• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!

By ವಸಂತ ಕುಲಕರ್ಣಿ, ಸಿಂಗಪುರ
|

ಪಂಡಿತರೆಲ್ಲ ನೆರೆದಿದ್ದ ಸಭೆಯೊಂದರಲ್ಲಿ ವ್ಯಾಸ ತೀರ್ಥರು ಒಮ್ಮೆ ಕನಕದಾಸರನ್ನು "ಇಲ್ಲಿ ನೆರೆದಿದ್ದ ಪಂಡಿತರಲ್ಲಿ ಯಾರು ಮುಕ್ತಿಯನ್ನು ಪಡೆಯಲು ಅರ್ಹರು?" ಎಂದು ಒಬ್ಬೊಬ್ಬರನ್ನೇ ತೋರಿಸುತ್ತಾ ಕೇಳಿದರಂತೆ.

ಕನಕದಾಸರು ಒಬ್ಬೊಬ್ಬರಂತೇ ಎಲ್ಲರೂ ಮುಕ್ತಿಯನ್ನು ಪಡೆಯಲು ಅನರ್ಹ ಎಂದು ಹೇಳಿದರಂತೆ. ಕೊನೆಗೆ ವ್ಯಾಸತೀರ್ಥರು ತಾವು ಮುಕ್ತಿಯನ್ನು ಪಡೆಯಬಹುದೇ ಎಂದು ಕೇಳಿದಾಗ ಕನಕದಾಸರು "ನೀವೂ ಮುಕ್ತಿಯನ್ನು ಪಡೆಯುವುದಿಲ್ಲ" ಎಂದು ಹೇಳಿದರಂತೆ. ಕನಕದಾಸರ ಈ ಉತ್ತರದಿಂದ, ಮೊದಲೇ ಸಿಟ್ಟಿಗೆದ್ದಿದ್ದ ಪಂಡಿತೋತ್ತಮರು ಮತ್ತಷ್ಟು ಸಿಟ್ಟಿಗೆದ್ದರಂತೆ.

ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಆ ಮಹಾನ್ ಯುದ್ಧಗಳು

ಕೊನೆಗೆ ವ್ಯಾಸತೀರ್ಥರು ಕನಕದಾಸರನ್ನು "ನೀವು ಸ್ವರ್ಗಕ್ಕೆ ಹೋಗುವಿರಾ?" ಎಂದು ಕೇಳಿದಾಗ ಕನಕದಾಸರು "ನಾನು ಹೋದರೆ ಹೋದೇನು" ಎಂದು ಹೇಳಿದರಂತೆ. ಸಿಟ್ಟಿನಿಂದ ಕೆಂಪೇರಿದ್ದ ಪಂಡಿತೋತ್ತಮರ ಕೋಪ ತಾರಕಕ್ಕೇರಿತಂತೆ.

ಅವರು ವ್ಯಾಸತೀರ್ಥರಿಗೆ "ಕನಕದಾಸರಿಗೆ ನೀವು ತುಂಬಾ ಸಲಿಗೆ ಕೊಟ್ಟು ಅಟ್ಟಕ್ಕೇರಿಸಿದ್ದೀರಿ. ಇಲ್ಲಿ ನೆರೆದಿದ್ದ ಪಂಡಿತರನ್ನು ಬಿಟ್ಟು ಬಿಡಿ, ಸ್ವತಃ ಗುರುಗಳಾದ ನಿಮಗೇ ಮುಕ್ತಿ ದೊರಕುವುದಿಲ್ಲ, ತನಗೆ ಮಾತ್ರ ಮುಕ್ತಿ ದೊರಕಬಹುದು ಎಂಬಂತಹ ಅಧಿಕಪ್ರಸಂಗದ ಮಾತುಗಳನ್ನು ಆಡುವ ದಾರ್ಷ್ಟ್ಯ ಅವರಿಗೆ. ನೀವೀಗಲೇ ಅವರಿಗೆ ಬುದ್ಧಿ ಹೇಳಿರಿ" ಎಂದು ಕೋಪದ ಮಾತುಗಳನ್ನಾಡಿದರಂತೆ.

