ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ: ಗುಂಡ್ಲುಪೇಟೆಯಲ್ಲಿ ದಿ. ಮಹದೇವ ಪ್ರಸಾದ್ ಕುಟುಂಬದ್ದೇ ರಾಜ್ಯಭಾರ

By Sachhidananda Acharya
|
Google Oneindia Kannada News

ತಮಿಳುನಾಡು ಮತ್ತು ಕೇರಳ ಜತೆ ಗಡಿಯನ್ನು ಹಂಚಿಕೊಂಡ ಚಾಮರಾಜನಗರದ ತಾಲೂಕು ಗುಂಡ್ಲುಪೇಟೆ. ವಿಜಯನಾರಾಯಣ ದೇವಾಲಯ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಅಭಯಾರಣ್ಯ, ತಾಲೂಕಿನ ದಕ್ಷಿಣ ಗಡಿಯಲ್ಲಿ ಹರಿಯುವ ಮೋಹರ್ ನದಿ, ಗುಂಡ್ಲು ಹೊಳೆ, ಕಪಿಲಾ ನದಿಗಳು ಈ ತಾಲೂಕಿನ ಅಂದವನ್ನು ಹೆಚ್ಚಿಸಿವೆ.

ಕಸಬೆ, ಹಂಗಳ, ಬೇಗೂರು, ತೆರಕಣಾಂಬಿಗಳು ಗುಂಡ್ಲುಪೇಟೆಯ ನಾಲ್ಕು ಹೋಬಳಿಗಳು. ತಾಲೂಕಿನಲ್ಲಿ ಎರೆಮಣ್ಣಿದ್ದರೂ ಮಳೆ ಕಡಿಮೆ ಇರುವ ಕಾರಣಕ್ಕೆ ಇಲ್ಲಿ ಜೋಳ, ರಾಗಿ, ಅವರೆ ಬೇಸಾಯ ಮಾತ್ರ ಮಾಡುತ್ತಾರೆ. ಸ್ವಲ್ಪಮಟ್ಟಿಗೆ ಕೆರೆ ನೀರಿನಿಂದ ಭತ್ತ ಬೆಳೆಯುತ್ತಾರೆ. ಇಲ್ಲಿನ ವೀಳ್ಯದೆಲೆ ಪ್ರಸಿದ್ದಿಯನ್ನು ಪಡೆದಿದೆ.

ಗುಂಡ್ಲುಪೇಟೆಯ ರಾಜಕಾರಣ ಎಂದಾಕ್ಷಣ ನೆನಪಿಗೆ ಬರುವುದು ದಿವಂಗತ ಎಚ್.ಎಸ್ ಮಹದೇವಪ್ರಸಾದ್. ದಿ. ಮಹದೇವ ಪ್ರಸಾದ್ ಮತ್ತು ಸಿ.ಎಸ್. ನಿರಂಜನ್ ಕುಮಾರ್ ಕುಟುಂಬಗಳ ನಡುವಿನ ವಿಶಿಷ್ಟ ಕೌಟುಂಬಿಕ ರಾಜಕಾರಣದ ದಾಖಲೆಯನ್ನು ಇಲ್ಲಿ ಗಮನಿಸಬಹುದು.

Karnataka Assembly Election 2018: Gundlupet Constituency Profile

ಅಚ್ಚರಿಯ ವಿಷಯವೆಂದರೆ ಗುಂಡ್ಲುಪೇಟೆಯಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಮೊನ್ನೆ ಮೊನ್ನೆ ನಡೆದ ಉಪಚುನಾವಣೆ ಸೇರಿ ಕಳೆದ 23 ವರ್ಷಗಳಲ್ಲಿ ಇಲ್ಲಿ 6 ಚುನಾವಣೆಗಳು ನಡೆದಿವೆ. ಈ ಆರು ಚುನಾವಣೆಗಳಲ್ಲಿ ಸಿ.ಎಸ್. ನಿರಂಜನ್ ಕುಮಾರ್ ಕುಟುಂಬ ಮತ್ತು ಎಚ್.ಎಸ್ ಮಹದೇವ ಪ್ರಸಾದ್ ಕುಟುಂಬ 5 ಬಾರಿ ಮುಖಾಮುಖಿಯಾಗಿವೆ.

ಐದೂ ಬಾರಿ ನಿರಂಜನ್ ಕುಮಾರ್ ಕುಟುಂಬ ಸೋತಿದ್ದರೆ, ಮಹದೇವ ಪ್ರಸಾದ್ ಕುಟುಂಬ 5 ಕೌಟುಂಬಿಕ ಮುಖಾಮುಖಿ ಚುನಾವಣೆಗಳೂ ಸೇರಿ 6 ಬಾರಿ ಗೆಲುವಿನ ನಗೆ ಬೀರಿದೆ. ಹೀಗೆ ಈ ಕ್ಷೇತ್ರದಲ್ಲಿ ಕೌಟುಂಬಿಕ ರಾಜಕಾರಣವೇ ಮೇಳೈಸಿದೆ.

