದರು. ಕೇವಲ 3 ಸಾವಿರ ಮತಗಳ ಅಂತರದಲ್ಲಿ ಅವರು ಎರಡು ಬಾರಿಯ ಶಾಸಕಿ ಮನೋರಮಾ ಮಧ್ವರಾಜ್ ಗೆ ಸೋಲುಣಿಸಿದ್ದರು.

ಕ್ಷೇತ್ರ ಪರಿಚಯ: ಕಾಪುವಿನಲ್ಲಿ ಬಿಜೆಪಿ-ಕಾಂಗ್ರೆಸ್ ಇಬ್ಬರಿಗೂ ಸಮಾನ ಅವಕಾಶಕ್ಷೇತ್ರ ಪರಿಚಯ: ಕಾಪುವಿನಲ್ಲಿ ಬಿಜೆಪಿ-ಕಾಂಗ್ರೆಸ್ ಇಬ್ಬರಿಗೂ ಸಮಾನ ಅವಕಾಶ

1985ರಲ್ಲಿ ಮತ್ತೆ ಮಧ್ವರಾಜ್ ಗೆದ್ದರು. 1989ರಲ್ಲೂ ಫಲಿತಾಂಶ ಪುನರಾವರ್ತನೆಯಾಯಿತು. ಆದರೆ ಈ ಬಾರಿ ಎರಡನೇ ಸ್ಥಾನಕ್ಕೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಯು.ಆರ್ ಸಭಾಪತಿ ಬಂದು ಕೂತಿದ್ದರು. ಮತ್ತು ಮಧ್ವರಾಜ್ ಕೇವಲ 1 ಸಾವಿರ ಚಿಲ್ಲರೆ ಮತಗಳಿಂದ ಪ್ರಯಾಸದ ಗೆಲುವು ಸಾಧಿಸಿದ್ದರು.

1994ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಯು.ಆರ್.ಸಭಾಪತಿ ನಾಲ್ಕು ಬಾರಿಯ ಶಾಸಕಿಗೆ ಸೋಲುಣಿಸಿದರು. 1999ರಲ್ಲಿ ಮನೋರಮಾ ಮಧ್ವರಾಜ್ ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತು. ಸಭಾಪತಿ ಕಾಂಗ್ರೆಸ್ ಗೆ ಬಂದು ಗೆಲುವು ಸಾಧಿಸಿದರು. ಈ ಬಾರಿ ಎರಡನೇ ಸ್ಥಾನದಲ್ಲಿ ಬಿಜೆಪಿ ಬಂದು ಕುಳಿತಿತ್ತು. ಕೇವಲ 1 ಸಾವಿರ ಮತಗಳ ಅಂತರದಲ್ಲಿ ಬಿ. ಸುಧಾಕರ್ ಶೆಟ್ಟಿ ಸೋಲನುಭವಿಸಿದ್ದರು.

2004ರ ಹೊತ್ತಿಗೆ ಮನೋರಮಾ ಮಧ್ವರಾಜ್ ಬಿಜೆಪಿಗೆ ಬಂದು ಉಡುಪಿಯಿಂದ ಲೋಕಸಭೆಗೆ ಪ್ರವೇಶ ಪಡೆದರು. ಮತ್ತು 2004ರಲ್ಲಿ ಬಿಜೆಪಿಯ ರಘುಪತಿ ಭಟ್ ಉಡುಪಿಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ ಬಂತು. ಈ ಚುನಾವಣೆಯಲ್ಲಿ ಸಭಾಪತಿ ಸೋಲನುಭವಿಸಿದರು.

ವಿಶೇಷವೆಂದರೆ ಅಮ್ಮ ಬಿಜೆಪಿ ತೆಕ್ಕೆಗೆ ಜಾರಿದರೂ ಮಗ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ನಲ್ಲೇ ಉಳಿದಿದ್ದರು. 2004ರ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ಪಕ್ಕದ ಬ್ರಹ್ಮಾವರ (ಸದ್ಯ ಈ ಕ್ಷೇತ್ರವಿಲ್ಲ) ದಲ್ಲಿ ಚುನಾವಣೆಗೆ ನಿಂತು ಜಯಪ್ರಕಾಶ್ ಹೆಗ್ಡೆ ವಿರುದ್ಧ ಸೋತಿದ್ದರು.

