ಸಿ.ಡಿಗೆ ಕನ್ನಡ ಪದ ಹುಡುಕಿರೆಂದರೆ ಪದ್ಯ ಸಿಡಿಸಿದವರು!
ಸಿ.ಡಿ (ಕಾಂಪಾಕ್ಟ್ ಡಿಸ್ಕ್)ಗೆ ಸೂಕ್ತವಾದ ಕನ್ನಡಪದ ಯಾವುದೆಂಬ ಚರ್ಚೆ ಸಾಕಷ್ಟು ಮಂದಿಯ ತಲೆಸಿಡಿತಕ್ಕೆ ಕಾರಣವಾಯಿತು! ನಾಮಕರಣ ಸಂಪ್ರದಾಯದಂತೆ ಐದು ಹೆಸರು ಕಳಿಸಿದ್ದಾರೆ ಒಬ್ಬರು. ಇನ್ನೊಬ್ಬ ಸ್ನೇಹಿತರು ಪದ ಕಳಿಸಿ ಎಂದರೆ ಪದ್ಯ ಕಳಿಸಿದ್ದಾರೆ. ವಿಚಿತ್ರಾನ್ನ ನಿಮಗೆಲ್ಲ ರುಚಿಕರವಾಗಿದೆಯೆಂದು ತಿಳಿದು ಸಂತೋಷವಾಗುತ್ತಿದೆ. ಇದನ್ನು ತಿದ್ದಿ ತೀಡಿ ಮುನ್ನಡೆಸುವ ಆನಂದದಲ್ಲಿ ನಿಮ್ಮ ಪಾತ್ರವೂ ಇದೆ, ಹಾಗಾಗಿಯೇ ನಿಮ್ಮ ಪಾತ್ರೆಗೂ ಅದು ಬಡಿಸಲ್ಪಡುವುದು:-) ಮತ್ತೊಮ್ಮೆ ಎಲ್ಲರಿಗೂ ಥ್ಯಾಂಕ್ಸ್.
-ಶ್ರೀವತ್ಸ ಜೋಶಿ
*
ಜೋಶಿ ಮೇಷ್ಟ್ರೇ....
ನಿಮ್ಮ ಜೋಶ್ ನೋಡಿ ನನಗೆ ಭಯಂಕರ ಖುಶಿ ಆಗ್ತಿದೆ ಮಾರಾಯ್ರೇ! ವಾರಾ ವಾರಾ ಇಂಥಾ ಒಳ್ಳೇ ಟಾಪಿಕ್ಸನ್ನು ಎಲ್ಲಿಂದ ತರುವುದು ನೀವು? ಅಲ್ಲಾ ನೀವು ಹೀಗೆ ಚಿತ್ರಾನ್ನ ತಿನ್ನಲು ಬಂದೋರಿಗೆಲ್ಲ ಸಿಡಿಗುಂಡು ಮಿಕ್ಸ್ ಆಗಿರೋ ತಿಂಡಿ ಕೊಟ್ಟರೆ ತಿನ್ನೋದು ಹ್ಯಾಗೇ? :)
ಸರಿ, ಹೋಗಲಿ ಬಿಡಿ. ಈಗ ನೇರ ವಿಷಯಕ್ಕೆ ಬರ್ತೇನೆ. ಇವತ್ತು ಬೆಳಿಗ್ಗೆ ನಾನು ಕಾಫಿ ಕುಡಿಯೋದು ಮರೆತೆ ನೋಡಿ! ಅದಕ್ಕೆ ‘ಸಿಡಿ’ಯುತ್ತಿದ್ದ ತಲೆಯನ್ನು ಹಿಡಿಯಲಾರದೆ ಎಲ್ಲರ ಮೇಲೆ ‘ಸಿಡಿಸಿಡಿ’ ಎಂದು ಹರಿಹಾಯುತ್ತಿದ್ದ ನಾನು ತಂಪಾದದ್ದು ನಿಮ್ಮ ‘ಸಿಡಿ’ ಸ್ಪೆಷಲ್ ವಿಚಿತ್ರಾನ್ನ ತಿಂದು ! :)
ಆಗ ನಾನು ‘ಸಿಡಿ ಗಳು ಬೇಕು, ಸ್ಟಾಕ್ ಮುಗಿದಿದೆ’ ಎಂದು ಮೂರು ದಿನದಿಂದ ಕುಣಿದಾಡುತ್ತಿದ್ದ ನನ್ನ ಹೆಲ್ಪ್‌ಮೇಟ್ ನ ಅರ್ಜಿಗೆ ಅಸ್ತು ಎನ್ನುತ್ತಾ ಹೇಳಿದ್ದು, ‘ಅದಕ್ಕೇನಂತೆ, ತರ್‘ಸಿಡಿ’ ಎಂದು !! ’’... ಅವಳು ಅವಾಕ್ಕಾದದ್ದು ಬೇರೆ ವಿಷಯ ಸಿಡಿ .. ಅಲ್ಲಲ್ಲ ಬಿಡಿ :) ಹೀಗೆ ಕಂಡಕಂಡೋರಿಗೆಲ್ಲ ಇವೊತ್ತು ಇದರ ಸ್ಯಾಂಪಲ್ ಸಿಕ್ಕಿದೆ ನೋಡಿ... ಹೀಗೆ.
ಕಲೀಗ್ ಕೇಶವ್: ಆ ಸಾಫ್ಟ್‌ವೇರ್ ರಿಲೀಸ್‌ಗೆ ಇನ್ನೂ ಡಾಕ್ಯುಮೆಂಟೇಷನ್ ನಾವು ಬರೆಸೇ ಇಲ್ಲ ಅಲ್ಲವೆ?
ನಾನು: ಓ, ಅದೇನು ಮಹಾ, ಇವೊತ್ತೇ ಬರ್‘ಸಿಡಿ’!
ತರಕಾರಿ ಅಂಗಡಿಯಲ್ಲಿ ಇವರು: ಅಲ್ವೇ... ನಾನು ಕೂಗ್ತಾನೇ ಇದ್ದೀನಿ, ಯಾವುದು ಎಷ್ಟು ಅಂತಾ...
ನಾನು: ರ್ರೀ...ನಾನು ಕಾಂತನ್ನ ಮಾತಾಡ್ಸಿ ಬರ್ತೀನ್ರೀ, ಪ್ಲೀಸ್ ನೀವು ಎನೋ ಒಂದು ಹಾಕ್‘ಸಿಡಿ’ ...
ಮನೆಯಲ್ಲಿ ಇವರ ಅಜ್ಜಿ: ಲೇ, ಅದೆಷ್ಟು ಹತ್ತಿ ಬೇಕೋ ಕೇಳೇ ನಿಮ್ಮತ್ತೇನಾ... ನನಗಂತೂ ಗೊತ್ತಾಗೊಲ್ದು!
ನಾನು: ಅಯ್ಯಾ ಅಜ್ಜೀ, ಅದಕ್ಕೇನೀಗಾ? ನಾ ಅವರಿಗೆ ಹೇಳ್ತೇನೇ... ನಿಮ್ಮ ಕೈಲಾದಷ್ಟು ಬಿಡ್‘ಸಿಡಿ’...
ಊಟಕ್ಕೆ ಕೂತ ಎಲ್ಲರೂ: ಲೇ, ಲೇ, ಏನೇ ಅದು...ನೋಡೋಕ್ಕೆ ಭಯವಾಗುತ್ತಲ್ಲೇ??
ನಾನು(ಕಣ್ಣು ಹೊರಳಿಸುತ್ತಾ) : ಇದು ಇವೊತ್ತು ನಾನು ಕಲಿತು ಮಾಡಿದ ಹೊಸ ಡಿಶ್ಷು...! ಮಾತಿಲ್ಲದೆ ತಿಂದರೆ ಆರೋಗ್ಯಕ್ಕೆ ಒಳ್ಳೇದು! ಹೆಸರು ಗೋಲ್ಡನ್ ರಾಪ್ ‘ಸಿಡಿ’ಅಲ್ಲ ರಾಪ್ಸೊಡಿ! ಸುಮ್ನೆ ತಿನ್ನಿ ಎಲ್ಲಾ!!
ಅಯ್ಯೋ ಜೋಶಿ ಮಾಸ್ತರೇ... ನೋಡಿದ್ರಾ ನಿಮ್ಮ ಸಿಡಿಗುಂಡಿನ ಸಿಡಿತಾ? :)
- ಜಯಶ್ರೀ ರಾಮಸ್ವಾಮಿ; ಬೆಂಗಳೂರು.
ಜೋಶಿಯವರಿಗೆ,
ಸಿಡಿಸಿಡಿ ಸಿಡಿವ ಪುಟ್ಟಸಾಂದ್ರತಟ್ಟೆ
ಅನ್ನ ತಿನ್ನಲು ಬೇಕು ಊಟದ ತಟ್ಟೆ
ಚಿತ್ರಾನ್ನಕೆ ಸಾಕು ಚಿಕ್ಕ ತಟ್ಟೆ
ವಿಚಿತ್ರಾನ್ನಕೆ ಬೇಕು ವಿಶಿಷ್ಟತರ ತಟ್ಟೆ
ಎಲ್ಲವನು ತುರುಕಿಡುವ ಸಾಂದ್ರತಟ್ಟೆ
ಸಂಗೀತಸಾಗರದ ಸಾರಹೀರಿದ ತಟ್ಟೆ
ಧ್ವನಿಸುರುಳಿಗಿನ್ನಿಲ್ಲ ಮಾರುಕಟ್ಟೆ
ಅಂಕಿಅಂಶಗಳ ಹಿಡಿದಿಟ್ಟ ತಟ್ಟೆ
ನಕ್ಷೆ-ಚಿತ್ರಗಳನೆಲ್ಲ ಹೊಟ್ಟೆಯಾಳಗಿಟ್ಟೆ
ನೂರಾರು ಪುಟಗಳನು ಅಂಗೈ ಅಗಲದೊಳಿಟ್ಟೆ
ಕಾಗದವೆ ಬೇಕಿಲ್ಲ ಎನಿಸಿಬಿಟ್ಟೆ
ಕಿಸೆಯಾಳಗೆ ಜ್ಞಾನಭಂಡಾರವನೆ ಮುಚ್ಚಿಟ್ಟೆ
ಗಣಕಸಾಮ್ರಾವೆಂದಿತು ನೀನಿಲ್ಲದೆ ದಿಕ್ಕೆಟ್ಟೆ!
ಸಿಡಿವಬೆಂಕಿಯಲು ಸುಡದ ಬೆಳ್ಳಿಯತಟ್ಟೆ
ಸುಟ್ಟಾಗ ಲವಲೇಶವೂ ಅಳುಕದ ಮೊಟ್ಟೆ
ನಗುತ ಕುಶನಂತೆ ಕ್ಲೋನಿಸಿಬಿಟ್ಟೆ
ಎಲೆ ಪುಟ್ಟ-ಸಾಂದ್ರ-ತಟ್ಟೆ ಇಗೋ ಕೈಮುಗಿದುಬಿಟ್ಟೆ
- ಮೈ. ಶ್ರೀ. ನಟರಾಜ; ಗೈಥರ್ಸ್ ಬರ್ಗ್(ಮೇರಿಲ್ಯಾಂಡ್)
ಶ್ರೀವತ್ಸ ಜೋಶಿ,
ಈ ಸಲದ ವಿಚಿತ್ರಾನ್ನ ಪೊಟ್ಟಣ (ಸಿ.ಡಿ ಸುಡುವಾಗ ಸಿಡಿಯಿತೇ?) ಕಳೆದ ವಾರದಷ್ಟು (ಚಿತ್ರಗೀತೆ ಒಗ್ಗರಣೆ) ರುಚಿಯಾಗಿರಲಿಲ್ಲ. ಬೇರೆಯವರ ಪ್ರತಿಕ್ರಿಯೆ ಹೇಗೆ ಬಂದಿದೆ?
- ಜ್ಯೋತಿ ಮಹಾದೇವ್; ಕ್ಯುಪರ್ಟಿನೊ(ಕ್ಯಾಲಿಫೋರ್ನಿಯಾ).
ಹಾಯ್,
ದಟ್ಸ್‌ಕನ್ನಡದಲ್ಲಿ ನೀವು ಬಡಿಸುತ್ತಿರುವ ವಿಚಿತ್ರಾನ್ನ ತುಂಬ ಚೆನ್ನಾಗಿ ಬರುತ್ತಿದೆ. ಕಳೆದ ವಾರದ ಚಿತ್ರಗೀತೆ-ಒಗ್ಗರಣೆಗಿಂತಲೂ ಈ ಸಲದ ‘ಸಿಡಿ’ಸುವಿಕೆಯಲ್ಲಿ ನನಗೆ ಹೆಚ್ಚು ಮನರಂಜನೆ ಸಿಕ್ಕಿತು. ನಿಮ್ಮ ಪ್ರತಿಭೆ-ಪ್ರಯತ್ನ ಇದೇ ತರಹ ಮುಂದುವರೆಯುತ್ತಿರಲೆಂದು ಹಾರೈಕೆ.
- ಭಾಸ್ಕರ ಚಕ್ರಪಾಣಿ; ಮಿನಿಯಾಪೊಲಿಸ್(ಮಿನ್ನೆಸೋಟ)
ಪ್ರಿಯರೆ,
ನಿಮ್ಮ ವಿಚಿತ್ರಾನ್ನ ಓದಿದ ಮೇಲೆ ತಲೆ ಸಿಡಿಯಲಾರಂಭಿಸಿತು ! ಬೋರ್ ಕೊಟ್ಟಿತೆಂದಲ್ಲ, ಸಿ.ಡಿಗೆ ಕನ್ನಡಪದ ಹುಡುಕುವಾಗ. ಕೊನೆಗೂ ಒಂದು ಹೊಳೆಯಿತು - ‘ಸಂಕ್ಷಿಪ್ತ ತಟ್ಟೆ’. ಇದರಲ್ಲಿ ತಟ್ಟೆ ಎಂಬುದನ್ನು ನನ್ನ ಫ್ರೆಂಡ್ ಹೇಳಿದ್ದು. ನಾನು ‘ಸಂಕ್ಷಿಪ್ತ ಚಕ್ರ’ ಸರಿಯೇನೋ ಅಂದುಕೊಂಡಿದ್ದೆ. ಅದಿರಲಿ, ಬಹುಮಾನವಾಗಿ ಯಾವ ಸಿ.ಡಿ ಕಳಿಸುತ್ತೀರಿ?
- ದಿಲೀಪ್ ಚಕ್ರವರ್ತಿ; ಕೇಂಬ್ರಿಡ್ಜ್(ಯುರೋಪ್)
ಪ್ರೀತಿಯ ಜೋಶಿ,
ನಾಮಕರಣ ಮಾಡುವಾಗ ಸಾಮಾನ್ಯವಾಗಿ ಐದು ಹೆಸರುಗಳನ್ನಿಡುತ್ತಾರಲ್ಲವೆ, ಅದಕ್ಕೇ ಸಿ.ಡಿಗೆ ಐದು ಹೆಸರುಗಳನ್ನು ಸೂಚಿಸುತ್ತಿದ್ದೇನೆ.
ದಟ್ಟಚಕ್ರ, ಅಡಕಚಕ್ರ, ಸಾಂದ್ರಚಕ್ರ, ಘನಗಾಲಿ, ನಿಬಿಡಚಕ್ರ.
ಕನ್ನಡಶಬ್ದಗಳಿಗಾಗಿ ಗೂಗಲ್ ಸರ್ಚ್ ಇಂಜನ್‌ನಲ್ಲಿ ತಡಕಾಡಿದೆ. ಒಳ್ಳೇ ಇನ್ಫಾರ್ಮೇಟಿವ್ ಎಕ್ಸರ್ಸೈಸ್ ಆಯಿತು. ಬಹಳಷ್ಟು ವೆಬ್‌ಸೈಟ್‌ಗಳ ಪರಿಚಯವಾಯಿತು.
- ಉಷಾರಾಣಿ; ಹೈದರಾಬಾದ್.
ಪ್ರಿಯರೇ,
ನನ್ನ ಅಭಿಪ್ರಾಯದಂತೆ ಸಿ.ಡಿಗೆ ಸೂಕ್ತ ಕನ್ನಡ ಪದವೆಂದರೆ ‘ಸಂಕುಚಿತ ತಟ್ಟೆ’. ವಿಚಿತ್ರಾನ್ನವನ್ನು ರೆಗ್ಯುಲರ್ ಆಗಿ ಓದುತ್ತಿರುತ್ತೇನೆ. ಚೆನ್ನಾಗಿರುತ್ತದೆ, ಇದೆ ರೀತಿ ಮುಂದುವರಿಯಲೆಂದು ಹಾರೈಸುತ್ತೇನೆ.
