ಕ್ಷೇತ್ರ ಪರಿಚಯ: ಮಡಿಕೇರಿಯಲ್ಲಿ ಒಡೆಯುವುದೇ ಬಿಜೆಪಿ ಭದ್ರಕೋಟೆ?

Subscribe to Oneindia Kannada

ಮಡಿಕೇರಿ ಕೊಡಗು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಒಂದು. ಹಾಗೂ ತಾಲೂಕು ಮತ್ತು ಜಿಲ್ಲಾ ಕೇಂದ್ರವೂ ಹೌದು.

ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ಇಲ್ಲಿ ಲಿಂಗರಾಜ ಕಟ್ಟಿಸಿದ ಓಂಕಾರೇಶ್ವರ ದೇವಸ್ಥಾನ, ರಾಜಸೀಟ್, ಅರಮನೆಗಳಿವೆ. ಅಬ್ಬೀ ಜಲಪಾತ, ಮಡಿಕೇರಿಯ ಮಂಜು, ಮಡಿಕೇರಿ ದಸರಾ, ತಲ ಕಾವೇರಿ, ಭಾಗಮಂಡಲ, ಬೆಟ್ಟ ಗುಡ್ಡಗಳಿಂದ ಕೂಡಿದ ಚಾರಣ ತಾಣ ಮಂದಲ್ ಪಟ್ಟಿ, ಮುಗಿಲು ಪೇಟೆ.. ಹೀಗೆ ಹಲವು ಪ್ರವಾಸಿಗರ ನೆಚ್ಚಿನ ತಾಣಗಳೂ ಇಲ್ಲಿದ್ದು ಪ್ರವಾಸೋದ್ಯಮದ ನಕಾಶೆಯಲ್ಲಿ ಮಡಿಕೇರಿ ಮತ್ತು ಕೊಡಗಿಗೆ ವಿಶಿಷ್ಟ ಸ್ಥಾನಮಾನವನ್ನು ಕರುಣಿಸಿವೆ.

ಇವತ್ತಿಗೆ ಕೊಡಗು ದಕ್ಷಿಣ ಭಾರತದಲ್ಲೇ ಪ್ರಮುಖ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿದ್ದರೆ ಅದಕ್ಕೆ ಇಲ್ಲಿನ ಅತ್ಯಪೂರ್ವ ನಿಸರ್ಗವೇ ಕಾರಣ. ಜತೆಗೆ ಇಲ್ಲಿನ ವೈನ್ ಮತ್ತು ಪಂದಿ ಕರಿಯ ಕೊಡುಗೆಯೂ ಇದರ ಹಿಂದಿದೆ.

ಸದ್ಯಕ್ಕೆ ಕೊಡಗಿನಲ್ಲಿರುವುದು ಎರಡೇ ವಿಧಾನಸಭಾ ಕ್ಷೇತ್ರಗಳು. ಒಂದು ಮಡಿಕೇರಿ, ಇನ್ನೊಂದು ವಿರಾಜಪೇಟೆ. ಈ ಹಿಂದೆ ಇದ್ದ ಸೋಮವಾರ ಪೇಟೆ 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ರದ್ದಾಯಿತು. ಇಲ್ಲಿಂದಲೇ ಗೆದ್ದು ಆರ್. ಗುಂಡೂರಾವ್ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು ಗುಂಡೂರಾವ್ ಮತ್ತು ಬಿಎ ಜೀವಿಜಯ ನಡುವಿನ ರಾಜಕೀಯ ಕದನ ರೋಚಕವಾಗಿರುತ್ತು. ಆದರೆ ಆ ಕ್ಷೇತ್ರ ಇವತ್ತು ನೆನಪು ಮಾತ್ರ.

Karnataka Assembly Election 2018: Madikeri Constituency Profile

ಕಡಿಮೆ ಕ್ಷೇತ್ರಗಳನ್ನು ಹೊಂದಿದ್ದು, ಸೀಮಿತ ರಾಜಕೀಯ ಶಕ್ತಿ ಪ್ರದರ್ಶನದ ಕಾರಣಕ್ಕೆ ಎಲ್ಲಾ ಪಕ್ಷಗಳಿಂದಲೂ ಸದಾ ಕಾಲ ಅವಕೃಪೆಗೆ ಒಳಗಾದ ಜಿಲ್ಲೆ ಇದು. ಇದೇ ಕಾರಣಕ್ಕೆ ಇಲ್ಲಿನ ಜನರೂ ಅಷ್ಟೆ. ರಾಜಕೀಯವನ್ನು ತಮ್ಮ ಮೈಮೇಲೆಳೆದುಕೊಳ್ಳದೆ ಎಷ್ಟು ಬೇಕೋ ಅಷ್ಟು ಅಂತರದಲ್ಲೇ ಇಟ್ಟಿದ್ದಾರೆ.