2008ರ ಹೊತ್ತಿಗೆ ಮನೋರಮಾ ಮಧ್ವರಾಜ್ ಮತ್ತೆ ಕಾಂಗ್ರೆಸ್ ಗೆ ಬಂದರು. ಜತೆಗೆ ಮಗ ಪ್ರಮೋದ್ ಮಧ್ವರಾಜ್ ತಾಯಿಯ ಕ್ಷೇತ್ರ ಉಡುಪಿಯಲ್ಲಿ ಕಣಕ್ಕಿಳಿದರು. ಈ ಚುನಾವಣೆಯಲ್ಲಿ ರಘುಪತಿ ಭಟ್ ವಿರುದ್ಧ 2 ಸಾವಿರ ಮತಗಳಿಂದ ವಿರೋಚಿತ ಸೋಲುಂಡರು ಪ್ರಮೋದ್ ಮಧ್ವರಾಜ್.

ಆದರೆ, 2013ರ ಚುನಾವಣೆಯಲ್ಲಿ ಶಾಸಕ ರಘುಪತಿ ಭಟ್ ಲೈಂಗಿಕ ಹಗರಣ ಭಾರೀ ಸದ್ದು ಮಾಡಿತು. ಇದರಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿ 1999ರಲ್ಲಿ ಕಣಕ್ಕಿಳಿದಿದ್ದ ಬಿ. ಸುಧಾಕರ್ ಶೆಟ್ಟಿಯವರಿಗೆ ಟಿಕೆಟ್ ನೀಡಿತ್ತು. ಆದರೆ ಅಭ್ಯರ್ಥಿ ಬದಲಿಸಿಯೂ ಬಿಜೆಪಿ ಗೆಲ್ಲಲಿಲ್ಲ. ಶೆಟ್ಟಿ ವಿರುದ್ಧ ಪ್ರಮೋದ್ ಮಧ್ವರಾಜ್ ಸುಮಾರು 39 ಸಾವಿರಕ್ಕೂ ಅಧಿಕ ಮತಗಳ ಻ಅಂತರದಲ್ಲಿ ಭರ್ಜರಿ ಜಯಗಳಿಸಿ ಮೊದಲ ಬಾರಿಗೆ ವಿಧಾನ ಸೌಧದ ಮೆಟ್ಟಿಲು ಹತ್ತಿದರು.

ಜತೆಗೆ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರೂ ಆದರು. ಸದ್ಯ ಉಡುಪಿಯಲ್ಲಿ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಕಾಂಗ್ರೆಸ್ ನ ಶ್ರೀಮಂತ ಯುವ ರಾಜಕಾರಣಿ ಪ್ರಮೋದ್ ಮಧ್ವರಾಜ್. ಹಾಗಾಗಿ ಈ ಬಾರಿಯೂ ಅವರು ಗೆಲ್ಲುವ ತವಕದಲ್ಲಿದ್ದಾರೆ. ಅವರ ಓಟಕ್ಕೆ ಬಿಜೆಪಿ ಅಭ್ಯರ್ಥಿಗಳು ಅಡ್ಡಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಉಡುಪಿ ಪಾಲಿನ ಪ್ರಭಾವಿ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಈ ಬಾರಿ ಬಿಜೆಪಿಗೆ ಬಂದಿರುವುದು ಸ್ವಲ್ಪ ಮಟ್ಟಿಗೆ ಆ ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯೂ ಇದೆ. ಇನ್ನು ಇಲ್ಲಿ ಜೆಡಿಎಸ್ ಸ್ಪರ್ಧೆ ಯಾವತ್ತೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಪೈಪೋಟಿ ನೀಡಿದ ಉದಾಹರಣೆ ಇಲ್ಲ.

English summary
Karnataka Assembly Election 2018: Read all about Udupi assembly constituency of Udupi district. Get election news from udupi. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X