ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಅನುಭೂತಿ ನೀಡಿದ ಸಂಕೇಶ್ವರದ ಚಳಿಗಾಲದ ದಟ್ಟ ಮಂಜು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಾವು ಸಂಕೇಶ್ವರಕ್ಕೆ ಹೋಗಿದ್ದು ಡಿಸೆಂಬರ್ ತಿಂಗಳು. ಮೊದಲ ಕೆಲವು ತಿಂಗಳು ನಾವು ತೇರಣಿಕರ್ ಎಂಬ ವೃದ್ಧ ದಂಪತಿಗಳ ಮನೆಯಲ್ಲಿ ಬಾಡಿಗೆಗೆ ಇದ್ದೆವು. ತೇರಣಿಕರ್ ಅಜ್ಜ ಪುರಾಣಗಳನ್ನು ಬಹಳ ಅಭ್ಯಾಸ ಮಾಡಿದ್ದರು ಎಂದು ನನ್ನ ಅನಿಸಿಕೆ. ಅಲ್ಲಿಗೆ ಹೋದ ಮೊದಲ ವಾರದಲ್ಲಿಯೇ ನಮಗೆ ಅವರು ರಾಮಾಯಣದ ಕಥೆಯೊಂದನ್ನು ಹೇಳಿದ ನೆನಪು.

ಈ ಜಗತ್ತು ಸೃಷ್ಟಿಯಾಗುವ ಮುನ್ನ ಏನೂ ಇರಲಿಲ್ಲ. ಸೃಷ್ಟಿಯ ಮೊದಲು ವಿಶ್ವದಲ್ಲಿ "ಓಂ" ಎಂಬ ಶಬ್ದ ಹೊರ ಹೊಮ್ಮಿತು ಎಂದು ಹೇಳಿದ ನೆನಪು. ಅದನ್ನು ಕೇಳಿದ ತಕ್ಷಣ ಅಂತಹ ಕಲ್ಪನೆಯೇ ನನ್ನನ್ನು ರೋಮಾಂಚನಗೊಳಿಸಿತು. ನಾನು ಅವರ ಕಥೆ ಹೇಳುವ ಶೈಲಿಯಿಂದ ಬಹಳ ಪ್ರಭಾವಿತನಾದೆ. ಆದರೆ ಮುಂದಿನ ಕೆಲವು ತಿಂಗಳಲ್ಲೇ ನಾವು ಆ ಮನೆಯನ್ನು ಬಿಟ್ಟಿದ್ದರಿಂದ ತೇರಣಿಕರ್ ಅಜ್ಜನಿಂದ ಬಹಳ ಕಥೆ ಕೇಳಲಾಗಲಿಲ್ಲ.

ಕಾಲೇಜಿನ SPIC MACAY ದಿನಗಳನ್ನು ಮರೆಯಲು ಹೇಗೆ ಸಾಧ್ಯ?ಕಾಲೇಜಿನ SPIC MACAY ದಿನಗಳನ್ನು ಮರೆಯಲು ಹೇಗೆ ಸಾಧ್ಯ?

ನದಿಗೆ ಹತ್ತಿರವಿದ್ದ ಮಠ ಗಲ್ಲಿಯಲ್ಲಿ ನಮ್ಮ ಮನೆ ಇತ್ತು. ಕೆಲವೊಂದು ದಿನ ಮುಂಜಾನೆ ಎದ್ದು ಮನೆಯ ಹೊರಗೆ ಬಂದು ನೋಡಿದರೆ ಹತ್ತು ಮೀಟರ್ ದೂರದ ವಸ್ತು ಕೂಡ ಕಾಣದಷ್ಟು ಮಂಜು ಕವಿದಿರುತ್ತಿತ್ತು. ಬಿಜಾಪುರದಲ್ಲಿ ಮಂಜನ್ನು ಎಂದೂ ಕಂಡಿರದ ನಮಗೆ ಸಂಕೇಶ್ವರದ ದಟ್ಟ ಮಂಜು ಹೊಸ ಅನುಭೂತಿಯನ್ನೇ ನೀಡಿತು.

