• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಟ್ರಂಗಿ ಫೋನೂ ಪಟೇಲ್‌ ಬ್ರದರ್ಸೂ ಪತ್ರೊಡೆ ಎಲೆಯೂ...

By * ಶ್ರೀವತ್ಸ ಜೋಶಿ
|

ಇದೊಂದು ಕಪೋಲಕಲ್ಪಿತ ಏಕಾಂಕ ನಾಟಕದಲ್ಲಿ ಬರುವ ಟೆಲಿಫೋನ್‌ ಸಂಭಾಷಣೆಯ ಸನ್ನಿವೇಶ. ಅಂತಾರಾಷ್ಟ್ರೀಯ ದೂರವಾಣಿ ಕರೆ. ಅಮೆರಿಕದ ಪೂರ್ವಕರಾವಳಿಯಲ್ಲಿರುವ ಮಗಳು 'ಪುಟ್ರಂಗಿ" (ಅದು ಮುದ್ದಿನ ಹೆಸರು; ನಿಜನಾಮಧೇಯ ಏನು, ಪುಟ್ರಂಗಿ ಎಂಬ ಹೆಸರು ಹೇಗೆ ಬಂತು ಇತ್ಯಾದಿ ತಲೆಹರಟೆ ನನಗೆ-ನಿಮಗೆ ಅಗತ್ಯವಿಲ್ಲ:-) ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಮಂಗಳೂರಿನ ಸಮೀಪ ಒಂದು ಹಳ್ಳಿಯಲ್ಲಿರುವ ತನ್ನ ಅಮ್ಮನ ಜತೆ, ಎಂದಿನ ಪರಿಪಾಠದಂತೆ ವನ್ಸ್‌-ಎ-ವೀಕ್‌ ಮಾತಾಡಿದ್ದರಲ್ಲಿ ಒಂದು ತುಣುಕು. ನನ್ನ ಕದ್ದಾಲಿಕೆಗೆ ಇದು ಬೀಳಲು ಏಕೈಕ ಕಾರಣವೆಂದರೆ ನನ್ನ ಅತ್ಯಂತ ಫೇವರಿಟ್‌ ತಿಂಡಿ 'ಪತ್ರೊಡೆ"ಯ ವಿಷಯವನ್ನೇ ಈ ತಾಯಿ-ಮಗಳು ಮಾತಾಡಿದ್ದೇ ಹೊರತು ಮೊನ್ನೆತಾನೆ ಆಚರಿಸಲ್ಪಟ್ಟ 'ಅಮ್ಮಂದಿರ ದಿನ"ದಂತಹ ಸೆಂಟಿಮೆಂಟ್ಸ್‌ ಅಲ್ಲ !

*

'ಹಲೋ, ಅಮ್ಮಾ ನಾನು ಪುಟ್ರಂಗಿ ಅಮೆರಿಕದಿಂದ ಮಾತಾಡ್ತಿರೋದು..."

'ಹಲೋ, ಹೌ ಆರ್‌ ಯೂ ನನ್ನ ಮುದ್ದಿನಮಗಳೇ..."

'ವ್ಹಾ! ಪರವಾ ಇಲ್ವೇ... ನೀನೂ ಹೌ ಆರ್‌ ಯೂ ಅಂತ ಕೇಳುವುದಕ್ಕೆ ಬೇರೆ ಶುರು ಮಾಡಿದಿಯೇನಮ್ಮಾ..."

'ಏನು ಮಾಡುವುದು, ಅಮೆರಿಕದಲ್ಲಿನ ಮಗಳ ಜತೆ ಮಾತನಾಡುವಾಗಲಾದರೂ ನಾನೂ ಒಂದೆರಡು ಇಂಗ್ಲೀಷ್‌ ವಾಕ್ಯ ಹೇಳುವಾ ಅಂತ... ಇರ್ಲಿ, ಚೆನ್ನಾಗಿದ್ದೀಯಾ?"

'ಹಾಂ! ಎಲ್ಲ ಚೆನ್ನಾಗಿದ್ದೇವೆ. ವಿಂಟರ್‌, ಸ್ನೋಫಾಲ್‌ ಎಲ್ಲ ಮುಗಿದು ಈಗ ವೆದರ್ರೂ ಎಕ್ಸಲೆಂಟಾಗಿದೆ. ಊರಲ್ಲಿ ಸೆಕೆ ವಿಪರೀತ ಇರ್ಬಹುದು ಅಲ್ವಾ?"

