• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಪನ್‌'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ

By ಶ್ರೀವತ್ಸ ಜೋಶಿ
|

ಆದಿ ಮತ್ತು ಅಂತ್ಯವಿಲ್ಲದ್ದು ಸೃಷ್ಟಿಯಲ್ಲಿ ಯಾವುದಿದೆ? ಹೌದು, ಎಲ್ಲಾ ಆರಂಭಕ್ಕೂ ಅಂತ್ಯವಿರುತ್ತದೆ. ಎಲ್ಲಾ ಅಂತ್ಯಕ್ಕೂ ಆರಂಭವಿರುತ್ತದೆ. ಅದೇ ರೀತಿ 'ವಿಚಿತ್ರಾನ್ನ'ಅಂಕಣಕ್ಕೆ ಇಂದು ತೆರೆಬೀಳುತ್ತಿದೆ. ಸುಸ್ತಾಗದೇ, ಸೊರಗದೇ, ರಾಜೀಮಾಡಿಕೊಳ್ಳದೇ ವಿಚಿತ್ರಾನ್ನ ಬಡಿಸಿದ ಅಂಕಣಕಾರರಿಗೆ, ವಿಚಿತ್ರಾನ್ನಕ್ಕಾಗಿ ಹಂಬಲಿಸಿದ ಓದುಗರಿಗೆ ಧನ್ಯವಾದ. ಅಂಕಣ ಸಮಾಪ್ತಿ ಎಂಬ ವಿಚಾರ ಕೇಳಿ, ಪ್ರತಿ ಮಂಗಳವಾರ ರಸಗವಳ ಸವಿದ ಓದುಗ ಪ್ರಭುಗಳಿಗೆ ನಿಜಕ್ಕೂ ನಿರಾಸೆಯಾಗಿದೆ ಎಂಬುದು ನಮಗೆ ಗೊತ್ತಿದೆ. ಆದರೆ ಏನು ಮಾಡುವುದು; ಎಲ್ಲಾ ಆರಂಭಕ್ಕೂ ಒಂದು ಅಂತ್ಯವಿರುತ್ತದೆ...-ಸಂಪಾದಕ

ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ... ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ..." -ಈ ಸಾಲುಗಳೊಂದಿಗೆ ಆರಂಭವಾದದ್ದು ವಿಚಿತ್ರಾನ್ನ ಅಂಕಣದ ಪ್ರಪ್ರಥಮ ಸಂಚಿಕೆ. ಅದು ಪ್ರಕಟವಾದದ್ದು 2002ರ ಅಕ್ಟೋಬರ್ 15ರಂದು ಮಂಗಳವಾರ. ಇನ್ಸಿಡೆಂಟಲಿ ಅದೇ ಸಾಲುಗಳು ವಿಚಿತ್ರಾನ್ನ ಅಂಕಣದ ಈ ಕೊನೆಯ ಸಂಚಿಕೆಯಲ್ಲೂ ಕಾಣಿಸಿಕೊಂಡಿವೆ, ಇದು ಪ್ರಕಟವಾಗುತ್ತಿರುವುದು 2007ರ ಅಕ್ಟೋಬರ್ 16ರಂದು ಮಂಗಳವಾರ!

ಬಹುಶಃ ಇವತ್ತು ಕೊನೆಯದಾಗಿ ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ... ಇನ್ನು ನನ್ನ ಕಿಸೆಯಲಿ ನಾಣ್ಯ ನಾಕಾಣೆ"! ಎಂದು ಸ್ವಲ್ಪ ಬದಲಾಯಿಸಬಹುದೇನೊ. ವರ್ಷಕ್ಕೆ ಒಂದಾಣೆಯಂತೆ ಅಂದುಕೊಂಡರೂ ಐದು ವರ್ಷಗಳಲ್ಲಿ ಒಟ್ಟು ಐದಾಣೆ ನಮ್ಮ ಅಧಿದೇವತೆ ಗಣೇಶನಿಗೆ ಸಂದಾಯವಾಗಿದೆ ಎಂಬ ಲೆಕ್ಕಾಚಾರ ಮಾಡಿ, ಅವತ್ತಾಡಿದ್ದ ಮಾತು ಮುರಿದಿಲ್ಲ ಎಂತಲೂ ತಿಳಿದುಕೊಳ್ಳಬಹುದೇನೊ.

