• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಗಾದಿ ಹಬ್ಬಕ್ಕೆ ರಸಪ್ರಶ್ನೆಗಳ ತಳಿರುತೋರಣ!

By Staff
|
Srivathsa Joshi *ಶ್ರೀವತ್ಸ ಜೋಶಿ

ವಿಚಿತ್ರಾನ್ನದಲ್ಲಿ ರಸಪ್ರಶ್ನೆ ಏರ್ಪಡಿಸದೆ ಬಹಳ ವಾರಗಳಾಗಿವೆ, ಯಾವುದಾದರೊಂದು ಕ್ವಿಜ್‌ ಸಂಚಿಕೆ ಬರಲಿ ಎಂದು ತುಂಬ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬಹುಜನರ ಅಪೇಕ್ಷೆ ಮೇರೆಗೆ ಈ ವಾರ, ಯುಗಾದಿ ಹಬ್ಬದ ವಿಶೇಷವೆಂದು, ಪದಬಂಧ ಅಥವಾ ಚಿತ್ರಬಂಧ ಮಾದರಿಯ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅದಕ್ಕೆ ಸರಿಯಾಗಿ, ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಪ್ರಾಯೋಜಿಸಲೂ ಸ್ನೇಹಿತರೊಬ್ಬರು ಮುಂದೆ ಬಂದಿದ್ದಾರೆ! ಅಂದಮೇಲೆ ತಡವೇಕೆ, ಯುಗಾದಿಯ ಸಂಭ್ರಮವನ್ನು, ವಸಂತ ಋತುವಿನ ಆಗಮನದ ಸಡಗರವನ್ನು ರಸಪ್ರಶ್ನೆ ಮನರಂಜನೆಯಿಂದ ಸಿಂಗರಿಸೋಣವಲ್ಲವೇ?

ಎಲ್ಲರೂ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ; ಅದೃಷ್ಟವಂತರು ಬಹುಮಾನವನ್ನು ನಿಮ್ಮದಾಗಿಸಿ!

ವಿವರಗಳು, ಸೂಚನೆಗಳು ಇಂತಿವೆ :

  • ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಸಿನೆಮಾ, ಆಹಾರ ವಿಹಾರಗಳ ಕುರಿತಾಗಿಯೇ ಪ್ರಶ್ನಾವಳಿಯನ್ನು ರೂಪಿಸಲಾಗಿದೆ. ಇಲ್ಲಿ ಮಾಹಿತಿಯದು ಅರ್ಧ ಪಾಲು ಆದರೆ ಮನರಂಜನೆಯದು ಇನ್ನರ್ಧ ಪಾಲು.
  • ಎಲ್ಲ 15 ಉತ್ತರಗಳೂ ನಾಲ್ಕಕ್ಷರದ ಪದಗಳಾಗಿರುತ್ತವೆ (ವಿಚಿತ್ರಾನ್ನ ರಸಪ್ರಶ್ನೆಗಳಲ್ಲಿ ಆರಂಭದಿಂದಲೂ ಭಾಗವಹಿಸಿದವರಿಗೆ ಆ ವೈಶಿಷ್ಟ್ಯ ಈಗಾಗಲೇ ಗೊತ್ತು). ಮಾತ್ರವಲ್ಲ ಹದಿನೈದು ಉತ್ತರಗಳ ಅನುಕ್ರಮ ಜೋಡಣೆಯು ಕನ್ನಡವರ್ಣಮಾಲೆಯ ಒಂದು ನಿರ್ದಿಷ್ಟ ವಿನ್ಯಾಸದ ಮೇಲೆ ರೂಪಿತವಾಗಿದೆ; ನಾಲ್ಕೈದು ಉತ್ತರಗಳಿಂದಲೇ ಆ ಜೋಡಣೆಯೇನು ಎಂದು ನಿಮಗೆ ಗೋಚರಿಸಿದರೆ ಅದು ಎಡಿಷನಲ್‌ ಕ್ಲೂ ಆಗಿ ನಿಮಗೆ ನೆರವಾಗಬಹುದು!
  • ನಿಮ್ಮ ಉತ್ತರಗಳನ್ನು ಬರಹ, ನುಡಿ, ಶ್ರೀಲಿಪಿ, ಕಂಗ್ಲೀಷ್‌, ಇಂಗ್ಲೀಷ್‌ - ನಿಮಗನುಕೂಲವಾದ ಯಾವುದೇ ವಿಧದಲ್ಲೂ ಕಳಿಸಬಹುದು.
  • ಉತ್ತರಗಳೊಂದಿಗೆ ನಿಮ್ಮ ಹೆಸರು, ಮತ್ತು ಈಗ ನೀವು ವಾಸವಾಗಿರುವ ಊರು (ದೇಶ) -ವಿವರಗಳನ್ನು ಅವಶ್ಯವಾಗಿ(ಕಡ್ಡಾಯವಾಗಿ) ತಿಳಿಸಿ.
  • ಎಲ್ಲ ಉತ್ತರಗಳನ್ನೂ ಸರಿಯಾಗಿ ಬರೆದವರ ಪಟ್ಟಿ ಮಾಡಲಾಗುವುದು ; ಸ್ಪರ್ಧೆಯ ಅಂತಿಮ ದಿನಾಂಕದ ನಂತರ ಒಂದು ಹೆಸರನ್ನು ಲಾಟರಿ ಮೂಲಕ ಎತ್ತಿ ವಿಜೇತರನ್ನು ನಿರ್ಧರಿಸಲಾಗುವುದು.
  • ಬಹುಮಾನ : 25 ಅಮೆರಿಕನ್‌ ಡಾಲರ್‌ ಅಥವಾ ತತ್ಸಮಾನ ಭಾರತೀಯ ಕರೆನ್ಸಿಯ ಮೌಲ್ಯದ ಗಿಫ್ಟ್‌ ವೋಚರ್‌ ಅಥವಾ ಗಿಫ್ಟ್‌ ಹ್ಯಾಂಪರ್‌! ಪ್ರಾಯೋಜಕರು - ಅನಾಮಧೇಯರಾಗಿ ಉಳಿಯಬಯಸಿರುವ ಒಬ್ಬ ವಿಚಿತ್ರಾನ್ನ ಬಳಗದ ಸ್ನೇಹಿತರು. ಸ್ಪರ್ಧೆಗೆ ಬರುವ ಪ್ರವೇಶಪತ್ರಗಳ ಸಂಖ್ಯೆ 100ನ್ನು ದಾಟಿದರೆ, 25 ಡಾಲರ್‌ನ ಇನ್ನೊಂದು ಬಹುಮಾನವನ್ನು ಪ್ರಾಯೋಜಿಸುವುದಾಗಿ ಪ್ರೋತ್ಸಾಹದ ಮಾತಾಡಿದ್ದಾರೆ ನಮ್ಮ ಪ್ರಾಯೋಜಕರು. ಅಂದರೆ, ನೂರಕ್ಕಿಂತ ಹೆಚ್ಚು ಮಂದಿ ಭಾಗವಹಿಸಿದರೆ ಆಗ ಇಬ್ಬರು ವಿಜೇತರ ಆಯ್ಕೆ!
  • ನಿಮ್ಮ ಉತ್ತರಗಳು ಮಂಗಳವಾರ ಏಪ್ರಿಲ್‌ 19, 2005ರ ಒಳಗೆ srivathsajoshi@yahoo.com ವಿಳಾಸಕ್ಕೆ ತಲುಪಬೇಕು.

