ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೋಳಗೇ ಇದ್ದಾಳೆ ಓಪ್ರಾ ವಿನ್‍ಫ್ರೆ . . !

By Staff
|
Google Oneindia Kannada News


ಅವಳು ದೂರದರ್ಶನದಲ್ಲಿ ನಿತ್ಯವೂ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಾಳೆ. ನಟಿ, ನಿರ್ಮಾಪಕಿ, ನಿರ್ದೇಶಕಿ, ಸಮಾಜ ಸೇವಕಿ, ಪತ್ರಿಕಾ ಸಂಪಾದಕಿ, ಆಪ್ತ ಸಲಹಾಗಾರ್ತಿ, ಯಶಸ್ವಿ ಉದ್ಯಮಿ,ಶಿಕ್ಷಕಿ ಹೀಗೇ ಎಲ್ಲವೂ ಆಗಿದ್ದಾಳೆ! ಕೇವಲ ಧ್ವನಿಯಿಂದ ಬದುಕಿಗೇ ಒಂದು ಪರ್ಸನ್ಯಾಲಿಟಿ ತಂದುಕೊಂಡಿದ್ದಾಳೆ. ಸುರ್ಸುರ್ಬತ್ತಿಯಂತಹ ಅವಳ ಕಣ್ಣು ನೋಡಿದರೆ ಹಿಂದೊಮ್ಮೆ ಅಲ್ಲಿದ್ದ ಕಣ್ಣೀರು ಕಾಣುವುದಿಲ್ಲ. ಪ್ರತೀ ಕ್ಷಣವೂ ಅವಳು ತನ್ನನ್ನು ಅರ್ಪಿಸಿಕೊಳ್ಳುವ ಚರ್ಯೆ ನೋಡಿದರೆ ಅವಳು ಐವತ್ತು ದಾಟಿದ ದೇಹದ ಒಡತಿ ಎಂದರೆ ನಂಬುವುದು ಸಾಧ್ಯವೇ ಇಲ್ಲ!



Win Win Winfrey!ಅಯ್ಯೋ ನಮ್ಮ ನಮ್ಮ ಮನಸ್ಸಿನ ಬಾವಿಯೊಳಗಿಂದ ನೀರು ಸೇದೋಕ್ಕೆ ನಮಗೆ ಯಾರ ಅಪ್ಪಣೆ ಬೇಕು? ಆ ಪ್ರೇರೇಪಣೆ ಪಡೆಯೋಕ್ಕೆ ಏಳು ಸಮುದ್ರ ದಾಟಿ ಯಾಕ್ತಾನೆ ಹೋಗ್ಬೇಕು? ಯಾವ ಕ್ರಾಂತಿಯೂ ಮಾಡದೆ, ಯಾವ ಸದ್ದು ಇಲ್ಲದೆ, ತಾನಿಲ್ಲದೆ ಕುಟುಂಬವೇ ನಡೆಯುವುದಿಲ್ಲ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದ ಅಮ್ಮ, ಅಜ್ಜಿ,, ಚಿಕ್ಕಮ್ಮ ಎಲ್ಲರೂ ಒಬ್ಬೊಬ್ಬ ಓಪ್ರ ವಿನ್‍ಫ್ರೆಗಳೇ ತಾನೆ?! ನನಗೆ ಗೊತ್ತು ಹೀಗೆಲ್ಲಾ ನಾನು ಅವಳನ್ನು ಹೊಗಳುತ್ತಾ ಕೂತರೆ ನೀವಂತಿರಾ ಅವಳನ್ನು ಬೈಯ್ಯೋಕ್ಕೆ ಅಂತಾನೆ ಒಂದು ವೆಬ್ ಸೈಟ್ ಇದೆ ಅಂತ.

ಅಲ್ಲಾ, ಬಲ ಅಂತ ಇದ್ದಮೇಲೆ ಎಡಾನೂ ಇರಲೇ ಬೇಕಲ್ಲ್ವಾ? ಸೋ, ನಾನು ತಲೆಕೆಡಿಸ್ಕೊಳ್ಳಲ್ಲ ಬಿಡಿ. ಸದ್ಯಕ್ಕಂತೂ ನಾನು ಹೇಳಬೇಕೂಂತಿರೋದು ನಳಿನಾಕ್ಷಿ ಆಂಟಿ ಬಗ್ಗೆ! ಹೂಂ, ಅವರು ನನ್ನ ತಂದೆಯ ಸೋದರ ಮಾವನ ನಾದಿನಿಯ ಮಗಳು. ನೀವೂ ನೋಡಿದ್ದೀರಲ್ಲ

