ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತ್ರೆ ಮರುಳು - ಜೋಳದ ಅರಳು

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಕಳೆದ ವಾರವಿಡೀ ನಮ್ಮ ಆಫೀಸ್‌ ವತಿಯಿಂದ ಒಂದು ಕಾರ್ಪೊರೇಟ್‌ ಮೆನೇಜ್‌ಮೆಂಟ್‌ ಟ್ರೈನಿಂಗ್‌ನಲ್ಲಿ ಭಾಗವಹಿಸಲಿಕ್ಕಿತ್ತು. ವಾಷಿಂಗ್ಟನ್‌ನಲ್ಲೇ ಟ್ರೈನಿಂಗ್‌. ಬೇರೆಬೇರೆ ಕಂಪೆನಿಗಳಿಂದ ಬಂದಿದ್ದ ನಾವು ಒಟ್ಟು 15 ಜನ ಟ್ರೈನಿಂಗಾರ್ಥಿಗಳು ಇದ್ದೆವು. ನಮ್ಮ ಟ್ರೈನರ್‌ (ಜೇಮ್ಸ್‌ ಹೆನರ್‌ ಎಂದು ಹೆಸರು) ಬಹಳ ಲವಲವಿಕೆಯ ಮನುಷ್ಯ. ಟ್ರೈನಿಂಗ್‌ನಲ್ಲಿ ಒಂದು ದಿನ ಸಂಭಾಷಣಾ ತಂತ್ರ/ಕೌಶಲ್ಯದ ಬಗ್ಗೆ ಒಂದು ಪುಟ್ಟ ವಿಡಿಯಾ ಪ್ರದರ್ಶನ ಕೂಡ ಇತ್ತು. ವಿಡಿಯಾ ದರ್ಶನ ಪರಿಣಾಮಕಾರಿಯಾಗಬೇಕಾದರೆ ಅದು ಚಿತ್ರಮಂದಿರದಲ್ಲಿ ಕುಳಿತು ಸಿನೆಮಾ ವೀಕ್ಷಿಸಿದಂತಿರಬೇಕು, ಕೈಯಲ್ಲಿ ಪಾಪ್‌ಕಾರ್ನ್‌ ಕೂಡ ಇರಬೇಕು ಎಂದು ಮೊದಲೇ ಯೋಜಿಸಿ, ವಿಡಿಯಾ ಆರಂಭವಾಗುತ್ತಿದ್ದಂತೆಯೇ ಟ್ರೈನಿಂಗ್‌ ಕ್ಲಾಸ್‌ರೂಮಲ್ಲೇ ಮೈಕ್ರೊವೇವ್‌ನಲ್ಲಿ ಪಾಪ್‌ಕಾರ್ನ್‌ ಸಿಡಿಸಿ ಬಿಸಿಬಿಸಿ ಪಾಪ್‌ಕಾರ್ನ್‌ ಮೆಲ್ಲುತ್ತ ವಿಡಿಯಾ ನೋಡುವಂತೆ ನಮಗೆಲ್ಲ ಆದೇಶಿಸಿದ್ದರು! ಸಂತೋಷದಿಂದ ಹಾಗೇ ಮಾಡಿದ್ದೆವು ನಾವೆಲ್ಲ!

ಯಾಕೆ ಈ ಮೇಲಿನ ಸಂದರ್ಭವನ್ನು ಉಲ್ಲೇಖಿಸಿದೆನೆಂದರೆ ಇಲ್ಲಿ ಅಮೆರಿಕದಲ್ಲಿ ಸಿನೆಮಾವೀಕ್ಷಣೆ ಮತ್ತು ಪಾಪ್‌ಕಾರ್ನ್‌ ಅದೆಷ್ಟು ಒಂದಕ್ಕೊಂದು ಜೋಡಿಯಾಗಿವೆ ಎಂಬುದನ್ನು ಪುನರುಚ್ಚರಿಸಲು. ಸಿನೆಮಾ ಅಷ್ಟೇ ಏಕೆ - ಸರ್ಕಸ್‌, ಫುಟ್‌ಬಾಲ್‌ಗೇಮ್‌, ಕಂಟ್ರಿಫೇರ್‌... ಎಲ್ಲೆಲ್ಲ ಜನರ ಜಾತ್ರೆ ಸೇರುತ್ತದೊ ಅಲ್ಲಿ ಪಾಪ್‌ಕಾರ್ನ್‌ ಅಂಗಡಿಗಳು ಪ್ರತ್ಯಕ್ಷವಾಗಿರುತ್ತವೆ!

