Diganth: ಬಾಡಿಗೆ ಹಣದಿಂದ ಜೀವನ ನಡೆಸುವ ಸ್ಥಿತಿ, ನಟನೆ ಬಿಡುವ ಆಲೋಚನೆ: ಕನ್ನಡ ಚಿತ್ರರಂಗದ ಕಹಿ ಸತ್ಯ ಬಿಚ್ಚಿಟ್ಟ ನಟ ದಿಗಂತ್
ಸ್ಯಾಂಡಲ್‌ವುಡ್‌ನ ದೂದ್‌ಪೇಡ ಖ್ಯಾತಿಯ ಜನಪ್ರಿಯ ನಟ ದಿಗಂತ್ ಮಂಚಾಲೆ ಅವರು ಇತ್ತೀಚೆಗೆ ತಮ್ಮ ಹೊಸ ಚಿತ್ರ 'ರುದ್ರ ಕಾಲ' ಸಿನಿಮಾದ ಮುಹೂರ್ತದ ಸಂದರ್ಭದಲ್ಲಿ ಚಿತ್ರರಂಗದ ತೆರೆಯ ಹಿಂದಿನ ಕಷ್ಟಗಳನ್ನು ಅತ್ಯಂತ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ನಂತರ ಸಿನಿಮಾ ಸೆಟ್ಟೇರುತ್ತಿರುವ ಸಂಭ್ರಮದಲ್ಲಿದ್ದ ದಿಗಂತ್, ಕಳೆದ ಕೆಲವು ತಿಂಗಳುಗಳಿಂದ ತಾವಷ್ಟೇ ಅಲ್ಲದೆ ಚಿತ್ರರಂಗದ ಅನೇಕ ಕಲಾವಿದರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ತಮ್ಮ ಮನೆ ಬಾಡಿಗೆಯಿಂದ ಜೀವನ ನಡೆಸುತ್ತಿರುವ ಹಾಗೂ ತೀರ್ಥಹಳ್ಳಿಗೆ ವಾಪಸ್ ಆಗುವ ನಿರ್ಧಾರದ ಬಗ್ಗೆಯೂ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡರು.
ಚಿತ್ರರಂಗದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ದಿಗಂತ್, ಆರು ತಿಂಗಳ ಹಿಂದೆಯೇ ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದರೂ, ಅವು ಸೆಟ್ಟೇರದೆ ಹೋದಾಗ ಆತಂಕ ಕಾಡಿತ್ತು ಎಂದು ಹೇಳಿಕೊಂಡರು. ಚಿತ್ರರಂಗದ ಇಂದಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿವರಿಸಿದ ದಿಗಂತ್, "ನಾವು ಸಿನಿಮಾಗಳನ್ನು ಒಪ್ಪಿಕೊಂಡರೂ ನಿರ್ಮಾಪಕರು ಮಾತ್ರ ಮಾರುಕಟ್ಟೆ ಸರಿ ಇಲ್ಲ ಎಂಬ ಕಾರಣ ನೀಡಿ ಹಿಂದೇಟು ಹಾಕುತ್ತಿದ್ದರು" ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಪ್ರತಿಯೊಬ್ಬ ನಿರ್ಮಾಪಕರೂ ಸದ್ಯದ ಪರಿಸ್ಥಿತಿಯಲ್ಲಿ ಬಂಡವಾಳ ಹೂಡಲು ಭಯಪಡುತ್ತಿರುವುದರಿಂದ, ನಟರಿಗೆ ಕೆಲಸವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಟನೆ ಬಿಡುವ ಆಲೋಚನೆ
ಇಂತಹ ಸಂದರ್ಭದಲ್ಲಿ ದಿಗಂತ್ ಅವರಿಗೆ ಮೊದಲ ಬಾರಿಗೆ "ನಾನು ನಟನೆ ಬಿಟ್ಟು ಬೇರೆನಾದರೂ ಹೊಸ ಕೆಲಸ ಶುರು ಮಾಡಬೇಕಾ?" ಎಂಬ ಗಂಭೀರ ಆಲೋಚನೆ ಕೂಡ ಬಂದಿತ್ತಂತೆ. ಇದು ಕೇವಲ ಒಬ್ಬ ನಟನ ಸಮಸ್ಯೆಯಲ್ಲದೆ, ಅವರ ಸುತ್ತಮುತ್ತಲಿನ ಅನೇಕ ಚಿತ್ರರಂಗದ ಸ್ನೇಹಿತರ ಪರಿಸ್ಥಿತಿಯೂ ಇದೇ ಆಗಿದೆ ಎಂದು ಅವರು ವಾಸ್ತವ ಬಿಚ್ಚಿಟ್ಟರು.
