ನನಗೆ ಅವಳ ಬಗ್ಗೆ ಏನನ್ಸುತ್ತೆ ಗೊತ್ತಾ?
ನಮಗಂತೂ ಈ ದಿನ ಪರಿಚಯ ಆಗುವವರು ಆಪ್ತರು, ನಿನ್ನೆ ಪರಿಚಯ ಆದವರಾಗಲೇ ಆತ್ಮೀಯರು! ಒಬ್ಬರ ಬಗ್ಗೆ ಹನ್ನೆರಡು ವರ್ಷದ ದ್ವೇಷವೇನೋ ಅನ್ನೋ ಹಾಗೆ ಮಾತಾಡ್ತಿರ್ತೀವಿ... ಮಾತಿನಲ್ಲಿಯೇ ಮನೆಕಟ್ಟುವ ನಾವು, ಆ ಗುಂಗಿನಲ್ಲಿ ಒಂದು ವಿಷಯ ಮರೆಯುತ್ತೇವೆ...
- ಗಗನ ಸಖಿ
[email protected]
ನನ್ನ ಗೆಳೆತನವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ನನಗೆ ಸಿಕ್ಕ ಬಹುಮಾನವೇನು ಗೊತ್ತಾ? ಒಂದಿಷ್ಟು ಪಾರಿಜಾತ, ಒಂದು ನವಿಲುಗರಿ, ಒಂದೇ ಒಂದು ಪುಟ್ಟ ಕಪ್ಪೆ ಚಿಪ್ಪು! ‘ಅದಕ್ಕೆ ಹೇಳೋದು ಹಂಚಿಕೆಯಲ್ಲಿ ಸುಖವಿದೆ’ ಅಂತ!
ನಿಮಗೆ ರಮಾ ಗೊತ್ತಲ್ಲ. ನನಗೆ ಅವಳ ಬಗ್ಗೆ ಏನನ್ಸು ತ್ತೆ ಗೊತ್ತಾ? ಒಳ್ಳೆ beautician. ಆದರೆ ಸ್ವಲ್ಪ ವಟ ವಟ, ಕೊಂಚ ಗಾಸಿಪ್ ಪುರುಕಿ, ಚೂರು ಚಾಡಿಕೋರಿ, ತುಸು ಮೈಗಳ್ಳಿ, ಚಿಟಿಕೆ disorganized ಚೀಟು ಕೊಳಕಿ. ಆದರೂ ವಿನಾಕಾರಣ ನನಗೆ ಅವಳು ಇಷ್ಟ ! ಈಗ ನಿಮಗೆ ಅವಳ ಬಗ್ಗೆ ಹೇಳಿದೆನಲ್ಲಾ ಹಾಗೆ ಆಗಾಗ್ಗೆ ಮನೆಯಲ್ಲೂ ಹೇಳೇಯಿದ್ದೆ.
ಮೊನ್ನೆ ಅವಳು ಯಾವುದೋ ಮಗುವಿಗೆ ಹಾರ್ಟ್ ಆಪರೇಷನ್ ಆಗಬೇಕು ದುಡ್ಡು ಸಾಲದಾಗಿದೆ ಅಂದಾಗ, ಹಿಂದು ಮುಂದು ನೋಡದೆ ಒಂದಿಷ್ಟು ದುಡ್ಡು ಕೊಟ್ಬಿಟ್ಟೆ ನೋಡಿ.. . . . . ಮನೆಯವರೆಲ್ಲರೂ ನನ್ನ ಜಾತಕದ ಒಂದೊಂದು xerox ಕಾಪಿ ಹಿಡ್ಕೊಂಡು ಜನ್ಮ ಜಾಲಾಡಕ್ಕೆ ತಯಾರಾಗಿ ನಿಂತ್ಬಿಟ್ಟ್ರ್ರು! ಪಾಪ, ಅದರಲ್ಲಿ ಅವರದೇನು ತಪ್ಪು ಹೇಳಿ? ನಿತ್ಯವೂ ರಮಾನ ಬಗ್ಗೆ ನಾನು ಅವರ ತಲೆ ಕೊರೀತಾನೇ ಇದ್ದ್ನಲ್ಲಾ? ಗಾಸಿಪ್ ಪುರುಕಿ, ಚಾಡಿಕೋರಿ, ಮೈಗಳ್ಳಿ ಅಂತೆಲ್ಲ ನಾಮ ವಿಶೇಷಣಗಳನ್ನು ಅಂಟಿಸಿಕೊಂಡಿರುವವಳಿಗೆ ಹಿಡಿ ಹಿಡಿಯಾಗಿ ದುಡ್ಡು ಕೊಟ್ಟರೆ ಯಾರಿಗ್ತಾನೆ ಸರಿ ಅನ್ನಿಸುತ್ತೆ.