ಕನಕದಾಸರ ಆಧ್ಯಾತ್ಮಿಕ ಗುರುಗಳಾದ ವ್ಯಾಸತೀರ್ಥರು, ಕನಕದಾಸರಿಗೆ ಬಿಡಿಸಿ ಹೇಳಲು ಕೇಳಿದರಂತೆ. ಆಗ ಕನಕದಾಸರು ತಮ್ಮ ಮಾತಿನ ಅರ್ಥ "ನಾನು" ಎಂಬ ಅಹಂಕಾರ ಹೋದರೆ ಹೋದೇನು. ಇದು ತಮಗಷ್ಟೇ ಅಲ್ಲ, ಅಲ್ಲಿ ನೆರೆದಿದ್ದ ಎಲ್ಲರಿಗೂ ಅನ್ವಯಿಸುವ ಮಾತು ಎಂದು ಬಿಡಿಸಿ ಹೇಳಿದರಂತೆ. ದೊಡ್ಡ ತತ್ವವೊಂದನ್ನು ತೀರಾ ಸರಳ ಶಬ್ದವನ್ನು ಬಳಸಿ ಒಗಟಿನಂತೆ ಹೇಳಿ, ನಂತರ ಬಿಡಿಸಿ ಹೇಳಿದ ಕನಕದಾಸರ ಪದ ಚಾತುರ್ಯಕ್ಕೆ ವ್ಯಾಸತೀರ್ಥರನ್ನೊಳಗೊಂಡಂತೆ ಅಲ್ಲಿ ನೆರೆದಿದ್ದ ಎಲ್ಲರೂ ಬೆರಗಾದರಂತೆ.

ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ

ನನಗೆ ಕನಕದಾಸರ ಈ ಕಥೆ ನೆನಪಾಗಲು ಕಾರಣವೇನೆಂದರೆ, ಮೊನ್ನೆ ರಮಣ ಮಹರ್ಷಿಗಳ ಜೀವನಚರಿತ್ರೆಯನ್ನು ನೃತ್ಯರೂಪಕದ ಮೂಲಕ ನೋಡಿ ತಿಳಿಯುವ ಅವಕಾಶವೊಂದು ದೊರಕಿತು. ಈ ನೃತ್ಯರೂಪಕವನ್ನು ಬೆಂಗಳೂರಿನ "ರಸ" ಸಂಸ್ಥೆಯ ನಿರ್ದೇಶಕಿಯಾದ ಡಾ. ಅಂಬಿಕಾ ಕಾಮೇಶ್ವರ್ ಅವರ ನೇತೃತ್ವದಲ್ಲಿ ಸಿಂಗಪುರದ ಅಪ್ಸರಾ ಆರ್ಟ್ಸ್ ಅವರು ಅದ್ಭುತವಾಗಿ ಪ್ರಸ್ತುತಪಡಿಸಿದ್ದರು. ಈ ನೃತ್ಯರೂಪಕದಲ್ಲಿ ರಮಣ ಮಹರ್ಷಿಗಳ ಜೀವನ ವೃತ್ತಾಂತವಲ್ಲದೇ ಸ್ಥೂಲವಾಗಿ ಅವರ ಜೀವನ ಸಂದೇಶವನ್ನು ಕೂಡ ಎಲ್ಲರಿಗೂ ತಿಳಿಯುವಂತೆ ತಿಳಿಸಿಕೊಟ್ಟರು.

ರಮಣ ಮಹರ್ಷಿಗಳ ಸಂದೇಶದ ಮಹತ್ವದ ಅಂಶವೆಂದರೆ, ಅವರು ತಮ್ಮ ಶಿಷ್ಯರನ್ನು "ನಾನು ಯಾರು?" ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಲು ಪ್ರೇರೇಪಿಸುತ್ತಿದ್ದರು. ಈ ಪ್ರಶ್ನೆಯ ಮೂಲಕ ಜಿಜ್ಞಾಸುಗಳನ್ನು ತಮ್ಮ ಆತ್ಮ ಶೋಧನೆಯ ಪಥಕ್ಕೆ ತೊಡಗಿಸುತಿದ್ದರು. ರಮಣರು ಕೇವಲ ಹದಿನಾರು ವರ್ಷದ ಬಾಲಕರಾಗಿದ್ದಾಗ ಒಂದು ದಿನ ಅದೆಂತಹುದೋ ಮರಣ ಭಯ ಅವರನ್ನು ತೀವ್ರವಾಗಿ ಆವರಿಸಿಕೊಂಡಿತಂತೆ.

