• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗೀತೆಗಳ ಮೂಲಕ ಪುಟ್ಟ ಸಂಸಾರದ ಚಿತ್ರಣ. ಓದಿನ ಮಜಾ ಅಷ್ಟೇ ಅಲ್ಲ , ಕೆಣಕು ತಿಣುಕೂ ಇದೆ. ಗೆದ್ದವರಿಗೆ ಕಾದಿದೆ ಬಹುಮಾನ.

By Staff
|

*ಶ್ರೀವತ್ಸ ಜೋಶಿ

Vichitraannakke Hadugala Oggarane ‘ಅ ಆ ಇ ಈ ಕನ್ನಡದ ಅಕ್ಷರಮಾಲೆ... ಅಮ್ಮ ಎಂಬುದು ಕಂದನ ಕರುಳಿನ ಕರೆಯೋಲೆ ...’ ಅಮ್ಮನ ಅಟೆನ್ಷನನ್ನು ಡ್ರಾಯಿಸಲು ಒಂದೇ ಸಮನೆ ಅಳುತ್ತಿದ್ದ ಮಗುವನ್ನೆತ್ತಿಕೊಂಡು ಆ ಮಹಾತಾಯಿ ತೊಟ್ಟಲಲ್ಲಿಟ್ಟು ತೂಗುತ್ತಿದ್ದಳು: ‘ಲಾಲಿ ಲಾಲಿ ಸುಕುಮಾರ.... ಲಾಲಿ ಮುದ್ದು ಬಂಗಾರ... ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ...’ ಆದರೆ ಭಕ್ತಪ್ರಹ್ಲಾದದಂತಹ ಪೌರಾಣಿಕ ಚಿತ್ರದ ಹಾಡು ಈ ಮಾಡರ್ನ್‌ ಮಗುವಿಗೆಲ್ಲಿ ಇಂಪಾಗಬೇಕು? ಅದಕ್ಕೆ ಬೇಕು ರವಿಚಂದ್ರನ್‌, ಉಪ್ಪಿಯವರಂಥ ಮಾಡರ್ನ್‌ ನಟರ ಹಾಡುಗಳು. ಅದಕ್ಕೇ, ‘ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವಾ... ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ....’ ಮಗುವನ್ನು ನಿದ್ರಿಸುವಲ್ಲಿ ಸಫಲವಾಯಿತು.

ಈ ಮಗುವಿನ ಅಪ್ಪನ ಪರಿಚಯ ಈಗ. ಆತ ರಸಿಕವಿ. ಅಂದರೆ ರಸಿಕ ಮತ್ತು ಕವಿ. ಮದುವೆಯಾಗುವ ಮೊದಲು ಗುನುಗುನಿಸುತ್ತಿದ್ದ ‘ವಸಂತ ಬರೆದನು ಒಲವಿನ ಓಲೆ... ಚಿಗುರಿದ ಎಲೆ ಎಲೆ ಮೇಲೆ... ಪಂಚಮದಲ್ಲಿ ಹಾಡಿತು ಕೋಗಿಲೆ... ಪ್ರೇಮಿಗೆ ಓರ್ವಳೆ ನಲ್ಲೆ...’ ಈಗಲೂ ನೆನಪಾಗುತ್ತದೆ ಅವನಿಗೆ. ಆದರೆ, ‘ಲೋಕವೆ ಹೇಳಿದ ಮಾತಿದು... ವೇದದ ಸಾರವೆ ಕೇಳಿದು... ನಾಳಿನ ಚಿಂತೆಯಲ್ಲಿ ಬಾಳಬಾರದು... ಬಾಳಿನ ಮೂಲವಿಲ್ಲಿ ಕೇಳಬಾರದು... ಪ್ರೀತಿ ಮಾಡಬಾರದು... ಮಾಡಿದರೆ ಜಗಕೆ ಹೆದರಬಾರದು...’ ಎಂದು ನಿರ್ಧರಿಸಿ, ಪ್ರೀತಿಸಿ, ಮದುವೆಯಾಗಿ ಈಗ ಮಾತ್ರ ‘ದಾರಿ ಕಾಣದಾಗಿದೆ ರಾಘವೇಂದ್ರನೆ ... ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ...’ ಎಂದು ಪ್ರಲಾಪಿಸುತ್ತಾನೆ. ಯಾವಾಗಲೂ ಅಲ್ಲ , ಕೆಲವೊಮ್ಮೆ :-)

