• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಪುಸ್ತಕಗಳಿವೆ!

By * ಶ್ರೀವತ್ಸ ಜೋಶಿ
|

ಬಸ್ಸು ಮತ್ತು ರೈಲಲ್ಲಿ ಓದೋದಕ್ಕೆ ಒಂದಷ್ಟು, ಮಂಚದ ಮೇಲೆ ಬೋರಲು ಮಲಗಿ ಓದೋದಕ್ಕೆ ಇನ್ನೊಂದಷ್ಟು, ಕದ್ದುಮುಚ್ಚಿ ಓದೋದಕ್ಕೆ ಮತ್ತೊಂದಷ್ಟು, ಗೆಳೆಯರ ಜೊತೆ ಕೂತು ಓದೋದಕ್ಕೆ ಮಗದೊಂದಷ್ಟು, ಹೀಗೆ ನಾನಾ ಜಾತಿಯ ಪುಸ್ತಕಗಳಿವೆ! ಈಗ ಪಾಯಿಖಾನೆಯಲ್ಲಿ ಓದೋ ಪುಸ್ತಕಗಳ ಬಗ್ಗೆ ವಿಚಿತ್ರಾನ್ನ 250ನೇ ಸಂಚಿಕೆಯಲ್ಲಿ ತಿಳಿಯೋಣವೇ?

ಅಮೆರಿಕದ ಪ್ರಮುಖ ಪತ್ರಿಕೆಗಳಲ್ಲೆಲ್ಲ ಪ್ರಕಟವಾಗುವ ಆಪ್ತಸಲಹೆ ಅಂಕಣ Ask Amy ಯಲ್ಲಿ ಮೊನ್ನೆ ಓದುಗರೊಬ್ಬರ ಪ್ರಶ್ನೆ ಹೀಗಿತ್ತು:

ನಮ್ಮದು 30 ಉದ್ಯೋಗಿಗಳಷ್ಟೇ ಇರುವ ಒಂದು ಪುಟ್ಟ ಆಫೀಸು. ಎಲ್ಲರಿಗೂ ಸೇರಿ ಒಂದೇ ಲಂಚ್‌ರೂಮ್ ಇರುವುದು. ಆಫೀಸಿಗೆ ದಿನಾಲೂ ನಾಲ್ಕೈದು ಪ್ರಮುಖ ದಿನಪತ್ರಿಕೆಗಳನ್ನು ತರಿಸುತ್ತೇವೆ. ಮಧ್ಯಾಹ್ನ ಲಂಚ್‌ಬ್ರೇಕ್ ಟೈಮಲ್ಲಿ ಓದಲಿಕ್ಕೆಂದು ಅವನ್ನೆಲ್ಲ ನಾವು ಲಂಚ್‌ರೂಮ್‌ನಲ್ಲೇ ಇಡುತ್ತೇವೆ. ಆದರೆ ನಮ್ಮ ಇಬ್ಬರು ಸಹೋದ್ಯೋಗಿಗಳಿದ್ದಾರೆ ಅವರ ಅಭ್ಯಾಸವೇನೆಂದರೆ ದಿನಪತ್ರಿಕೆಯ ಒಂದೆರಡು ಸೆಕ್ಷನ್‌ಗಳನ್ನು ಶೌಚಾಲಯಕ್ಕೆ ಹೋಗುವಾಗ ಒಯ್ಯುವುದು, ಮತ್ತೆ ಅವನ್ನು ವಾಪಾಸ್ ತಂದು ಲಂಚ್‌ರೂಮ್‌ನಲ್ಲೇ ಇಡುವುದು.

ಇತರ ಸಹೋದ್ಯೋಗಿಗಳಾದ ನಮಗೆಲ್ಲ ಇದು ಒಂಥರಾ ಅಸಹ್ಯವೆನಿಸುತ್ತದೆ. ಈಗ ಸಮಸ್ಯೆಯೇನೆಂದರೆ ಈ ಇಬ್ಬರಿಗೆ ನಾವು ನಮ್ಮ ಅಸಮಾಧಾನ (ಮತ್ತು ಹಾಗೆ ಮಾಡದಂತೆ ಆದೇಶ)ವನ್ನು ಮುಲಾಜಿಲ್ಲದೆ ನೇರವಾಗಿ ತಿಳಿಸುವುದೇ? ಅಥವಾ ನಮ್ಮ ಮ್ಯಾನೆಜರ್ ಮುಖಾಂತರ ಇಂಟರ್ಆಫೀಸ್ ಮೆಮೊ ಕಳಿಸಿ ತಿಳಿಸುವುದೇ? ದಯವಿಟ್ಟು ಸಲಹೆಕೊಡಿ."