ಬೇರೆ ಯಾರನ್ನಾದರೂ ಕರೆದು ತಮ್ಮ ಭಯವನ್ನು ಪರಿಹರಿಸಿಕೊಳ್ಳಬೇಕು ಎಂಬ ವಿಚಾರ ಅವರಿಗೆ ಹೊಳೆಯಲೇ ಇಲ್ಲ. ಇದು ತನ್ನ ಸಮಸ್ಯೆ. ಈ ಸಮಸ್ಯೆಯ ಉತ್ತರವನ್ನು ತಾನೇ ಕಂಡುಕೊಳ್ಳಬೇಕು ಎಂಬ ಹೊಳಹು ಮೂಡಿ ಸಾವನ್ನು ಅನುಭವಿಸಿಬಿಡಬೇಕು ಎಂದು ಶ್ವಾಸವನ್ನು ಹಿಡಿದು ನೋಡಿದರಂತೆ. ತನ್ನ ದೇಹ ಕೊರಡಿನಂತೆ ಬಿದ್ದು ಅದನ್ನು ಹೊರಗಿನಿಂದ ಕಂಡು ತನ್ನ ಸಾವಿಗೆ ತಾನೇ ಸಾಕ್ಷಿಯಾದ ಭಾಸವಾಯಿತು ಬಾಲಕ ರಮಣರಿಗೆ. ದೇಹ ಸಾವನ್ನು ಕಂಡರೂ ತಮಗೇನು ಆಗಿಲ್ಲ ಎಂಬ ಅರಿವಾಗಿ, ರಮಣರಿಗೆ ತಮ್ಮ ದೈಹಿಕ ಸ್ವರೂಪ ತಾನಲ್ಲ. ನಿಜವಾದ ತಾನೆಂದರೆ "ಮರಣ ರಹಿತ ಅಮರ ಚೈತನ್ಯ" ಎಂಬ ಅಧ್ಯಾತ್ಮಿಕ ಅರಿವು ಉಂಟಾಯಿತಂತೆ.

ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಅವರ ಈ ಅರಿವು ಅವರ ಶಿಷ್ಯತ್ವವನ್ನು ಅರಸಿಬಂದ ಎಲ್ಲ ಅನ್ವೇಷಕರಿಗೆ ದಾರಿದೀಪವಾಯಿತು. ಭಗವಾನ್ ರಮಣರು "ನಾನು ಯಾರು?" ಎಂಬ ಅರಿವಿನ ರಹದಾರಿಯನ್ನು ಭಕ್ತರ ಮುಂದೆ ತೆರೆದಿಡುತ್ತಿದ್ದರು. ಅವರ ಈ ಪ್ರಶ್ನೆಯ ಪರ್ವತವನ್ನು ಏರತೊಡಗಿದ ಎಲ್ಲರಲ್ಲೂ "ನಾನು" ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ ಮಾಯವಾಗಿ ನಿಜವಾದ ತಾನೆಂದರೆ ಅಮರವಾದ ಚೈತನ್ಯ ಎಂಬ ಅರಿವು ಮೂಡಲು ಆರಂಭವಾಯಿತಂತೆ.