1985ರಲ್ಲಿ ಮೊದಲ ಬಾರಿಗೆ ಎಚ್.ಎಸ್ ಮಹದೇವ ಪ್ರಸಾದ್ ಚುನಾವಣೆ ಎದುರಿಸಿದ್ದರು. ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಅವರಿಗೆ ಮೊದಲ ಬಾರಿಗೆ ಸೋಲು ಕಾದಿತ್ತು. ಕಾಂಗ್ರೆಸ್ ಅಭ್ಯರ್ಥಿ ನಾಗರತ್ನಮ್ಮ ವಿರುದ್ಧ ಅವರು ಸೋಲು ಕಂಡರು. ಮುಂದೆ 1989ರಲ್ಲಿ ಜನತಾ ಪಕ್ಷದಿಂದ ಮತ್ತೆ ಸ್ಪರ್ಧಿಸಿ ಇದೇ ನಾಗರತ್ನಮ್ಮ ವಿರುದ್ಧ ಸೋಲನುಭವಿಸಿದರು.

1994 ಚುನಾವಣೆಯಲ್ಲಿ ಮೊದಲ ಬಾರಿಗೆ ಸಿಎಸ್ ನಿರಂಜನ್ ಕುಮಾರ್ ತಂದೆ ಸಿಎಂ ಶಿವಮಲ್ಲಪ್ಪ ಮತ್ತು ಮಹದೇವ ಪ್ರಸಾದ್ ಮುಖಾಮುಖಿಯಾಗಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಹದೇವ ಪ್ರಸಾದ್ ಸುಮಾರು 23 ಸಾವಿರ ಮತಗಳ ಅಂತರದಿಂದ ಕಾಂಗ್ರೆಸಿನ ಶಿವಮಲ್ಲಪ್ಪರನ್ನು ಸೋಲಿಸಿದ್ದರು. ಇದು ಮಹದೇವ ಪ್ರಸಾದ್ ಪಾಲಿನ ಮೊದಲ ಗೆಲುವು ಎಂಬುದು ವಿಶೇಷ. ಎರಡು ಬಾರಿ ಸೋತಿದ್ದ ಮಹದೇವ ಪ್ರಸಾದ್ ಮೂರನೇ ಯತ್ನದಲ್ಲಿ ಗೆಲುವಿನ ನಗೆ ಬೀರಿದ್ದರು.

1999ರಲ್ಲಿ ಮತ್ತೆ ಮಹದೇವ ಪ್ರಸಾದ್ ಮತ್ತು ಸಿ.ಎಂ. ಶಿವಮಲ್ಲಪ್ಪ ಮುಖಾಮುಖಿಯಾದರು. ಈ ಬಾರಿ ಶಿವಮಲ್ಲಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಗೆಲ್ಲುವ ಸರದಿ ಮತ್ತೆ ಜೆಡಿಯು ಅಭ್ಯರ್ಥಿಯಾಗಿದ್ದ ಮಹದೇವ ಪ್ರಸಾದ್ ಅವರದಾಗಿತ್ತು. ಕಾಂಗ್ರೆಸ್ ನ ಎಚ್.ಎಸ್ ನಂಜಪ್ಪರನ್ನು ಬರೋಬ್ಬರಿ 25 ಸಾವಿರ ಮತಗಳ ಅಂತರದಿಂದ ಪ್ರಸಾದ್ ಮಣ್ಣು ಮುಕ್ಕಿಸಿದರು.

2004 ಈ ಬಾರಿ ಮಹದೇವಪ್ಪ ಮತ್ತೆ ಕಣಕ್ಕಿಳಿದು ಜಯಶಾಲಿಯಾದರು. ಆದರೆ ಈ ಬಾರಿ ಸಿ.ಎಸ್. ನಿರಂಜನ್ ಕುಮಾರ್ ಆಗಲಿ ಅವರ ತಂದೆ ಸಿ.ಎಂ. ಶಿವಮಲ್ಲಪ್ಪ ಕಣಕ್ಕಿಳಿದಿರಲಿಲ್ಲ. ಈ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಹದೇವ ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ 11 ಸಾವಿರ ಮತಗಳಿಂದ ಜಯಗಳಿಸಿದ್ದರು.

2008ರ ಚುನಾವಣೆಯಲ್ಲಿ ತಂದೆ ಜಾಗದಲ್ಲಿ ಶಿವಮಲ್ಲಪ್ಪ ಪುತ್ರ ಸಿ.ಎಸ್. ನಿರಂಜನ್ ಕುಮಾರ್ ಅಖಾಡಕ್ಕಿಳಿದರು. ಆದರೆ ಮಹದೇವ ಪ್ರಸಾದ್ ಗೆಲುವಿನ ನಾಗಾಲೋಟಕ್ಕೆ ತಡೆ ಹಾಕಲು ಅವರಿಗೂ ಸಾಧ್ಯವಾಗಲಿಲ್ಲ. ಕೇವಲ 2 ಸಾವಿರ ಮತಗಳಿಂದ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಮಹದೇವ ಪ್ರಸಾದ್ ವಿಧಾನಸಭೆ ಪ್ರವೇಶಿಸಿದರು. ಆದರೆ ಈ ಬಾರಿ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಇದೇ ವೇಳೆ ನಿರಂಜನ್ ಕುಮಾರ್ ಕುಟುಂಬ ಬಿಜೆಪಿಗೆ ಬಂದಿತ್ತು.

