ಕ್ಷೇತ್ರ ಪರಿಚಯ: ಚಾಮರಾಜನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಸಮಾನ ಅವಕಾಶ

Subscribe to Oneindia Kannada

ಚಾಮರಾಜನಗರ ಜಿಲ್ಲಾ ಕೇಂದ್ರವೂ ಹೌದು, ತಾಲೂಕು ಕೇಂದ್ರವೂ ಹೌದು. ಮೈಸೂರು ಅರಸು ಮನೆತನದ 9ನೇ ಚಾಮರಾಜ ಒಡೆಯರ್ ಇಲ್ಲಿ ಜನಿಸಿದ್ದರಿಂದ ಅವರ ನೆನಪಿಗಾಗಿ ಚಾಮರಾಜನಗರ ಎಂದು ಈ ನಗರಕ್ಕೆ ನಾಮಕರಣ ಮಾಡಲಾಯಿತು.

ಇದೇ ಚಾಮರಾಜನಗರ ಪಟ್ಟಣದಲ್ಲಿ 1838ರಲ್ಲಿ ಚಾಮರಾಜೇಶ್ವರ ದೇವಾಲಯವನ್ನು ನಿರ್ಮಿಸಲಾಯಿತು. ಈ ದೇವಾಲಯದ ಜತೆಗೆ ಬಿಳಿರಂಗನಾಥ ಸ್ವಾಮಿ ದೇವಾಲಯ, ಬಿಳಿರಂಗನಾಥನ ಬೆಟ್ಟ (ಬಿಆರ್ ಹಿಲ್ಸ್), ಅಭಯಾರಣ್ಯ, ಸುವರ್ಣಾವತಿ ಜಲಾಶಯ, ದಿವ್ಯಲಿಂಗೇಶ್ವರ ದೇಗುಲ, ಕ್ಯಾತೇದೇವರ ಗುಡಿ ಪ್ರಕೃತಿ ಧಾಮ, ಬೆಲ್ಲತ್ತ ಜಲಾಶಯ ಮತ್ತು ಜಲಾಶಯ ಸುತ್ತಲಿನ ಪಕ್ಷಿರಾಶಿಯಿಂದ ಒಟ್ಟಾರೆ ಚಾಮರಾಜನಗರ ನಿಸರ್ಗ ಪ್ರಿಯರಿಗೆ ಉತ್ತಮ ತಾಣವೆನಿಸಿದೆ.

ಚಾಮರಾಜನಗರ ಕನ್ನಡ ಚಳವಳಿಯ ವಾಟಾಳ್ ಪಕ್ಷದ ತವರೂ ಹೌದು. ಇದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ವಾಟಾಳ್ ನಾಗರಾಜ್ ಒಂದು ಕಾಲದಲ್ಲಿ ವಿಧಾನಸಭೆ ಪ್ರವೇಶಿಸುತ್ತಿದ್ದರು.

Karnataka Assembly Election 2018: Chamarajanagar Constituency Profile

ಇಲ್ಲಿನ ರಾಜಕೀಯ ಇತಿಹಾಸ ಕೆದಕಿದರೆ ಮೊದಲ ಬಾರಿಗೆ ಅಂದರೆ 1983ರಲ್ಲಿ ಇಲ್ಲಿ ವಾಟಾಳ್ ನಾಗರಾಜ್ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿದರು. ಆದರೆ ಈ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಎಚ್. ಪುಟ್ಟಸ್ವಾಮಿ ವಿರುದ್ಧ ಸೋಲನುಭವಿಸಿದರು. 1985ರಲ್ಲಿಯೂ ಪುಟ್ಟಸ್ವಾಮಿ ಜಯ ಸಾಧಿಸಿದರು.

ಆದರೆ 1989ರಲ್ಲಿ ವಾಟಾಳ್ ನಾಗರಾಜ್ ಗೆ ಕಾಲ ಕೂಡಿ ಬಂತು. ಎಸ್. ಪುಟ್ಟಸ್ವಾಮಿಯನ್ನು 6 ಸಾವಿರ ಮತಗಳಿಂದ ಸೋಲಿಸಿ ವಾಟಾಳ್ ವಿಧಾನಸಭೆಗೆ ಪ್ರವೇಶ ಪಡೆದರು. 1994ರಲ್ಲೂ ಫಲಿತಾಂಶ ಪುನರಾವರ್ತನೆಯಾಯಿತು. ಅಷ್ಟೊತ್ತಿಗೆ ವಾಟಾಳ್ ತಮ್ಮ ಕನ್ನಡ ಚಳವಳಿ ವಾಟಾಳ್ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಆ ಪಕ್ಷದಿಂದಲೇ ಸ್ಪರ್ಧಿಸಿ ವಾಟಾಳ್ ಗೆಲುವು ಸಾಧಿಸಿದ್ದರು.