Unforgettable childhood in Sankeshwar

ಮಠ ಗಲ್ಲಿಯ ಆರಂಭ ಎತ್ತರದಲ್ಲಿದ್ದು ಕ್ರಮೇಣ ಇಳಿಯುತ್ತ ಗಲ್ಲಿಯ ಕೊನೆಯಲ್ಲಿರುವ ಪುರಾತನ ಕಾಲದ ಶಂಕರಲಿಂಗ ದೇವಸ್ಥಾನ ಮತ್ತು ಶಂಕರ ಮಠದಲ್ಲಿ ಕೊನೆಗೊಳ್ಳುತ್ತಿತ್ತು. ದೇವಸ್ಥಾನ ಮತ್ತು ಮಠದ ಪಕ್ಕದಲ್ಲಿ ಹಿರಣ್ಯಕೇಶಿ ನದಿ ಹರಿಯುತ್ತಿತ್ತು. ಅನೇಕ ಬಾರಿ ಮನೆಯಿಂದ ದೇವಸ್ಥಾನಕ್ಕೆ ಹೋಗಿ ಅಲ್ಲಿ ನದಿಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆ. ಅನತಿ ದೂರದಲ್ಲಿ ಒಂದು ದೋಣಿ ಪ್ರಯಾಣಿಕರನ್ನು ನದಿಯ ಆಚೆಯ ತೀರಕ್ಕೆ ತಲುಪಿಸುತ್ತಿತ್ತು. ಅಲ್ಲಿ ಕುಳಿತು ಸಾವಧಾನವಾಗಿ ನದಿಯ ಮೇಲೆ ತೇಲುತ್ತಿದ್ದ ದೋಣಿ, ನದಿಯ ಆಚೆಯ ಬದಿಯಲ್ಲಿ ಆಗಸದೆತ್ತರೆಕ್ಕೆ ಬೆಳೆದು ನಿಂತ ಬಿದಿರಿನ ಮೆಳೆ, ಗದ್ದೆಗಳಲ್ಲಿ ಹುಟ್ಟಿ ಅಲ್ಲೆಲ್ಲಾ ಆವೃತವಾಗಿದ್ದ ದಿವ್ಯ ಮೌನ, ಈ ಮೌನವನ್ನು ಆಗಾಗ ಮಂಗಳಮಯವಾಗಿ ಕದಡುವ ದೇವಸ್ಥಾನದ ಗಂಟೆಯ ಶಬ್ದ, ನನ್ನ ಕಲ್ಪನೆಗಳ ರೆಕ್ಕೆ ಬಿಚ್ಚಿ ನನ್ನನ್ನು ದೂರ ದಿಗಂತದ ಅಂಚಿನೆಡೆ ಕೊಂಡೊಯ್ಯುತ್ತಿದ್ದವು. ಇಲ್ಲಿಯೇ ನನ್ನ ಮನಸ್ಸಿನಲ್ಲಿರುವದನ್ನು ಬರೆಯುವ ಇಚ್ಛೆ ಉಂಟಾಯಿತು. ಹೀಗಾಗಿ ಸಂಕೇಶ್ವರ ನನ್ನ ಸಾಹಿತ್ಯಾಭಿರುಚಿಯ ಮೂಲ ಸ್ರೋತ.

ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ

ನಾಲ್ಕನೆಯ ತರಗತಿಯನ್ನು ಸರಕಾರೀ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಗಿಸಿದ್ದೆ. ನನಗೆ ಚೆನ್ನಾಗಿ ನೆನಪಿದೆ. ನಮ್ಮ ನಾಲ್ಕನೆಯ ತರಗತಿಯ ಫಲಿತಾಂಶ ಬಂದಾಗ ನನಗೆ ಚೆನ್ನಾಗಿ ಅಂಕಗಳು ಬಂದಿದ್ದವು. ಅಮ್ಮನಿಗೆ ಖುಷಿಯೋ ಖುಷಿ. ಆದರೆ ಅಮ್ಮನಿಗೆ ನನ್ನ ರ‍್ಯಾಂಕ್ ಯಾವುದು ಎಂದು ತಿಳಿಯುವ ಕುತೂಹಲ. ಆದರೆ ಕುಲಕರ್ಣಿ ಟೀಚರ್ ಯಾರಿಗೂ ರ‍್ಯಾಂಕ್ ಹೇಳಿರಲಿಲ್ಲ. ಫಲಿತಾಂಶ ಪಡೆಯಲು ಹೋಗಿದ್ದ ಅಮ್ಮನಿಗೂ ಹೇಳಲಿಲ್ಲ. ಶಾಲೆ ಮುಗಿದ ನಂತರ ಅವರೇ ಮನೆಗೆ ಬಂದರು. ಅಮ್ಮನೊಂದಿಗೆ "ನಾ ಬೇಕೆಂತಲೇ ರ‍್ಯಾಂಕ್ ಹೇಳಲಿಲ್ಲ. ಹುಡುಗೂರ ಮುಂದ ಹೇಳಿದ್ರ ಅವು ತಮ್ಮ ತಮ್ಮೊಳಗ ಮಾರ್ಕ್ಸ್ ಹೋಲಿಸಿಕೊಂಡು ಸಂಕಟ ಪಡ್ತಾವ. ಅದು ಚಲೋ ಅನಸಂಗಿಲ್ಲ" ಎಂದು ಹೇಳಿದರು.