2013ರಲ್ಲಿ ಕಾಂಗ್ರೆಸ್ ನ ಮಹದೇವ ಪ್ರಸಾದ್ ವಿರುದ್ಧ ನಿರಂಜನ್ ಕುಮಾರ್ ಮತ್ತೆ ಸ್ಪರ್ಧಿಸಿದರು. ಆದರೆ ಯಡಿಯೂರಪ್ಪನವರ ಕೆಜಿಪಿಯಿಂದ ಸ್ಪರ್ಧಿಸಿದ್ದ ನಿರಂಜನ್ ಸುಮಾರು 7 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. ಐದನೇ ಬಾರಿಗೆ ಶಾಸಕರಾಗುವ ಭಾಗ್ಯ ಮಹದೇವ ಪ್ರಸಾದ್ ಗೆ ಒಲಿದು ಬಂತೇ ವಿನಃ ನಿರಂಜನ್ ಕುಮಾರ್ ಕುಟುಂಬಕ್ಕೆ 4ನೇ ಬಾರಿಗೂ ಗೆಲುವು ಒಲಿಯಲಿಲ್ಲ.

2017ರಲ್ಲಿ ಮಹದೇವ ಪ್ರಸಾದ್ ನಿಧನದಿಂದ ಉಪ ಚುನಾವಣೆ ನಡೆದು ಅವರ ಜಾಗದಲ್ಲಿ ಕಾಂಗ್ರೆಸಿನಿಂದ ಮಹದೇವ ಪ್ರಸಾದ್ ಪತ್ನಿ ಗೀತಾ ಮಹದೇವ ಪ್ರಸಾದ್ ಸ್ಪರ್ಧಿಸಿದರು. ಈ ಬಾರಿಯೂ ಬಿಜೆಪಿಯ ನಿರಂಜನ್ ಗೆ ಅದೃಷ್ಟ ಒಲಿಯಲೇ ಇಲ್ಲ. ನಿರಂಜನ್ 10,877 ಮತಗಳಿಂದ ಹ್ಯಾಟ್ರಿಕ್ ಸೋಲು ಕಂಡರೆ, ಮಹದೇವ ಪ್ರಸಾದ್ ಕುಟುಂಬ ಡಬಲ್ ಹ್ಯಾಟ್ರಿಕ್ ಗೆಲುವು ಕಂಡಿತು. ಸತತ 5 ಸೋಲಿನೊಂದಿಗೆ ನಿರಂಜನ್ ಕುಟುಂಬ ಮುಖಭಂಗ ಅನುಭವಿಸಿದರೆ, ಸತತ ಆರು ಗೆಲುವು ಕಂಡು ಕ್ಷೇತ್ರದ ಮೇಲೆ ಪ್ರಸಾದ್ ಕುಟುಂಬ ತನ್ನ ಬಿಗಿ ಹಿಡಿತವನ್ನು ಮರು ಸ್ಥಾಪನೆ ಮಾಡಿತು.

ಸದ್ಯ ಗೀತಾ ಮಹದೇವ ಪ್ರಸಾದ್ ಸಿದ್ದರಾಮಯ್ಯ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದಾರೆ. ಈ ಬಾರಿಯೂ ಇಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಿದರೆ ವಿಶೇಷವೇನೂ ಇಲ್ಲ. ಒಂದೊಮ್ಮೆ ಜನರ ಅನುಕಂಪ ಗಿಟ್ಟಿಸಿದರೆ ನಿರಂಜನ್ ಕುಮಾರ್ ಇಲ್ಲಿ ಜಯ ಸಾಧಿಸಬಹುದು.

ಗುಂಡ್ಲುಪೇಟೆಯಲ್ಲಿ ಸ್ವಲ್ಪಮಟ್ಟಿಗೆ ಜೆಡಿಎಸ್ ಮತ್ತು ಬಿಎಸ್ಪಿಗೆ ನೆಲೆ ಇದ್ದು ಈ ಬಾರಿ ಎರಡೂ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಈ ಕ್ಷೇತ್ರವನ್ನು ಜೆಡಿಎಸ್ ಬಿಎಸ್ಪಿಗೆ ಬಿಟ್ಟುಕೊಟ್ಟಿದೆ. ಇಲ್ಲಿ ಬಿಎಸ್ಪಿ ಗೆಲ್ಲುವ ಸಾಧ್ಯತೆಗಳು ತೀರಾ ವಿರಳವಾದರೂ 'ಆನೆ' ಸ್ಪರ್ಧೆ ಕಾಂಗ್ರೆಸ್ ಗೆಲುವನ್ನು ಕಸಿದುಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.

English summary
Karnataka Assembly Election 2018: Read all about Gundlupet assembly constituency of Chamarajanagar district. Get election news from Gundlupet. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X