ಹಸೆಮಣೆ ಏರುತ್ತಿದೆ ‘ಗಿಚ್ಚಿ ಗಿಲಿಗಿಲಿ’ ಜೋಡಿ: ಶಿವು-ಮಾನಸಾ ವಿವಾಹ ಸಂಭ್ರಮ, ಮೆಹಂದಿ-ಹಳದಿ ಶಾಸ್ತ್ರದ ಫೋಟೋಗಳು ವೈರಲ್
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ 'ಮಜಾ ಭಾರತ' ಮತ್ತು 'ಗಿಚ್ಚಿ ಗಿಲಿಗಿಲಿ' ಮೂಲಕ ಮನೆಮಾತಾಗಿರುವ ನಟಿ ಮಾನಸಾ ಗುರುಸ್ವಾಮಿ ಹಾಗೂ ಶಿವಕುಮಾರ್ (ಶಿವು) ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ದೀರ್ಘಕಾಲದ ಗೆಳೆತನ ಪ್ರೇಮಕ್ಕೆ ತಿರುಗಿ, ಪೋಷಕರ ಸಮ್ಮತಿಯೊಂದಿಗೆ ಹಸೆಮಣೆ ಏರುತ್ತಿರುವ ಈ ಜೋಡಿಯ ಮದುವೆಯ ಸಂಭ್ರಮ ಏಪ್ರಿಲ್ 25 ಮತ್ತು 26ರಂದು ಅದ್ಧೂರಿಯಾಗಿ ಜರುಗುತ್ತಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಕ್ರಮಗಳಾದ ಮೆಹಂದಿ, ಹಳದಿ ಶಾಸ್ತ್ರ ಹಾಗೂ ಬಳೆ ಶಾಸ್ತ್ರಗಳು ನೆರವೇರಿದ್ದು, ಈ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಕಿರುತೆರೆಯಲ್ಲೇ ಒಂದಾದ ಜೋಡಿ
ಶಿವು ಮತ್ತು ಮಾನಸಾ ಕಿರುತೆರೆಯಿಂದಲೇ ಪರಿಚಿತರು. 'ಮಜಾ ಭಾರತ' ಕಾಲದಿಂದಲೂ ಜೊತೆಯಾಗಿ ಹಲವು ಕಾಮಿಡಿ ಸ್ಕಿಟ್‌ಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಈ ಜೋಡಿ, 'ಗಿಚ್ಚಿ ಗಿಲಿಗಿಲಿ' ಶೋನಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಈ ಜೋಡಿಯ ನಿಶ್ಚಿತಾರ್ಥವು ಸ್ಯಾಂಡಲ್‌ವುಡ್‌ನ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅಂದಿನಿಂದಲೇ ಇವರ ವಿವಾಹದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು, ಈಗ ಆ ಶುಭ ಘಳಿಗೆ ಕೊನೆಗೂ ಬಂದಿದೆ.

ಇನ್ನು ನಟ ಶಿವು ಅವರ ಜೀವನ ಪಯಣ ಮಾತ್ರ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಬಡತನದ ಹಿನ್ನೆಲೆಯಿಂದ ಬಂದ ಶಿವು, ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾಭ್ಯಾಸ ಮುಂದುವರಿಸಲಾಗದೆ ಆರಂಭದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ನಟನೆಯ ಮೇಲಿದ್ದ ಆಸಕ್ತಿ ಅವರನ್ನು ರಂಗಭೂಮಿ ಹಾಗೂ ಸಣ್ಣಪುಟ್ಟ ಸಿನಿಮಾ ಕೆಲಸಗಳತ್ತ ಸೆಳೆಯಿತು.
ಸ್ವಂತ ಮನೆಯ ಕನಸು ನನಸು
ನಾಟಕಗಳು, ಸಂಗೀತ ಹಾಗೂ ಸೆಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಇವರಿಗೆ 'ಸಂಧಿಗ್ಧ' ಎನ್ನುವ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ರಿಯಾಲಿಟಿ ಶೋಗಳ ಮೂಲಕ ಕನ್ನಡ ನಾಡಿನ ಮನೆಮಾತಾದ ಶಿವು, ಇತ್ತೀಚೆಗಷ್ಟೇ ಸ್ವಂತ ಮನೆಯನ್ನು ಖರೀದಿಸಿ ಗೃಹಪ್ರವೇಶ ಕೂಡ ಮಾಡಿದ್ದಾರೆ.
'ಗಿಚ್ಚಿ ಗಿಲಿಗಿಲಿ' ಸೀಸನ್ 1ರ ವಿಜೇತರಾಗಿದ್ದ ಶಿವು, ಈ ಶೋನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ ಸಂದರ್ಭದಲ್ಲಿ ಅವರು ಭಾವನಾತ್ಮಕವಾಗಿ ಮಾತನಾಡುತ್ತಾ, ತಮಗೆ ಸಿಕ್ಕ ಪ್ರಶಸ್ತಿಯ ಮೊತ್ತವನ್ನು ಸ್ವಂತ ಮನೆ ಕಟ್ಟಲು ಬಳಸುವುದಾಗಿ ಹೇಳಿದ್ದರು. ಇಷ್ಟು ದಿನಗಳ ಕಾಲ ಬಾಡಿಗೆ ಮನೆಯಲ್ಲಿದ್ದ ಶಿವು, ಈಗ ತಮ್ಮ ಕಠಿಣ ಪರಿಶ್ರಮದ ಫಲವಾಗಿ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಬಡತನದ ಪ್ರತಿಭೆಯಾಗಿ ಬೆಳೆದು ಇಂದು ಕಿರುತೆರೆಯಲ್ಲಿ ತನ್ನದೇ ಆದ ಸ್ಥಾನ ಗಳಿಸಿರುವ ಶಿವು ಮತ್ತು ಪ್ರತಿಭಾವಂತ ನಟಿ ಮಾನಸಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳು ಹಾಗೂ ಕಿರುತೆರೆಯ ಸ್ನೇಹಿತರು ಶುಭ ಹಾರೈಕೆ ತಿಳಿಸುತ್ತಿದ್ದಾರೆ. ಕಷ್ಟಗಳ ನಡುವೆ ಸಾಧನೆ ಮಾಡಿ ಇಂದು ಸ್ವಂತ ಮನೆ ಹಾಗೂ ಜೀವನದ ಹೊಸ ಹಾದಿಯನ್ನು ಕಂಡುಕೊಂಡಿರುವ ಈ ಜೋಡಿಗೆ ಶುಭವಾಗಲಿ ಎಂಬ ಹಾರೈಕೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.












Click it and Unblock the Notifications