ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟ ಎದುರಾದಾಗ ಕೆಚ್ಚೆದೆಯಿಂದ ಹೋರಾಡುವುದೊಂದೇ ದಾರಿ!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಹಿಂದೊಮ್ಮೆ ಚೀನದ ಸೇನಾಧಿಪತಿಯೊಬ್ಬ ಒಂದು ದ್ವೀಪವನ್ನು ಗೆದ್ದು ವಶಪಡಿಸಿಕೊಳ್ಳಲು ಸೈನ್ಯವನ್ನು ತೆಗೆದುಕೊಂಡು ಹಡಗಿನಲ್ಲಿ ಅಲ್ಲಿ ಹೋದನಂತೆ. ಆ ದ್ವೀಪ ಬಹಳ ಸಂಪದ್ಭರಿತವಾದ ದ್ವೀಪ. ಅಷ್ಟೇ ಅಲ್ಲದೇ ಅಲ್ಲಿಯ ಸೈನಿಕರು ಬಹಳ ವೀರ ಯೋಧರೂ ಮತ್ತು ದೇಶ ಪ್ರೇಮಿಗಳೂ ಆಗಿದ್ದರಂತೆ. ಅಲ್ಲಿನ ರಾಜ ಮತ್ತು ಸೇನಾನಿಗಳೂ ಕೂಡ ತುಂಬ ಸಮರ್ಥರೂ ಮತ್ತು ಒಳ್ಳೆಯ ನಾಯಕರೂ ಆಗಿದ್ದರಂತೆ.

ಅಂತಹ ದ್ವೀಪವನ್ನು ಗೆಲ್ಲುವುದು ಹೇಗೆ? ಸೇನಾಧಿಪತಿ ಬಹಳ ವಿಚಾರ ಮಾಡಿದ ನಂತರ, ತನ್ನ ಸೈನಿಕರಿಗೆ ತಾವು ಬಂದಿದ್ದ ಹಡಗಿಗೆ ಬೆಂಕಿಯಿಡಲು ಹೇಳಿದನು. ಸೈನಿಕರಿಗೋ ತುಂಬಾ ಆಶ್ಚರ್ಯ. ತಾವು ಮಾಡಲು ಬಂದಿದ್ದ ಯುದ್ಧದಲ್ಲಿ ಸೋತರೆ ಇಷ್ಟು ದೂರದ ದ್ವೀಪದಿಂದ ತಪ್ಪಿಸಿಕೊಂಡು ಹೋಗಲು ಅವರಿಗಿದ್ದ ಒಂದೇ ಆಸರೆಯೆಂದರೆ ಈ ಹಡಗು. ಆ ಹಡಗನ್ನೇ ಸುಟ್ಟು ಹಾಕಿದರೆ? ಸೈನಿಕರಿಗೆ ತಮ್ಮ ನಾಯಕನ ಆಂತರ್ಯ ಅರ್ಥವಾಗಲಿಲ್ಲ.

ಲಂಚಗುಳಿತನ ಸಹಿಸದ ಸಿಂಗಪುರ, ಮಲೇಶಿಯಾ ಮತದಾರರುಲಂಚಗುಳಿತನ ಸಹಿಸದ ಸಿಂಗಪುರ, ಮಲೇಶಿಯಾ ಮತದಾರರು

ಮುಂದೆ ನಡೆದ ಭೀಷಣ ಯುದ್ಧದಲ್ಲಿ ಸೈನಿಕರು ಸಾಕಷ್ಟು ಕಲಿತನದಿಂದ ಕಾದಿದರು. ದ್ವೀಪದ ಸೈನಿಕರ ಭೀಕರ ಪ್ರತಿರೋಧ ಒಂದು ಹಂತದಲ್ಲಿ ಅವರನ್ನು ಹಿಂಮ್ಮೆಟ್ಟಿಸಿ ಸೋಲಿನ ಹತ್ತಿರ ತಂದು ನಿಲ್ಲಿಸಿತ್ತು. ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಲು ಅನೇಕ ಸೈನಿಕರು ಯೋಚಿಸಿದ್ದರು. ಆದರೆ ತಮ್ಮ ಹಡಗು ಸುಟ್ಟು ಹೋದ ನೆನಪಾಯಿತು. ಸೋತು ಅಲ್ಲಿಂದ ಹಿಂದಿರುಗಲು ಸಾಧ್ಯವೇ ಇರಲಿಲ್ಲ.

