ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿದು ಬಾ ತಾಯೆ ಎಂದು ಇಂಟರ್ನೆಟ್‌ನಿಂದ ಫೈಲ್‌ಗಳ ಕೆಳಗಿಳಿಸಿ ಸಿ.ಡಿ ಸುಟ್ಟ ನಮಗೆಲ್ಲ ಸುಡುವುದು ಹೊಸತೇನಲ್ಲ !

By Staff
|
Google Oneindia Kannada News


*ಶ್ರೀವತ್ಸ ಜೋಶಿ

Shrivatsa Joshi writes on CD burning‘ನಿಮ್ಮ ಸಿ.ಡಿಗಳನ್ನು ಸುಟ್ಟಾಯಿತು...’ ಯಾಹೂ ಹರಟೆ-ಕಿಟಿಕಿಯಲ್ಲಿ (ಚಾಟ್‌ ವಿಂಡೋ) ನನ್ನ ಮಿತ್ರ ಟೈಪಿಸಿದ್ದ. ನನ್ನಿಂದ ಕೆಲವು ಸಿ.ಡಿಗಳನ್ನು ತೆಗೆದುಕೊಂಡು ಹೋಗಿ ವಾಪಸ್‌ ಕೊಡುವ ಬದಲು (ಪುಸ್ತಕಂ, ವನಿತಾ, ವಿತ್ತಂ ಪರಹಸ್ತಗತಂ ಗತಂ... ಸಂಸ್ಕೃತ ಸುಭಾಷಿತ ಬರೆದವರಿಗೆ ಆಗ ಸಿ.ಡಿಯ ಪರಿಚಯವಿರಲಿಲ್ಲ , ಇಲ್ಲಾಂದರೆ ಸಿ.ಡಿಯನ್ನೂ ಆ ಲಿಸ್ಟ್‌ಗೆ ಸೇರಿಸಿರೋರು), ಸುಟ್ಟುಹಾಕಿದನಲ್ಲ ಎಂದು ನಾನು ಕೋಪಗೊಳ್ಳುವ ಕಾರಣವಿಲ್ಲ. ಯಾಕೆಂದರೆ ಅವನು ‘ಸಿ.ಡಿ ಬರ್ನ್‌ ಮಾಡಿ ಆಯಿತು’ ಅನ್ನೋದನ್ನು ಕನ್ನಡದಲ್ಲಿ ಟೈಪ್‌ ಮಾಡಿದ್ದ ಅಷ್ಟೆ. ಇಂಗ್ಲೀಷಲ್ಲೂ ಫ್ಲಾಪಿ ಡಿಸ್ಕ್‌ ಆದರೆ ಕಾಪಿಮಾಡುವುದು ಎನ್ನುತ್ತೇವೆ. ಸಿ.ಡಿ ಆದರೆ ಒಂದೋ ಬರ್ನ್‌ ಮಾಡುವುದು, ಇಲ್ಲವೆ ಕಟ್‌ ಮಾಡುವುದು ಎನ್ನುತ್ತೇವೆ. ಬಹುಶಃ ಲೇಸರ್‌ ಕಿರಣಗಳಿಂದ ಸಿ.ಡಿಯ ಮೇಲೆ ಬರೆಯುವ ಪ್ರಕ್ರಿಯೆ ‘ಬರ್ನ್‌’ ಅಥವಾ ಕನ್ನಡದಲ್ಲಿ ‘ಸುಡು’ ಕ್ರಿಯಾಪದಕ್ಕೆ ಎಡೆಮಾಡಿರಬೇಕು. ಇಂಟರ್‌ನೆಟ್‌ನಿಂದ mp3 ಫೈಲ್‌ಗಳನ್ನು ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ಇಳಿದು ಬಾ ಎಂದು ಕೆಳಗಿಳಿಸಿ ಸಿ.ಡಿ ಸುಟ್ಟವರೇ ನಾವೆಲ್ಲ. ಹಾಗಾಗಿ ಸಿ.ಡಿ ಸುಡುವ ವಿಷಯ ಹೊಸತೇನಲ್ಲ ನನಗೂ, ನಿಮಗೂ!