ಈ ಅಪ್ಪ-ಅಮ್ಮನಿಗೆ, ಈಗ ತೊಟ್ಟಿಲಲ್ಲಿರುವ ಮುದ್ದು ಕಂದನಲ್ಲದೆ ಇನ್ನೊಬ್ಬ ಮಗನಿದ್ದಾನೆ ಸುಮಾರು ಐದಾರು ವರ್ಷದವನು. ಶಾಲೆಗೆ ಹೋಗುತ್ತಾನೆ. ‘ನಾಲ್ಕೊಂದ್ಲ ನಾಲ್ಕು.. ನಾಲ್ಕೆರಡ್ಲ ಎಂಟು... ಇಷ್ಟೇ ಲೆಕ್ಕದ ನಂಟು... ಅಷ್ಟೇ ಲೆಕ್ಕದ ನಂಟು...’ ಎಂದು ತನ್ನ ಗಣಿತ ಮಾಷ್ಟ್ರು ಕೊಟ್ಟಿದ್ದ ಹೋಮ್‌ವರ್ಕ್‌ ಮುಗಿಸಿ ಆಟ ಆಡಲು ಹೋಗುವ ಕಾತರ ಅವನಿಗೆ. ಹಿಂದಿನ ದಿನವಷ್ಟೇ ಆಟದಲ್ಲಿ ಗೆಳೆಯನೊಬ್ಬ ಮೋಸ ಮಾಡಿದ್ದನ್ನು ತೀರಿಸಲು ಹುಮ್ಮಸ್ಸಿನಲ್ಲಿದ್ದ ಅವನು ‘ಟಿಕ್‌ ಟಿಕ್‌ ಟಿಕ್‌ ಟಿಕ್‌ ಬರುತಿದೆ ಕಾಲ... ಮುಗಿವುದು ನಿನ್ನ ಮೋಸದ ಜಾಲ... ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ... ಮಾನವ ಗೌರವ ನಿನಗಿಲ್ಲ... ಎಚ್ಚರಿಕೆ... ಮಾನವ ಎಚ್ಚರಿಕೆ...’ ಎಂದು ಹಾಡುತ್ತ ಓಡಿಯೇ ಬಿಟ್ಟ. ಆದರೆ ಮೈದಾನದಲ್ಲಿ ಹುಡುಗರೆಲ್ಲ ಯುದ್ಧಸನ್ನದ್ಧರಾಗಿದ್ದರೆ? ಇಲ್ಲ, ಅವರೆಲ್ಲ ಮಜಾದಿಂದಿದ್ದರು. ಪುಟ್ಟ ಬಾಲಕರಿಗೆಲ್ಲಿ ದ್ವೇಷ , ಸೇಡು ಇತ್ಯಾದಿ? ಅವರಿಗೆ ಎಲ್ಲವೂ ಮೋಜೇ. ಹಾಗಾಗಿ ‘ಕೋಲುಮಂಡೆ ಜಂಗಮ ದೇವರು ಗುರುವೆ ಕ್ವಾರಣ್ಯಕ್ಕೆ ದಯ ಮಾಡವ್ರೆ... ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೇ...’ ಎಂದು ಗುಂಪಾಗಿ ಹಾಡುತ್ತಿದ್ದರು; ಗೋಲಿಯಾಟದ ಮಾಸ್ಟರ್‌ ಪ್ಲಾನ್‌ ಜತೆಗೆ ಪಾಕೆಟ್‌ಮನಿಯೆಂಬ ‘ಕ್ವಾರಣ್ಯ’ವನ್ನು ಹಿರಿಯರಿಂದ ಗಳಿಸುವುದು ಹೇಗೆ ಎಂದೂ ಅವರು ಪ್ಲಾನಿಸುತ್ತಿದ್ದರು!