ಒಂದು ರೀತಿಯಲ್ಲಿ ಸೈನಿಕರಿಗೆ ಹತಾಶೆಯಾಯಿತು. ತಮ್ಮದು ಇಕ್ಕಟ್ಟಿಗೆ ಸಿಲುಕಿದ ಸ್ಥಿತಿ ಎನ್ನುವುದು ಅವರಿಗೆ ಮನವರಿಕೆಯಾಯಿತು. ಆಗ ಅವರ ಸೇನಾಧಿಪತಿ ಅವರನ್ನುದ್ದೇಶಿಸಿ ಮಾತನಾಡುತ್ತಾ, ತಾನು ಹಡಗನ್ನು ಸುಟ್ಟು ಹಾಕಿದ್ದರ ಹಿಂದಿನ ಕಾರಣವೇ ಇದು ಎಂದು ಹೇಳುತ್ತಾನೆ. ಈಗ ಅವರಿಗೆ ಇಲ್ಲಿಂದ ಸುರಕ್ಷಿತ ವಾಪಸಾಗಲು ಒಂದೇ ಮಾರ್ಗವೆಂದರೆ ಯುದ್ಧದಲ್ಲಿ ವಿಜಯವನ್ನು ಪಡೆಯುವುದು. ಆಗ ಸೈನಿಕರಿಗೆ ವೀರಾವೇಶ ಉಕ್ಕಿಬಂದು, ಅವರು ಕಲಿತನದಿಂದ ಕಾದಿ, ದ್ವೀಪದ ಸೈನಿಕರನ್ನು ಸೋಲಿಸಿ, ವಿಜಯ ಪತಾಕೆಯನ್ನು ಹಾರಿಸಿದರು.

Work hard for what you want

ಈ ಕಥೆಯನ್ನು ಇಂದು ನಾನು ಸಿಂಗಪುರವನ್ನು ಬಿಟ್ಟು ಭಾರತಕ್ಕೆ ಹೊರಟು ನಿಂತಿರುವ ನನ್ನ ಮಿತ್ರನೊಬ್ಬನಿಂದ ಕೇಳಿದೆ. ಆತ ಕೆಲಸ ಮಾಡುತ್ತಿರುವ ದೊಡ್ಡ ಬಹುರಾಷ್ಟ್ರೀಯ ಕಂಪನಿ ದೊಡ್ಡ ರೀತಿಯಲ್ಲಿ ಬದಲಾವಣೆ ಹೊಂದುತ್ತಿದೆ. ಈ ಬದಲಾವಣೆಯಲ್ಲಿ ಅನೇಕರ ಕೆಲಸಗಳು ಆಹುತಿಯಾಗಿವೆ. ಆವುಗಳಲ್ಲಿ ಅವನದೂ ಒಂದು. ಕಳೆದ ಕೆಲವು ತಿಂಗಳುಗಳಿಂದ ಅವನೂ ಈ ಪರಿಸ್ಥಿತಿಗೆ ತಯಾರಾಗುತ್ತಿದ್ದ. ತನ್ನ ಮಕ್ಕಳು ಮತ್ತು ಮಡದಿಯನ್ನು ಈಗಾಗಲೇ ಭಾರತಕ್ಕೆ ಕಳುಹಿಸಿ ಅಲ್ಲಿ ನೆಲೆಗೊಳಿಸಿದ್ದಾನೆ.

ಕೆಲಸ ಕಳೆದುಕೊಳ್ಳುವ ನಿರೀಕ್ಷೆಯಲ್ಲಿಯೇ ಇದ್ದರೂ, ವಾಸ್ತವದಲ್ಲಿ ಹಾಗಾದಾಗ, ಆ ಕ್ಷಣ ಅವನಿಗೆ ತಡೆಯಲಾರದಷ್ಟು ಭಾರವಾಯಿತು. ಇಪ್ಪತ್ತು ವರ್ಷಗಳಿಂದ ಸಿಂಗಪುರದಲ್ಲಿಯೇ, ಅದರಲ್ಲಿಯೂ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ ಅವನಿಗೆ ಮಾನಸಿಕವಾಗಿ ತತ್ ಕ್ಷಣ ಕುಸಿಯುವ ಅನುಭವ ಆಯಿತಂತೆ. ಆ ಕ್ಷಣ ಅವನಿಗೆ ಹಿಂದು ಮುಂದು ತಿಳಿಯಲಾಗದಂತಹ ಸಂದಿಗ್ಧ ಪರಿಸ್ಥಿತಿ.