ಸಿ.ಡಿಯನ್ನು ಉದ್ದಿನಹಪ್ಪಳ ಎನ್ನುತ್ತಾಳೆ ನನ್ನ ಬಿಲೊವೆಡ್‌ ಹಾಫ್‌-ಶರ್ಟ್‌ (ಒಲವಿನ ಅರ್ಧಾಂಗಿ). ಉದ್ದಿನಹಪ್ಪಳ ಕರಿಯುವುದು ಅಥವಾ ಮೈಕ್ರೋವೇವ್‌ನಲ್ಲಿ ಸುಡುವುದು ಅವಳು ಮಾಡುವ ಸಿ.ಡಿ ಸುಡುವಿಕೆ. ಹೆಂಗಸರು ಕನ್ನಡಿ ನೋಡುವುದು ಜಾಸ್ತಿ. ನನ್ಹೇಂಡ್ತಿಗೆ ಸಿ.ಡಿ ಕೆಲವೊಮ್ಮೆ ಕನ್ನಡಿ ಆಗುವುದೂ ಇದೆ! ಆದರೆ ಆ ಕನ್ನಡಿಯಲ್ಲಿ ಮುಖ ನೋಡಿದರೆ ಮೂಗು ಮಾಯವಾಗಿರುತ್ತದೆ; ಜಾಗ್ರತೆ!

ಸಿ.ಡಿ ಮತ್ತು ಸುಡುವಿಕೆಯ ಬಗ್ಗೆ ಇಲ್ಲಿ ಇನ್ನೂ ಒಂದು ತರ್ಕ ಇದೆ. ಕೆಲವು ವರ್ಷಗಳ ಹಿಂದೆ ಘನ ಕರ್ನಾಟಕ ಸರಕಾರ (ಆರ್‌.ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದಾಗ ಎಂದು ನೆನಪು) ಕೈಗೊಂಡಿದ್ದ ‘ಕಡತಯಜ್ಞ’ ನಿಮಗೆ ನೆನಪಿದೆಯೇ? ಸುಮಾರು ವರ್ಷಗಳಿಂದ (ದಶಕಗಳಿಂದ?) ಮುಚ್ಚಿಟ್ಟಿದ್ದ ಸರಕಾರಿ ಕಡತಗಳ ವಿಲೇವಾರಿ, ಬರ್ಖಾಸ್ತಿಗಾಗಿ ಯೋಜಿಸಿದ ದೊಡ್ಡ ಅಶ್ವಮೇಧಯಾಗ ಅದು. ಕೊಳೆತು ನಾರುತ್ತಿದ್ದ ಕಡತಗಳನ್ನೆಲ್ಲ, ಅವುಗಳಲ್ಲಿದ್ದ ದಾವೆಗಳಿಗೆ ಇತ್ಯರ್ಥ ಹುಡುಕಿ, ಸುಟ್ಟುಹಾಕಿ ನಿರ್ನಾಮ ಮಾಡಿದ ಯಾಗ ಮತ್ತು ಪ್ರಯೋಗ. ಈಗ 21ನೇ ಶತಮಾನದಲ್ಲಿ ಈ-ಗವರ್ನೆನ್ಸ್‌ ಎಂದು ಹೇಳುತ್ತಿರುವ ಸರಕಾರ ದಾಖಲೆಗಳನ್ನೆಲ್ಲ ಸಿ.ಡಿಗಳಲ್ಲಿ ಶೇಖರಿಸಲು ನಿರ್ಧರಿಸಿದ್ದೇ ಆದರೆ ಆಗಲೂ ಒಂದು ಕಡತಯಜ್ಞ (= ಸಿ.ಡಿ ಸುಡುವಿಕೆ = ಸಿ.ಡಿ ಬರ್ನಿಂಗ್‌ = ಸಿ.ಡಿಯಲ್ಲಿ ಮಾಹಿತಿ ಸಂಗ್ರಹ) ನಿರೀಕ್ಷಿಸಬಹುದೇ?