ಇದೇ ಸಂದರ್ಭದಲ್ಲಿ ನನಗೆ ನೆನಪಾದ ಇನ್ನೊಂದು ಮಹತ್ವದ ಘಟನೆಯೆಂದರೆ ಶಂಕರ ಭಗವತ್ಪಾದರು ಕಾಶಿಯಲ್ಲಿ ಗಂಗಾ ಸ್ನಾನ ಮಾಡಿ ವಿಶ್ವನಾಥನ ದರ್ಶನಕ್ಕೆ ಬರುತ್ತಿದ್ದಾಗ ಎದುರಾದ ಚಾಂಡಾಲ ಮತ್ತು ಅವನ ನಾಯಿಗಳನ್ನು ನೋಡಿ "ದೂರ ಸರಿ" ಎಂದು ಹೇಳಿದರಂತೆ. ಆಗ ಚಾಂಡಾಲ "ಸ್ವಾಮಿ, ನೀವು ದೂರ ಸರಿ ಎಂದುದು ನಿಮ್ಮಂತೆಯೇ ಆಹಾರ ಪದಾರ್ಥಗಳಿಂದುಂಟಾದ ಈ ದೇಹವನ್ನೋ, ಅಥವಾ ನಿಮ್ಮೊಳಗೆ ಇದ್ದಂತಹ ನನ್ನೊಳಗೂ ಇರುವ ಅಮರವಾದ ಚೈತನ್ಯಕ್ಕೋ?" ಎಂದು ಕೇಳಿದಾಗ, ಶಂಕರರಿಗೆ ಭಗವಂತನ ಸ್ವರೂಪವೇ ಆ ಚಾಂಡಾಲನಲ್ಲಿ ಕಂಡುಬಂದು ಅವರ ಮಾಯೆಯ ಪರದೆ ಹರಿದು ಆ ಚಾಂಡಾಲನನ್ನು ಗುರು ಎಂದು ಆರಾಧಿಸಿರಂತೆ.

ರಮಣ ಮಹರ್ಷಿಗಳ ಜೀವನ ಚರಿತ್ರೆಯನ್ನು ನೋಡುತ್ತಿದ್ದಂತೆ ಇಂತಹ ಅನೇಕ ಮಹಾಜ್ಞಾನಿಗಳು ಜನಿಸಿದ ನಾಡು ನಮ್ಮ ದೇಶ ಎಂಬ ಭಾವ ಉಂಟಾಗಿ ಧನ್ಯತೆ ಮನದಲ್ಲಿ ಮೂಡಿತು. ನೃತ್ಯರೂಪಕದ ನಂತರ ಮಾತನಾಡಿದ ಸಿಂಗಪುರದ ರಾಮಕೃಷ್ಣಾಶ್ರಮದ ಸ್ವಾಮಿ ಸಮಚಿತ್ತಾನಂದ ಅವರು ಕೂಡ ಇದನ್ನೇ ಹೇಳುತ್ತಾ "ನಮ್ಮ ದೇಶದಲ್ಲಿ ಸದಾಕಾಲ ಒಬ್ಬರಾದರೂ ಅವತಾರ ಪುರುಷರು ಜೀವಿಸಿರುತ್ತಾರೆ, ಅಂತಹ ಪವಿತ್ರ ಭೂಮಿ ನಮ್ಮದು" ಎಂದರು.

ಆದರೆ ಇಂತಹ ಪವಿತ್ರ ಭೂಮಿಯಲ್ಲಿಯೇ ಇಂದು ಹಿಂಸೆ, ಅನೀತಿ, ಆಶಿಕ್ಷೆಗಳು ತಾಂಡವವಾಡುತ್ತಿವೆ. ಜಗತ್ತಿಗೇ ಬೆಳಕು ತೋರುವ ಅಧ್ಯಾತ್ಮಿಕ ಪ್ರಕಾಶವನ್ನು ಹೊಂದಿದ ನಮ್ಮ ನಾಡಿನಲ್ಲಿ ತಲೆತಲಾಂತರಗಳಿಂದ ಈ ಕೆಡುಕುಗಳು ಕೂಡ ಬೇರೂರಿ ನಮ್ಮ ನಾಡಿನ ಘನತೆಗೆ ಕುಂದು ತರುತ್ತಿವೆ ಎನ್ನುವುದು ವಿಪರ್ಯಾಸ. ಆದರೇನು ಮಾಡುವುದು? ದೀಪದ ಬುಡದಲ್ಲಿ ಕತ್ತಲೆ ಸಹಜವೇ ತಾನೇ?

English summary
Leave your ego at the door every morning, and just do some truly great work. Few things will make you feel better than a job brilliantly done. Bhakta Kanakadasa, Bhagwan Ramana Maharshi preached the same throught their life. An article by Vasant Kulkarni, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X