• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜಗೋಳಿ ಮತ್ತು ಗೋಳಿಬಜೆ

By * ಶ್ರೀವತ್ಸ ಜೋಶಿ
|

ಕಾರ್ಕಳ ಪೇಟೆಯಿಂದ ನಮ್ಮ ಹಳ್ಳಿ 'ಮಾಳ" ಕ್ಕೆ ನಡುವೆ ಇರುವ ಒಂದು ಚಿಕ್ಕ ಊರು - ಇತ್ತ ಹಳ್ಳಿಯೂ ಅಲ್ಲ ಅತ್ತ ಪಟ್ಟಣವೂ ಅಲ್ಲ ಆ ರೀತಿಯದು - ಬಜಗೋಳಿ. ಕಾರ್ಕಳದಿಂದ ಬರುವ ರಸ್ತೆ ಬಜಗೋಳಿಯಲ್ಲಿ ಕವಲೊಡೆದು ಒಂದು ನಮ್ಮೂರಿನ ಮೂಲಕ ಶೃಂಗೇರಿ-ಕುದುರೆಮುಖದತ್ತ ಹೋದರೆ ಇನ್ನೊಂದು ನಾರಾವಿ-ಗುರುವಾಯನಕೆರೆ-ಬೆಳ್ತಂಗಡಿಯತ್ತ ಹೋಗುತ್ತದೆ. ಹಾಗೆ ಬಜಗೋಳಿ ಒಂದು ಜಂಕ್ಷನ್‌. ಕರಾವಳಿಯ, ಮಲೆನಾಡಿನ ತಪ್ಪಲಿನ ಇತರ ಸಣ್ಣಪುಟ್ಟ ಊರುಗಳಂತೆಯೇ ಇದೂ ಕೂಡ. ಹತ್ತಾರು ಅಂಗಡಿಮುಂಗಟ್ಟುಗಳು, ನಾಲ್ಕೈದು ಹೊಟೆಲ್‌ಗಳು, ಗೂಡಂಗಡಿಗಳು, ಸಲೂನ್‌, ಬಸ್ಸು ತಂಗುದಾಣ, ಬ್ಯಾಂಕ್‌ ಶಾಖೆ, ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಂತೆಕಟ್ಟೆ ಮತ್ತು ಅಫ್‌ಕೋರ್ಸ್‌ ಒಂದೆರಡು ಶರಾಬುಅಂಗಡಿ (ಬಡತನರೇಖೆಯ ಕೆಳಗಿನವರ ಬೇಡಿಕೆಗೆ) ಮತ್ತೊಂದು ವೈನ್‌ಶಾಪ್‌ (ರೇಖೆಯ ಮೇಲಿರುವವರ ಖಯಾಲಿಗೆ) - ಹೀಗೆ ಬಜಗೋಳಿಯ ಟೊಪೊಗ್ರಾಫಿ.