* * *

ಪ್ರಶ್ನಾವಳಿ

ಕ್ರ.ಸಂ. ಚಿತ್ರಗಳು ಸುಳಿವು
1 ಸಿಹಿತಿಂಡಿಯಿಂದಲೇ ಆರಂಭಿಸೋಣ; ರಸಪ್ರಶ್ನೆಗಳ ಪೈಕಿ ತಮಗೆ ಪ್ರಾತಿನಿಧ್ಯ ಇಲ್ಲವೆಂದು ಉತ್ತರಕರ್ನಾಟಕ ದವರು ಗೊಣಗದಿರಲಿ ಎಂಬ ದೃಷ್ಟಿಯಿಂದ ಮೊಟ್ಟಮೊದಲ ಪ್ರಶ್ನೆ. ಗೋಕಾಕ್‌ ಎಂದೊಡನೆ ವರದಿ, ಕನ್ನಡಕ್ಕಾಗಿ ಹೋರಾಟ, ಒಬ್ಬ ಜ್ಞಾನಪೀಠಿ -ಇಷ್ಟು ಮಾತ್ರವಲ್ಲದೆ ಇದೂ ನೆನಪಾಗಿ ಬಾಯಲ್ಲಿ ನೀರೂರಬೇಕಲ್ಲ?
2 ಎಂ. ಸುಬ್ರಹ್ಮಣ್ಯರಾಜೆ ಅರಸ್‌ ಎಂಬುದಾಗಿ ಇವರ ನಿಜನಾಮಧೇಯ. ಇವರು ಬರೆದ ಸರ್ವಮಂಗಳ, ಉಯ್ಯಾಲೆ ಮೊದಲಾದ ಕಾದಂಬರಿಗಳು ಚಲನಚಿತ್ರಗಳಾಗಿವೆ. ಕನ್ನಡದ ಈ ಶ್ರೇಷ್ಠ ಸಾಹಿತಿಯ ಕಾವ್ಯನಾಮವೇನು?
3 ಕೊಡೆ ಹಿಡಿದ ಗಂಡ ಎಂದು ಟ್ರಾನ್ಸ್‌ಲೇಟ್‌ ಮಾಡಿಕೊಳ್ಳೋಣವೇ ಈ ಶಿವಾಜಿಯಂಥವನನ್ನು? ಅಥವಾ ಮದುವೆಚೌಲ್ಟ್ರಿಯ ಮಟ್ಟಿಗೆ ಮಾತ್ರ ಹಸ್ಬೇಂಡ್‌ ಅಂತಲೂ ತಮಾಷೆ ಮಾಡೋಣವೇ?
4 ಈ ಪ್ರಶ್ನೆಯ ಉತ್ತರವು ಅನ್ವರ್ಥವಾಗಿರಲು ಬಯಸಿರುವಂತಿದೆ. ಸ್ಟ್ರೀಟ್‌ಸರ್ಕಸ್‌ಗೆ ಏನಂತೇವೆ ಕನ್ನಡದಲ್ಲಿ ಗೊತ್ತಲ್ಲ? ಆ ಪದವೇ ಇಲ್ಲಿ ಆಚೀಚಾಗಿ ಸರ್ಕಸ್‌ ಮಾಡುತ್ತಿದೆ.
5 ಕಾಗೆಯಾಂದು ಹಾರಿ ಬಂದು ಮರದ ಮೇಲೆ ಕುಳಿತುಕೊಂಡು ಬಾಯಾಳಿದ್ದ ಮಾಂಸವನ್ನು ತಿನ್ನತೊಡಗಿತು. ಪದ್ಯದಲ್ಲಿ ಆನಂತರದ ಸಾಲಿನಲ್ಲಿ ಆಗ ಅಲ್ಲಿಗೆ ಯಾರು ಬಂದರು? ಬರೀ ಯಾರು ಅನ್ನೋದು ಮುಖ್ಯವಲ್ಲ, ಅವರು ಎಂಥವರು ಅನ್ನೋದೂ ತಿಳಿದಿರಲಿ!
6 ‘ರೀ ಮಗು ಅಳ್ತಾ ಇದೆ, ಸ್ವಲ್ಪ _ _ _ _ ಚೇಂಜ್‌ ಮಾಡ್ತೀರೇನ್ರೀ...’ ಅಂತ ಹೆಂಡತಿ ರಾಗ ಎಳೆದರೆ, ಮಗು ಅಳುವುದನ್ನು ನಿಲ್ಲಿಸದು ಎಂಬ ಕಾರಣಕ್ಕಿಂತಲೂ, ಹೆಂಡತಿ ಸಿಟ್ಟಾಗಬಹುದೆಂದು ಹೆದರಿ ಮಗುವಿಗೆ ‘ಹಗ್ಗಿಸ್‌’ ಬ್ರಾಂಡ್‌ನದೊಂದನ್ನು ತೊಡಿಸುತ್ತಾನೆ, ದಯಾಪರನಾದ ಪತಿಮಹಾಶಯ!
7 ಗಿರೀಶ್‌ ಕಾರ್ನಾಡ್‌ ಬರೆದ ಈ ನಾಟಕಕೃತಿಯಲ್ಲಿ ಹದಿನೆರಡನೆ ಶತಮಾನದಲ್ಲಿನ ವೀರಶೈವ ಮತಪ್ರಭಾವ, ಬಸವತತ್ವ ಇತ್ಯಾದಿಯೆಲ್ಲ ಧ್ವನಿತವಾಗಿವೆ. ಕಾರ್ನಾಡರ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ಅಕಾಡೆಮಿಗಳ ಪುರಸ್ಕಾರವೂ ಸಿಕ್ಕಿದೆ. ಉತ್ತರ ಹೊಳೆಯದಿದ್ದರೆ ‘ತಲೆ’ ಕೆರೆದುಕೊಂಡು ಯೋಚಿಸಿ:-)