ಹೌದು, ಸರಿಯಾಗಿ ಐದು ವರ್ಷಗಳ ಕಾಲ ಒಂದು ವಾರವೂ ತಪ್ಪದೆ ಸತತ 262ಸಂಚಿಕೆಗಳಲ್ಲಿ ಮೂಡಿಬಂದ ವಿಚಿತ್ರಾನ್ನ ಅಂಕಣ ಇವತ್ತು ಕೊನೆಗೊಳ್ಳುತ್ತಿದೆ. ಐದು ವರ್ಷಗಳ ಹಿಂದೆ ಎಷ್ಟು ಸಂತೋಷದಿಂದ ಈ ಅಂಕಣವನ್ನು ಆರಂಭಿಸಿದ್ದೆನೋ ಅದರ ಐದು ಪಟ್ಟು ಹೆಚ್ಚು ಸಂತೋಷದಿಂದ ಇವತ್ತು ಇದಕ್ಕೆ ಮಂಗಳವನ್ನು ಹಾಡುತ್ತಿದ್ದೇನೆ. ಈ ಪರಿಯ ಸಂತೋಷವೃದ್ಧಿಗೆ ಕಾರಣ ಗಣೇಶನ ಅನುಗ್ರಹವಷ್ಟೇ ಅಲ್ಲದೆ ಈ ಐದು ವರ್ಷಗಳುದ್ದಕ್ಕೂ ನೀವು ಕೊಟ್ಟ interest (ಎರಡೂ ಅರ್ಥಗಳು ಪರ್ಫೆಕ್ಟಾಗಿ ಅನ್ವಯವಾಗುತ್ತವೆ) ಎಂದರೆ ತಪ್ಪಾಗಲಾರದು. ವಿಚಿತ್ರಾನ್ನವು ಈ ಪಂಚವರ್ಷಗಳಲ್ಲಿ ಪಂಚ್'ಇಸಿದ್ದಕ್ಕೆ ಮತ್ತು ಪನ್'ಚಿಸಿದಕ್ಕೆ ನಾನು ಎಷ್ಟು ಹೊಣೆಯೋ ಅಷ್ಟೇ ನೀವೂ ಸಹ ಎಂಬುದನ್ನು ಯಾವೊಂದು ಅನುಮಾನವಾಗಲೀ ಆಡಂಬರವಾಗಲೀ ಇಲ್ಲದೆ ಹೇಳಬಲ್ಲೆ. ಆದ್ದರಿಂದಲೇ ಈ ಸಂತೋಷ ಸಂಚಯವೆಲ್ಲವನ್ನೂ ನಾನೊಬ್ಬನೇ munchಇಸದೆ ನನಗೆ ಕೊಂಚವಷ್ಟನ್ನೇ ಇಟ್ಟುಕೊಂಡು ಮಿಕ್ಕಿದ್ದೆಲ್ಲವನ್ನು ನಿಮಗೆಲ್ಲರಿಗೂ ವಂಚಿಸದೆ ಹಂಚುತ್ತಿದ್ದೇನೆ.

