ಬಿಸಿಲಿನಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ ಐಸ್ ಕ್ರೀಮ್ ಹಂಚಿದ ಬೆಂಗಳೂರಿನ ಯುವಕ; Viral Video ನೋಡಿ ನೆಟ್ಟಿಗರು ಫಿದಾ
ಬೆಂಗಳೂರು: ದೇಶದ ಎಲ್ಲೆಡೆ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸೂರ್ಯನ ಸುಡು ಬಿಸಿಲಿಗೆ ಜನರು ಹೈರಾಣಾಗಿದ್ದಾರೆ. ಇಂತಹ ಬಿರುಬಿಸಿಲಿನ ನಡುವೆ ಎಲ್ಲರ ಮನಮುಟ್ಟುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ರಸ್ತೆ ಬದಿಯಲ್ಲಿ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಯುವಕನೊಬ್ಬ ಐಸ್ ಕ್ರೀಮ್ ನೀಡುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
ಲಕ್ಷ್ಮಣ್ ಗೋಸ್ವಾಮಿ ಎಂಬವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಪರೀತ ಬಿಸಿಲಿರುವ ಈ ಸಮಯದಲ್ಲಿ ಸಣ್ಣದೊಂದು ಸಹಾಯ ಮಾಡುವ ಉದ್ದೇಶದಿಂದ ಅವರು ಈ ಕೆಲಸ ಮಾಡಿದ್ದಾರೆ. ವಿಡಿಯೋಗೆ "40 ಡಿಗ್ರಿ ತಾಪಮಾನ, ಒಂದು ಐಸ್ ಕ್ರೀಮ್, ಅನೇಕ ಮುಖಗಳಲ್ಲಿ ಮಂದಹಾಸ" ಎಂಬ ಕ್ಯಾಪ್ಷನ್ ಬರೆದಿದ್ದಾರೆ. ಇದೀಗ ನೆಟ್ಟಿಗರ ಹೃದಯ ಗೆದ್ದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ಯುವಕ ಲಕ್ಷ್ಮಣ್ ಗೋಸ್ವಾಮಿ ತಮ್ಮ ಬೈಕ್‌ನಲ್ಲಿ ನಗರದಲ್ಲಿ ಸಂಚರಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ರಸ್ತೆ ಬದಿಯಲ್ಲಿ ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ದೈನಂದಿನ ಕೆಲಸ ಮಾಡುತ್ತಿದ್ದ ಕಾರ್ಮಿಕರ ಬಳಿ ಅವರು ವಾಹನ ನಿಲ್ಲಿಸುತ್ತಾರೆ. ಬಳಿಕ ಅವರ ಬಳಿ ತೆರಳಿ, ಐಸ್‌ಕ್ರೀಮ್ ಅನ್ನು ನೀಡುತ್ತಾರೆ. ಆರಂಭದಲ್ಲಿ ಆಶ್ಚರ್ಯಚಕಿತರಾದ ಕಾರ್ಮಿಕರು, ನಂತರ ಮುಖದಲ್ಲಿ ನಗು ಬೀರುತ್ತಾ ಐಸ್ ಕ್ರೀಮ್ ಸ್ವೀಕರಿಸಿದ್ದಾರೆ. ಈ ಯುವಕನ ಕಾಳಜಿಗೆ ಕಾರ್ಮಿಕರು ತುಂಬು ಹೃದಯದ ಧನ್ಯವಾದ ತಿಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ
ಕೇವಲ ಕೆಲವೇ ಸೆಕೆಂಡ್‌ಗಳ ಈ ವಿಡಿಯೋ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಯುವಕನ ಈ ಸೇವೆ ಹಾಗೂ ಮಾನವೀಯತೆಯನ್ನು ಇನ್‌ಸ್ಟಾಗ್ರಾಮ್ ಬಳಕೆದಾರರು ಮುಕ್ತಕಂಠದಿಂದ ಹೊಗಳಿದ್ದಾರೆ. "ಇದು ನಿಜಕ್ಕೂ ಅದ್ಭುತವಾಗಿದೆ. ಭೂಮಿಯ ಮೇಲೆ ಇನ್ನೂ ಮಾನವೀಯತೆ ಜೀವಂತವಾಗಿದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈ ವ್ಯಕ್ತಿಗೆ ನನ್ನದೊಂದು ಸೆಲ್ಯೂಟ್. ಇಂತಹ ವಿಪರೀತ ಬಿಸಿಲಿನಲ್ಲಿ ಕೆಲಸ ಮಾಡುವ ಈ ಶ್ರಮಜೀವಿಗಳಿಗೆ ನಿಜಕ್ಕೂ ಇಂತಹ ಸಣ್ಣ ಖುಷಿ ಅಗತ್ಯವಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
"ಇಂತಹ ಸಣ್ಣ ಕಾಳಜಿಗಳು ಯಾರದೋ ದಿನವನ್ನು ಸುಂದರವಾಗಿಸಬಹುದು. ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಜನರ ಬಗ್ಗೆ ಯೋಚಿಸಿದ್ದಕ್ಕಾಗಿ ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದು ಇನ್ನೊಬ್ಬರು ಹಾರೈಸಿದ್ದಾರೆ. ಒಟ್ಟಾರೆಯಾಗಿ, ಬಿಸಿಲಿನ ಬೇಗೆಯ ನಡುವೆ ಯುವಕನ ಈ ಪ್ರಯತ್ನ ಸಮಾಜಕ್ಕೆ ದೊಡ್ಡ ಸಂದೇಶ ರವಾನಿಸಿದೆ.












Click it and Unblock the Notifications