.ಆಕೆ ಬಿಳಿಕೆರೆ ಹತ್ತ್ರ ಒಂದು ಸ್ಕೂಲ್‍ನಲ್ಲಿ ಟೀಚರ್ ಆಗಿದ್ದ್ರು. ಹದಿನೆಂಟು ವರ್ಷಗಳ ವೃತ್ತಿಯ ನಂತರ ತಮ್ಮ ನಲವತ್ತೊಂಭತ್ತನೆ ವಯಸ್ಸಿನಲ್ಲಿ ಸಂಗೀತ ಕಲಿಯಲು ಪ್ರಾರಂಭಿಸಿ ಈಗ ಸ್ಟೇಜ್ ಮೇಲೆ ಕುಳಿತು ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?’ ಅಂತ ಸುಶ್ರಾವ್ಯವಾಗಿ ಹಾಡ್ತಾರೆ! ಅವರು ಉತ್ಸಾಹದ ಚಿಲುಮೆಯಲ್ಲ್ವಾ ಅಂತ ಮೊನ್ನೆ ಯಾರ್ಹತ್ತ್ರಾನೋ ಹೇಳಿದೆ. ಅದಕ್ಕವರೇನಂದ್ರು ಗೊತ್ತಾ ‘ ಹೌದ್ಹೌದು, ಸಂಸಾರದಲ್ಲಿ ಏನೂ ತಾಪತ್ರಯ ಇಲ್ಲದಿದ್ದ್ರೆ ಯಾರ್ಬೇಕಾದ್ರೂ ಯಾವಾಗ್ಬೇಕಾದ್ರೂ ಎಂ.ಎಸ್.ಎಸ್ ಆಗಬಹುದು’ ಅಂತ! ಛೀ, ಛೀ, ಎಂತಹ ಕೀಳುಮಟ್ಟದ ಆಲೋಚನೆ ಅಂತನಿಸಿತು ನನಗೆ.

ಪಾಪ, ನಳಿನಾಕ್ಷಿಯ ಪತಿಪರಮೇಶ್ವರರಿಗಂತೂ ಊರೆಲ್ಲಾ ನಳಿನಾಕ್ಷಿಯರೇ! ಇರೋನೊಬ್ಬ ಮಗ ಎಂಟಕ್ಕಿರಲಿ ಇಪ್ಪತೆಂಟಕ್ಕೂ ದಂಟು ಅಂತಾಯಿಲ್ಲ. ಇದೆಲ್ಲಾ ತಲೆ ಮೇಲ್ಕೈಹೊತ್ಕ್ಕೊಂಡು ಕೊತ್ಕೊಳ್ಳೋಂತ ವಿಷಯ ಅಲ್ಲ್ವೇನ್ರಿ? ಆದರೂ ಆಕೆಯ ಮನೋಸ್ಥೈರ್ಯಕ್ಕೆ ಚಪ್ಪಾಳೆ ತಟ್ಟದಿರಲು ಸಾಧ್ಯಾನಾ ಹೇಳಿ?! ಅವರನ್ನೇ ಅದರ ಬಗ್ಗೆ ಕೇಳಿದ್ರೆ ಏನ್ಹೇಳಿದ್ರು ಗೊತ್ತಾ “ ನಾವು ಹೆಂಗಸರು ಹುಟ್ಟೋದೇ ಗಂಡ ಮನೆ ಮಕ್ಕಳ್ಳು ಅಂತ ನಮ್ಮನ್ನಾವು ಅರ್ಪಿಸಿಕೊಳ್ಳೋಕೆ ಅಂತ ತಿಳಿದ್ಕೊಂಡಿರ್ತಿವಿ. ನಮಗಾಗಿ ನಾವು ನಿರುಪದ್ರವಿಗಳಾಗಿ ಬದುಕಬಹುದು ಅಂತಾನೇ ನಮಗೆ ಗೊತ್ತಿರಲ್ಲ. ಅದು ಗೊತ್ತಾದ ತಕ್ಷಣ ನಮ್ಮೊಳಗಿನ ಟೀವಿಯಲ್ಲಿ ಪ್ರತಿ ಘಳಿಗೆಯೂ ಒಂದು ಓಪ್ರ ವಿನ್‍ಫ್ರೆ ಷೋ ಶುರುವಾಗಿಬಿಡುತ್ತೆ”