ಇತ್ತ ಮನೆಯಲ್ಲಿ , ‘ಗಿಣಿಯೆ ನನ್ನ ಅರಗಿಣಿಯೆ.. ಸಂಜೆಯಲಿ ಈ ಏಕಾಂತದಲ್ಲಿ... ಹಿತವಿಲ್ಲವೇನು... ಸುಖವಿಲ್ಲವೇನು...’ ಹೆಂಡತಿ ಮುನಿಸಿಕೊಂಡಿದ್ದಾಳೋ ಎಂದು ಅನುಮಾನ ಗಂಡನಿಗೆ. ಅವಳನ್ನು ಸಮಾಧಾನಪಡಿಸಲೆಂದು ಅವನು ಹಾಡುತ್ತಿದ್ದ - ತಾನೊಬ್ಬ ಬಾತ್‌ರೂಮ್‌ ಸಿಂಗರ್‌ ಅಷ್ಟೇ ಆಗಿದ್ದರೂ! ಅವಳಾದರೋ ಮುನಿಸಿರಲಿಲ್ಲ ; ಆದರೆ ಆಕ್ಟ್‌ ಮಾಡುತ್ತಿದ್ದಳು. ಗಂಡನೆಂದರೆ ಪ್ರೀತಿ ಉಕ್ಕಿಬರುವ ಆಕೆ ‘ನಗಿಸಲು ನೀನು... ನಗುವೆನು ನಾನು... ನಾನೊಂದು ಗೊಂಬೆಯು ನೀ ಸೂತ್ರಧಾರಿ... ನಿನ್ನ ಎದುರು ನಾ ಪಾತ್ರಧಾರಿ... ’ ಎಂದು ಉತ್ತರಿಸುವಳು. ಅವಳೂ ಜಾಣೆ. ಒಂದೊಮ್ಮೆ ಕೋಪಗೊಂಡು ತಾನು ತವರೂರಿಗೆ ನಡೆದುಬಿಟ್ಟರೂ ‘ರಾಯರು ಬಂದರು ಮಾವನಮನೆಗೆ ರಾತ್ರಿಯಾಗಿತ್ತು... ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು... ತುಂಬಿದ ಚಂದಿರ ಬಂದಿತ್ತು...’ ಎಂದು ರಾಯರು ತನ್ನನ್ನು ಕರೆದುಕೊಂಡುಹೋಗಲು ಬಂದೇಬರುತ್ತಾರೆ ಎನ್ನುವುದು ಅವಳಿಗೆ ಗೊತ್ತು.

‘ತಾರೆಗಳ ತೋಟದಿಂದ ಚಂದಿರ ಬಂದ... ನೈದಿಲೆಯ ಅಂದ ನೋಡಿ ಆಡಲು ಬಂದ...’ ನೈದಿಲೆಯ ಅಂದದ ಜತೆಗೇ ನಮ್ಮ ನಿರೂಪಣೆಯ ಕೇಂದ್ರಬಿಂದುವಾದ ಈ ಚಿಕ್ಕ-ಚೊಕ್ಕ ಸಂಸಾರದ ಅಂದಚಂದ ನೋಡಲೂ ಚಂದಿರನಿಗೆ ಖುಷಿಯಾಗುತ್ತಿತ್ತು. ಆದರೆ, ‘ದೇವರ ಆಟ ಬಲ್ಲವರಾರು... ಆತನ ಎದುರು ನಿಲ್ಲುವರಾರು... ಕೇಳದೆ ಸುಖವ ಕೊಡುವ ... ಹೇಳದೆ ದುಃಖವ ತರುವ... ತನ್ನ ಮನದಂತೆ ಕುಣಿಸಿ ಆಡುವ....’ ಎಂಬ ಪಾಠವನ್ನು ಬದುಕು ಈ ಸಂಸಾರಿಗರಿಗೆ ಕಲಿಸಿತ್ತು. ನಿತ್ಯವೂ ದೇವರಿಗೆ ದೀಪ ಹಚ್ಚಿ, ಹೂ ಏರಿಸಿ ಕೈಮುಗಿಯುತ್ತಿದ್ದ ಸಿಂಪಲ್‌ ಆಸ್ತಿಕವರ್ಗಕ್ಕೆ ಸೇರಿದವರಿವರು. ‘ವೇದಾಂತಿ ಹೇಳಿದನು... ಹೊನ್ನೆಲ್ಲ ಮಣ್ಣು ಮಣ್ಣು ... ಕವಿಯಾಬ್ಬ ಹಾಡಿದನು ... ಮಣ್ಣೆಲ್ಲ ಹೊನ್ನು ಹೊನ್ನು ...’ ಎನ್ನುವಷ್ಟು ಫಿಲಾಸಾಫಿಕಲ್‌ ಅಥವಾ ಪರಮಜ್ಞಾನಿಗಳಲ್ಲ ಬಿಡಿ. ನಮ್ಮ-ನಿಮ್ಮಂತೆಯೆ, ‘ನಮ್ಮ ಸಂಸಾರ ... ಆನಂದ ಸಾಗರ... ಪ್ರೀತಿಯೆಂಬ ದೈವವೇ ನಮಗಾಧಾರ... ಆ ದೈವ ತಂದ ವರದಿಂದ ಬಾಳೇ ಬಂಗಾರ...’ ಎಂದು ಸದಾ ಸರ್ವದಾ ಜೀವನಪ್ರೀತಿಯಲ್ಲಿ ಮೀಯುವವರು.

