ಕೆ.ಆರ್. ನಗರ : ಜೆಡಿಎಸ್- ಬಿಜೆಪಿ ನಡುವಿನ ಯುದ್ಧ
ಕೃಷ್ಣರಾಜನಗರ(ಕೆ.ಆರ್ ನಗರ) ಕ್ಷೇತ್ರದಲ್ಲಿ ಸಾ.ರಾ. ಮಹೇಶ್ ಶಾಸಕರು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ದೊಡ್ಡಸ್ವಾಮಿ ಗೌಡ ಸೋಲು ಕಂಡಿದ್ದರು. ಒಕ್ಕಲಿಗರು, ಕುರುಬರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಎಚ್. ವಿಶ್ವನಾಥ್ ಅವರು ಜೆಡಿಎಸ್ ಗೆ ಹಾರಿರುವುದರಿಂದ ಜೆಡಿಎಸ್ ಗೆ ಇದು ಅನುಕೂಲವಾಗಿಯೂ ಇದೆ.
ಆದರೆ, ಶ್ರೀನಿವಾಸ್ ಪ್ರಸಾದ್ ಹಾಗೂ ಎಸ್.ಎಂ. ಕೃಷ್ಣ ಅವರು ಬಿಜೆಪಿ ಸೇರ್ಪಡೆಗೊಂಡಿದ್ದು ಇಲ್ಲಿ ಬಿಜೆಪಿಗೆ ಬಲ ತುಂಬಿರುವುದರಿಂದ ಜೆಡಿಎಸ್- ಬಿಜೆಪಿ ನಡುವಿನ ಯುದ್ಧ ನಿಶ್ಚಿತ. ಇದು ಮುಖ್ಯಮಂತ್ರಿಯವರ ತವರು ಜಿಲ್ಲೆಯಾದರೂ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನದ್ದೇನೂ ನಡೆಯುವಂತಿಲ್ಲ. ಏನಿದ್ದರೂ ಇಲ್ಲಿ ಬಿಜೆಪಿ, ಜೆಡಿಎಸ್ ನದ್ದೇ ಕಾರುಬಾರು ಎಂದು ಹೇಳಲಾಗುತ್ತಿದೆ.

ಈ ಹಿಂದೆ, ಇಲ್ಲಿ ಕಾಂಗ್ರೆಸ್ ವರ್ಚಸ್ಸಿನಲ್ಲ ಎನ್ನಬಹುದಾದರೂ ಸಿದ್ದು ಬೆಂಬಲಿಗರ ಸಂಖ್ಯೆಯೇನೂ ಕಮ್ಮಿಯಿಲ್ಲ. ಕುರುಬರು, ಹಿಂದುಳಿದ ವರ್ಗದವರು ಸಿದ್ದು ಬೆಂಬಲಕ್ಕಿದ್ದರೆ, ಒಕ್ಕಲಿಗರು ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ. ಲಿಂಗಾಯತರೆಲ್ಲಾ ಬಿಜೆಪಿ ಬೆನ್ನಿಗೆ ನಿಂತಿದ್ದಾರೆ ಎಂಬ ಮಾತು ಚಾಲ್ತಿಯಲ್ಲಿರುತ್ತಿತ್ತು. ಆದರೆ, ಈ ಬಾರಿ ಹಾಗಾಗದು ಎಂದು ಈ ಕ್ಷೇತ್ರದ ರಾಜಕೀಯ ಅರಿತ ಕೆಲವರು ಹೇಳುತ್ತಾರೆ.
2013ರ ಫಲಿತಾಂಶ:
* ಒಟ್ಟು 11 ಮಂದಿ ನಾಮಪತ್ರ ಸಲ್ಲಿಸಿದ್ದರು, 4 ಮಂದಿ ಹಿಂಪಡೆದರು, 7 ಮಂದಿ ಸ್ಪರ್ಧಿಸಿದ್ದರು. 5 ಮಂದಿ ಠೇವಣಿ ಕಳೆದುಕೊಂಡರು.
* ಶೇ 83.61 ರಷ್ಟು ಮತದಾನವಾಗಿತ್ತು. 157467 ಮತಗಳ ಪೈಕಿ ಜೆಡಿಎಸ್ ನ ಸಾ.ರಾ ಮಹೇಶ್ ಅವರು 81457 ಮತಗಳನ್ನು ಪಡೆದರೆ, ಕಾಂಗ್ರೆಸ್ಸಿನ ದೊಡ್ದಸ್ವಾಮೇಗೌಡ 66405 ಮತಗಳನ್ನು ಗಳಿಸಿ ಸೋಲು ಕಂಡರು. 15052 ಮತಗಳ (ಶೇ 9.56) ಮತಗಳ ಅಂತರದಲ್ಲಿ ಮಹೇಶ್ ಜಯ ದಾಖಲಿಸಿದರು.
ಕಾಂಗ್ರೆಸ್ ನಿಂದ ಅಧಿಕೃತವಾಗಿ ಅಭ್ಯರ್ಥಿ ಪ್ರಕಟವಾಗಿಲ್ಲವಾದರೂ, ಕೆಲ ದಿನಗಳ ಹಿಂದೆ ಕೆ.ಆರ್.ನಗರದಲ್ಲಿ ನಡೆದ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಅವರ ಪುತ್ರ, ಜಿಪಂ ವಿರೋಧ ಪಕ್ಷದ ನಾಯಕ ಡಿ.ರವಿಶಂಕರ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜೆಡಿಎಸ್ ನಿಂದ ಮಹೇಶ್ ಈ ಬಾರಿಯೂ ಸ್ಪರ್ಧೆ ಬಯಸಿದ್ದಾರೆ.












Click it and Unblock the Notifications