ಅವರ ಮಾತು ಕೇಳಿದ್ಮೇಲೆ, ಹೆಂಗಸರಿಗೆ ಗುಲಾಮಗಿರಿಯ ಜೆನಿಟಿಕಲ್ ಸಮಸ್ಯೆ ಇದೆಯಾ ಅನ್ನುವ ಅನುಮಾನ ನನ್ನನ್ನು ಕಾಡಿತು! ನಿಸ್ಪೃಹವಾಗಿ ನಮ್ಮನ್ನು ನಾವು ಕೊಟ್ಟುಕೊಳ್ಳುವುದು ಬೇರೆ, ಅಯ್ಯೋ, ನನ್ನ ಹಣೆಬರಹಾನೇ ಇಷ್ಟು ಅಂತ ನಮ್ಮ ಕಾಲಿಗೆ ನಾವೇ ಬೇಡಿ ಹಾಕ್ಕೊಂಡು ಗೋಳಿಡೋದೇ ಬೇರೆ. ಯಾವಾಗ್ಲೋ ಎಲ್ಲೋ ಓದಿರುವ ಫೀನಿಕ್ಸ್ ಪಕ್ಷಿಯ ಸ್ವಭಾವವನ್ನು ಸಾಧಾರಣವಾಗಿ ಎಲ್ಲರೂ ಆದರ್ಶವಾಗಿ ಇಟ್ಟುಕೊಳ್ಳಬೇಕು ಅನ್ನುತ್ತೆ ಮ್ಯಾನೇಜ್ಮೆಂಟ್ ಸ್ಕೂಲ್‍ಗಳು. ಆದ್ರೆ ನನಗೆ ಅಷ್ಟೆಲ್ಲಾ ಬುದ್ಧಿ ಇಲ್ಲ್ದೇಯಿರೋದ್ರಿಂದ ಏನನ್ನು ನನ್ನ ಆದರ್ಶ ಅಂದ್ಕೊಂಡಿದ್ದೀನಿ ಗೊತ್ತಾ?

ಹೂಂ, ಕೇಳಿದ್ರೆ ನನ್ನ ಪೆದ್ದುತನಕ್ಕೆ ನಿಮಗೆ ಅಳಬೇಕೋ ನಗಬೇಕೋ ಗೊತ್ತಾಗಲ್ಲ! ಪಾತು ಅತ್ತೆ ಮನೆ ಹಿತ್ತಲಿನ ನಲ್ಲಿ ಬಚ್ಚಲ ಹತ್ರ ಇರುವ ಹಸಿರು ಪಾಚಿ ನನ್ನ ಅದರ್ಶ ಶಿಖಾಮಣಿ! ನನಗೊತ್ತಿತ್ತು, ನೀವ್ಹೀಗೇ ಮುಸಿಮುಸಿ ನಗ್ತೀರೀಂತ! ಪಾತು ಅತ್ತೆ ಉಪಯೋಗಿಸ್ದೇಯಿರೊ ಸೋಡ ಇಲ್ಲ, ಸೋಪಿನ ಪುಡಿ ಇಲ್ಲ. ಬೆನ್ನುಬಿದ್ದ್ಹೋಗೋ ಹಾಗೆ ಚರಚರಾಂತ ಉಜ್ಜಿ ಉಜ್ಜಿ ಉಜ್ಜ್ತಾರೆ ಆಕೆ. . . ಅದ್ಯಾವ ಮಾಯದಲ್ಲಿ ಮತ್ತೆ ಮತ್ತೆ ಹುಟ್ಟುತ್ತೋ ಈ ಪಾಚಿ! ಅಷ್ಟೇ ಎಳಸು, ಅಷ್ಟೇ ಹಸಿರು. . . . .ನನಗಂತೂ ಸ್ಪೂರ್ತಿ ಸಂಗಾತಿ!

ಯಾರೋ ದೊಡ್ಡ ಮನುಷ್ಯರು ಏನು ಹೇಳಿದ್ದಾರಂತೆ ಗೊತ್ತಾ? “If we wait for our hands to stop shaking, we will never open the door!” ಹೀಗಂದ್ರೇನು ಅಂತ ಸ್ವಲ್ಪ ವಿವರವಾಗಿ ನನ್ನ ಈ ಹೆಡ್ಡ headಗೆ ಅರ್ಥ ಆಗೋ ಹಾಗೆ ಹೇಳಿಕೊಡ್ರೀ ನಿಮ್ಮ ದಮ್ಮಯ್ಯ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X