ಈ ಪರಿಯಲ್ಲಿ ಇದೊಂದು ಸಂಸಾರದ ವರ್ಣನೆ. ‘ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೊ... ಕವಿಕಲ್ಪನೆ ಕಾಣುವ ಚೆಲುವಿನ ಜಾಲವೊ... ’ ಎಂದಂತೆ ಈ ವರ್ಣನೆಯ ಪೈಂಟಿಂಗ್‌ ನಿಮಗೆ ತೀರಾ ಕಲ್ಪನಾಲೋಕದಲ್ಲಿ ವಿಹಾರ ಅಂತನಿಸಿತೇ ಅಥವಾ ‘ವಿವಾಹ ಭೋಜನವಿದು... ವಿಚಿತ್ರ ಭಕ್ಷಗಳಿವು... ಬೀಗರಿಗೆ ಔತಣವಿದು... ದೊರಕೊಂಡಿತೆನಗೆ ಇಂದು...’ ಎಂದು ಹೊಟ್ಟೆತುಂಬ ಉಂಡಂತಾಯಿತೇ?

*

ಒಂದು ಪುಟ್ಟ ಸಂಸಾರದ ಚಿತ್ರಣ ನೀಡಿದ ಈ ವಿಚಿತ್ರಾನ್ನದಲ್ಲಿ ಒಂದಿಷ್ಟು ಕನ್ನಡ ಚಿತ್ರಗೀತೆಗಳನ್ನು ಉಪಯೋಗಿಸಿರುವುದನ್ನು ನೀವು ಗಮನಿಸಿರುತ್ತೀರಿ. ಈಗ ನೀವು ಮಾಡಬೇಕಾದ್ದಿಷ್ಟೇ. ಈ ಎರಡು ಪ್ರಶ್ನೆಗಳಿಗೆ ಉತ್ತರ ಗೊತ್ತಾದರೆ ಬರೆದು ಕಳಿಸಿ. ಸುಮ್ಮನೆ ನಿಮಗೆ ಹೋಮ್‌ವರ್ಕ್‌ ಕೊಡುವ ಉದ್ದೇಶವಲ್ಲ. ಬಹುಮಾನವೂ ಇದೆ. (ಈ ಹಿಂದಿನ ‘ನಾಲ್ಕಕ್ಷರಗಳ ನಾಮಬಲ ಪಟ್ಟಿ’ ವಿಜೇತರ ಪಟ್ಟಿ ಸಿದ್ಧವಾಗುತ್ತಿದೆ!)

ಅ) ಇಲ್ಲಿರುವ ಚಿತ್ರಗೀತೆಗಳನ್ನು ಪೋಣಿಸಿರುವ ಈ ನಿರ್ದಿಷ್ಟ ರೀತಿ ಏನೆಂದು ಜನಪ್ರಿಯವಾದುದು? (ಬೇಕಿದ್ದರೆ ಹಾಡುಗಳ ಮೇಲೆ ಮಾತ್ರ ಇನ್ನೊಮ್ಮೆ ಕಣ್ಣಾಡಿಸಿ).

ಬ) ಇದೇ ಕ್ರಮವನ್ನು ಮುಂದುವರೆಸಿ ಇನ್ನೂ ಐದು ಚಿತ್ರಗೀತೆಗಳನ್ನು ನೀವು ಪೋಣಿಸಬಲ್ಲಿರಾ? (ಹಾಡುಗಳು ಸಾಕು, ಕಾಮೆಂಟರಿ ಕಡ್ಡಾಯವೇನಲ್ಲ).

ಒಂದನೇ ಪ್ರಶ್ನೆಗೆ ಮಾತ್ರ ಉತ್ತರ ಕಳಿಸಬಯಸುವವರಿಗೂ ಸ್ವಾಗತ. ಅಥವಾ ಒಂದನೇ ಪ್ರಶ್ನೆಗೆ ಈಗಲೇ ಉತ್ತರ ಕಳಿಸಿ, ಎರಡನೇ ಪ್ರಶ್ನೆಯನ್ನು ಆಮೇಲೆ ನೋಡಿಕೊಳ್ಳುವೆ ಎಂದರೂ ಸರಿಯೇ. ಒಟ್ಟಿನಲ್ಲಿ ನಿಮ್ಮ ಪತ್ರ ಮುಖ್ಯ. ವಿಳಾಸ ನಿಮಗೆ ಗೊತ್ತೇ ಇದೆ. - sjoshim@hotmail.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X