ಬನ್ನಿ, ಪಾಪ್‌ಕಾರ್ನ್‌ ಬಗ್ಗೆ ಒಂದಿಷ್ಟು ಟಾಪ್‌ಲೆವೆಲ್‌ ಮಾಹಿತಿ ಈಸಲದ ವಿಚಿತ್ರಾನ್ನದಲ್ಲಿ. ಈ ಪಾಪ್‌ಕಾರ್ನನ್ನು ಬಾಯಲ್ಲಿ ಕರಗಿಸುತ್ತ ಇದನ್ನು ಓದಿ ಮುಗಿಸಿ.

ಆದಿಮಾನವನ ಗುಹೆಯಿಂದ ಆಧುನಿಕ ಐಮ್ಯಾಕ್ಸ್‌ ಥಿಯೇಟರ್‌ವರೆಗೆ...

ಹಾಗೆ ನೋಡಿದರೆ ಪಾಪ್‌ಕಾರ್ನ್‌ ತಿನ್ನುವ ಚಟ ಆರಂಭವಾದದ್ದು ಚಲನಚಿತ್ರವೆಂಬ ಹೊಸ ಮನರಂಜನೆ ಆರಂಭವಾದಾಗೇನೂ ಅಲ್ಲ. ಶತಶತಮಾನಗಳ ಹಿಂದಿನಿಂದಲೇ ಮೆಕ್ಕೆಜೋಳದ ಧಾನ್ಯಗಳನ್ನು ಸಿಡಿಸಿ ಅರಳು ಮಾಡಿ ತಿನ್ನುವುದು ಒಂದು ಆರೋಗ್ಯಕರ ‘ಸ್ನ್ಯಾಕ್ಸ್‌’ ಎಂದು ಪರಿಗಣಿಸಲ್ಪಟ್ಟಿತ್ತು. ಎಷ್ಟು ಹಳೇಕಾಲದಿಂದ ಅಂದರೆ ಗುಹೆಗಳಲ್ಲಿ ವಾಸಿಸುತ್ತಿದ್ದ ಆದಿಮಾನವ ಬೆಂಕಿಯನ್ನು ಕಂಡುಹಿಡಿದ ಲಾಗಾಯ್ತು ಎಂದರೂ ತಪ್ಪಾಗಲಾರದು. ಏಕೆಂದರೆ ಮೆಕ್ಸಿಕೊ, ಪೆರು ಮುಂತಾದ ದೇಶಗಳಲ್ಲಿ ಉತ್ಖನನ ನಡೆಸಿದಾಗ ಗೋಚರಿಸಿರುವ ಪ್ರಾಚೀನ ನಾಗರಿಕತೆಯ ಪಳೆಯುಳಿಕೆಗಳಲ್ಲಿ ಸಾವಿರಾರು ವರ್ಷಗಳ ಹಿಂದಿನ ಮೆಕ್ಕೆಜೋಳದ ಗೊಂಚಲುಗಳೂ ಗುಹೆಗಳ ನಿರ್ವಾತ ಪ್ರದೇಶದಲ್ಲಿ ಫ್ರೆಷ್‌ ಆಗಿ ಉಳಿದಿರುವ ಜೋಳದ ಅರಳುಗಳೂ ದೊರೆತಿವೆಯಂತೆ! ಹಾಗಾಗಿ ಪಾಪ್‌ಕಾರ್ನನ್ನು ಜಗತ್ತಿನ ಅತ್ಯಂತ ಪ್ರಾಚೀನ ಸ್ನ್ಯಾಕ್ಸ್‌ ಎಂದು ಪರಿಗಣಿಸಬಹುದು. ಅಂಥಾದ್ದು ಈಗಿನ ಹೈಟೆಕ್‌ ಯುಗದ ಐಮ್ಯಾಕ್ಸ್‌ ಥಿಯೇಟರ್‌ಗಳಲ್ಲಿ ಸಿನೆಮಾ ಪ್ರದರ್ಶನ ವೇಳೆಯ ಸ್ನ್ಯಾಕ್ಸ್‌ ಆಗಿಯೂ ಮುಂದುವರೆದಿದೆ ಎಂದರೆ ಅದು ಪಾಪ್‌ಕಾರ್ನ್‌ ಅಷ್ಟೇ ಅಲ್ಲ ‘ಟಾಪ್‌’ಕಾರ್ನ್‌ ಎನಿಸಿಕೊಳ್ಳಲು ಯೋಗ್ಯ!

