ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ: ಗೌಡ, ಬಂಗೇರ ಕುಟುಂಬಗಳ ಕದನ ಕಣ ಬೆಳ್ತಂಗಡಿ

By Sachhidananda Acharya
|
Google Oneindia Kannada News

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು 60 ಕಿಲೋಮೀಟರ್ ಪೂರ್ವಕ್ಕೆ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹರಡಿಕೊಂಡ ವಿಶಾಲವಾದ ತಾಲೂಕು ಬೆಳ್ತಂಗಡಿ. ಧರ್ಮಸ್ಥಳ ದೇವಸ್ಥಾನ, ವೇಣೂರು ಗೋಮಟೇಶ್ವರ, ಟಿಪ್ಪು ಸುಲ್ತಾನ್ ನ ಜಮಲಾಬಾದ್ ಕೋಟೆ, ನೇತ್ರಾವತಿ ನದಿ, ಹಲವು ಐತಿಹಾಸಿಕ ಬಸದಿ, ದೇವಸ್ಥಾನಗಳು, ಪ್ರಖ್ಯಾತ ಕಾಲೇಜುಗಳನ್ನು ಒಳಗೊಂಡ ತಾಲೂಕು ಇದು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು ತೆಗೆದುಕೊಂಡರೆ ಇಲ್ಲಿ ಯಾವತ್ತೂ ಒಂದೇ ಪಕ್ಷ ಹಿಡಿತ ಸಾಧಿಸಿದ್ದಾಗಲೀ, ಗೆಲ್ಲುತ್ತಾ ಬಂದ ಉದಾಹರಣೆಗಳಾಗಲೀ ಇಲ್ಲ. ಆಗಾಗ ವ್ಯಕ್ತಿಗಳು ಪಕ್ಷ ಬದಲಾಯಿಸುವುದು, ಕೌಟುಂಬಿಕ ರಾಜಕಾರಣ ಈ ಕ್ಷೇತ್ರದ ಪ್ರಮುಖಾಂಶ.

ಕ್ಷೇತ್ರ ಪರಿಚಯ: ಪುತ್ತೂರಲ್ಲಿ ಮತ್ತೆ ಶಕುಂತಳಾ ಶೆಟ್ಟಿ ರಾಜ್ಯಭಾರ?ಕ್ಷೇತ್ರ ಪರಿಚಯ: ಪುತ್ತೂರಲ್ಲಿ ಮತ್ತೆ ಶಕುಂತಳಾ ಶೆಟ್ಟಿ ರಾಜ್ಯಭಾರ?

ಮುಖ್ಯವಾಗಿ ಇಲ್ಲಿ ಬಂಗೇರ (ಬಿಲ್ಲವ) ಕುಟುಂಬ ಮತ್ತು ಗೌಡ (ಒಕ್ಕಲಿಗ) ಕುಟುಂಬದ ಮಧ್ಯೆ ಚುನಾವಣಾ ಕಾದಾಟ ನಡೆಯುತ್ತಾ ಬಂದಿದೆ. ಹಾಲಿ ಶಾಸಕ ವಸಂತ ಬಂಗೇರ ಮೂರು ತಲೆಮಾರಿನ ಗೌಡ ಕುಟುಂಬವನ್ನು ಎದುರಿಸಿದ ಇತಿಹಾಸ ಹೊಂದಿದ್ದು ಐದು ಬಾರಿ ಶಾಸಕರಾಗಿದ್ದಾರೆ.