ನನ್ನ ಮತ್ತು ಕವಿತೆ ಸಂಬಂಧ ಲಕ್ಷ್ಮಣ ಮತ್ತು ಊರ್ಮಿಳೆಯದ್ದು ನನ್ನ ಮತ್ತು ಕವಿತೆ ಸಂಬಂಧ ಲಕ್ಷ್ಮಣ ಮತ್ತು ಊರ್ಮಿಳೆಯದ್ದು

ಆದರೆ ಆಗ ಅವನಿಗೆ ನೆನಪಾಗಿದ್ದು ಈ ಮೇಲೆ ಹೇಳಿದ ಕಥೆ. ವಾಸ್ತವಿಕತೆಯನ್ನು ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ಎದುರಿಸಿದ ಪ್ರಥಮ ಕ್ಷಣವಾಗಿತ್ತು. ಅಲ್ಲಿಂದ ಮುಂದೆ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲುವುದೊಂದೇ ದಾರಿ ಎಂಬುದು ಅವನಿಗೆ ಅವಗತವಾಯಿತು. ಅವನು ಅದನ್ನೇ ನನಗೆ ಹೇಳಿದ್ದು. ಅದರಂತೆಯೇ ಈಗ ಅವನು ಚಿಂತಿಸುವುದನ್ನು ಬಿಟ್ಟು ಮುಂದಿನ ದಿನಗಳನ್ನು ಉಜ್ವಲಗೊಳಿಸುವ ತವಕದಲ್ಲಿದ್ದಾನೆ.

ನನ್ನ ಚಿಕ್ಕಂದಿನಲ್ಲಿ ನಾನು ಕಣ್ಣಾರೆ ಕಂಡ ಒಂದು ದೃಶ್ಯ ಇಂದು ನೆನಪಾಗುತ್ತಿದೆ. ನಾವಿರುವ ಬಡಾವಣೆಯಲ್ಲಿ ಒಂದು ದಿನ ಎರಡು ಬೀದಿ ನಾಯಿಗಳು ಬೆಕ್ಕೊಂದನ್ನು ಅಟ್ಟಿಸಿಕೊಂಡು ಬಂದವು. ಅವುಗಳಿಂದ ತಪ್ಪಿಸಿಕೊಂಡು ಓಡಿಹೋಗಲು ಬೆಕ್ಕು ಶತಾಯ ಗತಾಯ ಪ್ರಯತ್ನ ನಡೆಸಿತು, ಸಾಧ್ಯವಾಗಲಿಲ್ಲ. ಕೊನೆಗೆ ನಾಯಿಗಳೆರಡೂ ಕೂಡಿ ಬೆಕ್ಕನ್ನು ಒಂದು ಮೂಲೆಗೆ ತಳ್ಳಿದವು. ತಪ್ಪಿಸಿಕೊಂಡು ಹೋಗಲು ಬೇರಾವುದೂ ಮಾರ್ಗವಿರಲಿಲ್ಲ.

Work hard for what you want

ಅಲ್ಲಿಯವರೆಗೆ ಭೀತಿಯಿಂದ ತತ್ತರಿಸುತ್ತಿದ್ದ ಬೆಕ್ಕಿಗೆ ಅದಾವ ವೀರಾವೇಶ ಬಂದಿತೋ? ಅದು ತಿರುಗಿ ನಿಂತು ಎರಡೂ ನಾಯಿಗಳನ್ನು ಕೆಕ್ಕರಿಸಿ ನೋಡಿ ಕರ್ಕಶವಾಗಿ ಕೂಗಿ ತನ್ನ ಪಂಜಾವನ್ನೆತ್ತಿ ಹೊಡೆಯಿತು. ಈಗ ಕಕ್ಕಾಬಿಕ್ಕಿಯಾಗುವ ಪಾಳಿ ನಾಯಿಗಳದ್ದು. ಬೆಕ್ಕು ಎದುರು ನಿಲ್ಲುವುದನ್ನೂ ಸ್ವಲ್ಪವೂ ಊಹಿಸದಿದ್ದ ನಾಯಿಗಳು ಹೆಜ್ಜೆಯನ್ನು ಹಿಂದಿಟ್ಟವು. ಬೆಕ್ಕಿನ ಎರಡು ಪಂಜಾ ಹೊಡೆತವನ್ನು ಅನುಭವಿಸಿದ ಮೇಲೆ ಓಡಿ ಹೋಗಲು ಹಿಂದಿರುಗಿ ನೋಡಿದವು. ಪರಿಸ್ಥಿತಿಯ ಲಾಭ ಪಡೆದ ಬೆಕ್ಕು ಸರಸರನೇ ಗೋಡೆಯೊಂದನ್ನು ಏರಿ ಮನೆಯ ಛಾವಣಿಗೆ ಎಗರಿತು. ನಾಯಿಗಳೆರಡೂ ಬೆಪ್ಪಾಗಿ ಛಾವಣಿ ನೋಡತೊಡಗಿದವು.