'ಅಯ್ಯೋ, ಕಂಡಾಬಟ್ಟೆ ಸೆಕೆ ಮಾರಾಯ್ತಿ. ಆದರೂ ಒಂದು ವಾರದಿಂದ ಈಗ ಸ್ವಲ್ಪ ಮಳೆ ಬರುತ್ತಾ ಇದೆ. ಇನ್ನೇನು ಜೂನ್‌ನಲ್ಲಿ ಮುಂಗಾರು ಮಳೆಗಾಲ ಶುರು..."

'ಮುಂಗಾರು ಮಳೆಗಾಲ... ನೆನಪಾಯ್ತು , ಮೊನ್ನೆ ಭಾನ್ವಾರ ತಿಂಡಿಗೆ ಪತ್ರೊಡೆ ಮಾಡಿದ್ವಮ್ಮಾ...."

'ಹೌದಾ ! ಅಮೆರಿಕದಲ್ಲಿ ನಿಮಗೆ ಕೆಸುವಿನ ಎಲೆಯೂ ಸಿಗುತ್ತದಾ?.."

'ಅಯ್ಯೋ, ಕೆಸುವಿನ ಎಲೆ ಮಾತ್ರ ಏನು, ಬಾಳೆ ಹೂ, ದಿವಿಹಲಸು, ಮಂಗ್ಳೂರ್‌ ಸೌತೆ, ಬಸಳೆ ಎಲ್ಲ ಸಿಗುತ್ತೆ ನಮ್ಮ 'ಪಟೇಲ್‌ ಬ್ರದರ್ಸ್‌" ಇಂಡಿಯನ್‌ ಸ್ಟೋರ್‌ನಲ್ಲಿ. ಅಷ್ಟೇ ಏಕೆ, ಕಳಿಲೆ (ಎಳೆ ಬಿದಿರು) ಕೂಡ ಸಿಗುತ್ತೆ ಇಲ್ಲಿ ಗೊತ್ತಾ? ಅಮೆರಿಕನ್‌ ಗ್ರೋಸರಿ ಸ್ಟೋರ್ಸ್‌ನ ಇಂಟರ್‌ನ್ಯಾಷನಲ್‌ ಸೆಕ್ಷನ್‌ಗೆ ಹೋದ್ರೆ 'ಬ್ಯಾಂಬೂ ಶೂಟ್ಸ್‌" ಅಂತ ಉಪ್ಪಿನ ನೀರಲ್ಲಿ ಹಾಕಿಟ್ಟ ಕಳಿಲೆ ಸಿಕ್ತಮ್ಮಾ ಒಂದಿನ...."

'ಲಾಯಕ್ಕಾಯ್ತು, ಅಂತೂ ಊರು ಬಿಟ್ಟು ಅಮೆರಿಕೆಗೆ ಹಾರಿದರೂ ಊರಿನಲ್ಲಿ ಸಿಗುವುದೆಲ್ಲಾ ಅಲ್ಲೂ ಇದೆ ಅನ್ನು..."

'ಹೌದಮ್ಮಾ, ಡಾಲರ್‌ ಮಡಗಿದ್ರೆ ಎಲ್ಲ ಇದೆ. ಬೆಲೆ ಎಷ್ಟು ಅಂತ ಕೇಳಿ, '.... ಇನ್‌ಟು ನಾಲ್ವತ್ತೆಂಟು...." ಅಂತ ತಲೆಕೆಡಿಸ್ಕೊಳ್ಳಿಕ್ಕೆ ಮಾತ್ರ ಹೋಗ್ಬೇಡ..."

'ಅದೇನೆ ಇರ್ಲಿ. ಡಾಲರ್‌ ಸಂಪಾದಿಸಿ ಡಾಲರ್‌ನಲ್ಲೇ ಖರ್ಚು ಮಾಡುತ್ತೀಯಾ, ನನಗೆ ಯಾಕೆ ಅವೆಲ್ಲ ? ಆಯ್ತು, ಹೇಗೆ ಆಗಿತ್ತು ಪತ್ರೊಡೆ, ನಿನ್ನ ಯಜಮಾನ್ರು ಮೆಚ್ಚಿದರಾ?"

'ಓ! ಹೈಕ್ಲಾಸ್‌! ಮೆಚ್ಚೋದಷ್ಟೇ ಏನು, ಪಾತ್ರೆಯಲ್ಲಿದ್ದದ್ದರಲ್ಲಿ ಸಿಂಹಪಾಲನ್ನು ಮುಗಿಸಿದ ಸಿಂಹ ಅವರು..."

'ಶ್ಶ್‌! ಮತ್ತೆ ಸಿಂಹ ಗಿಂಹ ಅಂತ ರೇಗಿಸಿ ತೊಂದರೆ ತಂದುಕೊಳ್ಳಬೇಡಾ... ಅಷ್ಟಕ್ಕೂ, ಪತ್ರೊಡೆ ಮಾಡುವ ವಿಧಾನ ನಿನಗೆ ಈ ಮೊದಲು ಗೊತ್ತಿತ್ತಾ?"

Patrode Slices'ಇದೆಯಲ್ಲಾ ಇಂಟರ್ನೆಟ್ಟಲ್ಲಿ ನಮ್ಮ ದಟ್ಸ್‌ಕನ್ನಡ.ಕಾಂ ನ ಅಡುಗೆಮನೆ ಸೆಕ್ಷನ್‌. ಅಲ್ಲಿ ಸಿಕ್ತು ಪತ್ರೊಡೆ ರೆಸಿಪಿ..."

'ಸರಿ ಅನ್ನು, ನೀನು ಈಗಿನ ಕಾಲದವಳು. ಅಡುಗೆ ಮಾಡಲೂ ಕಂಪ್ಯೂಟರ್‌ ಬೇಕು... ನಮ್ಮ ಮನೆಯಲ್ಲಿ ನಾನು ಪತ್ರೊಡೆ ಮಾಡುವಾಗ ನೋಡಿ ಕಲಿತಿದ್ದರೆ ಆಗಿರೋದು. ನಾವೆಲ್ಲ ಹಾಗೆ ದೊಡ್ಡವರಿಂದ 'ನೋಡಿ-ಕಲಿ-ಮಾಡಿ-ತಿಳಿ"ದವರು. ನಮಗೆಲ್ಲಿತ್ತು ಇಂಟರ್‌ನೆಟ್ಟು , ಈಮೈಲು, ಚಾಟು-ಪಾಟು... ಅದೃಷ್ಟವಂತರಪ್ಪಾ ಹೊಸ ತಲೆಮಾರಿನವರೆಲ್ಲ..."

'ಅದೃಷ್ಟವೋ ಮಣ್ಣೋ, ಈ ರೆಸಿಪಿಗಳೆಲ್ಲ ಎಷ್ಟೇ ಇದ್ದರೂ ನಿನ್ನ 'ಕೈಗುಣ" ಎಲ್ಲಿ ಬರ್ಬೇಕು ಹೇಳು? ಅದೂ ಅಲ್ದೇ ಪಟೇಲ್‌ ಬ್ರದರ್ಸ್‌ನಿಂದ ಡಾಲರ್‌ ಕೊಟ್ಟು ಕೆಸುವಿನ ಎಲೆ ತರುತ್ತೇವೇನೊ ನಿಜ. ಬಾಡಿದ್ದು, ಮುದುಡಿದ್ದು, ಹರಿದದ್ದು ಎಂಥದಾದರೂ ಸೈ. ಆಗೆಲ್ಲ ನೆನಪು ಬರುತ್ತದಮ್ಮಾ... ನಮ್ಮೂರಲ್ಲಾದ್ರೆ ನಮ್ದೇ ತೋಟದಿಂದ ಫ್ರೆಶ್‌ ಆಗಿ ಕೆಸುವಿನ ಎಲೆ ಅಪ್ಪ ತಂದ್ಕೊಡೋರು... ಜುಲೈ-ಆಗಸ್ಟ್‌ ತಿಂಗಳ ಮಳೆಗಾಲದ ಸಮಯದಲ್ಲಾದರೆ 'ಮರಸೇವು" ಎಂದು ತುಳುವಿನಲ್ಲಿ ಕರೆಯುವ ಸ್ಪೆಷಲ್‌ ವೆರೈಟಿ ಕೆಸುವಿನೆಲೆ ಸಿಗೋದು... ಅವನು ತರ್ತಿದ್ನಲ್ಲಮ್ಮಾ ನಮ್ಮನೆ ತೆಂಗಿನಮರಗಳಿಂದ ಕಾಯಿ ತೆಕ್ಕೊಡಲು ಬರ್ತಿದ್ದ ಕೆಲ್ಸದವನು... ತ್ಯಾಂಪಣ್ಣ ಅಂತಲ್ಲಮ್ಮಾ ಅವ್ನ್‌ ಹೆಸ್ರು? ಈಗ್ಲೂ ಬರ್ತಾನೇನಮ್ಮಾ ಕೆಲಸಕ್ಕೆ ? ಅವನು ಕಾಡಿಂದ ರಾಶಿರಾಶಿ ಮರಸೇವು ಎಲೆ, ಕಳಿಲೆ ಎಲ್ಲ ತಂದ್ಕೊಡ್ತಿದ್ದದ್ದಕ್ಕೂ ಇಲ್ಲಿ ನಮಗೆ ಪಟೇಲ್‌ ಬ್ರದರ್ಸಲ್ಲಿ ಸಿಗೋದಕ್ಕೂ ಎಲ್ಲಿಯ ಹೋಲಿಕೆ?..."