Karnataka Assembly Election 2018: Belthangady Constituency Profile

ಕಳೆದ ಬಾರಿಯ ಚುನಾವಣೆಯ ಬಿಜೆಪಿ ಹುರಿಯಾಳು ರಂಜನ್ ಜಿ. ಗೌಡ, ಅವರ ತಂದೆ ಕೆ. ಗಂಗಾಧರ ಗೌಡ ಹಾಗೂ ಗಂಗಾಧರ ಗೌಡರ ತಂದೆ ಕೆ. ಸುಬ್ರಮಣ್ಯ ಗೌಡರನ್ನು ಚುನಾವಣಾ ಕಣದಲ್ಲಿ ವಸಂತ ಬಂಗೇರರು ಎದುರಿಸಿ ಸೋಲಿಸಿ ಪ್ರತಾಪ ಮೆರೆದಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬೆಳ್ತಂಗಡಿ ಶಾಸಕರ ಪಟ್ಟಿಯತ್ತ ಕಣ್ನು ಹಾಯಿಸುವುದಾದರೆ,

1952 - ಬಾಳುಗೋಡು ವೆಂಕಟ್ರಮಣ ಗೌಡ

1956 - ರತ್ನವರ್ಮ ಹೆಗ್ಗಡೆ - ಕಾಂಗ್ರೆಸ್

1962 - ಬಿ ವೈಕುಂಠ ಬಾಳಿಗಾ - ಕಾಂಗ್ರೆಸ್

1967 - ಬಿ ವೈಕುಂಠ ಬಾಳಿಗಾ - ಕಾಂಗ್ರೆಸ್

1972- ಕೆ ಸುಬ್ರಮಣ್ಯ ಗೌಡ - ಕಾಂಗ್ರೆಸ್

1978 - ಕೆ ಗಂಗಾಧರ ಗೌಡ - ಕಾಂಗ್ರೆಸ್

1983- ಕೆ ವಸಂತ ಬಂಗೇರ - ಬಿಜೆಪಿ

1985- ಕೆ ವಸಂತ ಬಂಗೇರ - ಬಿಜೆಪಿ

1989 - ಕೆ ಗಂಗಾಧರ ಗೌಡ - ಕಾಂಗ್ರೆಸ್

1994 - ಕೆ ವಸಂತ ಬಂಗೇರ - ಜೆಡಿಎಸ್

1999 - ಕೆ ಪ್ರಭಾಕರ್ ಬಂಗೇರ - ಬಿಜೆಪಿ

2004 - ಕೆ ಪ್ರಭಾಕರ್ ಬಂಗೇರ - ಬಿಜೆಪಿ

2008 - ಕೆ ವಸಂತ ಬಂಗೇರ - ಕಾಂಗ್ರೆಸ್

2013 - ಕೆ ವಸಂತ ಬಂಗೇರ - ಕಾಂಗ್ರೆಸ್

ವಿಶೇಷವೆಂದರೆ 1983 ಮತ್ತು 1985ರಲ್ಲಿ ವಸಂತ ಬಂಗೇರರು ಚುನಾವಣೆ ಗೆದ್ದಾಗ ಅವರು ಬಿಜೆಪಿಯಲ್ಲಿದ್ದರು. ಅದರಲ್ಲೂ 1985ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದ ಇಬ್ಬರೇ ಇಬ್ಬರು ಶಾಸಕರಲ್ಲಿ ವಸಂತ ಬಂಗೇರರು ಒಬ್ಬರು. ಇನ್ನೊಬ್ಬರು ಕರ್ನಾಟಕ ಬಿಜೆಪಿ ಹಾಲಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ.

ಕ್ಷೇತ್ರ ಪರಿಚಯ: ಬಿಜೆಪಿಗೆ ಒಲಿಯದ ಕಾಂಗ್ರೆಸ್ ಭದ್ರಕೋಟೆ ಮೂಡಬಿದಿರೆಕ್ಷೇತ್ರ ಪರಿಚಯ: ಬಿಜೆಪಿಗೆ ಒಲಿಯದ ಕಾಂಗ್ರೆಸ್ ಭದ್ರಕೋಟೆ ಮೂಡಬಿದಿರೆ

