• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೈದರಾಬಾದ್‌ ಬ್ಲೂಸ್‌-ಎವರ್‌ಗ್ರೀನ್‌!

By Staff
|

*ಶ್ರೀವತ್ಸ ಜೋಶಿ

Hyderabad Bluesನಾಗೇಶ್‌ ಕುಕನೂರ್‌ ನಿರ್ದೇಶನ, ನಿರ್ಮಾಣ, ಅಭಿನಯದ ತೆಲುಗು-ಇಂಗ್ಲೀಷ್‌ ಸಿನೆಮಾ ‘ಹೈದರಾಬಾದ್‌ ಬ್ಲೂಸ್‌’ಗಾಗಲೀ, ರಾಯಚೂರು-ಗುಲ್ಬರ್ಗ-ಬೀದರ ಕಡೆಯವರ ‘ಹೈದರಾಬಾದ್‌ ಕರ್ನಾಟಕ’ ಪ್ರತ್ಯೇಕತಾವಾದಕ್ಕಾಗಲೀ ಸಂಬಂಧವಿಲ್ಲ ವಿಚಿತ್ರಾನ್ನದ ಈ ಸಲದ ಶೀರ್ಷಿಕೆಯಾಂದಿಗೆ. 1992 ರಿಂದ 1996 ರವರೆಗೆ ನಾನು ಹೈದರಾಬಾದ್‌ನಲ್ಲಿ ಕಳೆದ ದಿನಗಳ ಸವಿನೆನಪುಗಳ ಈ ಸಂಚಿಕೆಯನ್ನು ‘ಹೈದರಾಬಾದ್‌ ಬ್ಲೂಸ್‌’ ಎಂದು ಕರೆಯೋಣ. ಅದಕ್ಕೆ ನಿಮ್ಮ ಅಬ್ಜೆಕ್ಷನ್‌ ಏನೂ ಇಲ್ಲವೆಂದು ಭಾವಿಸಿದ್ದೇನೆ.

ಹೈದರಾಬಾದ್‌-ಸಿಕಂದರಾಬಾದ್‌ ಅವಳಿ ನಗರಗಳು. ತೆಲುಗಲ್ಲಿ ಹೇಳುವುದಾದರೆ ‘ಜಂಟ ನಗರಾಲು’. ಇರಾನಿ ಚಾಯ್‌ ಹೊಟೇಲ್‌ಗಳು, ಬಿರ್ಯಾನಿ, ಬಗಾರಾ-ಬೈಂಗನ್‌, ಡಬಲ್‌-ಕಾ-ಮೀಠಾ, ಇವೆಲ್ಲ ಹೈದರಾಬಾದ್‌ ಸ್ಪೆಷಾಲಿಟಿ. ಹಾಗೆಯೇ ಚಾರ್‌ಮಿನಾರ್‌, ಹುಸೇನ್‌ ಸಾಗರದಲ್ಲಿ ಬುದ್ಧ, ಗೋಲ್ಕೊಂಡ ಕೋಟೆ ಇತ್ಯಾದಿ ಲ್ಯಾಂಡ್‌ಮಾರ್ಕ್‌ಗಳು. ನಾನು ವಾಸವಾಗಿದ್ದದ್ದು ಸಿಕಂದರಾಬಾದ್‌ನಲ್ಲಿ. ಅಲ್ಲಿಯ ಸಂಗೀತ್‌ ಥಿಯೇಟರ್‌ನಲ್ಲಿ ‘ಸೈಲೆನ್ಸ್‌ ಆಫ್‌ ದ ಲ್ಯಾಂಬ್ಸ್‌’ ಸಿನೆಮಾ ಸೆಕೆಂಡ್‌ ಶೋ ನೋಡುವಾಗ ಬೋರ್‌ ಎನಿಸಿ Press Esc to return ಅಂತ ಇಂಟರ್ವೆಲ್‌ ಸಮಯದಲ್ಲಿ ಮನೆಗೆ ವಾಪಸಾದದ್ದು ಈಗಲೂ ನೆನಪಿದೆ. ಖ್ಯಾತ ಚಿತ್ರಕಲಾವಿದ ಎಂ.ಎಫ್‌. ಹುಸೇನ್‌ ಹೈದರಾಬಾದ್‌ಗೆ ಭೇಟಿ ಇತ್ತಾಗೆಲ್ಲ ಸಿಕಂದರಾಬಾದ್‌ ಕ್ಲಾಕ್‌ಟವರ್‌ ಹತ್ತಿರದ ಗಾರ್ಡನ್‌ ರೆಸ್ಟೋರೆಂಟ್‌ಗೆ ಇರಾನಿ ಚಾಯ್‌ ಕುಡಿಯಲು ಬರುತ್ತಿದ್ದರಂತೆ. ನಾನು ನೋಡಿಲ್ಲ. ನಾನು ಹೋಗುತ್ತಿದ್ದದ್ದು ಕ್ಲಾಕ್‌ಟವರ್‌ನ ಇನ್ನೊಂದು ಪಕ್ಕದಲ್ಲಿದ್ದ ಕಾಮತ್‌ ಹೊಟೇಲ್‌ಗೆ, ಉತ್ತಪ್ಪಂ ತಿಂದು ಕಾಫಿ ಕುಡಿಯುವುದಕ್ಕೆ!

