ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಪ್ರಿಯವಲ್ಲದ ನಿರ್ಧಾರ ತೆಗೆದುಕೊಳ್ಳಲೂ ಗುಂಡಿಗೆ ಬೇಕು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

"Make the right decisions, even if they are unpopular" ಹೀಗೆ ಹೇಳಿದವರು ಸಿಂಗಪುರದ ರಾಷ್ಟ್ರಪಿತ ಎಂದು ಕರೆಯಲ್ಪಟ್ಟ ಲೀ ಕುವಾನ್ ಯೂ. ತಮ್ಮ ರಾಜಕೀಯ ಮತ್ತು ಆರ್ಥಿಕ ದೂರದೃಷ್ಟಿಗೆ ಹೆಸರಾದ ಲೀ ಕುವಾನ್ ಯೂ ಹೀಗೆ ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಯಾವಾಗ ಉಳಿದೆಲ್ಲ ಏಶಿಯಾದ ರಾಷ್ಟ್ರಗಳು ಇನ್ನೂ ತಮ್ಮ ತಮ್ಮ ದಾರಿಯನ್ನು ಕಂಡುಕೊಳ್ಳುವಲ್ಲಿ ತಡವರಿಸುತ್ತಿದ್ದವೋ, ಆವಾಗ ತಮ್ಮ ಪುಟ್ಟ ದೇಶದ ಏಳಿಗೆಯ ಪಥವನ್ನು ಸ್ಪಷ್ಟವಾಗಿ ಕಂಡು ಅಂತೆಯೇ ನಡೆಸಿ ಸಫಲರಾದ ಲೀ ಕುವಾನ್ ಯೂ, ತಮ್ಮ ರಾಜಕೀಯ ಜೀವನದುದ್ದಕ್ಕೂ ಅದೆಷ್ಟೇ ಅಪ್ರಿಯ ನಿರ್ಣಯಗಳನ್ನು ತೆಗದುಕೊಳ್ಳಬೇಕಾಗಿ ಬಂದರೂ, ಆ ನಿರ್ಣಯಗಳಿಂದ ಸಿಂಗಪುರಕ್ಕೆ ದೀರ್ಘಾವಧಿ ಒಳಿತಾಗುತ್ತಿದ್ದರೆ ಅವರು ತಪ್ಪದೇ ಅಂತಹ ನಿರ್ಣಯಗಳನ್ನು ತೆಗೆದುಕೊಂಡರು. ಅವರು ಜನರ ಒತ್ತಡಕ್ಕೆ, ರಾಜಕೀಯ ವಿರೋಧಿಗಳ ಕುತಂತ್ರಕ್ಕೆ ಮಣಿಯಲಿಲ್ಲ. ಅವರ ನಿರ್ಧಾರ ಅಚಲವಾಗಿತ್ತು. ಅದರ ಫಲವೇ ಇಂದಿನ ಆಧುನಿಕ, ಶ್ರೀಮಂತ ಸಿಂಗಪುರ ದೇಶ.

ಕೋಟಿ ರೋಗಕ್ಕೆ ಮದ್ದಿರಬಹುದು, ಜಾತಿ ರೋಗಕ್ಕೆ ಔಷಧ ಇದೆಯಾ!ಕೋಟಿ ರೋಗಕ್ಕೆ ಮದ್ದಿರಬಹುದು, ಜಾತಿ ರೋಗಕ್ಕೆ ಔಷಧ ಇದೆಯಾ!

"ಸಿಂಗಪುರವೇನು ಮಹಾ? ಚಿಕ್ಕ ದೇಶ, ಭಾರತದಂತಹ ಸಂಕೀರ್ಣ ದೇಶವಲ್ಲ. ಅಂತಹ ಪುಟ್ಟ ದೇಶವಾದರೆ ಯಾರಾದರೂ ಒಳ್ಳೆಯ ಆಡಳಿತ ನೀಡಿ ಮುಂದೆ ತರಬಹುದು" ಎಂಬ (ವಿತಂಡ?) ವಾದವನ್ನು ನಾನು ಅನೇಕ ಬಾರಿ ಕೇಳಿದ್ದೇನೆ. ಆದುದರಿಂದ ಕೆಲವು ವಿಷಯಗಳನ್ನು ಇಲ್ಲಿ ಚರ್ಚಿಸುತ್ತೇನೆ.