ಸಿನಿಮಾ ಬದುಕಿನಲ್ಲಿ ಎದುರಾದ ಈ ಅಡೆತಡೆಗಳಿಂದ ಬೇಸತ್ತಿದ್ದ ದಿಗಂತ್, ಒಂದು ಹಂತದಲ್ಲಿ ಬೆಂಗಳೂರಿನ ಬದುಕಿಗೆ ವಿದಾಯ ಹೇಳಿ ತಮ್ಮ ಹುಟ್ಟೂರಾದ ತೀರ್ಥಹಳ್ಳಿಗೆ ತೆರಳಲು ನಿರ್ಧರಿಸಿದ್ದಾಗಿಯೂ ಹೇಳಿಕೊಂಡರು. ಅಲ್ಲಿನ ತಮ್ಮ ತೋಟದ ಕೆಲಸಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ನಡೆಸೋಣ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರಂತೆ. ಅಷ್ಟೇ ಅಲ್ಲದೆ, ಆರ್ಥಿಕವಾಗಿ ಅನಿವಾರ್ಯತೆ ಎದುರಾದಾಗ ನಂದಿ ಹಿಲ್ಸ್ ಬಳಿಯ ತಮ್ಮ ಮನೆಯನ್ನು ಬಾಡಿಗೆಗೆ ನೀಡಿ, ಅದರಿಂದ ಬರುವ ಆದಾಯದ ಮೇಲೆಯೇ ಜೀವನ ನಡೆಸಬೇಕಾದ ಸ್ಥಿತಿ ಬಂದಿದ್ದನ್ನೂ ಅವರು ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡರು. ನಟರ ಜೀವನ ಅದ್ದೂರಿಯಾಗಿ ಕಂಡರೂ, ಅವಕಾಶಗಳು ಕೈಕೊಟ್ಟಾಗ ಸಾಮಾನ್ಯರಂತೆ ಅವರು ಕೂಡ ಆರ್ಥಿಕ ಸಂಕಷ್ಟ ಎದುರಿಸುತ್ತಾರೆ ಎಂಬ ಸತ್ಯವನ್ನು ದಿಗಂತ್ ಹೇಳಿಕೊಂಡರು.
ಕೊನೆಗೂ ಇಂತಹ ಪರಿಸ್ಥಿತಿಯ ನಡುವೆ ದಿಗಂತ್ ಅವರಿಗೆ 'ರುದ್ರ ಕಾಲ' ಸಿನಿಮಾದ ಆಫರ್ ಸಿಕ್ಕಿದೆ. ಈ ಚಿತ್ರವು ತಕ್ಷಣವೇ ಚಿತ್ರೀಕರಣಕ್ಕೆ ಚಾಲನೆ ನೀಡಿರುವುದು ದಿಗಂತ್ ಅವರಲ್ಲಿ ಹೊಸ ಹುರುಪು ತುಂಬಿದೆ. ಬಹಳ ದಿನಗಳ ನಂತರ ಕ್ಯಾಮೆರಾ ಎದುರಿಸುತ್ತಿರುವ ಅವರು, ಈ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಮತ್ತೆ ರಂಜಿಸಲು ಸಜ್ಜಾಗಿದ್ದಾರೆ. ದಿಗಂತ್ ಅವರ ಈ ಪ್ರಾಮಾಣಿಕ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಚಿತ್ರರಂಗದ ಕಷ್ಟಕಾಲದ ಬಗ್ಗೆ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಬೇರೆ ಚಿತ್ರರಂಗಗಳು ಚೆನ್ನಾಗಿಯೇ ಇವೆ
ಕನ್ನಡ ಚಿತ್ರರಂಗದ ಇಂದಿನ ಮಾರುಕಟ್ಟೆ ಮತ್ತು ಚಿತ್ರೀಕರಣದ ವೇಗದ ಬಗ್ಗೆಯೂ ನಟ ದಿಗಂತ್ ಗಂಭೀರವಾದ ಹೋಲಿಕೆ ಮಾಡಿದ್ದಾರೆ. ಅವರ ಪ್ರಕಾರ, ಚಿತ್ರೋದ್ಯಮ ಎದುರಿಸುತ್ತಿರುವ ಇಂತಹ ಕಠಿಣ ಪರಿಸ್ಥಿತಿ ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ಎದ್ದು ಕಾಣುತ್ತಿದೆ. ಪಕ್ಕದ ತೆಲುಗು ಸೇರಿದಂತೆ ಇತರ ಭಾಷಾ ಚಿತ್ರರಂಗಗಳಲ್ಲಿ ಸಿನಿಮಾ ಚಟುವಟಿಕೆಗಳು ಅತ್ಯಂತ ಬಿರುಸಿನಿಂದ ನಡೆಯುತ್ತಿವೆ. ಅಲ್ಲಿ ಸಿನಿಮಾ ಘೋಷಣೆಯಾದ ಬೆನ್ನಲ್ಲೇ ವ್ಯಾಪಾರ ವಹಿವಾಟುಗಳು ಸುಗಮವಾಗಿ ನಡೆಯುತ್ತಿರುವುದು ಆ ಉದ್ಯಮದ ಚೈತನ್ಯಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಆರಂಭಿಸಲು ಮತ್ತು ಮುಂದುವರಿಸಲು ಬೇಕಾದ ಪೂರಕ ವಾತಾವರಣದ ಕೊರತೆಯಿದೆ ಎಂದು ದಿಗಂತ್ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications