ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಚಿತ್ರ: ಕಾಂಗ್ರೆಸ್ಸಿನ 'ಸೋಷಿಯಲ್ ಪವರ್' ರಮ್ಯಾ

By Mahesh
|
Google Oneindia Kannada News

ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಹೊಸ ಹುರುಪು, ಹೊಸತನ, ಹೊಸ ಸಾಧ್ಯತೆಗಳನ್ನು ಪರಿಚಯಿಸಿದವರು.

ಕಾಂಗ್ರೆಸ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಾಮಾಜಿಕ ನೆಲೆಯನ್ನು ಗಟ್ಟಿಗೊಳಿಸಿದ ಘಾಟಿ ರಾಜಕಾರಣಿ ರಮ್ಯಾ ಅವರು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಅತಿ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಳ್ಳಲ್ಲಿದ್ದಾರೆ.

2011ರಲ್ಲಿ ಯುವ ಕಾಂಗ್ರೆಸ್ ಸೇರಿದ ರಮ್ಯಾ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಪರವಾಗಿ ರಮ್ಯಾ ಪ್ರಚಾರ ಮಾಡಿದ್ದರು. ಆದರೆ, ಲೋಕಸಭೆಗೆ ಸ್ಪರ್ಧೆ ಬಯಸಿ, ಮಂಡ್ಯ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದರು.

Assembly Elections 2018 : Congress leader, Former MP Ramya alias Divya Spandana profile

ಮೊದಲ ಗೆಲುವು : ಮೊದಲ ಚುನಾವಣೆಯಲ್ಲಿಯೇ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸಂಸತ್ ಪ್ರವೇಶಿಸಿದರು. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿಯೂ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದ ರಮ್ಯಾ ಅವರು ಜೆಡಿಎಸ್ ನ ಸಿ.ಎಸ್ ಪುಟ್ಟರಾಜು ವಿರುದ್ಧ 5,500 ಮತಗಳ ಅಂತರದಿಂದ ಸೋಲು ಕಂಡರು.

2017ರಲ್ಲಿ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣಗಳ ಹೊಣೆಗಾರಿಕೆ ಹೊತ್ತುಕೊಂಡ ರಮ್ಯಾ ಅವರು ಬಹುಬೇಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ರಾಹುಲ್ ಗಾಂಧಿ ಅವರ ಯುವಪಡೆಯ ಭಾಗವಾದರು. ದೀಪೇಂದ್ರ ಹೂಡಾ ಅವರು ನಿರ್ವಹಿಸುತ್ತಿದ್ದ ಡಿಜಿಟಲ್ ವಿಭಾಗದ ಹೊಣೆಗಾರಿಕೆ ಹೊತ್ತುಕೊಂಡು ಸಮರ್ಥವಾಗಿ ನಿಭಾಯಿಸಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಪನಗದೀಕರಣ, ಜಿ ಎಸ್ ಟಿ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿ ಎಲ್ಲರ ಗಮನ ಸೆಳೆದರು. ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಇಮೇಜ್ ಬದಲಾಯಿಸಿದ ರಮ್ಯಾ ಅವರ ಚಿತ್ತ ಈಗ ಕರ್ನಾಟಕದ ವಿಧಾನಸಭೆ ಚುನಾವಣೆಯತ್ತ ನೆಟ್ಟಿದೆ.

Ramya

ಟ್ವೀಟ್ ಮೂಲಕ ಚರ್ಚೆ: ಸಂಸದೆಯಾಗಿದ್ದಾಗ ಹಾಗೂ ನಂತರ ಕೂಡಾ ಸಾಮಾಜಿಕ ಜಾಲ ತಾಣ ಟ್ವಿಟ್ವರ್ ಮೂಲಕ ಮಂಡ್ಯ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದಾರೆ. ಕಬ್ಬು ಬೆಳೆಗಾರರ ಕಷ್ಟಗಳು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಸತ್ತಿನಲ್ಲಿ ಭಾಷಣ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ರಮ್ಯಾ ಅವರ ಮೊನಚು ಮಾತು, ಟ್ವೀಟ್ ಗಳು ಹಲವು ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ನಾಂದಿ ಹಾಡಿದ್ದು ಸುಳ್ಳಲ್ಲ. ಸಾರ್ವಜನಿಕರ ಟೀಕೆಗಳು, ವಿರೋಧಿಗಳ ಕಾಲೆಳೆತದ ನಡುವೆಯೂ ಅಂಜದೆ, ಅಳುಕದೆ ರಮ್ಯಾ ಅವರು ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ.