ಇಲ್ಲಿನ ರಾಜಕೀಯ ಇತಿಹಾಸದ ಪುಟ ತಿರುವಿದರೆ ಇವತ್ತು ಜೆಡಿಎಸ್ ನಲ್ಲಿರುವ ಎಂಸಿ ನಾಣಯ್ಯ 1978ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಎಕೆ ಸುಬ್ಬಯ್ಯರನ್ನು ಸೋಲಿಸಿದ್ದರು.

1980ರ ಸುಮಾರಿಗೇ ಇಲ್ಲಿ ಬಿಜೆಪಿ ಬೇರೂರಿದ್ದನ್ನು ಗಮನಿಸಬಹುದು. 1983ರಲ್ಲಿ ಚುನಾವಣೆಯಲ್ಲಿ ಎಂ.ಸಿ ನಾಣಯ್ಯಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ (ಮುಂದೆ ಅವರು ವಿಧಾನ ಪರಿಷತ್ ಸದಸ್ಯರಾದರು). ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಎಂ.ಎಂ ನಾಣಯ್ಯ ಇಲ್ಲಿ ಗೆದ್ದಾಗ ಎರಡನೇ ಸ್ಥಾನದಲ್ಲಿ ಬಿಜೆಪಿ ಬಂದು ಕೂತಿತ್ತು. ಬಿಜೆಪಿ ಅಭ್ಯರ್ಥಿ ಎಂ.ಎಂ ಚೆಂಗಪ್ಪರನ್ನು ಅವತ್ತು ನಾಣಯ್ಯ ಕೇವಲ 5 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

1985ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಡಿ.ಎ. ಚಿನ್ನಪ್ಪ ಇಲ್ಲಿ ಕಣಕ್ಕಿಳಿದು ಗೆದ್ದರು. 1989ರಲ್ಲಿಯೂ ಫಲಿತಾಂಶ ಪುನರಾವರ್ತನೆಯಾಯಿತು. ಆದರೆ ಅಷ್ಟೊತ್ತಿಗಾಗಲೇ ಬಿಜೆಪಿ ತನ್ನ ಮತಗಳಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲು ಕಾದು ಕುಳಿತಿತ್ತು.

ನಿರೀಕ್ಷೆಯಂತೆ 1994ರಲ್ಲಿ ಕೊಡಗಿನಲ್ಲಿ ಬಿಜೆಪಿ ತನ್ನ ಖಾತೆ ತೆರೆಯಿತು. ಒಂದಲ್ಲ! ಜಿಲ್ಲೆಯ ಮೂರಕ್ಕೆ ಮೂರು ಸ್ಥಾನ ಬಿಜೆಪಿ ಪಾಲಾಗಿತ್ತು.

ಮಡಿಕೇರಿಯಲ್ಲಿ ದಂಬೆಕೋಡಿ ಸುಬ್ಬಯ್ಯ 11 ಸಾವಿರ ಮತಗಳಿಂದ ಜನತಾದಳದ ಟಿಪಿ ರಮೇಶ್ ರನ್ನು ಸೋಲಿಸಿದರು. (ಮುಂದೆ ರಮೇಶ್ ಕಾಂಗ್ರೆಸ್ ಸೇರ್ಪಡೆಯಾದರು. ಇತ್ತೀಚೆಗೆ ಇದೇ ರಮೇಶ್ ಸಾರ್ವಜನಿಕ ಸಮಾರಂಭದಲ್ಲಿ ಕಾಂಗ್ರೆಸ್ ನ ಎಂಎಲ್ಸಿ ವೀಣಾ ಅಚ್ಚಯ್ಯ ಕೈ ಸವರಿ ಪಕ್ಷ ತೊರೆದಿದ್ದಾರೆ.)

1999ರಲ್ಲಿ ದಂಬೆಕೋಡಿ ಸುಬ್ಬಯ್ಯಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿದ ಸುಬ್ಬಯ್ಯರನ್ನು ಕಾಂಗ್ರೆಸ್ ನ ಎಂ.ಎಂ ನಾಣಯ್ಯ 5 ಸಾವಿರ ಮತಗಳ ಅಂತರದಿಂದ ಸೋಲಿಸಿದರು.