ಮೈಕ್ರೊವೇವ್‌ ಒವನ್‌ ಜನಕ - ಪಾಪ್‌ಕಾರ್ನ್‌!

ಇದು ಇನ್ನೂ ಬಹಳ ಆಸಕ್ತಿಕರ ಸಂಗತಿ. 1946ರಲ್ಲಿ ಡಾ। ಪರ್ಸಿ ಸ್ಪೆನ್ಸರ್‌ ಎಂಬ ವಿಜ್ಞಾನಿಯು ಮಾಗ್ನೆಟ್ರಾನ್‌ ಎಂಬ ಒಂದು ವಿಕಿರಣ ನಿರ್ವಾತ ಯಂತ್ರದ ಆವಿಷ್ಕಾರದ ಪ್ರಯತ್ನದಲ್ಲಿ ತೊಡಗಿದ್ದ. ಪ್ರಯೋಗಶಾಲೆಯಲ್ಲಿ ಮಾಗ್ನೆಟ್ರಾನ್‌ನ ಆಸುಪಾಸಿನಲ್ಲಿದ್ದಾಗೆಲ್ಲ ಅವನ ಜೇಬಿನಲ್ಲಿದ್ದ ಚಾಕೊಲೆಟ್‌ ಕ್ಯಾಂಡಿ ಇತ್ಯಾದಿ ಕರಗಿಹೋಗುವುದನ್ನು ಗಮನಿಸಿದ ಆತ ಒಮ್ಮೆ ಕುತೂಹಲದಿಂದ ಜೋಳದ ಕೆಲ ಧಾನ್ಯಗಳನ್ನು ಮೆಗ್ನಾಟ್ರಾನ್‌ನಲ್ಲಿಟ್ಟು ಸ್ವಿಚ್‌ ಅದುಮಿದ. ಅರೆಕ್ಷಣದಲ್ಲಿ ಅವು ಅರಳುಗಳಾಗಿ ಸಿಡಿಯತೊಡಗಿದುವು. ಮತ್ತೆ ಬೇರೆಬೇರೆ ಆಹಾರಪದಾರ್ಥಗಳನ್ನೂ ಅದರಲ್ಲಿಟ್ಟು ಪರೀಕ್ಷಿಸಿದ (ಕೋಳಿಮೊಟ್ಟೆಯ ಅವನ ಪ್ರಯೋಗ ಮಾತ್ರ ದೊಡ್ಡ ಆಸ್ಫೋಟದಲ್ಲಿ ಕೊನೆಗೊಂಡಿತಂತೆ). ಕಡೆಗೆ ತನ್ನ ಮೆಗ್ನಾಟ್ರಾನ್‌ ಯಂತ್ರವನ್ನೇ ಮಾರ್ಪಾಟುಗೊಳಿಸಿ ‘ಮೈಕ್ರೊವೇವ್‌ ಒವನ್‌’ ನಿರ್ಮಿಸಿದ ಡಾ। ಸ್ಪೆನ್ಸರ್‌ನ ಆ ಆವಿಷ್ಕಾರ, ಇವತ್ತಿನ ಧಾವಂತಯುಗದ ಜೀವನಕ್ಕೆ ನಿಜವಾಗಿಯೂ ಒಂದು ಅಮೋಘ ಕೊಡುಗೆ.

ಪಾಪ್‌ಕಾರ್ನ್‌ ಸಿಡಿಯುವುದು ಯಾಕೆ, ಹೇಗೆ?