ಕಾಲ ನಂತರ ಬಂಗೇರರು ಬಿಜೆಪಿ ತೊರೆದು 1989ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಕೇವಲ 1 ಸಾವಿರ ಮತಗಳಿಂದ ಸೋತಿದ್ದರು. ಮುಂದೆ ಜನತಾ ದಳಕ್ಕೆ ಹೋದರು. ಜನತಾದಳದಿಂದಲೂ ಸ್ಪರ್ಧಿಸಿ 1994ರಲ್ಲಿ ಸ್ವಂತ ತಮ್ಮ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಭಾಕರ ಬಂಗೇರರ ವಿರುದ್ಧ ಗೆದ್ದರು. ನಂತರ ಎರಡು ಬಾರಿ ತಮ್ಮನ ವಿರುದ್ಧ 1999 ಮತ್ತು 2004ರಲ್ಲಿ ಸೋತು 2008ರ ಚುನಾವಣೆಗೂ ಮೊದಲು ಕಾಂಗ್ರೆಸ್ಗೆ ಬಂದು ತಮ್ಮನ ವಿರುದ್ಧವೇ ಜಯ ಸಾಧಿಸಿ ಸೇಡು ತೀರಿಸಿಕೊಂಡಿದ್ದು ಅವರ ಕುಟುಂಬದೊಳಗಿನ ಕದನಕ್ಕೆ ಸಾಕ್ಷಿ.

ಅತ್ತ ಕುಟುಂಬದೊಳಗೆ ಅಣ್ಣ ತಮ್ಮ ಕಾದಾಡಿದರೆ ಇತ್ತ ಗೌಡ ಮತ್ತು ಬಂಗೇರ ಕುಟುಂಬಗಳು ಕಾದಾಡಿದ್ದು ಇನ್ನೊಂದು ಕತೆ.

1972 ರಲ್ಲಿ ಗಂಗಾಧರ ಗೌಡರ ತಂದೆ ಸುಬ್ರಮಣ್ಯ ಗೌಡರು ಕಾಂಗ್ರೆಸ್ ನಿಂದ ಗೆದ್ದರು. 1978ರಲ್ಲಿ ಸ್ವತಃ ಗಂಗಾಧರ ಗೌಡರು ಕಾಂಗ್ರೆಸ್ ನಿಂದ ಕಣಕ್ಕಿಳಿದು ಚುನಾವಣೆ ಗೆದ್ದರು. 1989ರಲ್ಲಿ ಕಾಂಗ್ರೆಸ್ ನಿಂದ ಗೆದ್ದಾಗ ಗಂಗಾಧರ ಗೌಡರು ಸಚಿವರೂ ಆಗಿದ್ದರು. ಈ ಎಲ್ಲಾ ಸಂದರ್ಭದಲ್ಲಿ ವಸಂತ ಬಂಗೇರರು ಅವರ ಎದುರಾಳಿಯಾಗಿದ್ದರು.

ಮುಂದೆ 2008ರಲ್ಲಿ ವಸಂತ ಬಂಗೇರರು ಕಾಂಗ್ರೆಸ್ ಗೆ ಬಂದರು. ಗಂಗಾಧರ ಗೌಡರು ಜನತಾದಳಕ್ಕೆ ಹೋದರು. ಆ ಚುನಾವಣೆಯಲ್ಲಿ ಗೌಡರು ಸೋಲುಂಡರು; ವಸಂತ ಬಂಗೇರ ಗೆದ್ದರು. ನಂತರ 2012ರ ಹೊತ್ತಿಗೆ ಗೌಡರು ಬಿಜೆಪಿಗೆ ಬಂದರು. 2013ರ ಚುನಾವಣೆಯಲ್ಲಿ ಗಂಗಾಧರ ಗೌಡರ ಮಗ ರಂಜನ್ ಜಿ. ಗೌಡ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ವಸಂತ ಬಂಗೇರರ ಎದುರು 16 ಸಾವಿರ ಮತಗಳಿಂದ ಸೋಲು ಕಂಡರು. ಈ ಚುನಾವಣೆಯಲ್ಲಿ ಬಂಗೇರರು 74,530 ಮತಗಳನ್ನು ಪಡೆದರೆ ರಂಜನ್ 58,789 ಮತಗಳನ್ನು ಪಡೆದಿದ್ದರು.