ಅವಳಿ ನಗರಗಳಲ್ಲಿ ಮೊದಲಾಗಿ ನಾನು ಗಮನಿಸಿದ್ದೆಂದರೆ ಅಡ್ಡಾದಿಡ್ಡಿ ಟ್ರಾಫಿಕ್‌. ಅದೇಕೆ ಅಷ್ಟು ಕೆವೋಸ್‌ ಅಲ್ಲಿ ಅಂತ ಆಮೇಲೆ ನನ್ನದೇ ತರ್ಕವನ್ನು ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದೆ. ನನ್ನ ಪ್ರಕಾರ ಕಾರಣವಿಷ್ಟೇ. ಆಂಧ್ರ ಪ್ರದೇಶದಲ್ಲಿ ತೆಲುಗು ಮತ್ತು ಉರ್ದು ಎರಡೂ ಆಡಳಿತ ಭಾಷೆಗಳು. ಟ್ರಾಫಿಕ್‌, ಡ್ರೈವಿಂಗ್‌, ರೈಡಿಂಗ್‌ ಎಲ್ಲದಕ್ಕೂ ಇದು ಅನ್ವಯ. ಹಾಗಾಗಿ ಕೆಲವರು ಉರ್ದುನಲ್ಲಿ ಡ್ರೈವ್‌ ಮಾಡುತ್ತಾರೆ (ಬಲದಿಂದ ಎಡಕ್ಕೆ), ಇನ್ನುಳಿದವರು ತೆಲುಗಿನಲ್ಲಿ ಡ್ರೈವ್‌ ಮಾಡುತ್ತಾರೆ(ಎಡದಿಂದ ಬಲಕ್ಕೆ). ಪರಿಣಾಮ ಏನು ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು.

ಹೈದರಾಬಾದ್‌ನಲ್ಲಿರುತ್ತ ನಾನು ‘ದಿ ಹಿಂದೂ’ ಪತ್ರಿಕೆ ಓದುತ್ತಿದ್ದೆ. ಪತ್ರಿಕೆಯ ಹೈದರಾಬಾದ್‌ ಆವೃತ್ತಿಯಲ್ಲಿ ಸೋಮವಾರದ Between You and me ಕಾಲಮ್ಮನ್ನು ಪ್ರೊ। ಕೆ.ಸುಬ್ರಹ್ಮಣ್ಯಂ ಅವರು ನಡೆಸುತ್ತಿದ್ದರು. (ಹೈದರಾಬಾದ್‌ನಲ್ಲಿರುವ Center for English and Foreign Languagesನಲ್ಲಿ ಪ್ರೊಫೆಸರ್‌ ಆಗಿದ್ದ ಅವರು ನಿಧನರಾಗಿ ನಾಲ್ಕೈದು ವರ್ಷಗಳಾದುವು). ಆ ಅಂಕಣದಲ್ಲಿ ಆಗಾಗ ಓದುಗರ ಪತ್ರಗಳನ್ನೂ ಪ್ರಕಟಿಸುತ್ತಿದ್ದರು. ಒಮ್ಮೆ ನಾನೂ ಒಂದು ಪತ್ರ ಬರೆಯುವ ಧೈರ್ಯ ಮಾಡಿದ್ದೆ. ಪತ್ರ ಪ್ರಕಟವಾಯಿತು; ಪರಿಣಾಮವೂ ಕ್ಷಿಪ್ರಗತಿಯಲ್ಲಿ, ಒಳ್ಳೆಯದಾಗಿ ಆಯಿತು.