Make the right decisions, even if they are unpopular

ಚಿಕ್ಕ ದೇಶವಾದರೂ, ಆಗಸ್ಟ್ 9, 1965ರಲ್ಲಿ ಸಿಂಗಪುರ, ಮಲಯ ಒಕ್ಕೂಟದಿಂದ ಹೊರ ಬಿದ್ದಾಗ, ಅದರ ಮುಂದೆ ಅಪಾರವಾದ ಸವಾಲುಗಳಿದ್ದವು. ಅದು ತನ್ನದೇ ಆದ ಯಾವುದೇ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ಸುಮಾರು ಎರಡು ಮಿಲಿಯನ್ ಜನ ಈ ಒಂದು ಪುಟ್ಟ ದ್ವೀಪ ಸಿಂಗಪುರದಲ್ಲಿ ನೆಲೆಸಿದ್ದರು. ಉತ್ತರದಲ್ಲಿ ಮಲೇಶಿಯಾ ಮತ್ತು ದಕ್ಷಿಣದಲ್ಲಿ ಇಂಡೋನೇಶಿಯಾಗಳಂತಹ ದೇಶಗಳು ಸಿಂಗಪುರದ ಜೊತೆ ಒಳ್ಳೆಯ ಸಂಬಂಧಗಳನ್ನು ಹೊಂದಿರಲಿಲ್ಲ. ಮಲೇಶಿಯಾವಂತೂ ಜನಾಂಗೀಯ ಸಮಸ್ಯೆಯನ್ನು ಮುಂದಿಟ್ಟು ಸಿಂಗಪುರವನ್ನು ಮಲಯ ಒಕ್ಕೂಟದಿಂದ ಹೊರ ಹಾಕಿತ್ತು.

ಹೀಗೆ ಐತಿಹಾಸಿಕ ಬಳುವಳಿಯಾಗಿ ಸಿಂಗಪುರದ ಪ್ರಜೆಗಳಲ್ಲಿ ಜನಾಂಗೀಯ ಸಂಘರ್ಷ ಅತ್ಯಂತ ಉತ್ಕರ್ಷದಲ್ಲಿತ್ತು. ಈ ದ್ವೀಪಕ್ಕೆ ವಲಸೆ ಬಂದು ಇಲ್ಲಿಯೇ ನೆಲೆಸಿದ ಚೀನೀಯರು ಮತ್ತು ಇಲ್ಲಿನ ಮೂಲ ನಿವಾಸಿಗಳಾದ ಮಲಯ ಜನಾಂಗದ ನಡುವೆ ಅನೇಕ ಗಲಭೆಗಳಾಗಿ ಅಪಾರ ಹಿಂಸಾಚಾರವಾಗಿತ್ತು. ಇದಲ್ಲದೇ ಚೀನಾದ ಬೆಂಬಲ ಪಡೆದ ಸ್ಥಳೀಯ ಕಮ್ಯೂನಿಸ್ಟರು ತಮ್ಮ ಜಾಲ ಹರಡಿ ಸಿಂಗಪುರವನ್ನೊಳಗೊಂಡಂತೆ ಇಡೀ ಮಲಯ ಒಕ್ಕೂಟವನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು.

ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ : ಸಿಂಗಪುರದಲ್ಲಿ ಕ್ಯಾಟ್ ಕೆಫೆ ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ : ಸಿಂಗಪುರದಲ್ಲಿ ಕ್ಯಾಟ್ ಕೆಫೆ

ಅನೇಕ ರೌಡಿಗಳ ತಂಡಗಳು ಯಾರ ತಡೆಯೂ ಇಲ್ಲದೇ ತಮ್ಮ ಅಪರಾಧಗಳನ್ನು ಮಾಡುತ್ತ ಅರಾಜಕತೆಯನ್ನು ಹರಡುತ್ತಿದ್ದರು. ಇಂತಹ ವಿಲಕ್ಷಣ ಪರಿಸ್ಥಿತಿಯಲ್ಲಿ ಚಿಕ್ಕದೊಂದು ದ್ವೀಪವು ಒಂದು ಸ್ವತಂತ್ರವಾದ ದೇಶವಾಗಿ ತಲೆಯೆತ್ತಿ ನಿಲ್ಲಬೇಕಾದರೆ ಅದಕ್ಕೆ ಒಂದು ಅಪಾರವಾದ ದೂರದೃಷ್ಟಿಯುಳ್ಳ ನಾಯಕತ್ವ ಬೇಕಾಗಿತ್ತು. ಅದೃಷ್ಟವಶಾತ್, ಅಂತಹ ನಾಯಕತ್ವವನ್ನು ಲೀ ಕುವಾನ್ ಯೂ ಒದಗಿಸಿದರು.

