Namma Metro Pink Line: ಪೂರ್ಣ ಗುಲಾಬಿ ಮಾರ್ಗ ಲೋಕಾರ್ಪಣೆ ವಿಳಂಬ, ಜುಲೈಗೆ 3ನೇ ಹಂತದ ಯೋಜನೆಗೆ ಒಪ್ಪಿಗೆ?
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ (Namma Metro) ಪ್ರಯಾಣಿಕರು ಹೊಸ ಮಾರ್ಗಗಳ ತೆರೆಯುವಿಕೆಗೆ ಕಾಯುತ್ತಿದ್ದಾರೆ. ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆಯಲ್ಲಿ ಆದ ನಿರಂತರ ವಿಳಂಬವನ್ನು ಗುಲಾಬಿ ಲೈನ್ (Namma Metro Pink Line) ಮತ್ತು ಇತರ ಹೊಸ ಮಾರ್ಗದಲ್ಲಿ ಎದುರಾಗಿದೆ. ತುಸು ವಿಳಂಬದೊಂದಿಗೆ 7.5 ಕಿಲೋ ಮೀಟರ್ ಗುಲಾಬಿ ಎಲೆವೇಟೆಡ್ ಕಾರಿಡಾರ್ ಆಗಸ್ಟ್‌ಗೆ ಲೋಕಾರ್ಪಣೆಗೆ ಸಿದ್ಧವಾದರೆ ಇನ್ನರ್ಧ ಭೂಗತ ಮಾರ್ಗ ತೆರೆಯುವಿಕೆ ಮತ್ತಷ್ಟು ವಿಳಂಬವಾಗಲಿದೆ. ಒಂದು 08 ತಿಂಗಳು ತಡವಾಗಿ ಆರಂಭವಾಗುವ ಸಾಧ್ಯತೆ ಇದೆ.
ಕಾಳೇನ ಅಗ್ರಹಾರ-ನಾಗವಾರವರೆಗೆ (Kalena Agrahara- Nagawara Metro Line) ಒಟ್ಟು ಸುಮಾರು 21 ಕಿಲೋ ಮೀಟರ್ ಗುಲಾಬಿ ಮಾರ್ಗ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ-ತಾವೆರೆಕರೆವರೆಗೆ ಎತ್ತರಿಸಿದ ಮಾರ್ಗ (ಸುಮಾರು 7.5 ಕಿಮೀ) ನಿರ್ಮಿಸಲಾಗಿದೆ. ಇದನ್ನು ಮೊದಲಿಗೆ ಮೇ 2026ರಂದು ತೆರೆಯಲು ಯೋಜಿಸಲಾಗಿತ್ತು. ಅದೀಗ ಇದೇ ವರ್ಷ ಆಗಸ್ಟ್ ಮಧ್ಯಭಾಗದಲ್ಲಿ ತೆರೆಯಲಾಗುತ್ತದೆ. ಉಳಿದ ತಾವೆರೆಕರೆ-ನಾಗವಾರವರೆಗಿನ 13.5 ಕಿಲೋ ಮೀಟರ್ ಭೂಗತ ಮಾರ್ಗವನ್ನು ಡಿಸೆಂಬರ್ 2026ರಂದು ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೆ ಉದ್ಘಾಟನೆಯ ಗಡುವು ಮುಂದೂಡಿಕೆ ಆಗಿದ್ದು, 2027ರ ಆಗಸ್ಟ್ ತಿಂಗಳಲ್ಲಿ ತೆರೆಯಲು ಯೋಜಿಸಲಾಗಿದೆ. ಇದರ ನಗರದ ಹೃದಯ ಭಾಗದ ಪ್ರಯಾಣಿಕರಿಗೆ ನಿರಾಶೆ ಉಂಟು ಮಾಡಿದೆ.