2004ರಲ್ಲಿ ಇಲ್ಲಿಗೆ ಬಿಜೆಪಿಯಿಂದ ಎಂಟ್ರಿ ಕೊಟ್ಟ ಕೆಜಿ ಬೋಪಯ್ಯ ಕ್ಷೇತ್ರವನ್ನು ಮತ್ತೆ ಕೇಸರಿ ಪಕ್ಷದ ತೆಕ್ಕೆಗೆ ಎಳೆದು ತಂದರು. ಈ ಬಾರಿ ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧಿಸಿದರೂ ದಂಬೆಕೋಡಿ ಸುಬ್ಬಯ್ಯ ಸೋಲಬೇಕಾಯಿತು.

2008 ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸೋಮವಾರಪೇಟೆಯಲ್ಲಿ ಕಾದಾಡುತ್ತಿದ್ದ ಹಳೆಯ ಹುಲಿಗಳಾದ ಕಾಂಗ್ರೆಸ್ ನ ಬಿಎ ಜೀವಿಜಯ ಹಾಗೂ ಅಪ್ಪಚ್ಚು ರಂಜನ್ ಮಡಿಕೇರಿಗೆ ವರ್ಗವಾದರು.

ಅಷ್ಟೊತ್ತಿಗಾಗಲೇ 1978ರಿಂದ ಸ್ಪರ್ಧಿಸಿ ಜೀವಿಜಯ ಸೋಮವಾರಪೇಟೆಯಲ್ಲಿ ಮೂರು ಬಾರಿ ಗೆದ್ದಿದ್ದರು. ಅಪ್ಪಚ್ಚು ರಂಜನ್ ಎರಡು ಬಾರಿ ಗೆದ್ದು ಮೂರನೇ ಯತ್ನದಲ್ಲಿ ಸೋತಿದ್ದರು.

ಹೀಗಾಗಿ 2008ರ ಮಡಿಕೇರಿ ಚುನಾವಣೆ ಕುತೂಹಲ ಮೂಡಿಸಿತ್ತು. ಈ ಬಾರಿ ಬಿಜೆಪಿಯ ಅಪ್ಪಚ್ಚು ರಂಜನ್ ಕಾಂಗ್ರೆಸ್ ನ ಜೀವಿಜಯರಿಗೆ 7 ಸಾವಿರ ಮತಗಳ ಅಂತರದಿಂದ ಸೋಲಿಸಿ ಮೂರನೇ ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದರು.

2013ರಲ್ಲಿ ಫಲಿತಾಂಶ ಪುನರಾವರ್ತನೆಯಾಯಿತು. ಆದರೆ ಈ ಬಾರಿ ಜೀವಿಜಯ ಜೆಡಿಎಸ್ ನಿಂದ ಸ್ಪರ್ಧಿಸಿ 4 ಸಾವಿರ ಮತಗಳಿಂದ ವಿರೋಚಿತ ಸೋಲುಂಡರು.

ಈ ಬಾರಿ ಇಲ್ಲಿ ಮತ್ತೆ ಬಿಜೆಪಿ ಗೆದ್ದರೆ ಅಚ್ಚರಿಯಿಲ್ಲ. ಡಿವೈಎಸ್ಪಿ ಎಂಕೆ ಗಣಪತಿ ಪ್ರಕರಣ, ಟಿಪ್ಪು ಜಯಂತಿ ಆಚರಣೆ ಕೇಸರಿ ಪಕ್ಷಕ್ಕೆ ಮಡಿಕೇರಿಯಲ್ಲಿ ಲಾಭ ತಂದುಕೊಡುವ ಎಲ್ಲಾ ಸಾಧ್ಯತೆಗಳೂ ಇವೆ. ಜತೆಗೆ ಟಿಪಿ ರಮೇಶ್ ಕಾಂಗ್ರೆಸ್ ತೊರೆದಿರುವುದೂ ಬಿಜೆಪಿಗೆ ಪ್ಲಸ್ ಪಾಯಿಂಟ್. ಆದರೆ 2013ರ ಕಡಿಮೆಯಾದ ಅಪ್ಪಚ್ಚು ರಂಜನ್ ಗೆಲುವಿನ ಅಂತರವನ್ನು ಗಮನಿಸಿದರೆ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಗೂ ಇಲ್ಲಿ ಒಂದು ಅವಕಾಶ ಇದೆ. ಕಾಂಗ್ರೆಸ್ ಕೂಡ ಪ್ರಯತ್ನಪಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Madikeri assembly constituency of Kodagu district. Get election news from Madikeri. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