- ರಘು; ಊರು?
ಹಾಯ್ ಜೋಶಿ,
ನಾನು ಇಂಡಿಯಾಇನ್ಫೋ.ಕಾಂನ ನ್ಯೂಸ್‌ಡೆಸ್ಕ್‌ನಲ್ಲಿ ಕೆಲಸ ಮಾಡುವವನು. ನಿಮ್ಮ ವಿಚಿತ್ರಾನ್ನದ ಈವರೆಗಿನ ತುತ್ತುಗಳನ್ನೆಲ್ಲ ಚಪ್ಪರಿಸಿದ್ದೇನೆ. ನಿಮ್ಮ ಬರವಣಿಗೆಯ ಶೈಲಿ ನನಗಿಷ್ಟವಾಯಿತು. ಸಿ.ಡಿಯನ್ನು ಕನ್ನಡದಲ್ಲಿ ‘ಸಂಕುಚಿತ ತಟ್ಟೆ’ ಎನ್ನಬಹುದೆಂದು ನನ್ನ ಅನಿಸಿಕೆ. ನಾನು ಸಿ.ಡಿ ಕುರಿತಂತೆ ಕನ್ನಡ ಪತ್ರಿಕೆಯಾಂದಕ್ಕೆ ಲೇಖನ ಸಿದ್ಧಪಡಿಸುವಾಗ ಈ ಪದವನ್ನೇ ಬಳಸಿದ್ದೆ.
- ಚರಣ್ ಸಿ. ಎಸ್; ಬೆಂಗಳೂರು.
ಜೋಶಿ,
ಚಪ್ಪಟೆ ಶೇಖರಣಾ ತಟ್ಟೆ. ಈ ಪದವನ್ನು ನೀವು ಉಪಯೋಗಿಸುವುದಾದರೆ ನನಗೆ ರಾಯಲ್ಟಿ ಕೊಡಬೇಕು :-) ಏನು ಗೊತ್ತೇ? ವರ್ಷವಿಡೀ ಮುಫತ್ತಾಗಿ ಸಿ.ಡಿ ಸುಟ್ಟುಕೊಡಬೇಕು ನನಗೆ ನೀವು!
- ಪ್ರಕಾಶ್ ಪಿ. ಎನ್; ಪೋರ್ಟ್‌ಲ್ಯಾಂಡ್ (ಓರೆಗಾನ್)
‘ಅಂತ್ಯಾಕ್ಷರಿ’ ಪದ್ಯಬಂಡಿಗೆ ತಡವಾಗಿ ಜೋಡಣೆಯಾದ ಬೋಗಿಗಳು:
ಜೋಶಿಯವರಿಗೆ,
ತುಂಬಾ ಧನ್ಯವಾದಗಳು. ನಿನ್ನೆ ದಟ್ಸ್‌ಕನ್ನಡ.ಕಾಂ ನಲ್ಲಿ ನೀವು ಊರಿಗೆ ಹೋಗುವ ವಿಷಯ ಓದಿದೆ. ನಿಮಗೆ ಸುಖ ಪ್ರಯಾಣ ಹಾರೈಸುತ್ತೇನೆ. ಥ್ಯಾಂಕ್ಸ್‌ಗಿವಿಂಗ್ ರಜೆಯ ಪ್ರಯುಕ್ತ ಬಂದ ಕೆಲಸದ ಒತ್ತಡದಿಂದ ಪ್ರಶ್ನೆ 2ಕ್ಕೆ ಉತ್ತರ ಸಿದ್ಧವಾಗುತ್ತಲೇ ಇದೆ. ಆಗಿರುವಷ್ಟು ಕಳಿಸುತ್ತಿದ್ದೇನೆ. ಯಾವುದಾದರೊಂದು ಥೀಂ ತೆಗೆದುಕೊಂಡು ಬರೆಯೋಣವೆಂದುಕೊಂಡಿದ್ದೆ. ಆಗಲಿಲ್ಲ. ಕೊನೆಗೆ ಡಾ। ರಾಜಕುಮಾರರ ಹಾಡುಗಳು ಗೊತ್ತಿದ್ದಷ್ಟು ಬರೆದು ಕಳಿಸುತ್ತಿದ್ದೇನೆ.