ಆದರೆ 1999ರಲ್ಲಿ ವಾಟಾಳ್ ನಾಗರಾಜ್ ಸೋಲಬೇಕಾಯಿತು. ಬಿಜೆಪಿಯ ಸಿ. ಗುರುಸ್ವಾಮಿ 18 ಸಾವಿರ ಮತಗಳಿಂದ ವಾಟಾಳ್ ನಾಗರಾಜ್ ಗೆ ಭರ್ಜರಿಯಾಗಿ ಸೋಲುಣಿಸಿದರು. ಮುಂದಿನ ಚುನಾವಣೆಯಲ್ಲಿ ಅಂದರೆ 2004ರಲ್ಲಿ ಮೇಲೆದ್ದು ಬಂದ ವಾಟಾಳ್ 9 ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆಗೆ ಎಂಟ್ರಿ ಗಿಟ್ಟಿಸಿದರು.

2008ರಲ್ಲಿ ಇಲ್ಲಿ ಕಾಂಗ್ರೆಸ್ ನ ಸಿ. ಪುಟ್ಟರಂಗಶೆಟ್ಟಿ ಜಯಗಳಿಸಿದರು. ಬಿಜೆಪಿಯ ಎಂ. ಮಹದೇವುರನ್ನು 3 ಸಾವಿರ ಮತಗಳಿಂದ ಪುಟ್ಟರಂಗಶೆಟ್ಟಿ ಸೋಲಿಸಿದ್ದರು. 2013ರಲ್ಲೂ ಫಲಿತಾಂಶ ಪುನರಾವರ್ತನೆಯಾಯ್ತು. ಈ ಬಾರಿ ಕೆಜೆಪಿ ಅಭ್ಯರ್ಥಿ ಕೆ.ಆರ್ ಮಲ್ಲಿಕಾರ್ಜುನಪ್ಪರನ್ನು ಸೋಲಿಸಿದ ಪುಟ್ಟರಂಗಶೆಟ್ಟಿ ಗೆಲುವಿನ ಅಂತರವನ್ನು 9 ಸಾವಿರ ಮತಗಳಿಗೆ ವಿಸ್ತರಿಸಿಕೊಂಡರು. ಈ ಚುನಾವಣೆಯಲ್ಲಿ ವಾಟಾಳ್ ಕೂಡ ಸ್ಪರ್ಧಿಸಿ 18,341 ಮತಗಳನ್ನು ಪಡೆದಿದ್ದರು.

ಹಾಲಿ ಶಾಸಕ ಪುಟ್ಟರಂಗಶೆಟ್ಟಿ ರಂಪಾಟ, ರಗಳೆಗಳಿಂದ ಆಗಾಗ ಸುದ್ದಿಯಲ್ಲಿದ್ದಾರೆ. ಇದು ಕಾಂಗ್ರೆಸ್ ಗೆ 2018ರ ಚುನಾವಣೆಯಲ್ಲಿ ಮುಳುವಾಗುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲ್ಲುವ ಒಂದು ಅವಕಾಶ ಇದೆ. ಜತೆಗೆ ಇಲ್ಲಿ ಈ ಬಾರಿ ಮೈತ್ರಿಯಂತೆ ಕ್ಷೇತ್ರವನ್ನು ಜೆಡಿಎಸ್ ಬಿಎಸ್ಪಿಗೆ ಬಿಟ್ಟುಕೊಟ್ಟಿದೆ. ಕ್ಷೇತ್ರದಲ್ಲಿ ಎರಡೂ ಪಕ್ಷಗಳಿಗೂ ಸ್ವಲ್ಪ ನೆಲೆ ಇದ್ದು ಬಿಎಸ್ಪಿ ಸ್ಪರ್ಧೆ ಕಾಂಗ್ರೆಸ್ ಗೆಲುವಿಗೆ ಅಡ್ಡಗಾಲಾಗುವ ಸಾಧ್ಯತೆಯೂ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Chamarajanagar assembly constituency of Chamarajanagar district. Get election news from Chamarajanagar. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