ಕರ್ನಾಟಕದ ಮಾತಿರಲಿ. ಇಲ್ಲಿ ಅಮೆರಿಕದಲ್ಲಿ ಕೂಡ ಕಳೆದ ವರ್ಷ ಎನ್ರಾನ್‌ ಕಂಪೆನಿ ಮತ್ತು ಅವರ ಆಡಿಟಿಂಗ್‌ ಮಾಡಿದ್ದ ಆಂಡರ್ಸನ್‌ ಕಂಪೆನಿ ಸೇರಿ ಮಹತ್ವದ ದಾಖಲೆಗಳನ್ನೆಲ್ಲ ಅವು ಕಾಗದಪತ್ರಗಳಲ್ಲಿದ್ದುದರಿಂದ ‘ಪೇಪರ್‌ ಶ್ರೆಡರ್‌’ನಲ್ಲಿ ಹಾಕಿ ನಾಶಮಾಡಿದರು. ಆ ದಾಖಲೆಗಳು ಒಂದು ವೇಳೆ ಸಿ.ಡಿಗಳಲ್ಲಿ ಸುಡಲ್ಪಟ್ಟಿದ್ದರೆ? ಪೇಪರ್‌ಶ್ರೆಡಿಂಗ್‌ ಮಾಡಿದ್ದೇ ಆ ಹಗರಣ ಪ್ರಪಂಚದಾದ್ಯಂತ ಹರಡಲು ಕಾರಣವಾಯಿತು. ಇನ್ನು ಸಿ.ಡಿ ಸುಟ್ಟಿದ್ದರೆ ಇನ್ನೂ ವೇಗವಾಗಿ ಚಟಿಲ್‌-ಚಿಟಿಲ್‌ ಸದ್ದಿನೊಂದಿಗೆ ಸಿಡಿಯುತ್ತಿತ್ತೋ ಏನೋ.

ಸಿ.ಡಿ ಸುಡುವುದೆನ್ನುವಾಗ ಕರ್ನಾಟಕದ್ದೇ ಇನ್ನೂ ಒಂದು ಸುದ್ದಿ ನೆನಪಾಗುವುದೆಂದರೆ ಕಳೆದ ವರ್ಷ ಕರ್ನಾಟಕದ ಒಂದು ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಸೇರಿ ನಾವೆಲ್ಲ ಮುಜುಗರಪಡುವಂತಹ ಘಟನಾವಳಿಯಾಂದನ್ನು ಸಿ.ಡಿಯಲ್ಲಿ ಸುಟ್ಟು ಕೊನೆಗೂ ಆ ಪ್ರಕರಣ ಪೊಲೀಸ್‌ ಸಾನಿಧ್ಯದಲ್ಲಿ ಇತ್ಯರ್ಥಗೊಂಡದ್ದು. ಸಿ.ಡಿ ಸುಡುವಾಗ ಇದು ಇಷ್ಟೊಂದು ಪ್ರಮಾಣದಲ್ಲಿ ಸಿಡಿಯಬಹುದು, ತಮ್ಮ ಕೈಯೂ ಸುಡಬಹುದು ಎಂದು ಬಹುಶಃ ಅದನ್ನು ಸುಟ್ಟವರಿಗೆ ಕಲ್ಪನೆಯಿರಲಿಲ್ಲ.

