ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲೆಲ್ಲು ಸಂಗೀತವೇ ಎಲ್ಲೆಲ್ಲು ಸೌಂದರ್ಯವೇ!

By Staff
|
Google Oneindia Kannada News

*ಶ್ರೀವತ್ಸ ಜೋಶಿ

Saavira Kambada Basadiಕೆಲವು ವಾರಗಳ ಹಿಂದೆ ‘ಚಿತ್ರಗೀತೆಗಳ ಒಗ್ಗರಣೆಯ ಘಮಘಮ’ ಶೀರ್ಷಿಕೆಯಾಂದಿಗೆ ಬಡಿಸಿದ್ದ ವಿಚಿತ್ರಾನ್ನವನ್ನು ಬಹಳ ಮಂದಿ ಮೆಚ್ಚಿಕೊಂಡಿದ್ದರು. ಈಗ ನನಗೆ ಗೊತ್ತಾಗುತ್ತದೆ; ಯಾಕೆ ಟೀವಿಯಲ್ಲೆಲ್ಲ ಹೆಚ್ಚಿನ ಪ್ರೋಗ್ರಾಂಗಳು ಫಿಲಂ ಆಧಾರಿತ ಅಥವಾ ಫಿಲಂ ಸಾಂಗ್ಸ್‌ ಆಧಾರಿತವಾಗಿರುತ್ತವೆಯೆಂದು!

ನಮ್ಮ ದಟ್ಸ್‌ಕನ್ನಡ.ಕಾಂನ ಸಂಪಾದಕರೂ ಹೇಳುವಂತೆ ಈ ಕನ್ನಡ ಪೊರ್ಟಲ್‌ನಲ್ಲಿ ಕೂಡ ಫಿಲಂ ಸಂಬಂಧಿ ಪುಟಗಳಿಗೇ ಹೆಚ್ಚು ‘ವೆಬ್‌ ಹಿಟ್ಸ್‌’ ಬರುವುದಂತೆ ! ವಿಚಿತ್ರಾನ್ನಕ್ಕೂ ಈ ಚಾಳಿ ಬಂತೇ ಎಂದು ನೀವು ತಿಳಿದುಕೊಳ್ಳಬಾರದು ಎನ್ನುವ ಮನವಿಯಾಂದಿಗೆ, ಈ ಸಲದ ವಿಚಿತ್ರಾನ್ನದಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣದಿಂದ ಸಾಕಷ್ಟು ಭಾರಿ (ಆಕಾಶವಾಣಿ ಭದ್ರಾವತಿಯಲ್ಲಿ ಹವಾಮಾನ ವರದಿ ಹೇಳುವಂತೆ) ಪ್ರಮಾಣದಲ್ಲಿ ಚಿತ್ರಗೀತೆಗಳ ಬಳಕೆ ಆಗಿದೆ ಎಂಬ ಸೂಚನೆ. ‘ವನ್ಸ್‌ ಇನ್‌ ಎ ವ್ಹೈಲ್‌ ಓಕೆ’ ಅಂತ ನಿಮ್ಮ ಆಶೀರ್ವಾದ ಇದೆ ಅನ್ನೋದು ಗೊತ್ತು ನನಗೆ!

ಸರಿ. ಈಗ ಪ್ರಸ್ತುತ ವಿಷಯಕ್ಕೆ ಬರೋಣ. ‘ಎಲ್ಲೆಲ್ಲು ಸಂಗೀತವೇ ಎಲ್ಲೆಲ್ಲು ಸೌಂದರ್ಯವೇ... ಕೇಳುವ ಕಿವಿಯಿರಲು ನೋಡುವ ಕಣ್ಣಿರಲು...’ ಎಂದು ‘ಮಲಯಮಾರುತ’ ಚಿತ್ರದಲ್ಲಿ, ವಿಷ್ಣುವರ್ಧನ್‌ ಅಭಿನಯದಲ್ಲಿ , ಕೆ.ಜೆ.ಏಸುದಾಸ್‌ ಕಂಠಮಾಧುರ್ಯದಲ್ಲಿ, ವಿಜಯಭಾಸ್ಕರ್‌ ಸಂಗೀತ ನಿರ್ದೇಶನದಲ್ಲಿ ಗೀತೆಯನ್ನು ನೀವೆಲ್ಲ ಕೇಳಿದ್ದೀರಿ. ಇದರಲ್ಲಿ ‘ಎಲ್ಲೆಲ್ಲು ಸೌಂದರ್ಯವೇ’ ಭಾಗವನ್ನು ಜಾನ್‌ ಕೀಟ್ಸ್‌ನ A thing of beauty is a joy forever ಕವನದಿಂದ ನಾವೆಲ್ಲ ಬಲ್ಲೆವು. ಹಾಗಾಗಿ ‘ಎಲ್ಲೆಲ್ಲು ಸಂಗೀತವೇ’ ಭಾಗವನ್ನಷ್ಟೇ ಪರಿಶೀಲಿಸುವಾ. ಆಗದೇ?

