ಕ್ಷೇತ್ರ ಪರಿಚಯ : ತೇರದಾಳದಲ್ಲಿ ಈ ಬಾರಿ ಯಾರಿಗೆ ಗೆಲುವು?
ತೇರದಾಳ ಬಾಗಲಕೋಟೆ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ಸುಮಾರು ನಾಲ್ಕೂವರೆ ದಶಕಗಳಿಂದ ತೇರದಾಳವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಹೋರಾಟ ನಡೆಯುತ್ತಿದೆ. ತಾಲೂಕು ಕೇಂದ್ರ ಮಾಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆಯನ್ನು ನೀಡಲಾಗಿತ್ತು.
ತೇರದಾಳ ಕ್ಷೇತ್ರ ಹಾಲಿ ಶಾಸಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ. ಕ್ಷೇತ್ರದ ಶಾಸಕಿ ಮೇಲೆ ಯಾವುದೇ ಆರೋಪಗಳಿಲ್ಲ. ಆದರೆ, ತೇರದಾಳ ತಾಲೂಕು ಹೋರಾಟ ಸಮಿತಿ ಪಟ್ಟಣವನ್ನು ತಾಲೂಕು ಮಾಡಬೇಕು ಎಂದು ಇಂದಿಗೂ ಹೋರಾಟ ಮಾಡುತ್ತಿದೆ.
ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡಲು ಉಮಾಶ್ರೀ ಅವರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ ಎಂಬ ಅಭಿಪ್ರಾಯವಿದೆ. ನೇಕಾರರ ಹಲವು ಸಮಸ್ಯೆಗಳಿಗೆ ಉಮಾಶ್ರೀ ಅವರು ಸ್ಪಂದಿಸಿದ್ದಾರೆ ಎಂದು ಜನರು ಹೇಳುತ್ತಾರೆ. ಕ್ಷೇತ್ರದಲ್ಲಿ ನೇಕಾರ ಸಮುದಾಯದ ಮತಗಳು ನಿರ್ಣಾಯಕ. ನೇಕಾರ ಸುದಾಯದ ಬೆಂಬಲ ಉಮಾಶ್ರೀ ಅವರಿಗೆ ಇದೆ.

2013 ರ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಸಿದ್ದು ಸವದಿ ಕಣಕ್ಕಿಳಿದಿದ್ದರು. ಉಮಾಶ್ರೀ ಅವರ ವಿರುದ್ಧ ಸೋತಿದ್ದರು. ಬಿಜೆಪಿ-ಕೆಜೆಪಿ ಗೊಂದಲ ಕಾರಣದಿಂದಾಗಿ ಸಿದ್ದು ಸವದಿ ಅವರಿಗೆ ಸೋಲಾಗಿತ್ತು. ಬಿಜೆಪಿ ತೊರೆದು ಕೆಜೆಪಿ ಸೇರಿದ್ದ ಮುಖಂಡರಿಂದಾಗಿ ಬಿಜೆಪಿಗೆ ಅಭ್ಯರ್ಥಿಗೆ ಹಿನ್ನಡೆ ಉಂಟಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಈ ಹಿಂದೆ ಬಿಜೆಪಿ ಬಿಟ್ಟು ಕೆಜೆಪಿ ಸೇರಿದ್ದ ಬಸವರಾಜ ಬಾಳಿಕಾಯಿ ಮತ್ತೆ ಬಿಜೆಪಿ ಸೇರಿದ್ದಾರೆ, ಅವರು ಆಕಾಂಕ್ಷಿ. ಆದರೆ, ಸಿದ್ದು ಸವದಿ ಅವರಿಗೆ ಟಿಕೆಟ್ ಖಚಿತ ಎಂಬ ಸುದ್ದಿ ಇದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಜೆಡಿಎಸ್ ಪಕ್ಷದಿಂದ ಈ ಭಾಗದ ಶಿಕ್ಷಣ ಪ್ರೇಮಿ, ಸ್ಥಳೀಯರಾದ ಬಸವರಾಜ ಕೊಣ್ಣೂರು ಅವರು ಅಭ್ಯರ್ಥಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಲಸಿಗರಿಗಿಂತ ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡಬೇಕು ಎನ್ನುವ ಕೂಗು ಎದ್ದಿದೆ. ತಮ್ಮ ಕೈಗೆ ಸಿಗುವ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಅಲೆ ಎದ್ದಿರುವುದು ಜೆಡಿಎಸ್ ಪಾಲಿಗೆ ವರವಾಗುವ ಸಾಧ್ಯತೆ ಇದೆ.
2013ರ ಫಲಿತಾಂಶ
ಉಮಾಶ್ರೀ : 70,189
ಸಿದ್ದು ಸವದಿ (ಬಿಜೆಪಿ) : 67,590 ಮತಗಳು.












Click it and Unblock the Notifications