8 ಇಂಗ್ಲಿಷಲ್ಲಿ ‘ಗ್ಲಿಟರಿಂಗ್‌’ ಅನ್ನುತ್ತಾರಲ್ಲ - ವಜ್ರಖಚಿತ ಚಿನ್ನದ ಒಡವೆಗಳಿರಲಿ ಅಥವಾ ಸಬೀನಾ ಪೌಡರ್‌ ಬಳಸಿ ತೊಳೆದ ಸ್ಟೀಲ್‌ ಬೋಗುಣಿಯೇ ಇರಲಿ, ಆ ಹೊಳಪನ್ನು ಬಣ್ಣಿಸೋದಕ್ಕೆ ಕನ್ನಡದಲ್ಲೊಂದು ಜೋಡಿಪದವಿದೆ, ಏನದು?
9 ಪ್ರಶ್ನೆ 5ರ ಉತ್ತರ ನಿಮಗೆ ಸುಲಭದಲ್ಲಿ ಗೊತ್ತಾಗಿದೆಯೆಂದುಕೊಳ್ಳುತ್ತೇನೆ. ಪಂಚತಂತ್ರ ಹಿತೋಪದೇಶ ಕಥೆಗಳಲ್ಲಿ ಆ ಪ್ರಾಣಿಗೆ ಇದೊಂದು ಹೆಸರಿತ್ತು. ಪದಬಂಧ ಮಾದರಿಯಲ್ಲಿ ಸುಳಿವು ಕೊಡಬೇಕಿದ್ದರೆ ‘ಹಿಂದಿನಿಂದ ತೆರೆವ ಬಾಗಿಲಿನಲ್ಲಿ ಮನಸ್ಸು’.
10 ಮೂಕ ಹಕ್ಕಿಯು ಹಾಡುತಿದೆ... ಭಾಷೆಗು ನಿಲುಕದ ಭಾವಗೀತೆಯ ಬಾರಿ ಬಾರಿ ಹಾಡುತಿದೆ... ಯಾವ ಚಲನಚಿತ್ರದಲ್ಲಿ?
11 ಆರ್‌.ಕೆ.ಶ್ರೀಕಂಠನ್‌ ಅವರ ಹಾಡುಗಾರಿಕೆಯ ಕಾರ್ಯಕ್ರಮವಿದ್ದರೂ ಅವರ ಜತೆ ವೇದಿಕೆಯನ್ನಲಂಕರಿಸುವ ಸಹಕಲಾವಿದರು ನುಡಿಸುವುದೇನನ್ನು? ಅದಕ್ಕೊಂದು ಸಾಮಾನ್ಯಪದವನ್ನು ಕನ್ನಡದಲ್ಲೇ ಹೇಳುತ್ತೀರಾ?
12 ಪರೀಕ್ಷೆ ಬರೆದ ವಿದ್ಯಾರ್ಥಿ, ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ, ಎಕ್ಸ್‌-ರೇ ತೆಗೆಸಿದ ರೋಗಿ, ವಧುಪರೀಕ್ಷೆ ಏರ್ಪಡಿಸಿದ ಕಪಿ (ಕನ್ಯಾ ಪಿತೃ), ಅಷ್ಟೇಕೆ - ರಸಪ್ರಶ್ನೆ ಸ್ಪರ್ಧೆಯಲ್ಲಿ ಇದೀಗ ಭಾಗವಹಿಸಿದ ನೀವು - ಈ ಎಲ್ಲರ ನಿರೀಕ್ಷೆ ಯಾವುದರದು?
13 ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ರಾಜಗಾಂಭೀರ್ಯದಿಂದ ಹೊತ್ತುನಡೆವ ಗಜರಾಜ; ದ್ರೋಣನ ಉತ್ತರಾಧಿಕಾರಿ.
14 ಚಾರುಕೀರ್ತಿ, ಲಲಿತಕೀರ್ತಿ ಮುಂತಾದ ಜೈನ ನೇತಾರರ ಉಪಾಧಿ. ಮೊದಲೆಲ್ಲ ಉತ್ತರಭಾರತದ ಜೈನ, ಬೌದ್ಧ ಪಂಗಡಗಳಲ್ಲೂ ಈ ’ಪಟ್ಟ’ ಇದ್ದರೂ ಈಗ ಕರ್ನಾಟಕದ ಶ್ರವಣಬೆಳಗೊಳ, ಮೂಡಬಿದರೆ ಮತ್ತು ಹೊಂಬುಚ (ಹುಂಚ) ಜೈನಮಠ ಪ್ರಧಾನರನ್ನಷ್ಟೇ ಈ ಉಪಾಧಿಯಿಂದ ಗೌರವಿಸಲಾಗುತ್ತದೆ.
15 ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಹಿಂದುಸ್ಥಾನಿ ಶೈಲಿಯಲ್ಲೂ ಇರುವ ಒಂದು ರಾಗ. ಅಂಥದ್ದು ಅನೇಕವಿವೆ ಆದ್ದರಿಂದ ಇನ್ನೊಂದು ಸುಳಿವೆಂದರೆ ಧಾರವಾಡ ವಿವಿಧಭಾರತಿಯಲ್ಲಿ ಬುಧ-ಶನಿ-ರವಿವಾರಗಳಂದು ರಾತ್ರೆ ಪ್ರಸಾರವಾಗುತ್ತಿದ್ದ ‘ನಿಮ್ಮ ಮೆಚ್ಚಿನ ಕನ್ನಡಚಿತ್ರಗೀತೆಗಳ ಕಾರ್ಯಕ್ರಮ’ದ ಶೀರ್ಷಿಕೆ.

