ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಯಿಂದ ಮುಡಿವರೆಗೆ = ಟಾಪ್‌ ಟು ಬಾಟಮ್‌ ?

By Staff
|
Google Oneindia Kannada News

*ಶ್ರೀವತ್ಸ ಜೋಶಿ

Srivathsa Joshi‘ಅವನು ನನ್ನನ್ನೊಮ್ಮೆ ಆಪಾದಮಸ್ತಕ ನೋಡಿದ; ಅವನ ಕಣ್ಣುಗಳಲ್ಲಿ ಆಶ್ಚರ್ಯ-ಆತಂಕಗಳು ತುಂಬಿಕೊಂಡಿದ್ದನ್ನು ನಾನು ಗಮನಿಸಿದೆ...’ ಹೀಗೆ ಒಂದು ಕಾದಂಬರಿ ಅಥವಾ ಕಥೆಯ ಲಹರಿ ಸಾಗಬಹುದು. ‘ಆಪಾದಮಸ್ತಕ’ ಎನ್ನುವುದರ ಬಗ್ಗೆ ಒಂದಿಷ್ಟು ಚಿಂತನೆಗೆ ಆಹಾರ - ಫುಡ್‌ ಫಾರ್‌ ಥಾಟ್‌ ಈಸಲದ ವಿಚಿತ್ರಾನ್ನದಲ್ಲಿ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಪಾದಮಸ್ತಕ - ಅಡಿಯಿಂದ ಮುಡಿವರೆಗೆ ಎಂಬ ಕಾನ್ಸೆಪ್ಟ್‌ ಹಾಸುಹೊಕ್ಕಾಗಿದೆ. ಭಾರತಭೂಮಿಯ ವರ್ಣನೆಯನ್ನೇ ತೆಗೆದುಕೊಳ್ಳಿ - ಆಸೇತುಹಿಮಾಚಲ ಎಂಬ ವಿವರ ಬರುತ್ತದೆ. ಭಾರತದ ನಕ್ಷೆಯಲ್ಲಿ ಅಡಿ(ಕೆಳ)ಭಾಗದಲ್ಲಿದೆ ತಮಿಳ್ನಾಡು ರಾಜ್ಯದಲ್ಲಿರುವ ರಾಮೇಶ್ವರಂ. ರಾಮಾಯಣ ಕಾಲದಲ್ಲಿ (ತ್ರೇತಾಯುಗದಲ್ಲಿ) ವಾನರಸೇನೆ ಕಟ್ಟಿದ್ದೆನ್ನಲಾದ ಸೇತುವೆಯ ನಿರ್ಮಾಣ ಆರಂಭವಾದದ್ದು ರಾಮೇಶ್ವರಂನಲ್ಲಿ. ಮುಕ್ತಾಯಗೊಂಡದ್ದು ಲಂಕೆಯಲ್ಲಿ. ಹಿಮಾಚಲ ಅಂದರೆ ಹಿಮಾಲಯ ಪರ್ವತಶ್ರೇಣಿ (ಅಚಲ = ಪರ್ವತ). ಹಾಗೆ ಆಸೇತುಹಿಮಾಚಲ ಎಂದರೆ ಅಡಿಯಿಂದ ಮುಡಿವರೆಗೆ ಭಾರತದ ಚಿತ್ರಣ.

‘ನಖಶಿಖಾಂತ ಅವನು ಉರಿಯುತ್ತಿದ್ದನು...’ ಎಂಬ ಪದಪ್ರಯೋಗವನ್ನೂ ನೀವು ಓದಿರಬಹುದು/ಕೇಳಿರಬಹುದು. ಇಲ್ಲೂ, ನಖದಿಂದ (ಕಾಲಿನ ಬೆರಳಿನ ಉಗುರು; ನಖ ಎಂದರೆ ಉಗುರು, ಕಾಲಿನ ಬೆರಳಿನದೇ ಆಗಬೇಕೆಂದೇನಿಲ್ಲ, ಆದರೂ ಕಾಲಿನದೇ ಎಂದು ಎಸ್ಸ್ಯೂಮಿಸೋಣ!) ಶಿಖಾ (ಜುಟ್ಟು; ತಲೆಗೂದಲನ್ನು ಕಟ್ಟಿದ ರೀತಿ)ವರೆಗೆ ಅಂದರೆ ಮೈಯಿಡೀ ಎಂದರ್ಥ. ಅಡಿಯಿಂದ ಮುಡಿವರೆಗೆ ಅಂದರೆ ಅದೇ ಅರ್ಥ.

ಹಿರಿಯರೆದುರು ತಲೆತಗ್ಗಿಸಿ ಮಾತನಾಡಬೇಕು ಎಂಬುದೊಂದು ಹಿತನುಡಿ. ಲಕ್ಷ್ಮಣ ತನ್ನ ಅತ್ತಿಗೆ ಸೀತೆಯತ್ತ ಕಣ್ಣೆತ್ತಿ ನೋಡುವ ಅವಿಧೇಯತೆಯನ್ನೆಂದೂ ತೋರಿಸಿದವನಲ್ಲ. ಅವಳ ಪಾದಗಳ ಮೇಲೆ ದೃಷ್ಟಿಯಿಟ್ಟು ಮಾತನಾಡುತ್ತಿದ್ದ ವಿನಮ್ರನವನು. ರಾವಣ ಸೀತೆಯನ್ನು ಕಿಡ್ನ್ಯಾಪ್‌ ಮಾಡಿದಾಗ ಸೀತೆ ಬಿಸಾಡಿದ್ದ ಆಭರಣಗಳ ಗಂಟುಮೂಟೆ ರಾಮ-ಲಕ್ಷ್ಮಣರಿಗೆ ಸಿಕ್ಕಿದಾಗ, ಅದರಲ್ಲಿ ಲಕ್ಷ್ಮಣ ಗುರುತಿಸಿದ್ದು ಸೀತೆಯ ಕಾಲುಂಗುರಗಳನ್ನು ಮಾತ್ರ! ಸೀತೆ ಮುಡಿಯಲ್ಲಿ ಧರಿಸುತ್ತಿದ್ದ ಆಭರಣಗಳ ರೀಡ್‌-ರೈಟ್‌ ಪರ್ಮಿಷನ್‌ ಇದ್ದದ್ದು ರಾಮನಿಗೆ ಮಾತ್ರ. ಅಂತೂ ಇಬ್ಬರೂ ಸೇರಿ ಅಡಿಯಿಂದ ಮುಡಿವರೆಗೂ ಅವು ಸೀತೆಯದೇ ಆಭರಣಗಳು ಎಂಬುದನ್ನು ಖಚಿತಪಡಿಸಿದರೆನ್ನಿ.

ಪಾದುಕಾರೋಹಣ

ರಾಮಯಣದ್ದೇ ಇನ್ನೊಂದು ತುಣುಕು. ಭ್ರಾತೃಪ್ರೇಮದ ಸಾಕಾರಮೂರ್ತಿ ಭರತ ರಾಮನನ್ನು ಕಾಡಿನಿಂದ ಅಯೋಧ್ಯೆಗೆ ಕರೆತರುವಲ್ಲಿ ವಿಫಲನಾದರೂ ರಾಮನ ಪಾದುಕೆಗಳನ್ನು ಪಡೆದು ಅವನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡುಬಂದು ಅಯೋಧ್ಯೆಯ ಸಿಂಹಾಸನದಲ್ಲಿಟ್ಟು ಹದಿನಾಲ್ಕು ವರ್ಷ ರಾಜ್ಯಭಾರ ಮಾಡಿದನು. ರಾಮನ ‘ಅಡಿಯಿಂದ’ ಭರತನ ‘ಮುಡಿಗೆ’ ಪಾದುಕೆಗಳ ಆರೋಹಣ! ರಾಮಾಯಣದಲ್ಲಿ ನನಗೆ ತುಂಬ ಇಷ್ಟವಾಗುವ ಪಾತ್ರಗಳಲ್ಲೊಂದು, ಭರತ.