ನಮ್ಮೂರಾದ ಕಾರ್ಕಳದ ಪಕ್ಕದಲ್ಲಿ ಇರುವುದು ಮೂಡಬಿದ್ರಿ. ಜೈನಕಾಶಿ ಎಂದು ಪ್ರಖ್ಯಾತವಾದ ಅಲ್ಲಿ ಸಾವಿರ ಕಂಬಗಳ ಬಸದಿ ಒಂದು ಪ್ರವಾಸಿ ಆಕರ್ಷಣೆ. ಸಾವಿರ ಕಂಬಗಳ ಈ ಸುಂದರ ಕಟ್ಟಡದ ವಿಶೇಷವೇನಪ್ಪಾ ಅಂದರೆ ಕೈಯಿಂದ ಅಥವಾ ಸಣ್ಣ ಸುತ್ತಿಗೆಯಿಂದ ಬಡಿದಾಗ ಒಂದೊಂದು ಕಂಬದಿಂದಲೂ ಒಂದೊಂದು ಶ್ರುತಿಯ ಸಂಗೀತ ಹೊಮ್ಮಿಬರುವುದು! ಮೂಡಬಿದ್ರಿಯಂತೆಯೇ, ’ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ ಅನುದಿನ ಅನುಕ್ಷಣ ಕುಣಿಯುತಲಿ... ಶಿಲೆಗಳು ಸಂಗೀತವಾ ಹಾಡಿವೆ..’! ಅದಕ್ಕೇ ಇರಬೇಕು ‘ಎಲ್ಲೆಲ್ಲು ಸಂಗೀತವೇ’ ಎಂದು ಸ್ಫೂರ್ತಿ ಬಂದದ್ದು ಕವಿಗೆ. (ಮತ್ತು ಈ ವಿಷಯದ ಮೇಲೊಂದು ವಿಚಿತ್ರಾನ್ನ ತಯಾರಿಸುವಾ ಎಂದು ನನಗೆ:-))

ಬಸದಿಯ ಸಂಗೀತದ ಬಗ್ಗೆ ತಿಳಿದುಕೊಂಡ ನಂತರ ಈಗ ಬಸ್ಸುಗಳ ಸಂಗೀತದ ಕುರಿತು. ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಕೊಂಡ ಎರಡು ಸಿಟಿಬಸ್ಸುಗಳು ಒಂದಕ್ಕೊಂದು ಹಾಡು ಹೇಳಿಕೊಳ್ಳುತ್ತವೆಯೆಂದರೆ ನಿಮಗೆ ಆಶ್ಚರ್ಯವಾಗುವುದಿಲ್ಲವೇ? ಯಾವ ಹಾಡು ಅಂತೀರಾ? ‘1942 ಎ ಲವ್‌ ಸ್ಟೋರಿ’ ಚಿತ್ರದ ‘ಕುಛ್‌ ನಾ ಕಹೋ ಕುಚ್‌ ಭೀ ನಾ ಕಹೋ... ಕ್ಯಾ ಕೆಹ್‌ನಾ ಹೇ ಕ್ಯಾ ಸುನ್‌ನಾ ಹೇ... ಓರ್‌ ಇಸ್‌ ಪಲ್‌ ಮೇ... ಕೋಯೀ ನಹೀ ಹೈ...‘ಬಸ್‌’ ಏಕ್‌ ಮೇ ಹೂಂ... ‘ಬಸ್‌’ ಏಕ್‌ ತುಮ್‌ ಹೋ...’