ಎರಡೂವರೆ ಶತಕಗಳಿಗೂ ಹೆಚ್ಚಿನ ಸಂಖ್ಯೆಯ ಸಂಚಿಕೆಗಳಲ್ಲಿ ಊಟ-ತಿಂಡಿ ವಿಚಾರದಿಂದ ಹಿಡಿದು ವೇದಾಧ್ಯಯನದವರೆಗೆ, ದೇವದೇವತೆಗಳಿಂದ ಹಿಡಿದು ದೆವ್ವಭೂತಗಳವರೆಗೆ, ನರ್ಸರಿ ರೈಮ್‍ನಿಂದ ಹಿಡಿದು ಇಂಟ‍ರ್‌ನ್ಯಾಷನಲ್ ಸ್ಪೇಸ್ ಸ್ಟೇಶನ್‍ವರೆಗೆ... ಏನುಂಟು ಏನಿಲ್ಲ ಎಂದು ಮಂಡೆಬಿಸಿ ಆಗುವಷ್ಟು ಹರವಿನಲ್ಲಿ ಸಣ್ಣಸಣ್ಣ ಸಂಗತಿಗಳನ್ನಾಯ್ದುಕೊಂಡು ಅವುಗಳ ಬಗ್ಗೆ ಸ್ವಾರಸ್ಯಕರ ಮಂಥನ ನಡೆದಿದೆ. ಮಂಥನ ಎಂದು ಏಕೆ ಹೇಳಿದೆನೆಂದರೆ ಬರೀ ನನ್ನ ಒಣವ್ಯಾಖ್ಯಾನಗಳಿಗೆ ಮೀಸಲಾಗದೆ ಓದುಗರ ಭಾಗವಹಿಸುವಿಕೆಯಿಂದಾಗಿ, ಲವಲವಿಕೆಯ ಪ್ರತಿಕ್ರಿಯೆಗಳಿಂದಾಗಿ, ಅದೇ ಸಂಗತಿಗಳಿಗೆ ಹೊಸಹೊಸ ಸೆಳಕುಗಳೂ ಹುಟ್ಟಿಕೊಂಡಿವೆ. ಒಗಟು, ರಸಪ್ರಶ್ನೆ, ಹಾಡು, ಕಥೆ, ಪನ್, ಫನ್, ವಿಟ್, ವಿಡಂಬನೆ, ಅದೂ ಇದೂ ಅಂತ ಅಂತರ್ಜಾಲಮಾಧ್ಯಮದ ಇಂಟರಾಕ್ಟಿವ್' ಪ್ರಯೋಜನವನ್ನು ಸಾಕಷ್ಟು ಪ್ರಮಾಣದಲ್ಲಿ ಈ ಅಂಕಣವು ದುಡಿಸಿಕೊಂಡಿದೆ.

2002ರಲ್ಲಿ ವಿಚಿತ್ರಾನ್ನ ಆರಂಭವಾದಾಗ ದಟ್ಸ್‌ಕನ್ನಡದ ಓದುಗವರ್ಗದಲ್ಲಿ ಅನಿವಾಸಿ ಕನ್ನಡಿಗರ ಅನುಪಾತವೇ ಹೆಚ್ಚಿದ್ದದ್ದು. ಸಹಜವಾಗಿಯೇ ಬಾಲ್ಯದ ದಿನಗಳನ್ನು ನೆನಪಿಸುವ, ತವರೂರ ಸಮಾಚಾರಗಳಿಂದ ಪುಳಕಹುಟ್ಟಿಸುವ, ನೆನಪುಗಳ ಮೆರವಣಿಗೆ ಹೊರಡಿಸುವ ವಿಷಯಗಳಿಗೆ ಆಗ ಭಾರೀ ಬೇಡಿಕೆಯಿತ್ತು. ಕ್ರಮೇಣ ದಟ್ಸ್‌ಕನ್ನಡದ ಪ್ರಸಾರವ್ಯಾಪ್ತಿ ಕರ್ನಾಟಕದ ದೊಡ್ಡದೊಡ್ಡ ನಗರಗಳಷ್ಟೇ ಅಲ್ಲದೆ ಗ್ರಾಮೀಣಪ್ರದೇಶಗಳಿಗೂ ವಿಸ್ತರಿಸಿದಾಗ ಪತ್ರಿಕೆಯ (ಮತ್ತು ಈ ಅಂಕಣದ) ಪ್ರಸ್ತುತಿಯ ಶೈಲಿ ಮತ್ತು ಸರಕುಗಳೆರಡೂ ಬದಲಾಗಬೇಕಾಯಿತು. ಕರ್ನಾಟಕದಲ್ಲಿರುವ ಓದುಗರಿಗೆ ಸಹಜವಾಗಿಯೇ ನೊಸ್ಟಾಲ್ಜಿಯಾಕ್ಕಿಂತ ನ್ಯೂ ಡೆವಲಪ್‌ಮೆಂಟ್ಸ್ ಬಗ್ಗೆ ಹೆಚ್ಚಿನ ಆಸಕ್ತಿ. ಓದುಗವರ್ಗದಲ್ಲಿ ಒಂದುನಮೂನೆಯ ಅಗೋಚರ ಧ್ರುವೀಕರಣ.