ತಮ್ಮ ಪುಟ್ಟ ದೇಶದ ಹಿತಕ್ಕಾಗಿ ಅನೇಕ ಜನಪ್ರಿಯವಲ್ಲದ ನಿರ್ಣಯಗಳನ್ನು ಕೈಗೊಂಡರು. ಆಡಳಿತದಲ್ಲಿ, ಸರಕಾರಿ ಯೋಜನೆ ಮತ್ತು ಕೆಲಸಗಳಲ್ಲಿ ಕೇವಲ ಅರ್ಹರನ್ನೇ ನೇಮಿಸಿದರು. ಲಂಚಕೋರರನ್ನು ತೀವ್ರವಾಗಿ ಶಿಕ್ಷಿಸಿದರು. ಸಾರ್ವಜನಿಕ ಸ್ಥಾನಗಳಲ್ಲಿ ಉಗುಳುವುದು, ಸಿಗರೇಟು ಸೇದುವುದು, ಕಸ ಚೆಲ್ಲುವುದು ಮುಂತಾದವುಗಳಿಗೆ ದುರ್ಭರ ದಂಡಗಳನ್ನು ವಿಧಿಸಿದರು. ಚ್ಯೂಯಿಂಗ್ ಗಮ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದರು. ಸರಕಾರ ನಡೆಸಲು ಅತ್ಯಂತ ಮಿತವ್ಯಯ ಬಳಸಿದರು. ಪ್ರಜೆಗಳಿಗೆ ಉಳಿತಾಯ ಮಾಡಲು ಮತ್ತು ಶಿಕ್ಷಣ ಪಡೆಯಲು ಪ್ರೇರೇಪಿಸಿದರು. ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಕಾನೂನು ಜಾರಿಗೆ ತಂದರು. ಬೃಹತ್ ಉದ್ಯಮಿಗಳ ಮನವೊಲಿಸಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತಮ್ಮ ದೇಶಕ್ಕೆ ಕರೆತಂದರು. ಇದಾವದೂ ಸಲೀಸಾದ ಕೆಲಸವಾಗಿರಲಿಲ್ಲ.

ಆದರೆ ಅವರು ಅಂತಹ ನಿರ್ಧಾರಗಳನ್ನು ದೇಶ ಹಿತಕ್ಕಾಗಿ ತೆಗೆದುಕೊಂಡಿದ್ದು, ಜನಪ್ರಿಯವಾಗಲು ಅಲ್ಲ. ಅವರ ಒಂದು ಮುಖ್ಯವಾದ ಹೇಳಿಕೆಯೆಂದರೆ "If you want to be popular all the time, you will misgovern". ಲೀ ಕುವಾನ್ ಯೂ ಸ್ವತಃ ನೂರಕ್ಕೆ ನೂರರಷ್ಟು ಪ್ರಾಮಾಣಿಕರಾಗಿದ್ದರಲ್ಲದೇ, ತಮ್ಮ ಸಹೋದ್ಯೋಗಿಗಳಿಂದ ಅಂತಹ ಪರಿಶುದ್ಧ ಪ್ರಾಮಾಣಿಕತೆಯನ್ನು ಅಪೇಕ್ಷಿಸುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಅಪರಾಧಿಗಳನ್ನು ತೀವ್ರವಾಗಿ ಮತ್ತು ಶೀಘ್ರವಾಗಿ ಶಿಕ್ಷಿಸುವ ಕ್ರಮವನ್ನು ಜಾರಿಗೆ ತಂದರು.