ಜೋಳದ ಧಾನ್ಯವೂ ಮಿಕ್ಕೆಲ್ಲ ಬೀಜಗಳಂತೆಯೇ. ಒಳಗೆ ಭ್ರೂಣ (ಮೊಳೆತು ಸಸಿಯಾಗಬಹುದಾದದ್ದು), ಅದರ ಸುತ್ತಲೂ ತೆಳುವಾದ ಜೀವದ್ರವ್ಯ ಮತ್ತೆ ಹೊರಗಿನಿಂದ ರಕ್ಷಣೆಯ ಕವಚ. ಇಂಥ ಬೀಜಗಳನ್ನು ಸುಮಾರು 400 ಅಥವಾ 450 ಡಿಗ್ರೀ ಫಾರೆನ್‌ಹೀಟ್‌ ಶಾಖಕ್ಕೆ ಗುರಿಪಡಿಸಿದಾಗ ಒಳಗಿನ ದ್ರವ್ಯಾಂಶ ಆವಿಯಾಗಿ ಕವಚವನ್ನು ಸ್ಫೋಟಿಸಿ ಬೀಜವಿದ್ದದ್ದು ಅರಳಾಗುತ್ತದೆ. ನಾವು ಬತ್ತದಿಂದ ಅರಳು ಮಾಡುವುದೂ ಇದೇ ರೀತಿ ತಾನೆ? ಹಳ್ಳಿಗಳಲ್ಲೆಲ್ಲ ಆವೆಮಣ್ಣಿನ ದೊಡ್ಡಮಡಿಕೆಯನ್ನು ಉದ್ದಕ್ಕೆ ಸೀಳಿ ಆ ಅರ್ಧಭಾಗವನ್ನು ಒಲೆಯ ಶಾಖದ ಮೇಲಿಟ್ಟು ಮರಳು ಮತ್ತು ಬತ್ತವನ್ನು ಅದರಲ್ಲಿ ಹಾಕಿ ಅರಳು ಮಾಡುತ್ತಿದ್ದ ಕ್ರಮ ನಿಮ್ಮಲ್ಲಿ ತುಂಬ ಮಂದಿಗೆ ನೆನಪಿರಬಹುದು. ಪಾಪ್‌ಕಾರ್ನ್‌ ತಯಾರಿಕೆಯೂ ಮೊದಲೆಲ್ಲ ಅಮೆರಿಕದಲ್ಲೂ ಈರೀತಿ ಮಣ್ಣಿನ ಮಡಕೆಯ ಶಾಖದಿಂದಲೇ ನಡೆಯುತ್ತಿತ್ತು. ಈಗ ಅತ್ಯಾಧುನಿಕ ಯಂತ್ರಗಳ ಬಳಕೆಯಾಗುತ್ತದೆ.

ಹಳೇ ವಿಧಾನದಲ್ಲಿ ಅಮೆರಿಕನ್‌ ಪಾಪ್‌ಕಾರ್ನ್‌ ಎಂದಾಗ ನೆನಪಾಯಿತು. ಇಲ್ಲಿ ನಮ್ಮ ಮನೆಗೆ ಬಹಳ ಹತ್ತಿರದಲ್ಲೇ ಇರುವ ಗ್ರೇಟ್‌ ಸೆನೆಕಾಪಾರ್ಕ್‌ ಅರಣ್ಯಪ್ರದೇಶದಲ್ಲಿ ಪ್ರತಿವರ್ಷ ಸಪ್ಟೆಂಬರ್‌ನಲ್ಲಿ ಎರಡು ವಾರಾಂತ್ಯಗಳಲ್ಲಿ ‘ಷೇಕರ್‌ ಫೆಸ್ಟಿವಲ್‌’ ಎಂಬ ಒಂದು ‘ಕಾಡಿನ ಜಾತ್ರೆ’ ನಡೆಯುತ್ತದೆ. ಆ ಜಾತ್ರೆಗೆ ನಾವೆಲ್ಲ ಹೋಗುತ್ತೇವೆ, ಚೆನ್ನಾಗಿರುತ್ತದೆ. ಅಮೆರಿಕದ ಗ್ರಾಮೀಣಪ್ರದೇಶಗಳಿಂದ ಬಂದ ಗೃಹೋದ್ಯಮದ ಸರಕುಗಳ, ಕರಕುಶಲ ವಸ್ತುಗಳ ಪ್ರದರ್ಶನ- ಮಾರಾಟ ಇರುತ್ತದೆ. ಜತೆಯಲ್ಲೇ ‘ಸಾಂಪ್ರದಾಯಿಕ ವಿಧಾನ’ದಲ್ಲಿ ಸ್ಥಳದಲ್ಲೇ ಸುಟ್ಟುಕೊಟ್ಟ ರುಚಿರುಚಿಯಾದ ಗರಿಗರಿಯಾದ ಬಿಸಿಬಿಸಿಯಾದ ಪಾಪ್‌ಕಾರ್ನ್‌ ಸಹ ಆ ಕಾಡಿನಜಾತ್ರೆಯ ಪ್ರಮುಖ ಆಕರ್ಷಣೆ. ನನ್ನ ಮಗನಿಗಂತೂ ತನ್ನ ಎತ್ತರಕ್ಕಿಂತಲೂ ಹೆಚ್ಚು ಉದ್ದದ ಪ್ಯಾಕೆಟ್‌ ತುಂಬ ಪಾಪ್‌ಕಾರ್ನ್‌ ಕೊಳ್ಳುವುದೆಂದರೆ ಭಾರೀ ಖುಶಿ (ಆ ಪ್ಯಾಕೆಟ್‌ ನಾವು ಮನೆಯವರೆಲ್ಲ ಸೇರಿ ತಿಂದು ಮುಗಿಸಲು ಮೂರ್ನಾಲ್ಕು ದಿನ ಬೇಕು)!