ನಾವೆಲ್ಲ ಚಿಕ್ಕವರಿರುವಾಗ, ಅಂದರೆ ಏಳನೆಯೆ ತರಗತಿಯವರೆಗೆ ನಮ್ಮ ಮಾಳದ ಶಾಲೆಯ ವಿದ್ಯಾರ್ಥಿಗಳಿದ್ದಾಗಿನ ದಿನಗಳ ಬಜಗೋಳಿಯ ಚಿತ್ರಣವನ್ನಿಲ್ಲಿ ನಾನು ನೆನಪಿಸಿಕೊಳ್ಳುತ್ತಿರುವುದು. ಆಗ ನಮ್ಮೂರಲ್ಲಿನ್ನೂ ರಾಷ್ಟ್ರೀಕೃತ ಬ್ಯಾಂಕ್‌ನ ಶಾಖೆಯಿಲ್ಲದಿದ್ದುದರಿಂದ (ಈಗ ಕಾರ್ಪೊರೇಷನ್‌ ಬ್ಯಾಂಕ್‌ ಇದೆ) ಬಜಗೋಳಿಯಲ್ಲಿನ ಸಿಂಡಿಕೇಟ್‌ ಬ್ಯಾಂಕೇ ನಮಗೆ ಹತ್ತಿರದ ಬ್ಯಾಂಕ್‌. ಅದೇ ನಮಗೆ ಪರಿಚಯವಾದ ಮೊಟ್ಟಮೊದಲ ಬ್ಯಾಂಕ್‌. ಶಾಲೆಯಲ್ಲಿರುವಾಗ, ಕೆಲವೊಮ್ಮೆ ಅಧ್ಯಾಪಕರು ಆರನೇ ಅಥವಾ ಏಳನೇ ತರಗತಿಯ ಯಾರಾದರೂ ವಿದ್ಯಾರ್ಥಿಯಾಬ್ಬನನ್ನು ನಮ್ಮೂರಿಂದ ಬಜಗೋಳಿ ಬ್ಯಾಂಕ್‌ಗೆ ಕಳಿಸಿ ಚಿಕ್ಕಪುಟ್ಟ ಹಣಕಾಸುವ್ಯವಹಾರಗಳನ್ನು (ಚೆಕ್‌ ಡೆಪಾಸಿಟ್‌ ಮಾಡುವುದು ಇತ್ಯಾದಿ) ಮಾಡಿಸುತ್ತಿದ್ದರು. ನಮ್ಮೂರಿಂದ ಬಜಗೋಳಿಗೆ ಹೋಗಿಬರಲು ಬಸ್‌ಟಿಕೆಟ್‌ಗೇನೊ ದುಡ್ಡುಕೊಡುತ್ತಿದ್ದರು, ಆದರೆ ಕಾಫಿ-ತಿಂಡಿ ಎಲೊವೆನ್ಸ್‌ ಕೊಡುತ್ತಿದ್ದರೋ ಇಲ್ಲವೆಂಬುದು ನೆನಪಿಲ್ಲ. ಆಗ ಟಿಎ-ಡಿಎ ವಸೂಲಿಗಿಂತ ಗುರುಭಕ್ತಿ ಹೆಚ್ಚು ಇತ್ತೆನ್ನಿ.

ಬಜಗೋಳಿಯಲ್ಲಿ ಡಾ।ಗಿರಿ ಎನ್ನುವ ವೈದ್ಯರ ಶಾಪ್‌ ಇತ್ತು/ಇದೆ. ಅದು ಮಹಡಿಯ ಮೇಲೆ ಇರುವುದರಿಂದ ಡಾ।ಗಿರಿಯವರು 'ಮಾಳಿಗೆ ಡಾಕ್ಟ್ರು" ಎಂದೇ ಪ್ರಸಿದ್ಧಿ. ಸಣ್ಣಮಟ್ಟಿನ ಕಾಯಿಲೆಗಳಿಗೆ ಕಾರ್ಕಳಪೇಟೆಗೆ ಹೋಗಬೇಕಾದ್ದಿಲ್ಲ, ಮಾಳಿಗೆಡಾಕ್ಟ್ರ ಔಷಧಿ ರಾಮಬಾಣ ಅಂತ ನಮ್ಮೂರಲ್ಲಿ ಅನೇಕ ಮಂದಿ ಹೇಳುತ್ತಿದ್ದರು. ಬಜಗೋಳಿಯ ಇನ್ನೊಂದು ಆಕರ್ಷಣೆ ಅಂದರೆ ಗುರುವಾರದ ಸಂತೆ. ಅವತ್ತು ನಮ್ಮೂರಿಗೆ ಬರುವ ಬಸ್ಸಲ್ಲೂ ಮತ್ಸ್ಯಗಂಧ ಘಮ್ಮೆಂದು ಹಬ್ಬಿಕೊಂಡಿರುತ್ತದೆ - ಕೂಲಿಕಾರ್ಮಿಕರು ಮತ್ತಿತರರು ಸಂತೆ ವ್ಯಾಪಾರ ಮಾಡಿ, ಮೀನುಗೀನು ಖರೀದಿಸಿ ಬೇಕಿದ್ದರೆ ಒಂದಿಷ್ಟು 'ಏರಿಸಿ" ಬಸ್ಸುಹತ್ತುದ್ದಿದ್ದುದರಿಂದ ಅವತ್ತು ಬಸ್‌ಪ್ರಯಾಣ ಎವಾಯ್ಡ್‌ ಮಾಡುವ ಮಂದಿಯೂ ನಮ್ಮೂರಲ್ಲಿದ್ದರು. ಆದರೆ ತಾಜಾ ತರಕಾರಿ, ಹಾಗೆಯೇ ಬೇರೆ ಸಾಮಾನು-ಸರಂಜಾಮು ಖರೀದಿಸಲು ತಥಾಕಥಿತ ಮೇಲ್ವರ್ಗದವರೂ ಸೈಕಲ್‌ ಮೇಲಾದರೂ ಸಂತೆಗೆ ಹೋಗದಿರುತ್ತಿರಲಿಲ್ಲ. ನನಗೆ ನೆನಪಿರುವಂತೆ ಬೇಸಿಗೆಯಲ್ಲಿ ನಮ್ಮ ಕೈತೋಟಗಳಲ್ಲಿ ತರಕಾರಿ-ಹಣ್ಣುಗಳನ್ನು ಬೆಳೆಯುವ ಕ್ರಮವಿದ್ದಾಗ ಬದನೆ (ಮತ್ತು ಉಡುಪಿ 'ಗುಳ್ಳ" ಎಂಬ ಜಾತಿಯ ಬದನೆ) ಇತ್ಯಾದಿ ಸಸಿಗಳನ್ನು ಬಜಗೋಳಿ ಸಂತೆಯಿಂದಲೇ ತಂದು ನೆಟ್ಟು ತರಕಾರಿ ಬೆಳೆಸುವ ರೂಢಿಯಿತ್ತು.

'ಲವ-ಕುಶ" ಜೋಡುಕೆರೆ ಕಂಬಳ (ಕೋಣಗಳನ್ನು ಕೆಸರುನೀರಿನಲ್ಲಿ ಓಡಿಸುವ ಪಂದ್ಯಾಟ - ಕರಾವಳಿ ಪ್ರಾಂತ್ಯದ ಜನಪದ ಕ್ರೀಡೆ) ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಭೂಪಟದಲ್ಲಿ ಬಜಗೋಳಿಗೆ ಪ್ರಮುಖಸ್ಥಾನ ಸಿಗುವುದಕ್ಕೆ ಇನ್ನೊಂದು ಕಾರಣ. ಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳ ಒಂದು ರವಿವಾರದಂದು ನಡೆವ ಈ ಕಂಬಳಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಎತ್ತು, ಕೋಣ ಜೋಡಿಗಳು, ಸ್ಪರ್ಧೆಯನ್ನು ನೋಡಲು ಜನರೂ ಶತಸಂಖ್ಯೆಯಲ್ಲಿ ಬರುತ್ತಾರೆ. ಬಜಗೋಳಿಯ ಬಗ್ಗೆ ನನಗಿರುವ ಇನ್ನೊಂದು ನೆನಪೆಂದರೆ ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ (ಲೋಕಸಭಾಸ್ಥಾನದ ಮಟ್ಟಿಗೆ ನಮ್ಮೂರು, ಬಜಗೋಳಿ, ಕಾರ್ಕಳ ಇವೆಲ್ಲ ಚಿಕ್ಕಮಗಳೂರು ಕ್ಷೇತ್ರಕ್ಕೆ ಸೇರಿವೆ) ಬಜಗೋಳಿಹತ್ತಿರದ ಶಾಲಾಮೈದಾನದಲ್ಲಿ ನಡೆದ ಚುನಾವಣಾಪ್ರಚಾರಭಾಷಣ ಮಾಡಲು ಬಂದಿದ್ದರು. ಅವರ ಹೆಲಿಕಾಪ್ಟರ್‌ ಅಲ್ಲೇ ತಂಗಿತ್ತು. ಅಡಿಕೆಹಾಳೆಯ ಟೊಪ್ಪಿಯನ್ನು(ಕರಾವಳಿಜಿಲ್ಲೆಗಳಲ್ಲಿ ಕೃಷಿಕರ ಶಿರಸ್ತ್ರಾಣ) ತಲೆಗಿಟ್ಟು ಇಂದಿರಾಗಾಂಧಿ ಅವತ್ತು ತುಳುಭಾಷೆಯಲ್ಲಿ 'ನಿಕ್ಲೆಗ್‌ ಎನ್ನ ನಮಸ್ಕಾರ!" ಎಂದಿದ್ದರು. ಅವರ ಪ್ರತಿಸ್ಪರ್ಧಿ ವೀರೇಂದ್ರಪಾಟೀಲರ ಪರವಾಗಿ ಪ್ರಚಾರಕ್ಕೆ ಜಾರ್ಜ್‌ಫೆರ್ನಾಂಡಿಸ್‌ ಬಂದಿದ್ದು ತುಳುವಿನಲ್ಲೇ ಇಡೀ ಭಾಷಣವನ್ನು ಮಾಡಿದ್ದರು.

ಈ ಇಪ್ಪತ್ತು ವರ್ಷಗಳಲ್ಲಿ ಬಜಗೋಳಿ ವಿಶೇಷವಾಗೇನೂ ಬದಲಾಗಿಲ್ಲ. ಮನೆಗಳ ಮುಂದೆ ಸಾಟೆಲೈಟ್‌ ಡಿಷ್‌ ಆಂಟೆನಾಗಳು ಸ್ಥಾಪನೆಯಾಗಿವೆ, ಮಾರುತಿ-ಫೊರ್ಡ್‌-ಟೊಯಾಟಾ ಕಾರುಗಳು ಪಾರ್ಕ್‌ ಆಗಿರುತ್ತವೆ, ಕಾರ್ಕಳದಿಂದ ಬೆಂಗಳೂರಿಗೆ ಹೋಗುವ ಖಾಸಗಿಬಸ್ಸೊಂದು ಬಜಗೋಳಿ ಮುಖಾಂತರವೇ ಹೋಗುತ್ತದೆ, ಮಂಗಳೂರಿಂದ ಶೃಂಗೇರಿ ಅಥವಾ ಕುದುರೆಮುಖಕ್ಕೆ ಹೋಗುವ ಬಸ್ಸುಗಳೂ ಕಾಫಿ-ತಿಂಡಿ ಅಥವಾ ಊಟಕ್ಕೆ ಕಾರ್ಕಳದ ಬದಲು ಬಜಗೋಳಿಯಲ್ಲಿ ನಿಲ್ಲಿಸುವುದರಿಂದ ಹೊಟೇಲ್‌ಗಳಿಗೆ ವ್ಯಾಪಾರ ಹೆಚ್ಚಾಗಿದೆ, ಕಳೆದ ವರ್ಷವಷ್ಟೇ ಪ್ರಪ್ರಥಮವಾಗಿ ಬಜಗೋಳಿಯಲ್ಲಿ ಪೆಟ್ರೊಲ್‌ಬಂಕ್‌ ಸ್ಥಾಪನೆಯಾಗಿದೆ (ನಮ್ಮೂರಲ್ಲೂ ಮಾರುತಿವಾನರರು, ದ್ವಿಚಕ್ರವಾಹನಿಗರೆಲ್ಲ ತುಂಬಾ ಮಂದಿ ಇದ್ದರೂ ವಾಹನಗಳ ಕ್ಷುಧೆ ತಣಿಸಲು ಕಾರ್ಕಳಕ್ಕೇ ಹೋಗಿಬರಬೇಕಾಗುತ್ತಿತ್ತು) - ಇತ್ಯಾದಿ ಅಭಿವೃದ್ಧಿ ಅಂಶಗಳು ಮತ್ತು ಇತ್ತೀಚಿನ ಆತಂಕಕಾರಿ ಬೆಳವಣಿಗೆಯಂತೆ ಅಯುಧಹಿಡಿದು ಅಡ್ಡಾಡುವ ನಕ್ಸಲರ ಚಟುವಟಿಕೆ ಊರನ್ನು ಭಯಬೀತವಾಗಿಸಿದೆ ಎನ್ನುವುದನ್ನು ಬಿಟ್ಟರೆ ಬಜಗೋಳಿ ಹೆಚ್ಚುಕಡಿಮೆ ನನ್ನ ಬಾಲ್ಯದಲ್ಲಿ ನೋಡಿದ್ದ ನೆನಪಿನಂತೆಯೇ ಇದೆ. ಒಂದೇ ಒಂದು ಅಂದರೆ ಇವತ್ತು ಅಮೆರಿಕರಾಜಧಾನಿ ವಾಷಿಂಗ್ಟನ್‌ನಲ್ಲಿ ಕುಳಿತು ನಾನು, ವಿಶ್ವಕನ್ನಡಿಗರಿಗೆ ಈ ನಮ್ಮ 'ಬಜಗೋಳಿ"ಯ ಸ್ಥೂಲ ಪರಿಚಯವನ್ನಿಲ್ಲಿ ಮಾಡಿಕೊಟ್ಟಿದ್ದೇನೆ!

ಈಗಿನ್ನು ನಮ್ಮ ವಿಚಾರಲಹರಿಗೆ, 'ಬಜಗೋಳಿ"ಯಿಂದ ನೂರಾಎಂಬತ್ತು ಡಿಗ್ರಿ ಶಿಫ್ಟ್‌ - 'ಗೋಳಿಬಜೆ"ಗೆ!

ಏನದು ಗೋಳಿಬಜೆ? ಎಲ್ಲೋ ಕೇಳಿದಂತಿದೆಯಲ್ಲ! (ದ.ಕ/ಉಡುಪಿ ಮೂಲದ ಓದುಗರಿಗೆ ಇಷ್ಟುಹೊತ್ತಿಗೆ ಬಾಯಲ್ಲಿ ನೀರೂರಿ ಆಯ್ತು ಬಿಡಿ). ಹೌದು, 'ಗೋಳಿಬಜೆ" ನಮ್ಮ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಒಂದು ಸ್ಪೆಷಲ್‌ ತಿಂಡಿ. ಹೊಟೆಲ್‌ಗಳಲ್ಲಿ ಸಂಜೆಯ ಹೊತ್ತು 'ಬಿಸಿಬಿಸಿ ತಿಂಡಿ ಏನಿದೆ?" ಅಂತ ಕೇಳಿದ್ರೆ ಬೈ ಡಿಫಾಲ್ಟ್‌ಆಗಿ, ಗೋಳಿಬಜೆ ಇದ್ದೇಇರುತ್ತದೆ. ಸಂಜೆ ಚಹ/ಕಾಫಿಯ ಜತೆ ಮೆಲ್ಲಲು ಮನೆಗಳಲ್ಲೂ ಸಾಮಾನ್ಯವಾಗಿ ಮಾಡುವ ದಿಢೀರ್‌ ಕರಿದ ತಿಂಡಿ ಗೋಳಿಬಜೆ. ಕರಾವಳಿಯೇತರ ಪ್ರದೇಶಗಳಲ್ಲಿ ಇದರ ರೂಪಗಳನ್ನು 'ಮಂಗಳೂರು ಬಜ್ಜಿ"ಯೆಂದು ಮಾಡುತ್ತಾರಾದರೂ ಗೋಳಿಬಜೆಯ ಖದರೇ ಬೇರೆ!