ಯಾವಾಗ ಪರಿಸ್ಥಿತಿ ಮನುಷ್ಯನನ್ನು ಹಿಂದಿರುಗಲಾಗದ ಬಿಕ್ಕಟ್ಟಿಗೆ ಸಿಕ್ಕಿಸುತ್ತದೋ ಆವಾಗ ಮನುಷ್ಯ ತಿರುಗಿ ನಿಂತು ಹೋರಾಡುತ್ತಾನೆ. ಇದು ಮನುಷ್ಯರಿಗೆ ಮಾತ್ರವಲ್ಲ. ಯಾವುದೇ ಜೀವಿಗೂ ಅನ್ವಯಿಸುತ್ತದೆ ಎಂಬುದು ನಾನು ಈ ಮೊದಲು ಹೇಳಿದ ಬೆಕ್ಕು ಮತ್ತು ನಾಯಿಗಳ ದ್ವಂದ್ವ ಯುದ್ಧದಿಂದ ಸ್ಪಷ್ಟವಾಗುತ್ತದಲ್ಲವೇ? ಕಷ್ಟ ಸುಖಗಳೆರಡೂ ಸಮುದ್ರದಲ್ಲಿನ ತೆರೆಗಳಿದ್ದಂತೆ. ಒಂದರ ಹಿಂದೆ ಇನ್ನೊಂದು ಬಂದೇ ಬರುತ್ತದೆ. ಕಷ್ಟ ಬಂದಾಗ ಕಂಗೆಡದೇ ಅದರ ನಂತರ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂಬ ವಿಶ್ವಾಸದಿಂದ ಅದನ್ನು ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕು.

ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ? ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?

ಇಲ್ಲಿ ನನಗೆ ಕಗ್ಗವೊಂದರ ನೆನಪಾಗುತ್ತದೆ:

ಬುದ್ದಿ ಮಾತಿದು ನಿನಗೆ: ಸಿದ್ಧನಿರು ಸಕಲಕ್ಕಮ್|
ಎದ್ದು ಕುಣಿಯಲಿ ಕರ್ಮ, ದೈವ ನಿದ್ರಿಸಲಿ||
ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ|
ಸಿದ್ಧನಾಗೆಲ್ಲಕಂ-ಮಂಕುತಿಮ್ಮ||

ಈ ಮಾತನ್ನು ನಾನು ಬೇರಾರಿಗೂ ಹೇಳುತ್ತಿಲ್ಲ. ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ. ಒಬ್ಬ ಸಾಮಾನ್ಯ ಮನುಷ್ಯನಾಗಿ ಎಲ್ಲರಂತೆ ನಾನೂ ಕೂಡ ಈವರೆಗೆ ಅನೇಕ ಏರಿಳಿತಗಳನ್ನು ಕಂಡಿದ್ದೇನೆ. ಮುಂದೆಯೂ ಅನೇಕ ಏರಿಳಿತಗಳು ಕಾದಿವೆ ಎಂಬುದು ಕೂಡ ನಿತ್ಯ ಸತ್ಯ. ಇಲ್ಲಿಯವರೆಗೆ ಎದುರಿಸಿದ್ದೇನೆ. ಡಿವಿಜಿಯವರು ಹೇಳಿದಂತೆ ಮನಸ್ಸನ್ನು "ಸಿದ್ಧನಿರು ಸಕಲಕ್ಕಮ್" ಎಂದು ನನಗೆ ನಾನೇ ಹೇಳಿಕೊಳ್ಳುತ್ತಿರುತ್ತೇನೆ.

ಹಿಂದಿರುಗಿ ನೋಡಿದಾಗ ನಡೆದು ಬಂದ ದಾರಿಯ ಪ್ರತೀ ಮುಳ್ಳು ಕಲ್ಲುಗಳು ಒಂದೊಂದು ಒಳ್ಳೆಯ ಪಾಠವನ್ನೇ ಕಲಿಸಿವೆ. ಮಧ್ಯ ವಯಸ್ಸಿನಲ್ಲಿ ತನ್ನೆಲ್ಲ ಜವಾಬ್ದಾರಿಗಳ ಮಧ್ಯೆ ಕೆಲಸವನ್ನು ಕಳೆದುಕೊಂಡು ಕೂಡ ಹುಮ್ಮಸ್ಸಿನಿಂದ ಎದುರಿಸಲು ಸಿದ್ಧನಾಗಿರುವ ನನ್ನ ಮಿತ್ರನಿಗೆ ಎಲ್ಲವೂ ಒಳಿತಾಗಲಿ ಎಂದು ಕೋರಿಕೊಂಡು, ಅವನ ಹುರುಪು ಮತ್ತು ದೃಢ ನಿಲುವು ನನಗೂ ದಾರಿದೀಪವಾಗಲಿ ಎಂದು ಆಶಿಸುತ್ತೇನೆ.

English summary
Work hard for what you want because it won't come to you without a fight. You have to be strong and courageous and know that you can do anything you put your mind to.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X