ಪ್ರಶ್ನೆ 2ಕ್ಕೆ ಪಾಸ್ ಮಾರ್ಕು ಬರುವಷ್ಟು ಉತ್ತರ!!!
‘ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ...’
‘ಯಾರೇ ಕೂಗಾಡಲಿ ಊರೇ ಹೋರಾಡಲಿ... ನಿನ್ನ ನೆಮ್ಮದಿಗೆ ಭಂಗವಿಲ್ಲ ಎಮ್ಮೇ ನಿನಗೆ ಸಾಟಿಯಿಲ್ಲ...’
‘ಲವ್ ಮಿ ಆರ್ ಹೇಟ್ ಮಿ... ಕಿಸ್ ಮಿ ಆರ್ ಕಿಲ್ ಮಿ...’
‘ಮಧುರ ಈ ಕ್ಷಣ... ನಡುಗುತಿದೆ ಛಳಿಗೆ ಮೈಮನ... ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ....’
‘ನೀನಾಡೊ ಮಾತೆಲ್ಲ ಚಂದ... ನಿನ್ನಿಂದ ಈ ಬಾಳೇ ಅಂದ...’
ನಿಮ್ಮ ಎಲ್ಲ ಕೆಲಸಗಳಲ್ಲು, ಗಣಪತಿ ಒಂದಾಣೆಯೆ ತೆಗೆದುಕೊಂಡಿದ್ದರೂ, ಹದಿನಾರಣೆ ಸಿದ್ಧಿ ಕೊಡಲೆಂದು ಹಾರೈಸುತ್ತ,
ನಿಮ್ಮ ಗೆಳೆಯ,
- ದಾಶರಥಿ (ಡ್ಯಾಶ್) ಘಟ್ಟು; ನ್ಯೂ ಜೆರ್ಸಿ
ಹಲೋ,
ಈ ಅಂತ್ಯಾಕ್ಷರಿಗೆ ನಾನು ಸೇರಿಸುವ ಐದು ಹಾಡುಗಳೆಂದರೆ -
‘ದೂರದ ಊರಿಂದ ಹಮ್ಮೀರ ಬಂದ ಜರ್ತಾರಿ ಸೀರೆ ತಂದ... ಅದರೊಳ್ಗೆ ಇಟ್ಟಿವ್ನಿ ಈ ನನ್ನ ಮನಸನ್ನು ಜೋಪಾನ ಜಾಣೆ ಎಂದ...’
‘ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ... ಬೀಸೊ ಗಾಳಿಗೆ ಬೀಳುತೇಳುತ ತೆರೆಯ ಮೇಗಡೆ ಸಾಗಲಿ...’
‘ಲವ್ ಯು ಲವ್ ಯು ಐ ಲವ್ ಯೂ... ಹೃದಯ ಹಾಡಿದೆ ಸ್ವರವು ಕೇಳಿದೆ ಒಲವೆ....’
‘ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು... ಕೋಗಿಲೆ ಹಾಡಲೆಬೇಕು... ಕಂಕಣ ಕೂಡಿ ಬಂದಾಗ ಮದುವೆಯಾಗಲೆಬೇಕು...’
‘ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ... ಕನ್ನಡನಾಡಿನ ಚರಿತೆಯನೆ ಕಂಡೆ ಆಕೆಯ ಹೃದಯದಲಿ... ವಂದನೆ ಆ ಹೆಣ್ಣಿಗೆ ಅಭಿನಂದನೆ ಆ ಕಣ್ಣಿಗೆ...’
ನಿಮ್ಮ ವಿಚಿತ್ರಾನ್ನ ಅಂಕಣ ಬಹಳ ಚೆನ್ನಾಗಿದೆ. ಕನ್ನಡ ಅಕ್ಷರಗಳನ್ನು ಮರೆಯದೆ, ಓದುವ ಅಭ್ಯಾಸ ಇರಿಸುತ್ತದೆ. ನಮ್ಮ ಮನೆಯ ಹಾಗೂ ನಾವು ತಿಳಿದು ಬೆಳೆದ ಭಾಷೆಯ ಸಂಪರ್ಕ ಎಂದಿಗೂ ಹಿತವಲ್ಲವೆ?
ಧನ್ಯವಾದಗಳು,
- ರಶ್ಮಿ ಸುಬ್ರಹ್ಮಣ್ಯ; ನ್ಯೂ ಜೆರ್ಸಿ.