ನಮ್ಮ ಮೆಟ್ರೋ ಹೊಸ ಮಾರ್ಗಗಳು ನಿಗದಿಯಂತೆ ಲೋಕಾರ್ಪಣೆ ಆಗಿದ್ದ 2026ರ ಮಧ್ಯ ಭಾಗಕ್ಕೆ ವಿವಿಧ ಮಾರ್ಗಗಳು ತೆರೆಯಬೇಕಿತ್ತು. ಆದರೆ ಭೂಸ್ವಾಧೀನ, ಕಾಮಗಾರಿ ವಿಳಂಬದಿಂದಾಗಿ ಗಡುವು ಮುಂದೂಡಲಾಗುತ್ತಿದೆ. ಇದರ ನಮ್ಮ ಮೆಟ್ರೋ ಜಾಲ ವಿಸ್ತರಣೆಗೆ ಅಡಚಣೆ ಆಗುವ ಜೊತೆಗೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕುವಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಸರ್ಕಾರ ವಿಫಲವಾಗದಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
2027 ಆಗಸ್ಟ್ ಗೆ ಪೂರ್ಣ ಮಾರ್ಗ ಲೋಕಾರ್ಪಣೆ
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಜೊತೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಪರಿಶೀಲನಾ ಸಭೆ ನಡೆಸಿದರು. ಕಾಳೇನ ಅಗ್ರಹಾರದಿಂದ ತಾವರೆಕೆರೆ ಮಾರ್ಗ ಮುಂದಿನ ಎರಡು ತಿಂಗಳಲ್ಲಿ ತೆರೆಯಲಿದೆ. ಆದರೆ ನಾಗವಾರವರೆಗಿನ ಭೂಗತ ಮಾರ್ಗ ಮಾರ್ಚ್ 2027 ರೊಳಗೆ ಪೂರ್ಣಗೊಳ್ಳಲಿದ್ದು, ಆಗಸ್ಟ್‌ಗೆ ತೆರೆಯಬಹುದು. ಈ ಮೂಲಕ ಸಂಪೂರ್ಣ ಗುಲಾಬಿ ಮಾರ್ಗ ತೆರೆಯುವುದು ವಿಳಂಬವಾದಂತಾಗಿದೆ.
ಮೆಟ್ರೋ 3ನೇ ಹಂತಕ್ಕೆ ಒಪ್ಪಿಗೆ ಶೀಘ್ರ, ವಿಳಂಬ ಸಹಿಸಲ್ಲ
ನಮ್ಮ ಮೆಟ್ರೋ 3ನೇ ಹಂತದ (Namma Metro 3rd Phase Project) ಯೋಜನೆಯಡಿ ನಿರ್ಮಾಣಗೊಳ್ಳಲಿರುವ 'ಆರೆಂಜ್ ಲೈನ್' ಗೆ (Metro Orange Line) ಕೇಂದ್ರ ಅನುಮೋದನೆ ಸಿಗಬೇಕಿದೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ (Bengaluru Double Decker Flyover) ಸಹ ನಿರ್ಮಾಣಗೊಳ್ಳಲಿದ್ದು, ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಮುಂದಿನ ಜುಲೈ ತಿಂಗಳಲ್ಲಿ ಈ ಕಾರಿಡಾರ್ ಯೋಜನೆಗೆ ಕೇಂದ್ರ ಅನುಮೋದನೆ ನೀಡುವ ನಿರೀಕ್ಷೆ ಇದೆ. ಅದಾದ ಕೂಡಲೇ ಟೆಂಡರ್ ಕರೆ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ನಮ್ಮ ಮೆಟ್ರೋ ಏಜೆನ್ಸಿಗಳು ಗಣನೀಯ ಸ್ವಾಯತ್ತತೆ ಹೊಂದಿವೆ. ಅದರೊಂದಿಗೆ ಅವು ತ್ವರಿತ ಯೋಜನೆ ಅನುಷ್ಠಾನದ ಹೊಣೆಗಾರಿಕೆ ಹೊರಬೇಕು. ಸಮನ್ವಯದಿಂದ ಕೆಲಸ ಮಾಡಬೇಕು. ಪ್ರತಿ ಬಾರಿಯು ವರ್ಷ, ಎರಡು ವರ್ಷಗಳ ವಿಳಂಬ ಸಂಸ್ಕೃತಿ ಬದಲಾಗಬೇಕು, ಅಧಿಕಾರಿಗಳು, ಗುತ್ತಿಗೆದಾರರಿಗೆ ಸಚಿವರು ಎಚ್ಚರಿಕೆ ನೀಡಿದರು.
ನೀಲಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಬಾಕಿ
ಇನ್ನು ಬೆಂಗಳೂರು ಹೊರ ವರ್ತುಲ ರಸ್ತೆಯ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ (Silk Board-KR Puram Metro Line) ಮಾರ್ಗವಾಗಿ ಏರ್‍ಪೋರ್ಟ್‌ಗೆ ಎರಡು ಹಂತಗಳಲ್ಲಿ ನೀಲಿ ಮಾರ್ಗ ನಿರ್ಮಾಣವಾಗುತ್ತಿದೆ. ಇದರಲ್ಲಿ ಮೊದಲ ಹಂತವಾದ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ಮಾರ್ಗದಲ್ಲಿ ಎಚ್‌ಎಸ್ ಆರ್ ಬಡಾವಣೆ, ಮಹದೇವರಪುರ, ಮಾರತ್ತಹಳ್ಳಿ ಹೀಗೆ ಪ್ರಮುಖ ಪ್ರದೇಶಗಳು ಬರುತ್ತಿವೆ. ಇದು ನಿಗದಿಯಂತೆ 2026ರ ಮಾರ್ಚ್‌ಗೆ ಲೋಕಾರ್ಪಣೆ ಆಗಬೇಕಿತ್ತು. ಆದರೆ ಇದು ಸಹ 2027ರಲ್ಲಿ ಉದ್ಘಾಟನೆಗೊಳ್ಳಲಿದೆ. ಟ್ರ್ಯಾಕ್ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಇತ್ತೀಚೆಗೆ ಆಗಮಿಸಿದ ಡ್ರೈವರ್ ಲೆಸ್ ನೀಲಿ ರೈಲುಗಳು ಪ್ರಾಯೋಗಿಕ ಸಂಚಾರ ಆರಂಭಿಸಲಿವೆ. ಶಾಸನಬದ್ಧ ಪರೀಕ್ಷೆ, ರೈಲಿನ ಕಾರ್ಯಕ್ಷಮತೆ ಪರೀಕ್ಷೆಗಳು ಪೂರ್ಣಗೊಳ್ಳಲು ತಿಂಗಳುಗಳು ಹಿಡಿಯುತ್ತವೆ. ಇದರಿಂದ 2ಎ ಹಂತ ತೆರೆಯುವುದು ಮತ್ತೆ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ.
ಮೆಟ್ರೋ ಜಾಲವು 175 ಕಿ.ಮೀ ವಿಸ್ತರಣೆ
ಸಭೆಯಲ್ಲಿ ಸಚಿವರು ಹೊಸ ಮಾರ್ಗ ವಿಳಂಬ ಆಗದಂತೆ, ಸದ್ಯ ನೀಡಿರುವ ಡೆಡ್‌ಲೈನ್ ಒಳಗೆ ಕಾಮಗಾರಿ ಮುಗಿಸಲು, ತ್ವರಿತ ಲೋಕಾರ್ಪಣೆಗೆ ಅನುವು ಮಾಡುವಂತೆ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅಂದುಕೊಂಡಂತಾದರೆ ತಡವಾಗಿ ಅಂದರೆ 2028 ರಲ್ಲಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ (Bengaluru Metro Network) ಜಾಲವು 175 ಕಿ.ಮೀ.ಗೆ ವಿಸ್ತರಣೆ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.














Click it and Unblock the Notifications