ಸಿಡಿ ಮತ್ತು ಸುಡುವುದಕ್ಕೆ ಸಂಬಂಧಿಸಿದ್ದೇ ಇನ್ನೊಂದು. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಆಚರಣೆಯಲ್ಲಿರುವ ಜನಪದ ಉತ್ಸವಗಳಲ್ಲೊಂದು ಪ್ರಕಾರ ‘ಸಿಡಿ’. ಹರಕೆ ಹೊತ್ತವರು ನಿಗಿನಿಗಿ ಉರಿಯುತ್ತಿರುವ ಕೆಂಡದರಾಶಿಯ ಮೇಲೆ ನಡೆಯುವುದನ್ನು, ನಾಲಿಗೆಯ ಮೂಲಕ ಸೂಜಿ, ಚೂರಿ ತೂರಿಸಿಕೊಳ್ಳುವುದು ಇತ್ಯಾದಿಯನ್ನು ಸಿಡಿ ಆಡುವುದು ಎನ್ನುತ್ತಾರೆ. ರೋಮಾಂಚಕಾರಿ ಮತ್ತು ಸ್ವಲ್ಪ ಭಯಾನಕ ದೃಶ್ಯ ಅದು. ಆದರೂ ಆಶ್ಚರ್ಯವೆಂದರೆ ಸಿಡಿ ಆಡುವವರ ಪಾದಗಳು ಸುಡುವುದಿಲ್ಲ ! ನೀವು ಯಾವಾಗಾದರೂ ಸಿಡಿ ಆಟ ನೋಡಿದ್ದೀರಾ?

ಸಿಡಿ ಆಟ ಬೇಡ. ಕ್ರಿಕೆಟ್‌ ಆಟಕ್ಕೆ ಬರೋಣ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಮ್ಯಾಚ್‌ ನಡೆಯುವಾಗ ಆಕಾಶವಾಣಿಯಲ್ಲಿ ಕನ್ನಡದಲ್ಲಿ ವೀಕ್ಷಕ ವಿವರಣೆ ಇರುತ್ತದೆ. ದಾಂಡು, ಓಟ, ಹುದ್ದರಿ, ಗೂಟ ರಕ್ಷಕ, ಕರಾರುವಾಕ್ಕಾಗಿ ಚೆಂಡೆಸೆತ, ಕ್ಷೇತ್ರರಕ್ಷಣೆ ಇತ್ಯಾದಿ ಶಬ್ದಗಳ ಪರಿಚಯ ನಿಮಗೆ ಆಗುವುದು ಆಗಲೇ. ಹಿಂದೆಲ್ಲ ಗುಂಡಪ್ಪ ವಿಶ್ವನಾಥ್‌, ತಮ್ಮ ವಿಖ್ಯಾತ ಸ್ಕ್ವೇರ್‌ಕಟ್‌, ಸ್ಕ್ವೇರ್‌ಡ್ರೈವ್‌ಗಳಿಂದ ಅಥವಾ ಈಗ ರಾಹುಲ್‌ ದ್ರಾವಿಡ್‌ ತಮ್ಮ ಕ್ಲಾಸಿಕ್‌ ಶೈಲಿಯಿಂದ ಚೆಂಡನ್ನು ಬೌಂಡರಿಗಟ್ಟಿ ಓಟಗಳನ್ನು, ಓಟಗಳ ಶತಕವನ್ನು ‘ಸಿಡಿ’ಸುವ ಸೊಗಸನ್ನು ಕನ್ನಡ ಕಾಮೆಂಟರಿಯಲ್ಲಿ ಕೇಳಿದ ಅನುಭವ ನಿಮಗಿದೆಯೇ?