ಮುಸು ಮುಸು ಅಳುತ್ತಾ, ಒಂದು ಹೊತ್ತು ಊಟ ಬಿಟ್ಟು ಗೋಡೆ ಕಡೆ ತಿರುಗಿ ಮಲಗಿದರೂ ನನಗೆ ದುಡ್ಡು ಕೊಟ್ಟಿದ್ದು ತಪ್ಪು ಅನ್ನಿಸಲೇ ಇಲ್ಲ! ಯಾಕೆ ಗೊತ್ತಾ? ಅವಳ ವ್ಯಕ್ತಿತ್ವದ ಯಾವುದೇ ಅಂಶವನ್ನು ಮೀರಿಸುತ್ತಿತ್ತು ಅವಳ ಅಂತಃಕರಣ. ಆದರೆ ನಾಮಾವಳಿಗಳನ್ನು ವಿವರಿಸುವಲ್ಲಿ ಆತುರವಿದ್ದ ನನಗೆ ಅವಳ ಮನಸ್ಸನ್ನು ಎಲ್ಲರಿಗು ಪರಿಚಯ ಮಾಡಿಕೊಡಬೇಕು ಅಂತ ಅನ್ನಿಸಿರಲೇ ಇಲ್ಲ!
ಇಡೀ ರಾತ್ರಿ ಯೋಚಿಸುತ್ತಿದ್ದೆ. ಇಲ್ಲೇ ನಾವು ತಪ್ಪು ಮಾಡುವುದು. ಯಾರನ್ನೇ ನೋಡಿದ ತಕ್ಷಣ, ಅವರೊಡನೆ ಒಂದೆರಡು ಮಾತನಾಡಿದ ಕೂಡಲೇ opinionate ಆಗಿಬಿಡ್ತೇವೆ. ಅಷ್ಟೇ ಅಲ್ಲ ಅದರ ಬಗ್ಗೆ ಊರಲ್ಲೆಲ್ಲಾ ಡಂಗೂರ ಹೊಡೆದು ಬಿಡ್ತೀವಿ. ನಮಗಂತೂ ಈ ದಿನ ಪರಿಚಯ ಆಗುವವರು ಆಪ್ತರು, ನಿನ್ನೆ ಪರಿಚಯ ಆದವರಾಗಲೇ ಆತ್ಮೀಯರು!
ಒಬ್ಬರ ಬಗ್ಗೆ ಹನ್ನೆರಡು ವರ್ಷದ ದ್ವೇಷವೇನೋ ಅನ್ನೋ ಹಾಗೆ ಮಾತಾಡ್ತಿರ್ತೀವಿ, ಅವರಿಗೇನೋ ತೊಂದರೆ ಆಗಿದೆ ಅಂದ್ರೆ ಅವರ ಮನೆ ಬಾಗಿಲು ಬಡೀತಿರ್ತೀವಿ. ನಮ್ಮಲ್ಲಿ ಪ್ರೀತೀನೂ ಹಾಗೆ, ‘‘ಅಯ್ಯೋ, ಅವರಿಲ್ಲದೆ ನಮ್ಮುಸಿರೇ ಇಲ್ಲ ’’ ಅನ್ನೋಹಾಗೆ ಇರ್ತೀವಿ, ಅವರಿಲ್ಲ ಅಂತಾದಾಗ ಮತ್ತೊಬ್ಬರ ಪ್ರೀತಿಯ ಒರತೆಗೆ ಆತುಕೊಂಡಿರ್ತೀವಿ. ಅದಕ್ಕೆ ಇರಬೇಕು ‘‘ಪ್ರೀತಿ ಜೀವನದಲ್ಲಿ ಒಂದೇ ಸರ್ತಿ ಹುಟ್ಟೋದು’’ ಅಂತ ನಾಯಕಿಯ ಬೆಸ್ಟ್ ಗೆಳತಿ ಹೇಳೊ ಕನ್ನಡ ಸಿನೆಮಾ ಡೈಲಾಗ್ ನಮಗೆ ಸ್ವಲ್ಪಾನೂ ಸರಿಬರೋಲ್ಲ!್ಲ
ಬೆಳಗಿನ ಜಾವಕ್ಕೆ ನಾನು ಕಂಡುಕೊಂಡ ಕಾರಣ ಏನು ಗೊತ್ತಾ? ನಮ್ಮಲ್ಲಿ ಎಲ್ಲಾ ಭಾವಗಳು ಚಂಚಲ. ಅಂತಃಕರಣ ಮಾತ್ರ ಸ್ಥಿರ. ಆದರೆ ಕಾರ್ಪೊರೇಷನ್ ನಲ್ಲಿ ತರಹ ಸದಾ ಶಬ್ದ ಮಾಡ್ತಾ ಮಾಡ್ತಾ ನಾವು ತುಂಬಾ ವಾಚಾಳಿಗಳು ಅನ್ನುವ ಪಟ್ಟಕಟ್ಟಿಸಿಕೊಂಡಿರ್ತೀವೇ ಹೊರತು talkative ಆದ್ರೂ ನಾವು extravertಗಳಂತಾನೇ ಅಲ್ಲ, ಅಂತ ತೋರಿಸಿಕೊಟ್ಟೇ ಇರುವುದಿಲ್ಲ. ಮಾತಿನಲ್ಲಿ ಹೊಳೆ ಹರಿಸುತ್ತಾ ನಾವು ಅಣೆಕಟ್ಟು ಕಟ್ಟುವುದನ್ನೇ ಮರೆತು ಬಿಟ್ಟಿರುತ್ತೇವೆ. ಎಲ್ಲಿ? ಎಷ್ಟು? ಯಾರ ಬಳಿ? ಯಾವ ಪ್ರಶ್ನೆಯನ್ನೂ ನಾವು ಹಾಕಿಕೊಳ್ಳುವುದೇ ಇಲ್ಲ.