ಸ್ವಾಮಿ ವಿವೇಕಾನಂದರು ಸರ್ವಧರ್ಮಸಮ್ಮೇಳನದಲ್ಲಿ ಭಾಷಣಕ್ಕಾಗಿ ಚಿಕಾಗೋಕ್ಕೆ ಬಂದಿದ್ದಾಗ ಅವರನ್ನು ಛೇಡಿಸಲೆಂದೇ ಕೆಲವು ಪಾಶ್ಚಾತ್ಯ ವಿದ್ವಾಂಸರು ಪುಸ್ತಕಗಳ ಒಂದು ರಾಶಿಯನ್ನು ತೋರಿಸಿ ‘ನೋಡಿ, ನಿಮ್ಮ ಭಗವದ್ಗೀತೆ ಈ ರಾಶಿಯಲ್ಲಿ ಎಲ್ಲೋ ಕೆಳಗೆ ಸೇರಿಕೊಂಡಿದೆ!’ ಎಂದರಂತೆ. ತಟ್ಟನೆ ಉತ್ತರಿಸಿದ ವಿವೇಕಾನಂದರು, ‘ಆ ಪುಸ್ತಕಗಳ ರಾಶಿಯೆಲ್ಲ ಭಗವದ್ಗೀತೆಯಾಂದನ್ನೇ ಆಧಾರವಾಗಿಟ್ಟು ನಿಂತಿದೆ! ಅದು ನಿಮ್ಮ ಬಾಲಿಶ ಬುದ್ಧಿಗೆ ಹೇಗೆ ತಿಳಿಯಬೇಕು?’ ಎಂದರಂತೆ. ಆಮೇಲೆ ಚಿಕಾಗೋದ ಸಮ್ಮೇಳನದಲ್ಲಿ ಹೇಗೆ ಸ್ವಾಮಿ ವಿವೇಕಾನಂದ ಭಾರತೀಯ ಧರ್ಮ-ಸಂಸ್ಕೃತಿಗಳ ಮಹತ್ವವನ್ನು ಪ್ರಪಂಚಕ್ಕೆಲ್ಲ ತಿಳಿಯಪಡಿಸಿ ಕೀರ್ತಿ ಶಿಖರಕ್ಕೇರಿಸಿದರು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಅಡಿಯಿಂದ ಮುಡಿವರೆಗೆ ಭಾರತೀಯ ಸಂಸ್ಕೃತಿಯ ಔನ್ನತ್ಯವನ್ನು ಜಗಕೆಲ್ಲ ಸಾರಿದ ನಂತರ ಮತ್ತೆ ವಿವೇಕಾನಂದ ಮರಳಿದ್ದು ಭಾರತದ ಅಡಿಗೇ - ಐ ಮೀನ್‌, ಕನ್ಯಾಕುಮಾರಿಗೆ.

ತನ್ನಣ್ಣ ಭರತನ ಅಹಂಕಾರವನ್ನು ಮುರಿದ ಬಾಹುಬಲಿ ವೈರಾಗ್ಯದಿಂದ ದಿಗಂಬರನಾಗಿ ಕಠಿಣ ತಪಸ್ಸಿಗೆ ನಿಂತಾಗ ವರ್ಷಗಟ್ಟಲೆ ಅವನು ಒಂದೇಕಡೆ ನಿಂತಲ್ಲೇ ಇದ್ದುದರಿಂದ ಅವನ ‘ಅಡಿಯಿಂದ ಮುಡಿವರೆಗೆ’ ಕಾಡಿನ ಬಳ್ಳಿಗಳೆಲ್ಲ ಹಬ್ಬಿದ್ದವಂತೆ. ಶ್ರವಣಬೆಳಗೊಳ, ಕಾರ್ಕಳ, ವೇಣೂರು, ಧರ್ಮಸ್ಥಳ - ಈ ನಾಲ್ಕೂ ಕಡೆಯಲ್ಲಿ ಗೊಮಟೇಶ್ವರ ಮೂರ್ತಿಗಳನ್ನು ನೀವು ನೋಡಿರುವಿರಾದರೆ ಶಿಲ್ಪಿಗಳು ಬಾಹುಬಲಿಯ ಮೈಗಂಟಿಕೊಂಡಿದ್ದ ಈ ಬಳ್ಳಿಗಳನ್ನೂ ಸುಂದರವಾಗಿ ಕೆತ್ತಿರುವುದನ್ನು ನೀವು ಗಮನಿಸುತ್ತೀರಿ.

‘ಎನ್ನ ಕಾಲೇ ಕಂಬ... ದೇಹವೇ ದೇಗುಲ... ಶಿರ ಹೊನ್ನ ಕಳಸವಯ್ಯ...’ ಬಸವಣ್ಣನವರ ವಚನದಲ್ಲಿ ಕೂಡ ಅಡಿಯಿಂದ ಮುಡಿವರೆಗೆ ಭಕ್ತಿಯ ಪ್ರವಾಹ. ದೇವರ ಪೂಜೆಯ ಮಂತ್ರದಲ್ಲೂ ಮೊದಲು ದೇವರಿಗೆ ಪಾದ್ಯ, ಅರ್ಘ್ಯ ಸಮರ್ಪಿಸಿ ಆಮೇಲಷ್ಟೇ ತಲೆಗೆ ಮುಡಿದುಕೊಳ್ಳಲು ಹೂವನ್ನೇರಿಸುವುದು.

ಈ ತಲೆಯಿಂದ ಅಂಗುಷ್ಟದವರೆಗೆ ಕೊಂಕಿಲ್ಲ

‘ಅಡಿಯಿಂದ ಮುಡಿವರೆಗೆ’ ಎಂಬುದರ ಮಹತ್ವದ ಬಗ್ಗೆ ಇಷ್ಟೆಲ್ಲ ಸಂಶೋಧನೆಯನ್ನು ನಾನು ನಡೆಸಬೇಕಾಗಿ ಬಂದದ್ದು ಮೊನ್ನೆ ಒಬ್ಬರು ದಟ್ಸ್‌ಕನ್ನಡದಲ್ಲಿ ವಿಚಿತ್ರಾನ್ನ ಪುಟದ ಮೈನ್‌ ಇಂಡೆಕ್ಸ್‌ ‘ಮೇಲಿನಿಂದ ಕೆಳಕ್ಕೆ’ ಇರುವುದರ ಬದಲು ‘ಕೆಳಗಿನಿಂದ ಮೇಲಕ್ಕೆ’ ಇದೆಯಲ್ಲಾ ಎಂದು ತಮ್ಮ ಇಂಡೆಕ್ಸ್‌ ಫಿಂಗರನ್ನು ವಿಚಿತ್ರಾನ್ನ ಇಂಡೆಕ್ಸ್‌ನತ್ತ ಗುರಿಯಿಟ್ಟು ಹೇಳಿದಾಗ! ಅವರಿಗೆ ಸಮಜಾಯಿಷಿ ಹೇಳುವಲ್ಲಿ ಅಡಿಯಿಂದ ಮುಡಿವರೆಗೆ ನನ್ನ ಮೈ ಬೆವತುಹೋಯಿತು.

ಅಡಿಯಿಂದ ಮುಡಿವರೆಗೆ ನನ್ನ ಈ ಸಂಶೋಧನೆ-ಪ್ರತಿಪಾದನೆ ಅವರಿಗೆ ಅರ್ಥವಾಗುತ್ತದೆ, ಅವರಿನ್ನು ಸುಮ್ಮನಿರುತ್ತಾರೆ ಎಂದು ನಾನಂದುಕೊಂಡರೆ ಆದದ್ದು ಉಲ್ಟಾ! ಅವರ ವಾದ ಇನ್ನೂ ಮುಂದುವರಿದಿತ್ತು - ಪ್ರೇಮಲೋಕದಲ್ಲಿ ಜ್ಯೂಹಿಚಾವ್ಲಾಳನ್ನು ಇಂಟ್ರಡ್ಯೂಸ್‌ ಮಾಡಿದ ‘ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡು...’ ಹಾಡಿನಲ್ಲಿ ‘ಈ ತಲೆಯಿಂದ ಅಂಗುಷ್ಟದವರೆಗೆ ಎಲ್ಲ... ಮಾತಿಲ್ಲ ಕೊಂಕಿಲ್ಲ...’ ಎಂದಿದೆ. ಅಲ್ಲಿ ಎಲ್ಲಿದೆ ನಿನ್ನ ‘ಅಡಿಯಿಂದ ಮುಡಿವರೆಗೆ’ ಥಿಯರಿ? ಎಂಬ ಅವರ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ಹಂಸಲೇಖ ಅವರ ಈಮೈಲ್‌ ವಿಳಾಸವೂ ನನಗೆ ಗೊತ್ತಿಲ್ಲ. ಏನು ಮಾಡಲಿ? :-(

ಈಗ ವೇದಿಕೆ ನಿಮ್ಮದು. ನನ್ನ ಪಕ್ಷವನ್ನೇ ನೀವು ವಹಿಸಬೇಕೆಂದೇನಿಲ್ಲ. ಅಡಿಯಿಂದ ಮುಡಿವರೆಗಾಗಲೀ, ತಲೆಯಿಂದ ಅಂಗುಷ್ಟದವರೆಗಾಗಲೀ ನೀವು ಪ್ರತಿಪಾದಿಸುವುದೇನಾದರೂ ಇದ್ದರೆ ಭವ್ಯ ಸ್ವಾಗತ. ನಿಮ್ಮ ರಿಸೋರ್ಸ್‌ಗಳನ್ನೆಲ್ಲ ಆಮೂಲಾಗ್ರ (ಅಡಿಯಿಂದ ಮುಡಿವರೆಗೆ?) ಹುಡುಕಿ ಏನಾದರೂ ಮಾಹಿತಿ ಕಳಿಸುವಿರಾದರೆ ನನ್ನ ವಿಳಾಸ ([email protected])

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X