ವೈವಿಧ್ಯಮಯ ಅಭಿರುಚಿಗಳ ಓದುಗವರ್ಗಕ್ಕೆ ಸರಿಹೊಂದುವಂತೆ ಅಂಕಣ ಬರೆಯುವುದು ಸ್ವಲ್ಪ ಕಷ್ಟದ ಸವಾಲೇ. ಹಾಗಾಗಿ ವಿಚಿತ್ರಾನ್ನ ಅಂಕಣದಲ್ಲಿ ಬಂದದ್ದು ಎಲ್ಲವೂ ಎಲ್ಲರಿಗೂ ಕಾಳು' ಆಗಿದ್ದು ಜೊಳ್ಳು' ಎನಿಸಿಲ್ಲವೆಂದೇನಿಲ್ಲ. ಅಷ್ಟೇ ಏಕೆ, ವೈಯಕ್ತಿಕವಾಗಿ ನನಗೇನೇ ಎಲ್ಲ 262 ಸಂಚಿಕೆಗಳೂ ಒಂದೇರೀತಿ ತೃಪ್ತಿಕೊಟ್ಟಿವೆ ಅಂತ ಹೇಳಲಾರೆ.

ಆದಾಗ್ಯೂ ನನಗೆ ತುಂಬ ಖುಶಿ ಕೊಟ್ಟ ವಿಚಾರವೆಂದರೆ ವಿಚಿತ್ರಾನ್ನ ಓದುಗರು ಸಂಚಿಕೆಗಳ ಗುಣಾವಗುಣಗಳ ಕುರಿತಷ್ಟೇ ಅಲ್ಲದೆ ಪತ್ರಸಂವಹನದ ಮೂಲಕ ತಂತಮ್ಮ ಜೀವನದ ತುಣುಕು ಅಥವಾ 'slice of life'ಗಳನ್ನು(ಈ ಹೆಸರಿನ ಅಂಕಣವೊಂದನ್ನು ದ ಹಿಂದು' ಪತ್ರಿಕೆಯಲ್ಲಿ ವಿ.ಗಂಗಾಧರ್ ಎನ್ನುವವರು ಬರೆಯುತ್ತಿದ್ದರು) ಅಚ್ಚುಕಟ್ಟಾಗಿ ಬರೆದು ಒಂದು ವಿಶಿಷ್ಟ ಅನುಭೂತಿ-ಅನುಭವಕ್ಕೆ ಎಡೆಮಾಡಿಕೊಟ್ಟಿರುವುದು. ಒಂದು ಪ್ರಾತಿನಿಧಿಕ ಸ್ಯಾಂಪಲ್ ನೋಡಿ. ಹುಬ್ಬಳ್ಳಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಡಾ|ಸೌಮ್ಯಾ, "ಬರಹ ತಂತ್ರಾಂಶ ಉಪಯೋಗಿಸಿ ನೀಟಾಗಿ ಪತ್ರ ಬರೆದಿದ್ದೀರಲ್ಲ, ನಿಮಗೂ ಬರವಣಿಗೆಯ ಹುಚ್ಚು(ಅಭ್ಯಾಸ) ಇದೆಯಾ?" ಎಂಬ ನನ್ನ ಪ್ರಶ್ನೆಗೆ ಉತ್ತರವಾಗಿ ಬರೆದಿರುವುದು:

"ಮೊನ್ನೆ ಡ್ಯೂಟಿಯಲ್ಲಿದ್ದಾಗೊಂದು ಕೇಸು. ಹನ್ನೆರಡರ ಪೋರಿ. ಮನೆಯೆದುರು ಏನೋ ಆಡ್ತಿದ್ದವಳಿಗೆ ಒಂದು ಮೊಳೆ ಕಣ್ಣಿಗೆ ಬಿತ್ತು, ಸ್ವಲ್ಪ ಸೊಟ್ಟಗಿದೆಯಲ್ಲ ಅಂತ ಸುತ್ತಿಗೆಯಿಂದ ಸರಿ ಮಾಡಲು ಹೋದಳು. ಕೈಗೆ ಬಡಿದು ನೋವಾದ್ರೆ ಅಂತ ಹಿಡಿದುಕೊಳ್ಳದೇ ಜಪ್ಪಿದ ರಭಸಕ್ಕೆ ಮೊಳೆ ಸೀದ ಕಣ್ಣೊಳಗೆ! ಲೆನ್ಸ್ ಹೊರ ಬಂದು ನೇತಾಡುತ್ತಿತ್ತು. ನಮ್ಮ ಸರ್ಕಾರೀ ದವಾಖಾನೆಯಲ್ಲಂತೂ ಅವಳ ದೃಷ್ಟಿ ಉಳಿಸುವಂಥ ಸವಲತ್ತಿಲ್ಲ. ಬೇರೆ ಕಡೆಗೆ ಹೋಗುವಷ್ಟು ಸೌಕರ್ಯ ಅವಳ ವಿಧವೆ ತಾಯಿಗಿಲ್ಲ. ಹೀಗ ಎದೆಯಾಳವನ್ನು ಕಲಕಿಹೋಗುವ ಹತ್ತಾರು ಸಂಗತಿಗಳು. ಏನೂ ಮಾಡಲಾಗದ ಅಸಹಾಯಕತೆಗೆ ಬರೆದು ಹಗುರಾಗಬೇಕಾ ಅಥವಾ ಹಾಗೆ ಬರೆಯುವುದೊಂದು ವ್ಯಂಗ್ಯವಾದೀತಾ ಎಂಬ ಗೊಂದಲ..."

ಜೀವನಪ್ರೀತಿ' ಎಂಬ ಬೀಜಮಂತ್ರವು ವಿಚಿತ್ರಾನ್ನದಲ್ಲಿ ಆಗೊಮ್ಮೆ ಈಗೊಮ್ಮೆ ಉಚ್ಚಾರಗೊಳ್ಳುವುದು ಇಂತಹ ಸಂಗತಿಗಳ ದೆಸೆಯಿಂದಲೇ! (ಬೈ ದ ವೇ, ದೆಸೆಯಿಂದ...' ಎನ್ನುವುದು ಪಂಚಮಿವಿಭಕ್ತಿ ಪ್ರಯೋಗ). ಈಗ ಬೈದ ವೇ'ಯತ್ತಲೂ ಸ್ವಲ್ಪ ದೃಷ್ಟಿಬೀರೋಣ...

ಜನಸಂದಣಿಯಲ್ಲಿ ಒಂದು ಭಾಗದ (a section of crowd) ಅಭಿಪ್ರಾಯವೇನೆಂದರೆ ವಿಚಿತ್ರಾನ್ನ ಅಂಕಣದಲ್ಲಿ ಬಂದಿರುವ ಬರಹಗಳ ಪೈಕಿ ಹೆಚ್ಚಿನವು ಭಾವನೆಗಳ ದೃಷ್ಟಿಯಿಂದ ಬಡಕಲು, ಅವು ಭಾವನೆಗಳೇ ಇಲ್ಲದ ಬರಡು ಬಡಬಡಿಕೆಗಳು ಎಂದು. ಇರಬಹುದು, ಇದನ್ನು ನಾನು ಸಾರಾಸಗಟಾಗಿ ತಳ್ಳಿಹಾಕಲಾರೆ. ಆದರೆ ಏನ್ಮಾಡೋಣ ಸ್ವಭಾವತಃ ನಾನು ಭಾವಜೀವಿಯಲ್ಲ (ಅಭಾವಜೀವಿ?), ಲಾಜಿಕಲ್ ರೀಸನಿಂಗ್ ಅಥವಾ ತರ್ಕಕ್ಕೆ ನನ್ನದು ಹೆಚ್ಚು ಒತ್ತು. ಅದೇ ಒಳ್ಳೆಯದೆಂದು ಇಲ್ಲಿ ನನ್ನ ವಾದವಲ್ಲ, ಅದು ನನ್ನದೊಂದು ಮಿತಿ ಎಂಬ ಪ್ರಾಮಾಣಿಕ ಮಂಡನೆ ಅಷ್ಟೇ.