ನಂತರ ನನಗೆ ತಿಳಿದಿದ್ದೇನೆಂದರೆ ಟೀಚರ್ ತಿದ್ದಿದ ಪೇಪರುಗಳನ್ನು ಅವರ ಮನೆಯಿಂದ ತೆಗೆದುಕೊಂಡು ಬರಲು ಟೀಚರ್ ಕ್ಲಾಸಿನ ಕ್ಯಾಪ್ಟನ್ ಆದ ಶಿವಾಜಿಯನ್ನು ಕರೆದಿದ್ದರು. ಆಗ ಅವನಿಗೆ ಗಣಿತದಲ್ಲಿ ತಾನು ಮೂರನೇ ಸ್ಥಾನದಲ್ಲಿದ್ದುದು ಟೀಚರ ಮಕ್ಕಳಿಂದ ಗೊತ್ತಾಗಿ ಜೋರಾಗಿ ಅತ್ತುಬಿಟ್ಟನಂತೆ. ಅದನ್ನು ನೋಡಿ ಕುಲಕರ್ಣಿ ಟೀಚರಿಗೆ ಬಹಳ ಬೇಸರವಾಯಿತಂತೆ. ಹೀಗಾಗಿ ಅವರು ಹುಡುಗರ ಮುಂದೆ ರ‍್ಯಾಂಕ್ ವಿಷಯ ಹೇಳಲೇ ಇಲ್ಲ.

Unforgettable childhood in Sankeshwar

ಗಣಿತದಲ್ಲಿ ಮೊದಲ ಸ್ಥಾನ ಸುಜಿತ್ ಕುಲಕರ್ಣಿ ಎಂಬ ನನ್ನ ಸಹಪಾಠಿ ಪಡೆದಿದ್ದರೆ, ಎರಡನೇ ಸ್ಥಾನದಲ್ಲಿ ನಾನಿದ್ದೆ. ಎಲ್ಲ ವಿಷಯಗಳಲ್ಲಿ ಗಳಿಸಿದ ಒಟ್ಟು ಅಂಕಗಳ ಪ್ರಕಾರ ಸುಜಿತ್ ಮೊದಲ ಸ್ಥಾನದಲ್ಲಿ, ಶಿವಾಜಿ ಎರಡನೇ ಸ್ಥಾನದಲ್ಲಿ ಮತ್ತು ನಾನು ಮೂರನೆಯ ಸ್ಥಾನ ಗಳಿಸಿದ್ದೆವು ಎಂದು ಟೀಚರ್ ಅಮ್ಮನಿಗೆ ಹೇಳಿದಾಗಲೇ ನನಗೆ ಗೊತ್ತಾಯಿತು. ಆದರೆ ಟೀಚರ್ ಹೇಳಲಿಲ್ಲವಾದ್ದರಿಂದ ಫಲಿತಾಂಶದ ದಿನ ಶಿವಾಜಿಗೆ ತಾನೇ ಮೊದಲಿಗ ಎಂದೆನಿಸಿ ಆತ ಸಂತೋಷದಲ್ಲಿಯೇ ಇದ್ದ. ಇಂದು ನಾವು ಮಕ್ಕಳ ನಡುವಿನ ಅನಾರೋಗ್ಯಕರ ಸ್ಪರ್ಧೆಯನ್ನು ಕಡಿಮೆಗೊಳಿಸಲು ಯಾವ ಕ್ರಮಾಂಕ ರಹಿತ ಶಾಲೆಯ ಪರಿಕಲ್ಪನೆ ಮಾಡಿಕೊಳ್ಳುತ್ತಿದ್ದೇವೆಯೋ ಅದನ್ನು ನಮ್ಮ ಕುಲಕರ್ಣಿ ಟೀಚರ್ ಅಂದೆಯೇ ಜಾರಿಗೆ ತಂದಿದ್ದರು.

ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?