‘ನನಗೆ ಮುಚ್ಚುಮರೆ ಗೊತ್ತಿಲ್ಲ, ನಾನು ತುಂಬಾ ಸಾದಾಸೀದಾ ಅನೋದನ್ನೇ ನಮ್ಮ signature ಮಾಡಿಕೊಂಡಿರ್ತೀವಿ. ಹಾಗಾದರೆ ನಮ್ಮದು ಬೂಟಾಟಿಕೆಯಾ?! ಹಾಗಂತ ಯಾರಾದ್ರು ಅಂದ್ರೆ ಸ್ತ್ರೀ ಶೋಷಣಾ ವಿರೋಧಿ ಸಂಘದವರಿಂದ ದಂಗೆನೇ ಮಾಡಿಸಿಬಿಡ್ಬಹುದಲ್ಲವಾ?! ಹಾಗಲ್ಲ, ನಮ್ಮ personality dilemma ವನ್ನು ನಾವೇ ಅರ್ಥ ಮಾಡಿಕೊಂಡಿರುವುದಿಲ್ಲ. ಹಾಗೇ ಇನ್ನೊಬ್ಬರಿಗೆ ಅರ್ಥ ಮಾಡಿಸಿಕೊಡಲೂ ಸೋತಿರುತ್ತೇವೆ.
ಅಜ್ಜಿ ಹೇಳ್ತಿದ್ದಳಲ್ಲ ‘ಗಂಡಂಗೆ ಗುಟ್ಟು ಬಿಡ್ಬೇಡ, ಎಣ್ಣೆಗೆ ಎಡೆ ಕೊಡ್ಬೇಡ‘ ಅಂತ ಅದನ್ನು ಒಂದ್ಸಲೀನೂ ನೆನಪ್ಮಾಡ್ಕೊಂಡೇ ಇರಲ್ಲ. ನಮ್ಮ ಮಾತಿನ ಮುಂದೆ ನಮಗೆ ಎಲ್ಲರೂ ಒಂದೇ. ನಮ್ಮ ಪ್ರತಿಕೂಲ ಸ್ವಭಾವವೇನೇ ಇರಲಿ ನಾವು passionately compassionate ಅನ್ನುವುದು ಮಾತ್ರ ಅನುಗಾಲದ ಸತ್ಯ! ಈಗ ಎಲ್ಲರೂ ಹೇಳ್ತೀವಿ ಅಲ್ಲವಾ. . .ಹೌದು, ನಾವು ಹೆಂಗಸರೇ ಹೀಗೆ!
ವಾಚಾಳಿ ಆಗಿರೋದ್ರಿಂದ ಬೇರೆಯವರು ನಮ್ಮ ಕಣ್ಣಲ್ಲಿ ನೀರು ಹಾಕಿಸ್ತಾರೆ ನಿಜ, ಆದರೆ, ಅದರಿಂದ ಒಮ್ಮೊಮ್ಮೆ ಎಷ್ಟು ಉಪಯೋಗ ಆಗುತ್ತೆ ಗೊತ್ತಾ? ನಿಜಕ್ಕೂ ಕೆಲವರ ವಾಚಾಳಿತನ ಕಣ್ತೆರೆಸುತ್ತೆ! ಅರೆ, ಅದು ಹೇಗೆ ಅಂತೀರ ? wait ನಿಮ್ಮನ್ನು ಬಿಟ್ಟು ನಾನೆಲ್ಲಿ ಹೋಗ್ತೀನಿ. ಮತ್ತೆ ಬರ್ತೀನಿ, ಇದೇ ತರಹ ವಟ ವಟ ಅಂತ ಎಲ್ಲಾ ಹೇಳ್ತೀನಿ. . . ಅಲ್ಲೀವರೆಗೂ ನಿಮ್ಮ ಪತ್ರಕ್ಕೆ ಕಾಯ್ತೀನಿ.












Click it and Unblock the Notifications