ಹೀಗೆ 1972ರಿಂದ 2013ರ ಹೊತ್ತಿಗೆ 40 ವರ್ಷ ಕಳೆಯುವಾಗ ಕಾಂಗ್ರೆಸ್ ನಲ್ಲಿದ್ದ ಗೌಡರ ಕುಟುಂಬ ಬಿಜೆಪಿಗೆ ಬಂದಿತ್ತು. ಬಿಜೆಪಿಯಲ್ಲಿದ್ದ ವಸಂತ ಬಂಗೇರರು ಕಾಂಗ್ರೆಸ್ ಗೆ ಬಂದಿದ್ದರು. ಇಬ್ಬರ ಪಕ್ಷವೂ ಅದಲು ಬದಲಾಗಿತ್ತು.

ಕುತೂಹಲ ಕೆರಳಿಸಿರುವ 2013ರ ಚುನಾವಣೆ

ದಕ್ಷಿಣ ಕನ್ನಡದ ಪಾಲಿಗೆ ಜೆಡಿಎಸ್ ಗೆ ಸ್ವಲ್ಪವಾದರೂ ನೆಲೆ ಇದ್ದ ಭಾಗ ಅಂದರೆ ಅದು ಬೆಳ್ತಂಗಡಿ ಮತ್ತು ಮೂಡುಬಿದಿರೆ. ಆದರೆ ವಸಂತ ಬಂಗೇರರ ನಿರ್ಗಮನದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ನೆಲಕಚ್ಚಿದ್ದು ಕೇವಲ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.

ಬೆಳ್ತಂಗಡಿ ಕ್ಷೇತ್ರದ ಮೇಲೆ ವಸಂತ ಬಂಗೇರರ ಹಿಡಿತ ಬಲವಾಗಿದ್ದು ಮೂರು ಬೇರೆ ಬೇರೆ ಪಕ್ಷಗಳಿಂದ ಅವರು 5 ಬಾರಿ ವಿಧಾನಸಭೆ ಪ್ರವೇಶಿಸಿದ್ದೇ ಇದಕ್ಕೆ ಸಾಕ್ಷಿ.

2008ರಲ್ಲಿ ಮತ್ತು 2013ರಲ್ಲಿ ವಸಂತ ಬಂಗೇರರು ಸತತ 16 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು ಅವರ ವರ್ಚಸ್ಸು ಕುಂದಿಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಈ ಬಾರಿಯೂ ಅವರ ಗೆಲುವು ಕಷ್ಟವೇನಲ್ಲ. ಆದರೆ 2008ರಲ್ಲೇ ತಮ್ಮ ಕೊನೆಯ ಚುನಾವಣೆ ಎಂದಿದ್ದ ವಸಂತ ಬಂಗೇರರು ಈ ಬಾರಿ ಸ್ಪರ್ಧಿಸುತ್ತಾರೋ ಇಲ್ಲವೋ ಇನ್ನೂ ಸರಿಯಾಗಿ ನಿರ್ಧಾರವಾಗಿಲ್ಲ.

ಜತೆಗೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದೂ ಗೆಲುವನ್ನು ನಿರ್ಧರಿಸಲಿದೆ. ಯುವ ರಾಜಕಾರಣಿ ರಂಜನ್ ಜಿ. ಗೌಡ ಈ ಬಾರಿಯೂ ಟಿಕೆಟ್ ಬಯಸಿದ್ದಾರೆ. ಇನ್ನೋರ್ವ ಯುವ ರಾಜಕಾರಣಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಕೂಡ ಟಿಕೆಟ್ ಬಯಸಿದ್ದಾರೆ. ಆದರೆ ಪ್ರಭಾವಿ, ಅನುಭವಿ ಬಂಗೇರರು ಕಣಕ್ಕಿಳಿದರೆ ಇಬ್ಬರಿಗೂ ಗೆಲುವು ಕಷ್ಟ ಸಾಧ್ಯ.

English summary
Karnataka Assembly Election 2018: Read all about Belthangady assembly constituency of Dakshina Kannada district. Get election news from Belthangady. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X