ಐದನೇ ತರಗತಿಗೆ ತಂದೆ ನನ್ನನ್ನು ಕೂಡ ಅಣ್ಣ ಓದುತ್ತಿದ್ದ ಶ್ರೀ ದುರದುಂಡೀಶ್ವರ ಪ್ರೌಢ ಶಾಲೆಗೆ ಸೇರಿಸಿದರು. ಈ ಹಾಯಸ್ಕೂಲು ಶ್ರೀ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದಿಂದ 1927ರಲ್ಲಿ ಸ್ಥಾಪಿಸಲ್ಪಟ್ಟಿತು. ಅಂದಿನಿಂದ ಇಂದಿನವರೆಗೆ ಈ ಪ್ರೌಢಶಾಲೆ ಸಂಕೇಶ್ವರ ಮತ್ತು ಸುತ್ತಮುತ್ತಲಿನ ಎಲ್ಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಮಾತೃರೂಪಿ ಶಾಲೆ. ದೊಡ್ಡ ಮೈದಾನ, ಸ್ಕೂಲಿನ ಹಿಂದೆಯೇ ರಮಣೀಯವಾಗಿ ಕಾಣುವ ವಲ್ಲಭಗಡದ (ಹರಗಾಪುರ) ಗುಡ್ಡಗಳು, ಭವ್ಯವಾದ ಕಟ್ಟಡ ಮತ್ತು ಮಕ್ಕಳಿಗೆ ಪ್ರೀತಿಯಿಂದ ಪಾಠಮಾಡುವ ಪ್ರಾಮಾಣಿಕ ಗುರುಗಳು ಈ ಪ್ರೌಢ ಶಾಲೆಯನ್ನು ನನ್ನ ನೆನಪಿನ ಅಂಗಳದಲ್ಲಿ ಸದಾ ಹಸಿರಾಗಿಟ್ಟಿವೆ.

ಶಾಲೆ ಅಷ್ಟೇ ಅಲ್ಲ. ಶಾಲೆಗೆ ಹೋಗುವ ದಾರಿ ಕೂಡಾ ಅಷ್ಟೇ ಸುಂದರವಾಗಿತ್ತು. ಮನೆಯಿಂದ ಸುಮಾರು ಮೂರು ಕಿಲೋಮೀಟರು ದೂರದಲ್ಲಿದ್ದ ಶಾಲೆಗೆ ನಾನು ಮತ್ತು ಅಣ್ಣ ನಡೆದುಕೊಂಡೇ ಹೋಗುತ್ತಿದ್ದೆವು. ಸ್ವಲ್ಪ ದೂರ ಕ್ರಮಿಸಿದ ಮೇಲೆ ಊರು ಮುಗಿದು ಹೊಲಗಳು ಆರಂಭವಾಗುತ್ತಿದ್ದವು. ಎರಡೂ ಬದಿಯಲ್ಲಿ ಹರಡಿದ್ದ ಹೊಲಗಳನ್ನು ನೋಡುತ್ತಾ ನಡೆಯುವುದು ನನಗೆ ಅತ್ಯಂತ ಪ್ರಿಯ ಸಂಗತಿಯಾಗಿತ್ತು. ಈ ಹೊಲಗಳಲ್ಲಿ ಕಬ್ಬು, ತಂಬಾಕು, ಮೆಣಸಿನಕಾಯಿಗಳನ್ನು ಬೆಳೆಯುತ್ತಿದ್ದರು ಎಂಬ ನೆನಪು. ಸ್ವಲ್ಪ ದೂರ ನಡೆದ ಮೇಲೆ ಪುಟ್ಟದೊಂದು ಕೊಳ ಅನ್ನಬಹುದು, ಅದು ಸಿಗುತ್ತಿತ್ತು. ಅದರಲ್ಲಿ ಸುತ್ತಲಿನ ಗೋವಳರು ತಮ್ಮ ಹಸು ಮತ್ತು ಎಮ್ಮೆಗಳಿಗೆ ಸ್ನಾನ ಮಾಡಿಸಲು ತರುತ್ತಿದ್ದರು. ಕೊಳದಲ್ಲಿ ಪೂರಾ ಮುಳುಗಿ ಕೇವಲ ಮುಖದ ತುದಿಯನ್ನು ಮಾತ್ರ ಉಸಿರಾಡಿಸಲು ಮೇಲೆತ್ತುತ್ತಿದ್ದ ಎಮ್ಮೆಗಳನ್ನು ನೋಡಲು ತುಂಬಾ ಮಜವಾಗಿರುತ್ತಿತ್ತು.