ಅಮೆರಿಕನ್ನರ ಪಾಪ್‌ಕಾರ್ನ್‌ ಕ್ರೇಜ್‌

ಕೊಲಂಬಸ್ಸನು ಅಮೆರಿಕ ಖಂಡವನ್ನು ಕಂಡುಹಿಡಿಯುವ ಮೊದಲು ಚೀನಾ, ಭಾರತ, ಸುಮಾತ್ರ ಮೊದಲಾದ ಪ್ರದೇಶಗಳಲ್ಲಿ ಜೋಳದ ಅರಳು ತಿನ್ನುವ ಕ್ರಮ ರೂಢಿಯಲ್ಲಿತ್ತು; ಕೊಲಂಬಸ್‌ ಅಮೆರಿಕೆಗೆ ಬಂದಾಗ ಇಲ್ಲಿನ ಮೂಲನಿವಾಸಿಗಳೂ ಪಾಪ್‌ಕಾರ್ನ್‌ ಪ್ರಿಯರೇ ಎನ್ನುವ ಸಂಗತಿ ಗೊತ್ತಾದದ್ದು. ಅವರು ಕೊಲಂಬಸ್ಸನ ಸಹನಾವಿಕರಿಗೆ ಪಾಪ್‌ಕಾರ್ನ್‌ ಮಾರಲೂ ಮುಂದಾಗಿದ್ದರಂತೆ. ಆಮೇಲೆ ಆಧುನಿಕತೆ ಹೆಚ್ಚಿದಂತೆಲ್ಲ ಪಾಪ್‌ಕಾರ್ನ್‌ ಜನಪ್ರಿಯತೆ ಹೆಚ್ಚಾಯಿತು. ಪಾಪ್‌ಕಾರ್ನ್‌ ಗಾಡಿಗಳು (ನಮ್ಮಲ್ಲಿ ಭೇಲ್‌ಪುರಿ ಅಥವಾ ಮಂಡಕ್ಕಿ ಗಾಡಿಗಳು ಇರುವಂತೆ) ಬೀದಿವ್ಯಾಪಾರ ಅನಿಸಿಕೊಂಡವು. ಪಾರ್ಕ್‌ಗಳಲ್ಲಿ, ಸಂತೆಗಳಲ್ಲಿ, ಜಾತ್ರೆಗಳಲ್ಲಿ ಎಲ್ಲ ಕಡೆ ಪಾಪ್‌ಕಾರ್ನ್‌. ಎರಡನೆ ಪ್ರಪಂಚ ಯುದ್ಧದ ಸಮಯದಲ್ಲಿ ಅಮೆರಿಕದಲ್ಲಿ ಸಕ್ಕರೆ ಸರಬರಾಜಿಗೆ ರೇಷನ್‌ ಆರಂಭವಾದಾಗ ಜನ ಪಾಪ್‌ಕಾರ್ನ್‌ ತಿನ್ನುವುದು ಸಿಕ್ಕಾಪಟ್ಟೆ ಹೆಚ್ಚಾಯಿತಂತೆ. ಸಿನೆಮಾವೀಕ್ಷಣೆಗೆ ಜತೆಗೆ ಪಾಪ್‌ಕಾರ್ನೂ ಇರಬೇಕು ಎಂಬುದು ಒಂದು ನಮೂನೆಯಲ್ಲಿ ಅಲಿಖಿತ ಪದ್ಧತಿಯೇ ಆಗಿಬಿಟ್ಟಿತು.