ಹಾಗೆಯೇ ವಿಚಿತ್ರಾನ್ನ ಬರಹಗಳು ಬಹುತೇಕವಾಗಿ ಜುಟ್ಟಿಗೆ ಮಲ್ಲಿಗೆ ಹೂ' ಮಾದರಿಯವು, ಇಂತಹ ಸಾಹಿತ್ಯದ ಓದು ಹೊಟ್ಟೆಪಾಡಿಗೆ ನೆರವಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದವರಿದ್ದಾರೆ. ಕನ್ನಡದ ಉಳಿವು ಏಳಿಗೆಗಳ ಬಗ್ಗೆ ವಿಚಿತ್ರಾನ್ನ ಚಿಂತಿಸಿಲ್ಲ ಎಂದು ಕೆಲವರ ಆಗ್ರಹವೂ ಇದೆ. ಒಪ್ಪೋಣ, ಆದರೆ ನೆನಪಿಡಬೇಕಾದ್ದೇನೆಂದರೆ ಈ ಅಂಕಣವು ಅನ್ನಗಳಿಕೆಯ ಮಾರ್ಗದರ್ಶಿ ಎಂದಾಗಲೀ ಕನ್ನಡ ಓರಾಟಕ್ಕಾಗಿ ಉಟ್ಟಿದ್ದೆಂದಾಗಲೀ ಶುರುವಾದದ್ದೇ ಅಲ್ಲ, ಹಾಗೆಂದು ಹೇಳಿಕೊಂಡದ್ದೂ ಇಲ್ಲ! ಇದೇನಿದ್ದರೂ ಲೈಟಾಗಿರೋದನ್ನು ಬಯಸುವವರ ವಾರಾನ್ನ. ಅಷ್ಟೇ.

ವಿಚಿತ್ರಾನ್ನ ಸಂಚಿಕೆಗಳನ್ನು ಓದಿ ಆನಂದಿಸಿ ಮರೆತವರ ಗುಂಪಿನಲ್ಲೆಷ್ಟು ಮಂದಿ ಇದ್ದಾರೋ ಗೊತ್ತಿಲ್ಲ, ಆದರೆ ಕೆಲವು ಸಂಚಿಕೆಗಳನ್ನು ಓದಿ, ಆನಂದಿಸಿ, ಅನುಭವಿಸಿ ಮತ್ತಷ್ಟು ಮಂದಿಗೆ ಆ ಅನುಭವ ದಕ್ಕುವಂತೆ ಮಾಡಿದವರು ಅನೇಕರಿದ್ದಾರೆ. ಒಂದೆರಡು ಪ್ರಾತಿನಿಧಿಕ ಉದಾಹರಣೆಗಳನ್ನು ಇಲ್ಲಿ ಬಳಸುತ್ತಿದ್ದೇನೆ.

"I am Dr. Natesh Rathna from Mysore. I am Speech and Hearing professional who had the fortune to be trained in the U.S way back during 1956 to 1962. I have retired as the Director of the All India Institute of Speech and Hearing, Mysore and The Ali Yavar Jung National Institute for the Hearing Handicapped, Mumbai.

I have been interested in Theatre since my Highschool days. I have written a few plays in Kannada, directed and acted in many plays in Kannada and English. I am now attempting to write a book "Nata Mathu Maathu" in Kannada. I want to include a small section on the learning of lines by the actors, in which I will indicate a few of the methods I have been exposed to.

It is in this connection that I am writing to you. I read your article 'Veda Adhyanada Vidhanada Vismaya' in Vijaya Karnataka. I was thrilled to read the article. Vismaya does indeed aptly depict my reaction. I feel that I should share this information with my prospective readers. They may get some additional ideas on how to memorize their dialogues. You have written so precisely and effectively that I think it would be of great benefit if I include your whole article as one of the appendices of my book. I need your permission for that. I hope to hear from you in the near future."