ದಿಢೀರ್‌ಆಗಿ ಮಾಡಬಹುದಾದ ತಿಂಡಿ ಎಂದು ಯಾಕೆ ಹೇಳಿದೆನೆಂದರೆ ಗೋಳಿಬಜೆಯ ರೆಸಿಪಿ ತುಂಬ ಸಿಂಪಲ್ಲಾಗಿದೆ. ನೋಟ್‌ ಮಾಡಿಟ್ಟುಕೊಳ್ಳಿ. ಮೈದಾಹಿಟ್ಟು 3 ಕಪ್‌, ಚಕ್ರಾಕಾರವಾಗಿ ಕತ್ತರಿಸಿದ ಹಸಿಮೆಣಸಿನಕಾಯಿ 3, ಸಕ್ಕರೆ 3 ಚಮಚ, ಚಿಟಿಕೆ ಅಡಿಗೆ ಸೋಡ, ಹುಳಿಮಜ್ಜಿಗೆ ಅಥವಾ ಮೊಸರು 1/2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಕತ್ತರಿಸಿದ ಕೊತ್ತುಂಬರಿ ಸೊಪ್ಪು - ಇವಿಷ್ಟನ್ನೂ ಒಂದು ಪಾತ್ರೆಯಲ್ಲಿ ಕಲೆಸಿಕೊಳ್ಳಿ. ಇಡ್ಲಿಹಿಟ್ಟಿಗಿಂತ ತುಸು ದಪ್ಪವಾಗಿರಬೇಕು ಈ ಮಿಶ್ರಣ. ನೀರು ಹಾಕಬೇಡಿ, ಬದಲಿಗೆ ಅವಶ್ಯಬಿದ್ದರೆ ಸ್ವಲ್ಪ ಮಜ್ಜಿಗೆಯನ್ನೇ ಸೇರಿಸಿ. ಒಪ್ಷನಲ್ಲಾಗಿ ಇದಕ್ಕೇ ನೀವು, ಕತ್ತರಿಸಿದ ಹಸಿಶುಂಠಿ ಮತ್ತು ಚಿಟಿಕೆ ಇಂಗು ಸೇರಿಸಿದರೂ ನಡೆಯುತ್ತೆ, ಹಾಕಲೇಬೇಕಂತೇನೂ ಇಲ್ಲ. ಒಲೆಯಮೇಲೆ ಬಾಣಲೆಯಲ್ಲಿ ಕರಿಯಲು ಎಣ್ಣೆಯಿಟ್ಟು ಬಿಸಿಯಾದ ಮೇಲೆ, ಹಿಟ್ಟಿನ ಮಿಶ್ರಣದ ಸಣ್ಣ ಸಣ್ಣ ಗೋಳಿಗಳನ್ನು ಎಣ್ಣೆಯಲ್ಲಿ ಕರಿಯಿರಿ. ಗೋಲ್ಡನ್‌ಫ್ರೆೃಡ್‌ ಕಲರ್‌ ಬಂದಮೇಲೆ ಎಣ್ಣೆಯಿಂದ ತೆಗೆಯಿರಿ. ಗೋಳಿಬಜೆ ಬಿಸಿಬಿಸಿ ಇದ್ದಾಗಲೇ ಹಾಗೆಯೇ ತಿನ್ನಬಹುದು ಅಥವಾ ತೆಳುವಾದ ಕೊಬ್ಬರಿಚಟ್ನಿ ಅಥವಾ ಪುದಿನಾಚಟ್ನಿಯಲ್ಲಿ ಅದ್ದಿಯೂ ತಿನ್ನಬಹುದು! ಕರಾವಳಿಯಲ್ಲಿ ಆಫೀಸ್‌ಮೀಟಿಂಗ್‌ಗಳಿಗೆ, ಟೀಪಾರ್ಟಿಗಳಿಗೆ ಹೊಟೆಲಿಂದ ಬಿಸಿಬಿಸಿ ತಿಂಡಿ ಸರಬರಾಜಿನ ವ್ಯವಸ್ಥೆಯಿದ್ದರೆ ಅಲ್ಲಿ ಗೋಳಿಬಜೆ ಪ್ರಧಾನ ಭೂಮಿಕೆಯಲ್ಲಿರುತ್ತದೆ.