ಇಂಥದಕ್ಕೂ Amyಯ ಸಲಹೆ ಬೇಕಾ? ಆಕೆ ಏನೆಂದು ಉತ್ತರಿಸಿರಬಹುದು? ಪ್ರಶ್ನೆಕೇಳಿದವರು ಆ ಉತ್ತರವನ್ನು ಆಫೀಸಿನಲ್ಲಿ ಅನುಷ್ಠಾನಗೊಳಿಸಿದರೇ? ಅವರ ಸಮಸ್ಯೆ ಪರಿಹಾರವಾಯಿತೇ? - ಈ ಎಲ್ಲ ಅಂಶಗಳನ್ನೂ ಬದಿಗೊತ್ತಿ ಮುಖ್ಯವಾದ ವಿಷಯಕ್ಕೆ ಬಂದರೆ, ಆ ಇಬ್ಬರು ಸ್ಪೆಷಲ್ ಉದ್ಯೋಗಿಗಳಿಗೆ ಶೌಚಾಲಯಕ್ಕೆ ಹೋಗುವಾಗ ಕೈಯಲ್ಲಿ ಏನಾದರೊಂದು ಓದುವ ಸಾಮಗ್ರಿ ಬೇಕೇಬೇಕು, ಇಲ್ಲದಿದ್ದರೆ ಅವರು ಹೋಗುವ ಕೆಲ್ಸ ಆಗೋದಿಲ್ಲ; ಅದಕ್ಕಾಗಿ ಲಂಚ್‌ರೂಮ್‌ನಿಂದ ನ್ಯೂಸ್‌ಪೇಪರ್ ಎತ್ತಿಕೊಂಡುಹೋಗಿ ಕೆಲ್ಸ ಮುಗಿದ ನಂತರ ವಾಪಸ್ ತಂದಿಡುತ್ತಾರೆ. ಇದಿಷ್ಟು ಸಾರಾಂಶ.

ಹೌದು, ಕೆಲವರಿಗೆ ಅದೊಂದು ಅಭ್ಯಾಸ. ಬೇಕಿದ್ದರೆ ಅದನ್ನೊಂದು ಚಟ ಎನ್ನಿ. ಪಾಯಿಖಾನೆಗೆ ಹೋಗುವಾಗ ಪತ್ರಿಕೆ ಬೇಕು ಅಥವಾ ಪುಸ್ತಕ ಬೇಕು. ಮನೆಯಲ್ಲಿರಲಿ ಆಫೀಸಲ್ಲಿರಲಿ, ಮುಂಜಾನೆಯಿರಲಿ ಮಧ್ಯಾಹ್ನವಿರಲಿ ಅಥವಾ ರಾತ್ರೆಯಿರಲಿ ಟಾಯ್ಲೆಟ್‌ನಲ್ಲಿ ಸುಖಾಸೀನರಾದಾಗಿನ ಸುಖ ಹೆಚ್ಚಲು ಕೈಯಲ್ಲಿ ಪತ್ರಿಕೆ/ಪುಸ್ತಕ ಬೇಕು.

ಏನೂ ಸಿಗದಿದ್ದರೆ ರೈಲ್ವೇ ಟೈಮ್‌ಟೇಬಲ್ ಭೀ ಚಲೇಗಾ. ಪಾವ್ಲೊನ (ರಷ್ಯನ್ ವಿಜ್ಞಾನಿ) ನಾಯಿಗೆ ಗಂಟೆ ಬಡಿದರೆ ಮಾತ್ರ ಹಸಿವಾಗುವಂಥ ಎಸೋಸಿಯೇಟಿವ್ ಲರ್ನಿಂಗ್ ಇತ್ತಂತೆ, ಹಾಗೆಯೇ ಇವರಿಗೆಲ್ಲ ಕೈಯಲ್ಲಿ ಪತ್ರಿಕೆ/ಪುಸ್ತಕ ಇದ್ದರೆ ಮಾತ್ರ ಅವರೋಹಣ ಸಾಮರ್ಥ್ಯ!ಮನೆಯಲ್ಲಿ ಯಾರಾದರೂ ಒಬ್ಬರಿಗೆ ಮಾತ್ರ ಅಥವಾ ರೂಮ್‌ಮೇಟ್‌ಗಳಾಗಿರುವವರ ಪೈಕಿ ಒಬ್ಬರಿಗೆ ಮಾತ್ರ ಈ ಅಭ್ಯಾಸವಿದ್ದರೆ ಉಳಿದವರ ಲೇವಡಿಗೆ, ಕೆಲವೊಮ್ಮೆ ಕೋಪಕ್ಕೆ ಅಥವಾ ಕರುಣೆಗೂ ಅವರು ಪಾತ್ರರಾಗುವ ಸಂದರ್ಭಗಳಿರುತ್ತವೆ. ನನಗೆ ಗೊತ್ತಿರುವವರೊಬ್ಬರು ತನ್ನ ಪತಿಮಹಾಶಯ ಪ್ರಾತರ್ವಿಧಿಗೆ ಹೊರಡಲಿದ್ದಾರೆ ಎಂಬ ಸುಳಿವುಸಿಕ್ಕಿದ ಕೂಡಲೆ ಅವರ ಕೈಗೆ ದಿನಪತ್ರಿಕೆ ಕೊಟ್ಟು ಶುಭಾಶಯ ಕೋರುತ್ತಾರಂತೆ. ಅಷ್ಟೂ ಪತಿಭಕ್ತಿ ಅವರದು!