Unforgettable childhood in Sankeshwar

ಅಂದ ಹಾಗೆ ನಾನು ಹಾಯಸ್ಕೂಲಿಗೆ ಸೇರಿದ ನಂತರ ಹೊಸದೊಂದು ಸಮಸ್ಯೆ ಶುರುವಾಯಿತು. ನಾನು ಓದುತ್ತಿದ್ದ ಸರಕಾರೀ ಕನ್ನಡ ಶಾಲೆಯ ನನ್ನ ಕೆಲವು ಸಹಪಾಠಿಗಳಿಗೆ ನಾನು ಎಸ್ ಡಿ ಹಾಯಸ್ಕೂಲಿಗೆ ಸೇರಿದ್ದು ಸಿಟ್ಟು ತರಿಸಿತ್ತು. ಕೇವಲ ನಾಲ್ಕೈದು ತಿಂಗಳು ಓದಿ ಶಾಲೆಯನ್ನು ಬಿಟ್ಟಿದ್ದು ಅವರಿಗೆ ನಂಬಿಕೆ ದ್ರೋಹವಾಗಿ ಕಂಡಿತು. ದಿನವೂ ಹಾಯಸ್ಕೂಲಿನಿಂದ ತಿರುಗಿ ಬರುತ್ತಿದ್ದಾಗ ಅವರು ಎದುರಾಗುತ್ತಿದ್ದರು. ದಿನವೂ ನನಗೆ ಅವರಿಂದ ಬೈಗುಳ ಕೇಳಿ ಬರುತ್ತಿತ್ತು. ಅದಲ್ಲದೆ ಎಲ್ಲೋ ಅಡಗಿ ಸಂದುಗೊಂದಲಿನಿಂದ ಹಠಾತ್ತಾಗಿ ಹಿಂದೆ ಬಂದು ತಲೆಗೆ ಹೊಡೆದೋ ಅಥವಾ ಬೆನ್ನಿಗೊಂದು ಗುದ್ದಿಯೋ ಮಾಯವಾಗಿ ಬಿಡುತ್ತಿದ್ದರು. ನೋವಿನಿಂದ ಕೂಗುತ್ತಿದ್ದೆ. ಕೆಲವು ಬಾರಿ ಅಳುತ್ತಿದ್ದೆ ಕೂಡ. ಅನೇಕ ಬಾರಿ ಅಣ್ಣ ಅವರಲ್ಲಿ ಯಾರನ್ನೋ ಹಿಡಿದು ತಿರುಗಿ ಬಾರಿಸುತಿದ್ದರೂ ಅವರ ಕೋಟಲೆ ಕೆಲವು ದಿನ ಹಾಗೆಯೇ ಮುಂದುವರೆಯಿತು. ಹೀಗೆಯೇ ಮೂರೂ ನಾಲ್ಕು ತಿಂಗಳು ಬೈದು ಹೊಡೆದು ಕೀಟಲೆ ಮಾಡಿ ಅವರಿಗೆ ಬೇಸರವಾಯಿತೆಂದು ಕಾಣುತ್ತದೆ. ನಂತರ ಅವರೆಲ್ಲ ಸುಮ್ಮನಾದರು. ಕ್ರಮೇಣ ಭಯ ಮಾಯವಾಗಿ ನನಗೆ ದಿನಗಳು ಮತ್ತೆ ಸುಂದರವಾಗಿ, ಪ್ರಕಾಶಮಾನವಾಗಿ ಕಾಣತೊಡಗಿದವು.

ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ?ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ?

ಮುಂದಿನ ಮೂರೂ ವರ್ಷಗಳನ್ನು ನಾನು ಎಸ್ ಡಿ ಪ್ರೌಢ ಶಾಲೆಯಲ್ಲಿ ಕಳೆದೆ. ಈ ಸಂದರ್ಭದಲ್ಲಿ ನಾನು ಪಠ್ಯ ಪುಸ್ತಕಗಳಲ್ಲದೆ ಬಾಹ್ಯ ಜೀವನಕ್ಕೆ ಬೇಕಾದ ಅನೇಕ ಸಂಗತಿಗಳನ್ನು ಕಲಿತೆ. ಈಗಲೂ ಮನದಾಳದಲ್ಲಿ ಆಗಾಗ ಇಣುಕಿ ನೋಡುವಾಗ ಸಂಕೇಶ್ವರದ ಈ ದಿನಗಳು, ಪ್ರಮುಖವಾಗಿ ಎಸ್ ಡಿ ಪ್ರೌಢ ಶಾಲೆಯ ಬಾಲ್ಯದ ದಿನಗಳು ಕಣ್ಣ ಮುಂದೆ ಮಿಂಚುತ್ತವೆ. ಅಲ್ಲಿ ನನಗೆ ಕಲಿಸಿದ ಗೋಡಖಿಂಡಿ ಟೀಚರ್, ಮಟ್ಟಿಕಲ್ಲಿ ಟೀಚರ್ ಮುಂತಾದವರು ನೆನಪಾಗಿ ಮನಸ್ಸು ಆರ್ದ್ರವಾಗುತ್ತದೆ.

English summary
Unforgettable childhood in Sankeshwar by Vasant Kulkarni from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X