ಮತದಾರರ ಗುರುತಿನ ಚೀಟಿ ಕಳೆದು ಹೋದ್ರೇ ಏನ್ಮಾಡ್ಬೇಕು?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಹೊಸ ಹೊಸ ಮತದಾರರಿಗೆ ಅನುಕೂಲವಾಗಲೆಂದು ಚುನಾವಣಾ ಆಯೋಗವು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜನ ಜಾಗೃತಿ ಹಮ್ಮಿಕೊಂಡಿದೆ.
ಮತದಾರರ ಗುರುತಿನ ಚೀಟಿ ಪಡೆಯುವುದು ಹೇಗೆ? ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದೇ? ಗುರುತಿನ ಚೀಟಿಯಲ್ಲಿ ಬದಲಾವಣೆ ಮಾಡಬಹುದೇ? ಗುರುತಿನ ಚೀಟಿಯಿಂದ ಹೆಸರನ್ನು ತೆಗೆದು ಹಾಕುವುದು ಹೇಗೆ? ಮುಂತಾದ ಮೂಲ ಅಂಶಗಳನ್ನು ತಿಳಿಸಿಕೊಡಲಾಗುತ್ತಿದೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ?: ಮತದಾನ ಮಾಡಲು ಅರ್ಹರಾದವರು ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಫಾರ್ಮ್ 6 ಭರ್ತಿ ಮಾಡಿ ಸುಲಭವಾಗಿ ಮತದಾರರ ಗುರುತಿನ ಚೀಟಿ ಪಡೆಯಬಹುದು. ಅಥವಾ ಆನ್ ಲೈನ್ ನಲ್ಲಿ ಇದೇ ಅರ್ಜಿ ಸಲ್ಲಿಸಬಹುದು.
ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವುದು ಹೇಗೆ?: ಈಗಾಗಲೇ ಮತದಾರರ ಗುರುತಿನ ಚೀಟಿ ಹೊಂದಿದ್ದರೆ, ಆನ್ ಲೈನ್ ಮೂಲಕ ವಿವರಗಳು ಸರಿಯಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದು. ಆನ್ ಲೈನ್ ನಲ್ಲಿ ತಪ್ಪು ಸರಿಪಡಿಸಲು ಫಾರ್ಮ್ 7 ತುಂಬಬಹುದು.
ಇದಲ್ಲದೆ, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ಫಾರ್ಮ್ 8 ಬಳಸಬಹುದು. ಆನ್ ಲೈನ್ ನಲ್ಲಿ ಎನ್ ವಿ ಎಸ್ ಪಿ ವೆಬ್ ಸೈಟ್ ಮೂಲಕ ಇದು ಸಾಧ್ಯ. ಆನ್ ಲೈನ್ ನಲ್ಲಿ ಇದೇ ವಿಧಾನದಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ಜತೆಗೆ ಆಧಾರ್ ಸಂಖ್ಯೆ ಜೋಡಿಸಬಹುದು. ಅಥವಾ ಎಸ್ಎಂಎಸ್, ಫೋನ್ ಕರೆ ಮೂಲಕ ಕೂಡಾ ಅಧಾರ್ ಜತೆ ಜೋಡಣೆ ಸಾಧ್ಯ. ಇಷ್ಟೆಲ್ಲ ಪ್ರಕ್ರಿಯೆ ದಾಟಿ ಪಡೆದ ಎಪಿಕ್ ನಂಬರ್ ಹಾಗೂ ವೋಟರ್ ಐಡಿ ಕಳೆದು ಹೋದರೆ ಏನು ಮಾಡುವುದು?

ವೋಟರ್ ಐಡಿ ಕಳೆದುಕೊಂಡರೆ ಹೀಗೆ ಮಾಡಿ: ಮತದಾರರ ಗುರುತಿನ ಚೀಟಿ ಕಳೆದುಕೊಂಡ ಸ್ಥಳಕ್ಕೆ ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣವೇ ಹೋಗಿ ದೂರು ದಾಖಲಿಸಿ, ಎಫ್ಐಆರ್ ಪ್ರತಿ ಪಡೆದುಕೊಳ್ಳಿ. ಹೊಸ ವೋಟರ್ ಐಡಿ ನೀಡುವ ದಿನಾಂಕಗಳನ್ನು ಮಾಧ್ಯಮಗಳ ಮೂಲಕ ತಿಳಿದುಕೊಳ್ಳಿ. ಈ ಬಾರಿ ಕರ್ನಾಟಕದಲ್ಲಿ ಜನವರಿ 22ರಂದು ಕೊನೆ ದಿನಾಂಕವಾಗಿದೆ.
ಕರ್ನಾಟಕ ಚುನಾವಣಾ ಆಯೋಗದ ಕಚೇರಿಗೆ ತೆರಳಿ ERO ಸಂಪರ್ಕಿಸಿ. ಆಯೋಗದ ವೆಬ್ ಸೈಟ್ ನಲ್ಲಿ ಕ್ಷೇತ್ರವಾರು ಎಲೆಕ್ಷನ್ ಅಧಿಕಾರಿಗಳು(ಇ ಆರ್ ಒ) ಪಟ್ಟಿ ನೀಡಲಾಗಿದೆ. ನಿಮ್ಮ ಜಿಲ್ಲೆಯನ್ನು ಕ್ಲಿಕ್ ಮಾಡಿ ಅಧಿಕಾರಿಯ ಹೆಸರು ಹಾಗೂ ಸಂಪರ್ಕ ಪಡೆದುಕೊಳ್ಳಿ.
ಅಧಿಕಾರಿಗೆ ಎಫ್ ಐಆರ್ ಪ್ರತಿ ನೀಡಿ, 002 ಅರ್ಜಿಯನ್ನು ತುಂಬಿರಿ. ಅರ್ಜಿ ಶುಲ್ಕ 25 ರು ನೀಡಿ, ವಿಳಾಸ ದಾಖಲಾತಿಗಾಗಿ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಇತ್ಯಾದಿ ನೀಡಿ, ದಾಖಲೆ ಪರಿಶೀಲನೆ ನಂತರ ಹೊಸ ಕಾರ್ಡ್ ಪಡೆಯಬಹುದು.












Click it and Unblock the Notifications