Purushotham Raoಈ ಪರಿಯ ಗೋಳಿಬಜೆಯನ್ನು ಅಮೆರಿಕ ರಾಜಧಾನಿಯಲ್ಲಿ ಪ್ರಖ್ಯಾತಗೊಳಿಸಿದ ನಮ್ಮ ಸ್ನೇಹಿತ ಪುರುಶೋತ್ತಮ್‌ ರಾವ್‌ ('ಪುರು" ಎಂದು ಎಲ್ಲರ ಅಚ್ಚುಮೆಚ್ಚಿನ ಲವಲವಿಕೆಯ ಹುಡುಗ) ಬಗ್ಗೆ ಎರಡುವಾಕ್ಯವಾದರೂ ಬರೆಯದಿದ್ದರೆ ಗೋಳಿಬಜೆಗೆ ಅವಮಾನವಾದಂತೆಯೇ. ಪುರು, ಕಳೆದ ಮೂರ್ನಾಲ್ಕು ವರ್ಷಕಾಲ ಇಲ್ಲಿ ವಾಷಿಂಗ್‌ಟನ್‌ಡಿಸಿಯಲ್ಲಿ ಸಾಫ್ಟ್‌ವೇರ್‌ಇಂಜನಿಯರ್‌ ಆಗಿ ಕೆಲಸ ಮಾಡುತ್ತಿದ್ದ. ಉಡುಪಿಯಿಂದ ಬಂದವನು, ಸೆಲ್ಫ್‌ಕುಕ್‌ ಮಾಡಿಕೊಂಡಿರುವ ಬ್ರಹ್ಮಚಾರಿ ಎಂದಮೇಲೆ ಕೇಳಬೇಕೆ, ಭಲೇ ಅಡಿಗೆ ಮಾಡುತ್ತಿದ್ದ. ಉಡುಪಿಸ್ಪೆಷಲ್‌ ಐಟಂಗಳೆಲ್ಲ ಅವನಿಗೆ ಕರತಲಾಮಲಕ. ಅದರಲ್ಲೂ ಗೋಳಿಬಜೆಯನ್ನಂತೂ ಕನ್ನಡಿಗರ ದೊಡ್ಡದೊಡ್ಡ ಫಂಕ್ಷನ್‌ಗಳಿಗೂ ಸಮೇತ ಮಾಡಿಕೊಟ್ಟಿದ್ದಾನೆ! ಎರಡು ವರ್ಷಗಳ ಹಿಂದೆ ಇಲ್ಲಿಗೆ ಪ್ರಣಯರಾಜ ಶ್ರೀನಾಥ್‌, ಸರಿತಾ, ಗೀತಾ, ಚಂದ್ರಶೇಖರ್‌, ರಾಮಕೃಷ್ಣ ಇತ್ಯಾದಿ ಬಂದಿದ್ದಾಗ ಅವರು ಕನ್ನಡಿಗ ಡಾ।ತ್ಯಾಗರಾಜ್‌ ಅವರ ಮನೆಯಲ್ಲಿ ಉಳಕೊಂಡಿದ್ದರು. ಒಂದು ದಿನ ಅವರಲ್ಲಿ ಸಂಜೆ ಪಾರ್ಟಿ, ಡಿನ್ನರ್‌ ಗೆಟ್‌-ಟುಗೆದರ್‌ ಇಟ್ಟುಕೊಂಡಿದ್ದರು. ಅವತ್ತು ಈವ್‌ನಿಂಗ್‌ಸ್ನ್ಯಾಕ್ಸ್‌ಆಗಿ ಪುರು ಪಾಕಪ್ರಾವೀಣ್ಯದಲ್ಲಿ ಗೋಳಿಬಜೆ! ಅದು ಏನು ಸುಪರ್‌ಹಿಟ್‌ ಆಯ್ತು ಅಂತೀರಾ! ಮತ್ತೆ ಕಾವೇರಿ ಕನ್ನಡಸಂಘದ ಒಂದು ಫಂಕ್ಷನ್‌ಗೂ ಗೋಳಿಬಜೆ ಮಾಡಿಕೊಡುವಂತೆ ಪುರುಗೆ ಬೇಡಿಕೆಬಂದಿತ್ತು. ಅಲ್ಲೂ ಎಲ್ಲರೂ ಗೋಳಿಬಜೆಯನ್ನು ಸವಿದಿದ್ದರು. ಹೇಗ್‌ ಮಾಡೋದು ಅಂತ ನಮ್‌ಗೂ ಕಲಿಸಿಕೊಡಪ್ಪಾ ಎಂದು ಜನ ದುಂಬಾಲುಬಿದ್ದಿದ್ದರು.

ಈಗ ಪುರು ಸದ್ಯಕ್ಕೆ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದು, ಅವನ ಕೈಗುಣದ ಗೋಳಿಬಜೆ ರುಚಿಯರಿತ ನಾವೆಲ್ಲ, ಯಾವಾಗ ಮತ್ತೆ ಇಲ್ಲಿಗವ ಬರುತ್ತಾನೆ ಎಂದು ಕಾಯುತ್ತಿದ್ದೇವೆ. ಇಷ್ಟೆಲ್ಲ ಗೋಳಿಬಜೆ ವೃತ್ತಾಂತವನ್ನು ಬರೆದು ನಿಮ್ಮ ಬಾಯಲ್ಲೂ ನೀರೂರಿಸಿದ್ದಕ್ಕಾಗಿ ಪುರು ಮಾಡಿದ ಅಥೆಂಟಿಕ್‌ ಗೋಳಿಬಜೆಯದೇ ಚಿತ್ರವನ್ನು ಅವನ ಕೆಮರಾದಿಂದಲೇ ತರಿಸಿ ಇಲ್ಲಿ ಪ್ರಕಟಿಸುತ್ತಿದ್ದೇನೆ.

ಮತ್ತೆ, ನಿಜವಾಗಿಯೂ ಗೋಳಿಬಜೆ ತಿನ್ನುವ ಆಸೆ ಆಗಿದ್ದರೆ ಇವತ್ತೇ ಸಂಜೆ ಮನೆಯಲ್ಲಿ ಟ್ರೈ ಮಾಡಿನೋಡಿ. ಹಾಗೆಯೇ ಮುಂದೆ ಯಾವಾಗಾದ್ರೂ ಕರಾವಳಿ ಕರ್ನಾಟಕ ಟ್ರಿಪ್‌ ಏನಾದರೂ ನಿಮ್ಮ ಪ್ಲಾನ್‌ನಲ್ಲಿದ್ದರೆ, ಬಜಗೋಳಿಯ ಹೊಟೆಲಲ್ಲೇ ಗೋಳಿಬಜೆ ತಿನ್ನುವ ಪ್ರೊಗ್ರಾಂ ಸ್ಕೆಚ್‌ ಹಾಕಿಟ್ಟರೂ ಮತ್ತೂ ಒಳ್ಳೆಯದೇ. ನಿಮಗೆ ಶುಭವಾಗಲಿ!

ಯಾವುದಕ್ಕೂ, ಎರಡು ಸಾಲು ಬರೆಯುವ ಮನಸ್ಸಾದರೆ ವಿಳಾಸ ಇಲ್ಲಿದೆ srivathsajoshi@yahoo.com.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more