ಈ ಟ್ರಾಫಿಕ್‌ ಜಾಮ್‌ ಆದ ರಸ್ತೆಯ ಈ ಪಕ್ಕಕ್ಕೆ ಕೆನರಾ ಬ್ಯಾಂಕ್‌ನ ಶಾಖೆ. ಆ ಪಕ್ಕಕ್ಕೆ ಸಿಟಿಬ್ಯಾಂಕ್‌ನ ಶಾಖೆ. ಅವುಗಳದೂ ಪರಸ್ಪರ ಹಾಡು. ‘ನಾನೊಂದು ತೀರ... ನೀನೊಂದು ತೀರ... ಮನಸು ಮನಸು ದೂರ ಪ್ರೀತಿ ಹೃದಯ ಭಾರ...’! ಯಾಕೆ ಈ ಹಾಡನ್ನು ಅವು ಸೆಲೆಕ್ಟ್‌ ಮಾಡಿವೆಯೆಂದು ನನಗೆ ‘ಹೊಳೆ’ದದ್ದು ‘ಹೊಳೆ’ಯಿಂದಲೇ. ಹೊಳೆ ಅಥವಾ ನದಿಯ ಇಕ್ಕೆಲಗಳನ್ನು ಇಂಗ್ಲೀಷಲ್ಲಿ ‘ಬ್ಯಾಂಕ್‌’ ಎನ್ನುತ್ತಾರೆ. ಕನ್ನಡದಲ್ಲಿ ನದೀ ತೀರ ಎನ್ನುತ್ತೇವೆ. ಈ ಬ್ಯಾಂಕ್‌ಗಳು ತೀರಾ ಕನ್ನಡೀಕರಣಕ್ಕೆ ಹೋಗಿ ‘ನಾನೊಂದು ತೀರ ... ನೀನೊಂದು ತೀರ...’ ಹಾಡುತ್ತಿದ್ದುವು. (ಬ್ಯಾಂಕ್‌ನಿಂದ ಸಾಲ ಪಡೆದು ತೀರಿಸಲಾರದ ಬಡ ಬೋರೇಗೌಡನಿಗೆ ಆ ತೀರವೂ ದೂರ, ಈ ತೀರವೂ ದೂರ. ಆತ ನಡುನೀರಿನಲ್ಲಿ ನಿಂತ ಅಧೀರ!)

ಬ್ಯಾಂಕ್‌ನಿಂದ ಸಾಲ ಪಡೆದಾದರೂ ಕಂಪ್ಯೂಟರ್‌ ಕೋರ್ಸ್‌ ಮಾಡಿ ವಿದೇಶಕ್ಕೆ ಹಾರಬೇಕು ಎಂದು ಕನಸುಕಾಣುವ ಕಾಲವೊಂದಿತ್ತು. ಹಾಗೆ ಕನಸು ಕಂಡು ‘ಇ.ಆರ್‌.ಪಿ’ ತಾಂತ್ರಿಕತೆಯಲ್ಲಿ ‘ಬಾನ್‌’ ಸಾಫ್ಟ್‌ವೇರ್‌ಗೆ ಒಳ್ಳೆಯ ಬೇಡಿಕೆಯಿದೆಯೆಂದು ಒಬ್ಬಾತ ಕಂಪ್ಯೂಟರ್‌ ಕೋರ್ಸ್‌ ಮಾಡಿದ. ಅವನಿಗೆ ಬಾನ್‌ ಆಧಾರಿತ ಒಂದು ಉದ್ಯೋಗವೂ ಸಿಕ್ಕಿತು. ‘ಬಾನ್‌’ಇಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಈ ಕೊನೆಯಿದೇ.. ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು... ಎಂದು ಅವನ ಹಿತೈಷಿಗಳು ಹೇಳಿದ್ದರೂ ಮುನ್ನಡೆದ. ಅವನು ಸೇರಿದ್ದ ಕಂಪೆನಿ ಮುಗ್ಗರಿಸಿತು. ಆತನಿಗೀಗ ‘ಡೌನ್‌ ಟು ಅರ್ತ್‌’ ಅಂದರೇನೆಂದು ಅರ್ಥವಾಗಿದೆ. ಪುಣ್ಯಕ್ಕೆ ಅವನ ಸಹಧರ್ಮಿಣಿ ಅವನ ಕೈಬಿಟ್ಟಿಲ್ಲ. ‘ಬಾನ್‌’ಅಲ್ಲು ನೀನೆ ಭುವಿಯಲ್ಲು ನೀನೆ... ಎಲ್ಲೆಲ್ಲು ನೀನೆ ನನ್ನಲ್ಲು ನೀನೆ...’ ಎಂದು ಹೆಜ್ಜೆಹಾಕುತ್ತಾಳೆ ಅವನ ಹಿಂದೆ.

ಪಾರಚ್ಯೂಟ್‌ ನೆರವಿನೊಂದಿಗೆ ಬಾನ್‌ನಿಂದಿಳಿದ ನಂತರ ಅವನು ತನ್ನ ಮೂಲವಿದ್ಯೆಗೆ (ಇಂಜನಿಯರಿಂಗ್‌ ಕಾಲೇಜಲ್ಲಿ ಅವನು ಎಲೆಕ್ಟ್ರಿಕಲ್‌ ಇಂಜನಿಯರಿಂಗ್‌ ಓದಿದ್ದು) ತೊಡಗಿದ್ದಾನೆ. ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌ ಮತ್ತು ಸೋಲ್ಡರ್‌ಗನ್‌ ಗಳು ಈಗ ಅವನ ಒಡನಾಡಿಗಳು. ಅಲ್ಲೂ ಸಂಗೀತವೇ! ‘ಬೆಸುಗೆ’ ಚಿತ್ರದ ಟೈಟಲ್‌ ಸಾಂಗ್‌! ಆ ಹಾಡಿನಲ್ಲಿ ಬೆಸುಗೆ ಎಂಬ ಪದ 52 ಸಲ ಬರುವುದೂ ಮತ್ತು ಈ ಆಸಾಮಿ ದಿನಕ್ಕೆ ಕನಿಷ್ಟ 52 ಸಾಲ್ಡರಿಂಗ್‌ ಜಾಬ್ಸ್‌ ಮುಗಿಸುವುದೂ ಸರಿಯಾಗಿದೆ. ಬೆಸುಗೆ ಬೆಸುಗೆ ಬೆಸುಗೆ... ಜೀವನವೆಲ್ಲ ಸುಂದರ ಬೆಸುಗೆ...