2004ರಲ್ಲಿ ಪುನೀತ್ ರಾಜ್ ಕುಮಾರ್ ಜತೆ ಅಭಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ಅವರು ಸ್ಯಾಂಡಲ್ ವುಡ್ ಕ್ವೀನ್, ಬಹುಭಾಷಾ ನಟಿಯಾಗಿ ಜನಪ್ರಿಯತೆ ಗಳಿಸಿದವರು. ಆದರೆ, ಚಿತ್ರರಂಗ ತೊರೆದು ರಾಜಕೀಯದಲ್ಲಿ ಸಕ್ರಿಯರಾಗುವ ವೇಳೆಗೆ ಸ್ವಲ್ಪ ದೊಡ್ಡ ಮಟ್ಟದ ಕಿರಿಕಿರಿ ಅನುಭವಿಸಿದರು.

Ramya
ರಮ್ಯಾ ಅವರ ಸಾಕು ತಂದೆ ಉದ್ಯಮಿ ಆರ್.ಟಿ.ನಾರಾಯಣ್,ತಾಯಿ ರಂಜಿತಾ. ಮಂಡ್ಯ ಮೂಲದ ರಮ್ಯಾ ಅವರು ಓದಿದ್ದು ಊಟಿಯ ಹಿಲ್ಡಾಸ್ ಬೋರ್ಡಿಂಗ್ ಶಾಲೆಯಲ್ಲಿ ಹೀಗಾಗಿ ವಿವಿಧ ಭಾಷೆಗಳ ಪರಿಚಯ ಇದೆ. ಕಪ್ಪು, ಹಸಿರು ಬಣ್ಣ ಇಷ್ಟಪಡುವ ರಮ್ಯಾ ಅವರಿಗೆ ಚಿತ್ರಾನ್ನ ತುಂಬಾ ಇಷ್ಟ.

ರಾಜ್ಯ ರಾಜಕಾರಣದತ್ತ ರಮ್ಯಾ: ಮಂಡ್ಯದಲ್ಲಿ ಮನೆ ಮಾಡಿರುವ ರಮ್ಯಾ ಅವರು ಮಂಡ್ಯ ಅಥವಾ ಮೇಲುಕೋಟೆ ಕ್ಷೇತ್ರದಿಂದ ರಮ್ಯಾ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ಆದರೆ, ರಾಜ್ಯ ರಾಜಕೀಯಕ್ಕೆ ರಮ್ಯಾ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಬೆಂಗಳೂರಿನ ಬಸವನಗುಡಿ ಅಥವಾ ರಾಜಾಜಿನಗರ ಕ್ಷೇತ್ರದಿಂದ ರಮ್ಯಾ ಅವರನ್ನು ಕಣಕ್ಕಿಳಿಸುವ ಯೋಜನೆ ಕೂಡಾ ಚರ್ಚೆ ಹಂತದಲ್ಲಿತ್ತು.

ಆದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಮ್ಯಾ ಅವರು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸುವ ಮಾತುಗಳು ಕೇಳಿ ಬಂದಿವೆ. ಸದ್ಯಕ್ಕೆ ಮುಂದಿನ ಚುನಾವಣೆ ವೇಳೆಗೆ ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಗಳು, ಬಿಜೆಪಿ ನಾಯಕರ ಹುಳುಕುಗಳು, ಜೆಡಿಎಸ್ ತಂತ್ರಗಳ ಬಗ್ಗೆ ಸಾರ್ವಜನಿಕರಿಗೆ ತಲುಪಿಸುವ ಕಾರ್ಯದಲ್ಲಿ ರಮ್ಯಾ ಅಂಡ್ ಟೀಂ ನಿರತವಾಗಿದೆ. ಜೊತೆಗೆ ಚುನಾವಣೆಗೆ ಸ್ಟಾರ್ ಪ್ರಚಾರಕರಾಗಿ ಖುಷ್ಬೂ, ಚಿರಂಜೀವಿ, ರಾಜ್ ಬಬ್ಬರ್, ಅಜರುದ್ದೀನ್ ಮುಂತಾದವರನ್ನು ಕರೆ ತರುವ ಜವಾಬ್ದಾರಿಯೂ ರಮ್ಯಾ ಅವರಿಗೆ ನೀಡಿರುವ ಸುದ್ದಿ ಬಂದಿದೆ.

English summary
In the perspective of Karnataka Assembly Elections 2018, we present the short biography and political journey of vokkaliga leader. Ramya alias Divya Spandana is the Social Media Icon of Indian National Congress. She is instrumental in changing the social media image of Rahul Gandhi. Ramya currently working as national level head of Congress party's digital team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X