"ನನ್ನ ಹೆಸರು ಸ್ವರ್ಣಾ ರಾಜೇಂದ್ರ. ನಾನು ನಿಮ್ಮನ್ನು 2004ರಲ್ಲಿ ನಾರ್ತ್ ಕೆರೋಲಿನಾದಲ್ಲಿ ನನ್ನ ಮಗನ ಮನೆಯಲ್ಲಿ ಭೇಟಿಯಾಗಿದ್ದೆ. ನಾನು ಬೆಂಗಳೂರಿನಲ್ಲಿ ಕೆನರಾಬ್ಯಾಂಕ್ ವೆಲ್‍ಫೇರ್ ಎಸೋಸಿಯೇಷನ್‍ನವರು ನಡೆಸುತ್ತಿರುವ ಬ್ರೈಲ್ ತರ್ಜುಮೆ ಕೇಂದ್ರಕ್ಕೆ ಸ್ವಯಂಸೇವಕಿಯಾಗಿ ಕಳೆದ ಐದು ವರ್ಷಗಳಿಂದ ಹೋಗುತ್ತಿದ್ದೇನೆ. ಅಲ್ಲಿಂದ ಕಾಮನ ಬಿಲ್ಲು' ಎಂಬ ಹೆಸರಿನ ಒಂದು ಬ್ರೈಲ್ ದ್ವೈಮಾಸಿಕ ಪತ್ರಿಕೆಯನ್ನು ಕರ್ನಾಟಕದ ಎಲ್ಲಾ ಅಂಧರ ಕೇಂದ್ರಗಳಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ಅದರಲ್ಲಿ ತಿಂಗಳ ವಿಶೇಷ' ಎಂಬ ಒಂದು ಅಂಕಣವಿದೆ. ಆ ಅಂಕಣಕ್ಕೆ ನಿಮ್ಮ ವಿಚಿತ್ರಾನ್ನದ 128ನೇ ಸಂಚಿಕೆಯಲ್ಲಿ ಬಂದಿದ್ದ ಅಂಧಕಾರದ ಅಚ್ಚರಿ - ಅಂಧಾನುಕರಣೆಯ ವಿಶಿಷ್ಟ ಪರಿ' ಲೇಖನವನ್ನು ಬ್ರೈಲ್‍ಗೆ ತರ್ಜುಮೆಮಾಡಿ ಹಾಕಲು ನಾನು ಇಚ್ಛಿಸುತ್ತೇನೆ. ಅದನ್ನೋದಿ ನಮ್ಮ ರಾಜ್ಯದಲ್ಲಿರುವ ದೃಷ್ಟಿಹೀನ ಮಕ್ಕಳಿಗೆ ಒಂದು ಸ್ಫೂರ್ತಿ ಬರುತ್ತದೆ/ಬರಲಿ ಎಂದು ನನ್ನ ಆಶಯ. ದಯಮಾಡಿ ನೀವು ಇದಕ್ಕೆ ಅನುಮತಿಯನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇನೆ."

ಸಾರ್ಥಕವಾಯಿತು, ಸದುಪಯೋಗವಾಯಿತು... ಎಂಬ ಧನ್ಯತಾಭಾವ ಮೂಡಲು ಇಂತಹ ಪತ್ರಗಳಿಗಿಂತ ಹೆಚ್ಚು ಇನ್ನೇನು ಬೇಕು?