ಇಲ್ಲೊಂದು ಉಪಕಥೆ. ಬೆಸುಗೆ ಚಿತ್ರದ ಹಾಡಿನ ಪ್ರಸ್ತಾಪ ಬಂದಾಗ ನೆನಪಾಯಿತು. ಸಿದ್ದಯ್ಯ ಪುರಾಣಿಕ ಅವರು ಬರೆದ ‘ಅಜ್ಜನ ಕೋಲಿದು ನನ್ನಯ ಕುದುರೆ’ ಮಕ್ಕಳ-ಕವಿತೆ ನಿಮಗೆ ಗೊತ್ತಿರಬಹುದು. ಆದರೆ ಆ ಪದ್ಯವನ್ನು ‘ಬೆಸುಗೆ’ ಹಾಡಿನ ಧಾಟಿಯಲ್ಲಿ ಹಾಡಬಹುದೆಂಬ ವಿಚಾರ ನಿಮಗೆ ಗೊತ್ತಿಲ್ಲದಿರಬಹುದು! ಒಮ್ಮೆ ಟ್ರೈ ಮಾಡಿ. ‘ಅಜ್ಜನ ಕೋಲಿದು ನನ್ನಯ ಕುದುರೆ... ’ ಹಾಡಿನ ಸಾಲುಗಳು ನಿಮಗೆ ಬಾಯಿಪಾಠವಾಗಿರದಿದ್ದರೆ, ಕನ್ನಡಾಭಿಮಾನಿ ಯು.ಬಿ.ಪವನಜ ಅವರು ವಿಶ್ವಕನ್ನಡ.ಕಾಂ ನ ಹಳೆಸಂಚಿಕೆಗಳ ಈ ಪುಟದಿಂದ ಅದನ್ನು ನಿಮಗೊದಗಿಸಲು ಒಪ್ಪುತ್ತಾರೆ ಎಂಬ ಭರವಸೆ ನನಗಿದೆ. http://www.vishvakannada.com/archives/html/vol4no7/puranik.htm ಒಟ್ಟಿನಲ್ಲಿ ನೀವು ಬೆಸುಗೆ ಹಾಡಿನ ಧಾಟಿಯಲ್ಲಿ ಕುದುರೆ ಹಾಡನ್ನು ಹಾಡಬೇಕು. ಅದು ನನ್ನ ಬಯಕೆ.

ಕೊನೆಯಲ್ಲಿ ಇನ್ನೊಂದು ಸಣ್ಣವಿಷಯ. ಎಷ್ಟು ಸಣ್ಣದೆಂದರೆ ಇರುವೆಯಷ್ಟು ಸಣ್ಣದು. ಅದೇನೆಂದರೆ, ಏಕದಿಕ್ಕಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಾಲಿನಲ್ಲಿ ಇರುವೆಗಳು ಹೋಗುತ್ತಿರುವಾಗ, ಒಂದೇ ಒಂದು ಇರುವೆ ಅಪೋಸಿಟ್‌ ಡೈರೆಕ್ಷನ್‌ನಲ್ಲಿ ಬರುವ ದೃಶ್ಯ. ಅದು ಯಾಕೆ ಆ ಥರ ಬರುತ್ತದೆಂದರೆ, ‘ಎಲ್ಲಿರುವೆ ಮನವ ಕಾಡುವ ರೂಪಸಿಯೇ...’ ಎಂದು ತನ್ನ ಸಂಗಾತಿ ಇರುವೆಯನ್ನು ಹುಡುಕುತ್ತ-ಹಾಡುತ್ತ ಬರುತ್ತದೆ! ಈಗ ನಿಮಗೆ ಚೆನ್ನಾಗಿ ಅರ್ಥವಾಯಿತು - ‘ಎಲ್ಲೆಲ್ಲು ಸಂಗೀತವೇ...’ ಹೌದೋ ಅಲ್ಲವೋ ತಿಳಿಸಲು ನೀವು ನನಗೆ ಪತ್ರ ಬರೆದರೆ ([email protected]) ಆಗ ನನಗೂ ಅರ್ಥವಾಗುತ್ತದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X