‘ಸಿಡಿದೆದ್ದ ಸ್ತ್ರೀ’ (ಲೇ: ಲೀಲಾವತಿ ಆರ್‌ ಪ್ರಸಾದ್‌) ಒಂದು ಕನ್ನಡ ಪುಸ್ತಕ. ನಾನು ಓದಿಲ್ಲ, ಆದರೆ ಇಂಟರ್‌ನೆಟ್‌ನಲ್ಲಿ ಕ್ಯಾಟಲಾಗ್‌ನಲ್ಲಿ ನೋಡಿದೆ. ‘ಸಿಡಿದೆದ್ದ ಗಂಡು’ ಒಂದು ಕನ್ನಡ ಸಿನೆಮಾದ ಹೆಸರು. ‘ಸಿಡಿದೆದ್ದ ಸಹೋದರ’ ವಿಷ್ಣುವರ್ಧನ್‌ ಅಭಿನಯಿಸಿದ ಸಿನೆಮಾ. ‘ಭೂತಯ್ಯನ ಮಗ ಅಯ್ಯು’ ಚಿತ್ರದ ‘ಮಲೆನಾಡ ಹೆಣ್ಣ ಮೈಬಣ್ಣ...’ ಹಾಡಿನಲ್ಲಿ ‘ಮಾತು ನಿಂದು ಹುರಿದ ಅರಳು ಸಿಡಿದ್ಹಂಗೆ...’ ಎಂಬ ಸಾಲು ಕೂಡ ನಿಮ್ಮ ನೆನಪಿಗೆ ಬರಬಹುದು!

ಇಸ್ರೇಲ್‌, ಪ್ಯಾಲೆಸ್ತೈನ್‌ ನಡುವಣ ಜಂಗಿಕುಸ್ತಿಯಲ್ಲಿ ಎಷ್ಟೆಲ್ಲ ಮಾನವ ಬಾಂಬ್‌ಗಳು ಸಿಡಿಯುತ್ತಿಲ್ಲ! ಭಯೋತ್ಪಾದನೆಗೆ ಇನ್ನೊಂದು ರೂಪವೇ ಈ ರೀತಿ ಮಾನವಬಾಂಬ್‌ ಆಗಿ ಸಿಡಿದು ವಿಧ್ವಂಸಕಾರಿಯಾಗುವುದು ಎನಿಸಿ ಬಿಟ್ಟಿದೆ. ಈ ಬಗ್ಗೆಯೇ ನನ್ನ ಹಿತೈಷಿ, ಹಿರಿಯ ಸ್ನೇಹಿತ ಡಾ।ಮೈ.ಶ್ರೀ.ನಟರಾಜರು ಬರೆದ ಕವನ ‘ಸಿಡಿಯುವ ಹುಡುಗಿ’ ನೀವು ಓದಿದ್ದೀರಾ? ದಟ್ಸ್‌ಕನ್ನಡದಲ್ಲೂ ಅದು ಪ್ರಕಟವಾಗಿದೆ ಮತ್ತು ಇತ್ತೀಚಿನ ಅವರ ಕವನ ಸಂಕಲನ ‘ಮಧುಚಂದ್ರ ಸಿರಿಕೇಂದ್ರ’ದಲ್ಲೂ ಪ್ರಕಟವಾಗಿದೆ.

ವಿಚಿತ್ರಾನ್ನಕ್ಕೆ ನಿಮ್ಮ ಪ್ರತಿಕ್ರಿಯೆ ಬರೆದು ತಿಳಿಸಿ. ಅದಕ್ಕಿಂತಲೂ, ಸಿ.ಡಿ (ಕಾಂಪ್ಯಾಕ್ಟ್‌ ಡಿಸ್ಕ್‌)ಗೆ ಸೂಕ್ತ ಕನ್ನಡ ಪದ ನಿಮ್ಮಲ್ಲಿದ್ದರೆ ಅದನ್ನು ಇತ್ತ ಸಿಡಿಸಿ. ಬಹುಮಾನವಾಗಿ ನಿಮ್ಮಿಷ್ಟದ ಒಂದು ಸಿ.ಡಿ ಸುಟ್ಟುಕೊಡಲಾಗುವುದು ಎಂದು ಬೇರೆ ಹೇಳಬೇಕಿಲ್ಲ ತಾನೆ? ವಿಳಾಸ - [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X