ನನ್ನ ಆ ಪತ್ರ ಹೀಗಿತ್ತು :

"There is a citybustimetable displayed at the bus stop in front of Secunderabad Railway Station. The column headings in the timetable read as follows Route Number; Frequency in Peecovers; Frequency in non peecovers..."

It is quite understandable that Secunderabad Bus station is not only covered but flooded by pee (of humans, cows, dogs and all other living organisms) but I wonder is there a busstop or place in twincities which is non peecover, that is, not covered by pee? Who will answer? Muncipal Corporation of Hyderabad? or AP State Road Transport Corporation? ..."

ನಿಜ ಹೇಳ್ತೇನೆ. ಬಸ್‌ಸ್ಟಾಂಡ್‌ನಲ್ಲಿದ್ದ ಆ ಬೋರ್ಡ್‌ನಲ್ಲಿ ‘peak hour‘ ಅನ್ನುವುದನ್ನು ‘pee cover‘ಎಂದು ಚಂದದ ಅಕ್ಷರಗಳಲ್ಲಿ ಬರೆದಿದ್ದರು. ಅದನ್ನು ನೋಡಿ ನಗು ತಡೆಯಲಾಗದೆ ನಾನು ಆ ಪತ್ರ ಬರೆದಿದ್ದೆ. ಅದು ಸೋಮವಾರ ಪ್ರಕಟವಾದ ಮಾರನೆ ದಿನ ಹೋಗಿ ನೋಡುತ್ತೇನೆ - ಬೋರ್ಡ್‌ನಲ್ಲಿ pee cover ಕಾಣೆಯಾಗಿ peak hour ರಾರಾಜಿಸುತ್ತಿತ್ತು! ಒಂದು ಘನಕಾರ್ಯ ಸಾಧಿಸಿದೆ ಎಂಬ ಜಂಬಕ್ಕಿಂತಲೂ ಇಂಥದೊಂದು ‘ಪನ್‌’ ಸಾರ್ವಜನಿಕ ಸ್ಥಳದಿಂದ ನನ್ನ ಸಂಗ್ರಹಕ್ಕೆ ಸಿಕ್ಕಿತಲ್ಲಾ ಎಂದು ನನಗೆ ಸಂತೋಷ!

ಹೈದರಾಬಾದ್‌ ದಿನಗಳಲ್ಲೇ ನನ್ನ ‘ಸ್ವಂತ ಅಡಿಗೆ’ ಆರಂಭವಾದದ್ದು. ಮೊದಲು ಬರೇ ‘ಮ್ಯಾಗಿ ನೂಡಲ್ಸ್‌’ನಿಂದ ಆರಂಭವಾಗಿ ಆಮೇಲೆ ಕ್ರಮೇಣ ಅನ್ನ-ಸಾರು-ಪಲ್ಯ ಅಡಿಗೆ ಶುರುವಾಯಿತು. ಆಗ ವಿಚಿತ್ರಾನ್ನ ಇರಲಿಲ್ಲ :-) ಆದರೆ ಮಾಡಿದ್ದೆಲ್ಲವೂ ವಿಚಿತ್ರವಾಗೇ ಇರುತ್ತಿತ್ತು. ಆದರೂ ಅದನ್ನು ತಿಂದು ಈಗಲೂ ಬದುಕಿದ್ದೇನೆ ಎಂದರೆ ಒಂದಿಷ್ಟಾದರೂ ‘ಸತ್ವ’ಯುತವಾಗೇ ಇರುತ್ತಿತ್ತು ಎಂದು ನನ್ನ ನಂಬಿಕೆ.

ಸಿಕಂದರಾಬಾದ್‌ನ ಕಂಟೋನ್ಮೆಂಟ್‌ ಪ್ರದೇಶದಲ್ಲಿ ಡಿಫೆನ್ಸ್‌ ಕಾಲೋನಿಯ ಪಕ್ಕದಲ್ಲೇ ‘ಸೈನಿಕ್‌ಪುರಿ’ ಮತ್ತು ‘ವಾಯುಪುರಿ’ ಎಂಬ ಉಪನಗರಗಳಿವೆ. ಸೈನಿಕ್‌ಪುರಿಯಲ್ಲಿ, ಭೂಸೇನೆ(ಆರ್ಮಿ)ಯಿಂದ ನಿವೃತ್ತರಾದವರೆಲ್ಲ ದೊಡ್ಡದೊಡ್ಡ ಬಂಗ್ಲೆಗಳಲ್ಲಿ ವಾಸಿಸುತ್ತಾರೆ. ವಾಯುಪುರಿಯಲ್ಲಿ, ಏರ್‌ಫೋರ್ಸ್‌ನಿಂದ ನಿವೃತ್ತಿ ಹೊಂದಿ ಮನೆಕಟ್ಟಿಸಿದವರು ಇದ್ದಾರೆ. ನನ್ನ ಲಾಜಿಕ್‌ ಏನೆಂದರೆ, ನೌಕಾಪಡೆ(ನೇವಿ)ಯಿಂದ ನಿವೃತ್ತರಾದವರು ಯಾಕೆ ಸುಮ್ಮನಿದ್ದಾರೆ? ಅವರೂ ‘ಪಾನೀಪುರಿ’ ಎಂಬ ಉಪನಗರವನ್ನು ಸ್ಥಾಪಿಸಬಹುದಲ್ಲ ? ಹಾಗೆಯೇ ಬಿ.ಎಚ್‌.ಇ.ಎಲ್‌ನಿಂದ ನಿವೃತ್ತರಾದವರಿಗೆ ‘ಭೇಲ್‌ಪುರಿ’! ಇನ್ನೂ ಕೆಲವರಿಗೆ ಓಂಪುರಿ, ಅಮರೀಶ್‌ ಪುರಿ... ಇತ್ಯಾದಿ.

ಹೈದರಾಬಾದ್‌-ಹಿಂದಿ(ದಕ್ಖನಿ)ಯ ಉಲ್ಲೇಖವಿಲ್ಲದೆ ಈ ಹರಟೆ ಅಪೂರ್ಣವಾಗುತ್ತದೆ. ಅದಕ್ಕಾಗಿ ಒಂದೇ ಒಂದು ಸ್ಯಾಂಪಲ್‌ - ‘ಮೈಯಿಚ್‌ ಉಸ್ಕು ಬೋಲೊ ಬೋಲ್‌ಕೆ ಬೋಲಾ, ತೋ ಉನ್ಹೋ ಕ್ಯಾ ಕರಾ ಮಾಲುಮ್‌? ಪುರಾನಾ ನೋಟಾಂ ಮೆರೆಕೊ ದಿಯಾ, ಮೈ ಐಸಾ ನಕ್ಕೊ ಬಾಸ್‌ ಕರ್‌ಕೆ ಗಾಲೀ ದಿಯಾ...!’ ಅವಳಿನಗರಗಳಲ್ಲಿ ಯಾರಾದರೂ ‘ವೋ ಸಬ್‌ ಬಾದ್‌ ಮೇ ದೇಖೆಂಗೆ...’ ಅಂದರೆ ‘ಹೈದರಾಬಾದ್‌ ಮೇ ಯಾ ಸಿಕಂದರಾಬಾದ್‌ ಮೇ?’ ಅಂತ ಪ್ರಶ್ನೆ ಎಸೆಯಬಹುದು- ಹೇಳಿದವರ ಮೇಲೆ!

ಈಗ ಹೈದರಾಬಾದ್‌-ಸಿಕಂದರಾಬಾದ್‌ ಅವಳಿನಗರಗಳು ಇನ್ನಷ್ಟು ಮಾಡರ್ನ್‌ ಅಗಿವೆಯೆಂದು ಮೊನ್ನೆ ಒಬ್ಬ ಸ್ನೇಹಿತ ಬರೆದಿದ್ದರು. ಈ ಸಲದ ನನ್ನ ‘ಊರಿಗೆ ಭೇಟಿ’ ಸಂದರ್ಭದಲ್ಲಿ ಈ ಅವಳಿನಗರಗಳಿಗೂ ಪ್ರಯಾಣ ಬೆಳೆಸಿ ಹಳೇ ಸ್ನೇಹಿತರಿಗೊಂದು ಹಲೋ ಹೇಳೋಣವೆಂದುಕೊಂಡಿದ್ದೇನೆ!

ಅಂದಹಾಗೆ ನೀವು ಹಿಂದೆ ವಾಸವಾಗಿದ್ದ ಯಾವುದಾದರೂ ಊರಿನ/ನಗರದ ನೆನಪುಗಳು ನಿಮ್ಮನ್ನು ಕಾಡುತ್ತಿರುತ್ತವೆಯೇ? ಬರೆಯಿರಿ. ವಿಳಾಸ- sjoshim@hotmail.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more