ಈ ಅಭ್ಯಾಸವನ್ನು ಡಿಫೆಂಡ್ ಮಾಡಿಕೊಳ್ಳುತ್ತ ಇಂಟರ್‌ನೆಟ್‌ನ ಯಾವುದೋ ಒಂದು ಫೊರಮ್‌ನಲ್ಲಿ ಒಬ್ಬರ ಉವಾಚ ಹೀಗಿತ್ತು: "Reading relaxes you and helps you make a less strained dump" ! ಇರಬಹುದು, ಬಹುಶಃ ಅಂಥವರ ಖಯಾಲಿಯನ್ನು ತಣಿಸಲೆಂದೇ ಬಾತ್‌ರೂಮ್ ಬುಕ್ಸ್ ಎಂಬ ಹಣೆಪಟ್ಟಿ ಹಚ್ಚಿಕೊಂಡ ಪುಸ್ತಕಗಳು ಪ್ರಕಟವಾಗುತ್ತವೆ. ಅಮೆರಿಕದಲ್ಲಿ Uncle Johns Bathroom Books ತುಂಬಾ ಪ್ರಸಿದ್ಧವಾದುವು. ಇದೀಗ ಹತ್ತನೇ ಎಡಿಶನ್ ಹೊರಬರುತ್ತಿರುವ ಯಶಸ್ಸು ಈ ಪುಸ್ತಕಗಳದು. ಗೂಗಲ್‌ನಲ್ಲಿ bathroom books ಎಂದು ಸರ್ಚಿಸಿದರೆ ದೊಡ್ಡ ಪಟ್ಟಿಯೇ ಸಿಗುತ್ತದೆ, ಅದರಲ್ಲೇ ಟಾಪ್10 (ಬಾಟಮ್ 10?) ಲಿಸ್ಟ್ ಸಹ ಇರುತ್ತದೆ!

ಯಾವ ರೀತಿಯ ಪುಸ್ತಕಗಳು ಬಾತ್‌ರೂಮ್‌ ಬುಕ್ಸ್ ಎನಿಸಿಕೊಳ್ಳುತ್ತವೆ? ಸಣ್ಣಸಣ್ಣ ಸ್ವಯಂಪೂರ್ಣ ಅಧ್ಯಾಯಗಳುಳ್ಳ ಪುಸ್ತಕಗಳು, ಅಂದರೆ ಯಾವುದೇ ಪುಟದಿಂದ ಆರಂಭಿಸಿ ಒಂದಿಷ್ಟು ಓದಿ ಮುಚ್ಚಿಡಬಹುದಾದ ಪುಸ್ತಕಗಳು ಬಹುಪ್ರಶಸ್ತವೆನ್ನುತ್ತಾರೆ ಶೌಚವಾಚನ ಹವ್ಯಾಸಿಗಳ ಅಂತಾರಾಷ್ಟ್ರೀಯ ಸಂಘದ ಅಧ್ಯಕ್ಷರು. ಸಾಮಾನ್ಯಜ್ಞಾನ ಮಾಹಿತಿಯ ಸಂಕಲನದ ಪುಸ್ತಕಗಳು (ಮಲಯಾಳ ಮನೊರಮಾ ಇಯರ್‌ಬುಕ್, ಗಿನ್ನೆಸ್‌ರೆಕಾರ್ಡ್ಸ್ಬುಕ್‌ನಂಥವು), ರೀಡರ್ಸ್ ಡೈಜೆಸ್ಟ್‌ನಂತಹ ಮ್ಯಾಗಜಿನ್‌ಗಳು, ಅಥವಾ Trivia for the toilet ನಂಥವು ಡೌನ್‌ಲೋಡಿಂಗ್‌ನ ಸುಖವನ್ನು ಡಬಲ್‌ಗೊಳಿಸುತ್ತವಂತೆ. ಚಿಕ್ಕಚೊಕ್ಕ ಹಾಸ್ಯಲೇಖನಗಳು, ಸಾಮಾನ್ಯಸಂಗತಿಗಳ ಸುತ್ತ ಹೆಣೆದ ಲಘುಬರಹಗಳು, ಅದೂ‌ಇದೂ ತಿಳಿಗಾಳುಗಳ ಸಂಗ್ರಹ - ಇವೆಲ್ಲ ಬಾತ್‌ರೂಮ್‌ಬುಕ್‌ಗಳಿಗೆ ಯೋಗ್ಯ ಸಾಮಗ್ರಿ. [ಮುಂದಿನ ಪುಟ]

English summary
Vichitranna Columnist Srivathsa Joshi writes on Bathroom books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X