'ಆದ್ರೆ ಕೆಲವು ಜಾತಿ ಕೆಸುವಿನೆಲೆಯ ಪತ್ರೊಡೆ ಮಾಡಿದರೆ ನಾಲಗೆಯಲ್ಲಿ , ಗಂಟಲಲ್ಲಿ ಸ್ವಲ್ಪ ತುರಿಸುವುದೂ ಉಂಟು ಅಂತ ಗೊತ್ತಾ ಮಗಾ ನಿನಗೆ..."

'ಆವೆಲ್ಲ ಊರಲ್ಲಿ ಆಯ್ತಮ್ಮಾ... ಇದು ತುರಿಸುವ ಜಾತೀದು, ಇದರ ಪತ್ರೊಡೆ ಮಾಡೋದಾದ್ರೆ ಮಸಾಲೆಗೆ ಸ್ವಲ್ಪ ಹೆಚ್ಚು ಹುಣಿಸೆ ಹಾಕ್ಬೇಕು, ಈ ಜಾತಿಯ ಎಲೆಯದಾದರೆ ಪತ್ರೊಡೆ ಸ್ವಲ್ಪ ನಾರುನಾರು ಆಗತ್ತೆ... ಇದೆಲ್ಲ ಚಾಯ್ಸ್‌ ನಮ್ಮೂರಲ್ಲಿ ಮಾಡ್ಬಹುದಮ್ಮಾ... ಇಲ್ಲಿ ಏನಿದ್ದರೂ ನಮ್ಮದು ಪಟೇಲ್‌ ಬ್ರದರ್ಸ್‌ ಕೃಪಾಪೋಷಿತ ಪತ್ರೊಡೆ!"

'ಅಷ್ಟಾದ್ರೂ ಸಿಗುತ್ತದಲ್ಲಾ , ಅದು ಮುಖ್ಯ!"

'ಅಮ್ಮಾ, ನೀನು ಪತ್ರೊಡೆ ಮಾಡುವಾಗ ಅಕ್ಕಿಯನ್ನು ನೀರಲ್ಲಿ ನೆನೆಸುವ ಮೊದಲು ಬಾಣಲೆಯಲ್ಲಿ ಒಂದೈದು ನಿಮಿಷ ಹುರಿದುಕೊಳ್ಳುತ್ತಿದ್ದಿಯೆಂದು ನೆನಪು. ಹಾಗೆ ಹುರಿಯುವಾಗಲೇ ಜತೆಯಲ್ಲಿ ಕೊತ್ತುಂಬರಿ ಬೀಜ, ಉದ್ದಿನಬೇಳೆ, ಒಂದಿಷ್ಟು ಮೆಂತೆ ಕೂಡ ಹಾಕಿ ಹುರಿದು ಆಮೇಲಷ್ಟೇ ಮೂರ್ನಾಲ್ಕು ಗಂಟೆ ನೀರಲ್ಲಿ ನೆನೆಸಿಡುತ್ತಿದ್ದಿ. ಕರೆಕ್ಟಲ್ವಾ?"

'ಹೌದು, ಹಾಗೆ ಮಾಡುವುದರಿಂದ ಪತ್ರೊಡೆ ಒಳ್ಳೆ ಗರಿಗರಿ ಹಗುರಾಗಿ ಆಗ್ತದೆ..."