1950ರ ದಶಕದಲ್ಲಿ ಟೆಲಿವಿಷನ್‌ನಿಂದಾಗಿ ಚಲನಚಿತ್ರ ಉದ್ಯಮಕ್ಕೆ ಮಾತ್ರವಲ್ಲ ಅದರ ಸಂಗಾತಿ ಪಾಪ್‌ಕಾರ್ನ್‌ಗೂ ಪೆಟ್ಟುಬಿದ್ದಿತ್ತು. ಆದರೆ ಮೈಕ್ರೊವೇವ್‌ನ ಆವಿಷ್ಕಾರ ಪಾಪ್‌ಕಾರ್ನ್‌ಗೆ ‘ಮನೆಯಲ್ಲೂ ಮಾಡಿತಿನ್ನಬಹುದಾದ ಸುಲಭ ಸ್ನ್ಯಾಕ್ಸ್‌’ ಪಟ್ಟ ಕೊಡುವುದಕ್ಕೆ ಸಹಕಾರಿಯಾಯ್ತು. ಈಗ ಇಡೀ ಅಮೆರಿಕದಲ್ಲಿ ವರ್ಷಕ್ಕೆ ಸುಮಾರು ಒಂದು ಬಿಲಿಯನ್‌ ಪೌಂಡ್‌ಗಿಂತಲೂ ಹೆಚ್ಚು ಪಾಪ್‌ಕಾರ್ನ್‌ ಭಕ್ಷಣೆ ಆಗುತ್ತದೆ! ವರ್ಷವೊಂದಕ್ಕೆ 250 ಮಿಲಿಯನ್‌ ಡಾಲರ್‌ಗಳಷ್ಟು ಬೆಲೆಯ ‘ಮೈಕ್ರೊವೇವೆಬಲ್‌ ಪಾಪ್‌ಕರ್ನ್‌’ ಅಮೆರಿಕದಲ್ಲಿ ಮಾರಾಟವಾಗುತ್ತದೆ. ನೆಬ್ರಾಸ್ಕಾ, ಇಂಡಿಯಾನಾ ಮೊದಲಾದ ಸಂಸ್ಥಾನಗಳು ಬೆಳೆಯುವ ಜೋಳದಿಂದ ಅತ್ಯಧಿಕ ಪ್ರಮಾಣದಲ್ಲಿ ಹೊರದೇಶಗಳಿಗೂ ಪಾಪ್‌ಕಾರ್ನ್‌ ರಫ್ತಾಗುತ್ತದೆ.

ನಮ್ಮ ದೇಶದಲ್ಲಿ ಕಾಫಿ ಬೋರ್ಡ್‌, ಏಲಕ್ಕಿಬೆಳೆಗಾರರ ಬೋರ್ಡ್‌ ಇತ್ಯಾದಿ ಇರುವಂತೆ ಅಮೆರಿಕದಲ್ಲಿ ಪಾಪ್‌ಕಾರ್ನ್‌ ಬೋರ್ಡ್‌ ಎಂಬ ಲಾಭರಹಿತ ಸಂಸ್ಥೆಯೇ ಇದೆ, ಪಾಪ್‌ಕಾರ್ನ್‌ ಉದ್ಯಮಿಗಳ ಹಿತಾಸಕ್ತಿ ರಕ್ಷಣೆಗಾಗಿ. ಇನ್ನೊಂದು ಸ್ವಾರಸ್ಯದ ವಿಷಯವೆಂದರೆ ಪಾಪ್‌ಕಾರ್ನ್‌ ಮತ್ತು ಅದರ ತಯಾರಿ/ಮಾರಾಟದ ಯಂತ್ರಗಳು, ಬಂಡಿಗಳು ಇತ್ಯಾದಿಯ ಇತಿಹಾಸವನ್ನು ಪ್ರದರ್ಶಿಸುವ ಪ್ರಪಂಚದ ಏಕೈಕ ‘ಪಾಪ್‌ಕಾರ್ನ್‌ ಮ್ಯೂಸಿಯಂ’ ಸಹ ಅಮೆರಿಕದ ಒಹಯಾ ಸಂಸ್ಥಾನದ ಮೇರಿಯನ್‌ ಎಂಬ ಪಟ್ಟಣದಲ್ಲಿದೆ! ಅಮೆರಿಕದಲ್ಲಿ ಪ್ರತಿವರ್ಷ ಜನವರಿ 19 ‘ರಾಷ್ಟ್ರೀಯ ಪಾಪ್‌ಕಾರ್ನ್‌ ದಿನ’ವಾಗಿ ಆಚರಿಸಲ್ಪಟ್ಟರೆ ಹೆಚ್ಚಾಗಿ ಈಗಿನ ಅಕ್ಟೋಬರ್‌ ತಿಂಗಳು (ಇನ್ನೇನು ಚಳಿಗಾಲ ಶುರುವಾಗುವುದೆನ್ನುವಾಗ) ಪಾಪ್‌ಕಾರ್ನ್‌ ಸ್ಪೆಷಲ್‌ ತಿಂಗಳಾಗುತ್ತದೆ.