ನಮ್ಮ ಕರ್ನಾಟಕ ರಾಜ್ಯದಲ್ಲಿ ನೋಡಿ. ಕೊಲೆಗಳ ಮೇಲೆ ಕೊಲೆಗಳು ನಡೆಯುತ್ತಿದ್ದರೂ ಆಡಳಿತ ಮೌನವಾಗಿದೆ. ಈ ಕೊಲೆಗಳ ಮೇಲೆ ರಾಜಕೀಯ ಮಾಡಬೇಡಿ ಎಂದು ಹೇಳುತ್ತಲೇ ರಾಜಕೀಯದಲ್ಲಿ ತೊಡಗಿದೆ. ಅಲ್ಲದೇ ನಮ್ಮ ದೇಶದ ಅತ್ಯಂತ ಅಪರಾಧ ಪೀಡಿತ ರಾಜ್ಯಗಳಲ್ಲೊಂದಾದ ಉತ್ತರಪ್ರದೇಶದಲ್ಲಿ ಹೊಸ ಮುಖ್ಯಮಂತ್ರಿ ಸ್ವಲ್ಪ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡರೆ ಅವರ ಸರಕಾರದ ಮೇಲೆ ಮಾನವೀಯ ಅಧಿಕಾರ ಸಂಘಟನೆಗಳು ಚಾವಟಿ ಬೀಸುತ್ತಿವೆ. ಹೀಗಾದರೆ ಅಪರಾಧಿಗಳು ರಾಜಾರೋಷವಾಗಿ ಕುಕೃತ್ಯಗಳನ್ನು ಎಸಗುವುದಿಲ್ಲವೇ? ಮಾನವ ಅಧಿಕಾರಗಳು ಸಾಮಾನ್ಯ ಮನುಷ್ಯರಿಗೆ ಅನ್ವಯಿಸುವುದಿಲ್ಲವೇ?

ನಮ್ಮ ದೇಶದಲ್ಲಿ ಈಗ ಲೀ ಕುವಾನ್ ಯೂ ಅವರಂತಹ ನಾಯಕತ್ವದ ತೀವ್ರ ಅವಶ್ಯಕತೆ ಇದೆ ಅಲ್ಲವೇ? ಅಶಿಸ್ತಿನ ಶಿಖರ ತಲುಪಿದ, ಭ್ರಷ್ಟಾಚಾರದಿಂದ ಗಬ್ಬೆದ್ದು ಹೋದ ಆಡಳಿತವನ್ನು ಸರಿಪಡಿಸಲು, ಒಡೆದು ಹೋಗಿ, ಒಬ್ಬರನ್ನೊಬ್ಬರು ದೂಷಿಸಿ, ದ್ವೇಷಿಸುವ ಸಮಾಜವನ್ನು ಒಂದುಗೂಡಿಸಲು, ಅಪರಾಧಗಳು ದಿನೇ ದಿನೇ ಸಂಭವಿಸಿದರೂ ಅವುಗಳನ್ನು ಹತ್ತಿಕ್ಕಲು ಅಸಹಾಯಕರಾಗಿರುವ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಇಂತಹ ನಿರಂಕುಶಮತಿ ಆಡಳಿತಗಾರರು ಈಗ ತುರ್ತಾಗಿ ಬೇಕಾಗಿದ್ದಾರೆ.

ಯಾರಾದರೂ ಅಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರೆ ಪ್ರಜೆಗಳಾಗಿ ನಾವು ಅವರ ಕೈಗಳನ್ನು ಬಲಪಡಿಸಬೇಕಾಗಿದೆ. ಒಳ್ಳೆಯ ಪ್ರಜೆಗಳಾಗಿ ದೇಶದ ಹಿತವನ್ನು ಬಯಸುವ ನಾವು ಅಂತಹ ನಾಯಕತ್ವದ ಕಹಿ ಪರಿಣಾಮಗಳನ್ನು ಸಹಿಸಬಲ್ಲೆವೇ? ಯಾವಾಗ ಎಲ್ಲೆಲ್ಲೂ ಇಂತಹ ಸಹನಶೀಲತೆಯುಳ್ಳ ಪ್ರಜೆಗಳ ಸಂಖ್ಯೆ ಗಣನೀಯವಾಗಿ ಕಂಡು ಬರುತ್ತದೋ ಆವಾಗ ಮಾತ್ರ ನಮ್ಮಲ್ಲೂ ಕೆಲವು ಲೀ ಕುವಾನ್ ಯೂ ತರಹದ ನಾಯಕರು ಜನ್ಮ ತಾಳುತ್ತಾರೆ. ಇಲ್ಲದಿದ್ದರೆ ನಮ್ಮ ಪಾಲಿಗೆ ಅಸಮರ್ಥ ಆಡಳಿತವೇ ಗತಿ. ಏಕೆಂದರೆ "We get leaders we deserve" ಅಲ್ಲವೇ?

English summary
Make the right decisions, even if they are unpopular, If you want to be popular all the time, you will misgovern. These are the staments by founder of Singapore Lee Kuan Yew, who took some unprecedented, unpopular decisions to make Singapore what it is today. Article by Vasant Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X