'ಅದೇ ನೋಡು, ನನ್ನ ಬಳಿ ಇರುವ ಈ ಹೈ-ಟೆಕ್‌ ರೆಸಿಪಿಗಳು ಅಂಥಾ ಸೂಕ್ಷ್ಮಗಳನ್ನೆಲ್ಲ ತಿಳಿಸೊಲ್ಲ. ಅದು ಅಮ್ಮನ ಅನುಭವದ ನುಡಿಯಿಂದ್ಲೇ ಬರ್ಬೇಕು... ಅಮ್ಮಾ, ನಾನು ಪಕ್ಕದ ಅಪಾರ್ಟ್‌ಮೆಂಟಲ್ಲಿರುವ ನನ್ನ ಗುಜರಾತಿ ಫ್ರೆಂಡ್‌ಗೆ ಪತ್ರೊಡೆ ರುಚಿ ನೋಡಲು ಕೊಟ್ಟೆ, ಅವ್ಳು ಹೇಳಿದ್ಳು, ಈ ಥರ ಅವರೂ ಮಾಡ್ತಾರಂತೆ, 'ಪತ್ರ" ಎನ್ನುತ್ತಾರಂತೆ. ಒಂದೇ ಡಿಫರೆನ್ಸ್‌ ಅಂದರೆ ಅವ್ರು ಮಸಾಲೆಯನ್ನು ನಮ್ಮಂತೆ ಅಕ್ಕಿ ನೆನೆಸಿ ರುಬ್ಬಿ ಮಾಡೋದಿಲ್ಲ. ನಾವು ಬೋಂಡಾ ಮಾಡ್ತೇವೆ ನೋಡು, ಆ ಥರ ಕಡ್ಲೆಹಿಟ್ಟಿಂದ ಮಾಡ್ತಾರಂತೆ..."

'ಗುಜರಾತಿನ ನಿನ್ನ ಸ್ನೇಹಿತೆಗೆ, ಕೆಸುವಿನೆಲೆ ಮತ್ತು ಕೃಷ್ಣಾಷ್ಟಮಿಯ ಸಂಬಂಧ ಗೊತ್ತಿದೆಯಾ ಎಂದು ಕೇಳು ಮುಂದಿನ ಸಲ ಭೇಟಿಯಾದಾಗ..."

'ಕೃಷ್ಣ - ದ್ವಾರಕಾ - ಗುಜರಾತ್‌ ಇಷ್ಟು ನನಗೂ ಗೊತ್ತು. ಕೆಸುವಿನ ಎಲೆದ್ದು ಏನು ಸಂಬಂಧ ? ಅಥವಾ ಗೋಕುಲಾಷ್ಟಮಿ - ಇಮಾಂ ಸಾಬಿ ಇದ್ದ ಹಾಗೆ ಜಸ್ಟ್‌ ಗಾದೆಮಾತೋ ಹೇಗೆ?"

'ಇಲ್ಲಾ , ಇದು ದ್ವಾರಕೆಗೆ ಸಂಬಂಧಿಸಿದ್ದಲ್ಲ ಮಥುರೆಯಲ್ಲಿ ನಡೆದದ್ದು. ನಮ್ಮ ತುಳುನಾಡಲ್ಲಿ ಒಂದು ಪ್ರತೀತಿ ಏನೆಂದರೆ ಕೃಷ್ಣ ಹುಟ್ಟಿದ ದಿನ ಅವನನ್ನೆತ್ತಿಕೊಂಡು ವಸುದೇವ ರಾತೋರಾತ್ರಿ ಭೀಕರ ಮಳೆಯನ್ನೂ ಲೆಕ್ಕಿಸದೆ ನಂದಗೋಪನ ಮನೆಯಲ್ಲಿಟ್ಟು ಬರಲು ಹೋಗುತ್ತಾನಲ್ಲ , ಆಗ ನವಜಾತ ಕೃಷ್ಣನನ್ನು ವಸುದೇವ ದೊಡ್ಡದೊಡ್ಡ ಕೆಸುವಿನ ಎಲೆಗಳನ್ನೇ ಹಾಸಿಗೆ-ಹೊದಿಕೆಯಾಗಿಸಿ ಒಯ್ದಿದ್ದಂತೆ. ಅದಕ್ಕೇ ನೋಡು ಕೆಸುವಿನ ಎಲೆಯ ಒಂದು ಸೈಡ್‌ ಅಷ್ಟು ನಾಜೂಕಾಗಿ, ನೀರು ಬಿದ್ದರೂ ಸ್ಫಟಿಕದಂತೆ ಹನಿಯಾಗಿ ಜಾರುವಷ್ಟು ಎಣ್ಣೆಪಸೆ ಇದೆಯೋ ಅನಿಸುವುದು! ನವಜಾತ ಕೃಷ್ಣನನ್ನು ರಕ್ಷಿಸಿದ ನೆನಪಾಗಿ ಗೋಕುಲಾಷ್ಟಮಿ ದಿನ ಕೆಸುವಿನೆಲೆಯ ಪತ್ರೊಡೆ ಮಾಡುವ ಸಂಪ್ರದಾಯ ಈಗಲೂ ಕೆಲವರ ಮನೆಗಳಲ್ಲಿದೆ..."