* * *

ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮಗನುಕೂಲವಾಗುವಂತೆ ವೆಬ್‌ಫೋರ್ಮ್‌ ಮೂಲಕ ಪ್ರವೇಶಪತ್ರವನ್ನು ಸಲ್ಲಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆದರೆ ನೆನಪಿಡಿ, ಈ ವಿಧಾನವು ನಿಮ್ಮ ಕಂಪ್ಯೂಟರ್‌ನಲ್ಲಿನ ಬ್ರೌಸರ್‌ ಮತ್ತು ಇಮೈಲ್‌ ಸೆಟ್ಟಿಂಗ್‌ಗಳನ್ನು ಅವಲಂಬಿಸಿರುತ್ತದೆ. ಪ್ರವೇಶಪತ್ರವನ್ನು ವೆಬ್‌ಫೋರ್ಮ್‌ ಅಥವಾ ಮಾಮೂಲಿ ಇಮೈಲ್‌ ಹೇಗೇ ಕಳಿಸಿದರೂ ಸ್ವೀಕೃತಿಯ ಬಗ್ಗೆ ಇಮೈಲ್‌ ಬರುವುದನ್ನು ಖಾತರಿಪಡಿಸಿಕೊಳ್ಳಿ (ಇದು ಅಟೊಮೆಟಿಕ್‌ ಅಲ್ಲ, ಮ್ಯಾನುವಲ್‌. ಆದ್ದರಿಂದ ಕೆಲವಾರು ಗಂಟೆಗಳ ಕಾಲಾವಕಾಶ ಕೊಡಿ)

ಉತ್ತರಗಳನ್ನು ಬರೆಯಲು ಶುರು ಮಾಡುವ ಮೊದಲು ಯಾವುದಕ್ಕೂ, ಬ್ರೌಸರ್‌ನ ಇನ್ನೊಂದು ಪ್ರತ್ಯೇಕ ವಿಂಡೋದಲ್ಲಿ ಗೂಗಲ್‌ ಸಹ ತೆರೆದದ್ದಿರಲಿ, ಅಲ್ಲವೇ?

ಈ ರಸಪ್ರಶ್ನೆ ನಿಮಗೆ ಮನರಂಜನೆ ಕೊಡುತ್ತದೆಯೆಂಬ ಆಶಯದೊಂದಿಗೆ ಮತ್ತು ಯುಗಾದಿ ಹಬ್ಬ ಎಲ್ಲರಿಗೂ ಸುಖಸಂತಸವನ್ನೀಯಲಿ, ಪಾರ್ಥಿವ ಸಂವತ್ಸರವು ಪ್ರೀತಿ-ಸಂತೃಪ್ತಿಗಳ ಸಂಕೇತವಾಗಲಿ ಎಂಬ ಶುಭ ಹಾರೈಕೆ ಗಳೊಂದಿಗೆ, - srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more