ಕಡಿಮೆ ಕಾಲೊರಿ, ಹೆಚ್ಚು ಫೈಬರ್‌, ಸಾಕಷ್ಟು ಕಾರ್ಬೊಹೈಡ್ರೇಟ್ಸ್‌, ವಿಪುಲವಾಗಿ ಪ್ರೊಟೀನ್‌, ಕಬ್ಬಿಣದಂಶಗಳನ್ನು ಹೊಂದಿರುವ ಪಾಪ್‌ಕಾರ್ನ್‌ ಡಯಟ್‌ಪಂಡಿತರ ಕೆಂಗಣ್ಣಿಗೆ ಬಿದ್ದಿಲ್ಲ ಮಾತ್ರವಲ್ಲ ಡಯಾಬಿಟಿಸ್‌ ತಜ್ಞರೆಲ್ಲ ಅದನ್ನು ಬ್ರೆಡ್‌ಗೆ ಪರ್ಯಾಯವಾಗಿ ಉಪಯೋಗಿಸುವುದನ್ನು ಶಿಫಾರಿಸುತ್ತಾರೆ. ಅಮೆರಿಕನ್‌ ಕ್ಯಾನ್ಸರ್‌ ಸೊಸೈಟಿಯು ಹೊರಡಿಸಿದ ‘ಕ್ಯಾನ್ಸರ್‌ಗೆ ಯಾವುದೇ ವಿಧದಲ್ಲಿ ಮೂಲಹೇತುವಾಗದ 11 ವಸ್ತು’ಗಳ ಪಟ್ಟಿಯಲ್ಲಿ ಪಾಪ್‌ಕಾರ್ನನ್ನೂ ಸೇರಿಸಿ ಅದನ್ನು ಕೊಂಡಾಡಿದೆ.

ಭಾರತದಲ್ಲಿ ಪಾಪ್‌ಕಾರ್ನ್‌ ಸಂಸ್ಕೃತಿ ಬಹಳ ಮಂದಗತಿಯಲ್ಲೇ ಇದೆಯೇನೊ. ‘ಚಟ್ನಿ ಪಾಪ್‌ಕಾರ್ನ್‌’, ‘ಪಾಪ್‌ಕಾರ್ನ್‌ ಖಾವೊ ಮಸ್ತ್‌ ಹೊ ಜಾವೊ’ ಇತ್ಯಾದಿ ಹೆಸರುಗಳ ಬಾಲಿವುಡ್‌ ಸಿನೆಮಾಗಳು ಬಂದಿವೆಯಾದರೂ ಚಿತ್ರಮಂದಿರಗಳಲ್ಲಿನ್ನೂ ಅಮೆರಿಕದಷ್ಟು (ಕೋಕ್‌ನ ಗ್ಲಾಸ್‌ ಮತ್ತು ಪಾಪ್‌ಕಾರ್ನ್‌ನ ಬ್ಯಾಗ್‌ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಚಿತ್ರಮಂದಿರದ ಆಸನಗಳ ವಿನ್ಯಾಸ ಇತ್ಯಾದಿ) ಪಾಪ್‌ಕಾರ್ನ್‌ ಕ್ರೇಜ್‌ ಇದ್ದಹಾಗಿಲ್ಲ. ಇನ್ನೇನು, ಅದೂ ಬರುತ್ತದೆ ಸದ್ಯದಲ್ಲೇ, ಅಲ್ಲವೇ?

- [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X