'ಓ ಹಾಗೆ! ಅದಕ್ಕಾಗೇ ಪತ್ರೊಡೆ ಮಾಡುವಾಗ ಕೆಸುವಿನ ಎಲೆಯ ಉಲ್ಟಾ ಸೈಡಿಗೆ ಮಾತ್ರ ಮಸಾಲೆ ಹಚ್ಚುವುದಿರಬಹುದು! ಅಲ್ವಾ? ನನ್ನ ಗುಜರಾತಿ ಸ್ನೇಹಿತೆಗೆ ಈ ಕಥೆ ಇಂಟೆರೆಸ್ಟಿಂಗ್‌ ಆಗ್ಬಹುದು! ಹೇಳ್ತೇನೆ ಅವ್ಳಿಗೂ... ಅಂದ ಹಾಗೆ ನಾವು ಪತ್ರೊಡೆ ಎಲೆ ಖರೀದಿಸುವ ಪಟೇಲ್‌ ಬ್ರದರ್ಸ್‌ ಕೂಡ ಗುಜರಾತಿಗಳದೇ ಅಂಗಡಿಯಮ್ಮಾ!"

'ಸರಿ ಸರಿ, ಪುರಾಣ ಸಾಕು ಇನ್ನು. ಮುಂದಿನ ವಾರದ ಫೋನ್‌ಕಾಲ್‌ಗೆ ಸುದ್ದಿ-ವಿಷಯ ಹುಡುಕಿಡು..."

'ಆಯ್ತಮ್ಮಾ, ಮುಂದಿನ ವಾರ ಫೋನ್‌ ಮಾಡ್ತೇನೆ... ಅಪ್ಪನನ್ನು ಕೇಳಿದೆನೆಂದು ಹೇಳು...ಬಾಯ್‌ ಸೀ ಯೂ! "

*

ಹೌದು. ಪತ್ರೊಡೆ ಪುರಾಣಮ್‌ ಇಲ್ಲಿಗೆ ಸಮಾಪ್ತಮ್‌. ತಾಯಿ-ಮಗಳ ದೂರವಾಣಿ ಸಂಭಾಷಣೆಯಂತೆಯೇ ಮುಂದಿನ ವಾರದ ವಿಚಿತ್ರಾನ್ನಕ್ಕೆ ನಾನೂ ಟಾಪಿಕ್‌ ಹುಡುಕಬೇಕು. ಯಾವಾಗಲೂ ಫೋನ್‌ ಕದ್ದಾಲಿಕೆಯಲ್ಲಿ ಟಾಪಿಕ್‌ ಸಿಗುತ್ತದೆ ಅಂತ ಕಾಯುವುದು ಸರಿಯಲ್ಲ ತಾನೆ? ಈ ಮಧ್ಯೆ ವಿಚಿತ್ರಾನ್ನ ತಿಂದು ತಿಂದು ನಿಮಗೆ ಬಾಯಿರುಚಿ ಕೆಟ್ಟುಹೋಗಿದ್ದರೆ, ಜಸ್ಟ್‌ ಫಾರ್‌ ಎ ಚೇಂಜ್‌, ಒಮ್ಮೆ ಪತ್ರೊಡೆ ಮಾಡಿ ನೋಡಿ. ಕೆಸುವಿನ ಎಲೆ ತರಲು ನಿಮಗೆ 'ಪಟೇಲ್‌ ಬ್ರದರ್ಸ್‌" ಇಲ್ಲಾಂದರೆ ಇನ್ನೊಂದು ಸೋರ್ಸ್‌ ಸಿಗಬಹುದು.

ಪತ್ರೊಡೆ ಮಾಡಿದರೂ ಮಾಡದಿದ್ದರೂ ಪತ್ರಿಸಲು ಮಾತ್ರ ಮರೆಯಬೇಡಿ! ವಿಳಾಸ sjoshim@hotmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more