ಅಂಕಣಲೇಖನಗಳ ಸಂಕಲನರೂಪದಲ್ಲಿ ಬಂದ ವಿಚಿತ್ರಾನ್ನ' ಪುಸ್ತಕಗಳ ಬಗ್ಗೆಯೂ ಒಂದೆರಡು ಮಾತುಗಳು ಇಲ್ಲಿ ಉಲ್ಲೇಖನೀಯ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಈ ಪುಸ್ತಕಗಳು ಸಹ ಸಾಕಷ್ಟು ಜನಮೆಚ್ಚುಗೆ ಗಳಿಸುವುದರಲ್ಲಿ ಯಶಸ್ವಿಯಾಗಿವೆ. ಮೊನ್ನೆ ಆಗಸ್ಟ್‌ನಲ್ಲಿ ಬಿಡುಗಡೆಯಾದ ಇನ್ನೊಂದಿಷ್ಟು ವಿಚಿತ್ರಾನ್ನ' ಮತ್ತು ಮತ್ತೊಂದಿಷ್ಟು ವಿಚಿತ್ರಾನ್ನ' ಪುಸ್ತಕಗಳು ಈಗಾಗಲೇ ಬೆಂಗಳೂರಿನ ಸಪ್ನಾ ಬುಕ್ ಸ್ಟಾಲ್ ಮತ್ತು ಅಂಕಿತ ಪುಸ್ತಕ ಮಳಿಗೆಗಳ ವೀಕ್ಲಿ :ಟಾಪ್-10 ಲಿಸ್ಟ್‌ಗಳಲ್ಲಿ ಕಾಣಿಸಿಕೊಂಡಿವೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕಮೇಳದಲ್ಲಿ ವಿಚಿತ್ರಾನ್ನ ಪುಸ್ತಕಗಳನ್ನು ಕೊಂಡುಕೊಂಡವರಿಂದ ಮೆಚ್ಚುಗೆಯ ಈಮೈಲ್‌ಗಳು ನನಗೆ ಬಂದಿವೆ. 2005ರಲ್ಲಿ ಪ್ರಕಟವಾಗಿದ್ದ ಒಂದನೆಯ ಸಂಪುಟವೂ ಟಾಪ್-10 ಲಿಸ್ಟ್‌ಗಳಲ್ಲಿ ಪ್ರವೇಶಪಡೆದಿತ್ತು.

ಇನ್ನೊಂದು ಸಂತಸದ ಸುದ್ದಿಯೇನೆಂದರೆ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾದ ಲೈಬ್ರರಿ ಆಫ್ ಕಾಂಗ್ರೆಸ್'ದಲ್ಲಿ ವಾಚನಕ್ಕೆ ಲಭ್ಯವಿರುವ ಪುಸ್ತಕಗಳಲ್ಲಿ ಈಗ ವಿಚಿತ್ರಾನ್ನವೂ ಸೇರಿಕೊಂಡಿದೆ! ವಾಷಿಂಗ್ಟನ್ ಡಿಸಿಯಲ್ಲಿ ಮೂರು ಬೃಹತ್ ಕಟ್ಟಡಗಳಲ್ಲಿ ಹರಡಿಕೊಂಡಿರುವ ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ಪಡೆಯುವುದಕ್ಕಾಗುವುದಿಲ್ಲ. ಯಾವುದೇ ಪುಸ್ತಕವನ್ನಾದರೂ ಅಲ್ಲೇ ಕುಳಿತು ಪಠಿಸಬೇಕು/ಪರಾಮರ್ಶಿಸಬೇಕು.

ಸರಿ, ಇದನ್ನೇ ನಾನು ಪಂಚವರ್ಷಗಳಲ್ಲಿನ ಸಂತೋಷ ಸಂಚಯ' ಎಂದಿದ್ದು. ನಿಮ್ಮೊಡನೆ ಹಂಚಿಕೊಂಡಿದ್ದರಿಂದ ಅದೀಗ ಮತ್ತಷ್ಟು ಹೆಚ್ಚಾಗಿದೆಯಾದರೆ ಅದಕ್ಕೆ "Plus your friends, Minus your enemies, Multiply your joys, Divide your sorrows..." ಎಂಬ ಅಟೋಗ್ರಾಫ್‍ವೇದವಾಕ್ಯದ ಪರಮಸತ್ಯವೇ ಕಾರಣ. ಇಂದು ನಾನು ಆ ಸತ್ಯದ ಫಲಾನುಭವಿ; ನೀವೂ ಸಹ ಎಂದು ನನ್ನ ನಂಬಿಕೆ.

ಮತ್ತೆ ಎಂದಾದರೂ ಎಲ್ಲಾದರೂ ಭೇಟಿಯಾಗೋಣ. ಹೋಗಿ ಬರುತ್ತೇನೆ, ನಮಸ್ಕಾರ!

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
'Vichitranna' Kannada weekly column on thatskannada is winding up with this issue. The column appeared continueoulsly for 262 weeks, has entertained millions of kannada browsers. Variety of knowledgeble and informative articles using interative media has become a houshold name among online kannada community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more