• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಾನು ಮತ್ತು ನನ್ನ ಕವಿ ಮಿತ್ರ ವೆಂಕಟ್ ಕೆಲವು ಬಾರಿ ಕನ್ನಡ ಕವನಗಳನ್ನು ಕುರಿತು ಚರ್ಚಿಸುತ್ತೇವೆ. ಒಂದು ದಿನ ಗೋಪಾಲಕೃಷ್ಣ ಅಡಿಗರ "ಪುಷ್ಪಕವಿಯ ಪರಾಕು" ಎಂಬ ಕವನ ನಮ್ಮ ಚರ್ಚೆಯ ವಿಷಯವಾಗಿತ್ತು. ಆ ಕವನ ನವೋದಯ ಕವಿಗಳ ಮೇಲೆ ಗೋಪಾಲಕೃಷ್ಣ ಅಡಿಗರ ಕಟು ವಿಮರ್ಶೆ ಎಂಬುದು ನಮಗೆ ಮೇಲು ನೋಟಕ್ಕೆ ತಿಳಿದು ಬಂದರೂ, ಅದೇಕೆ ಈ ಕಟು ವಿಮರ್ಶೆ? ಅದರ ಹಿನ್ನೆಲೆ ಏನು? ಕನ್ನಡದಲ್ಲಿ ನವ್ಯದ ಕ್ರಾಂತಿಯನ್ನು ಹುಟ್ಟು ಹಾಕಿದ ಅಡಿಗರು ಈ ಪದ್ಯದ ಮೂಲಕ ಲೇವಡಿಯನ್ನು ಮಾಡಲು ಪದ್ಯವನ್ನೇಕೆ ಬಳಸಿಕೊಂಡರು? ಎಂಬ ಮುಂತಾದ ಪ್ರಶ್ನೆಗಳು ನಮ್ಮಿಬ್ಬರ ಮುಂದೆಯೂ ಥಕ ಥಕ ಕುಣಿದವು. ಕೆ ಎಸ್ ನರಸಿಂಹ ಸ್ವಾಮಿ ಅವರು ಅಡಿಗರ ನಿಶಾನೆಯಾಗಿದ್ದರೆ? ಅದೇಕೆ ಎಂಬ ಪ್ರಶ್ನೆಯೂ ಮೂಡಿತು. ಕೊನೆಗೆ ನಾವಿಬ್ಬರೂ ಈ ಕವನದ ಅಂತರಾರ್ಥವನ್ನು ತಿಳಿಸಿಕೊಡಲು ಎಚ್ ಎಸ್ ವೆಂಕಟೇಶ ಮೂರ್ತಿ ಅವರನ್ನು ಕೇಳುವುದು ಎಂದು ನಿರ್ಧಾರ ಮಾಡಿದೆವು.

ಒಂದು ವಾರದ ನಂತರ ನಿಗದಿತ ಸಮಯಕ್ಕೆ ನಾನು ಮತ್ತು ವೆಂಕಟ್ ಒಂದೆಡೆ ಸೇರಿ ಅವರಿಗೆ ಫೋನಾಯಿಸಿದೆವು. ಅವರು ಫೋನಿನಲ್ಲಿ ತಮ್ಮ ವಿಶಿಷ್ಟವಾದ ಆತ್ಮೀಯ ಶೈಲಿಯಲ್ಲಿ "ಹೇಗಿದ್ದೀರಾ ವೆಂಕಟ್? ಹೇಗಿದ್ದೀರಾ ವಸಂತ್?" ಎಂದು ಶುರು ಮಾಡಿದವರು, ಮುಂದೆ ಸುಮಾರು ಒಂದು ಗಂಟೆಯವರೆಗೆ ಅವ್ಯಾಹತವಾಗಿ ನಮಗೆ ಪಾಠ ಹೇಳಿದರು. ಹೊರಗೆ ಸೋನೆ ಮಳೆ ಧೋ ಧೋ ಎಂದು ಬೀಳುತ್ತಾ ಜಗತ್ತನ್ನು ನೆನೆಸಿ ಶುದ್ಧಗೊಳಿಸುತ್ತಿದ್ದರೆ, ಕನ್ನಡದ ಹೆಮ್ಮೆಯ ಕವಿ ನಮ್ಮನ್ನು ತಮ್ಮ ಕಾವ್ಯ ಮೀಮಾಂಸೆಯ ಗಂಗೆಯಲ್ಲಿ ಮೀಯಿಸಿ ಶುದ್ಧಗೊಳಿಸಿದರು.

ಎಚ್ಚೆಸ್ವಿ ಮತ್ತು ಅಶ್ವತ್ಥ್ ಹರಿಬಿಟ್ಟ ಸೃಜನಶೀಲತೆಯ ಪ್ರವಾಹಎಚ್ಚೆಸ್ವಿ ಮತ್ತು ಅಶ್ವತ್ಥ್ ಹರಿಬಿಟ್ಟ ಸೃಜನಶೀಲತೆಯ ಪ್ರವಾಹ

ಅದು ಹೇಗೆ ಆಧುನಿಕ ಕನ್ನಡ ಕಾವ್ಯ ಕುವೆಂಪು, ಬೇಂದ್ರೆ, ಪುತಿನ ಮತ್ತು ನರಸಿಂಹಸ್ವಾಮಿಗಳಂತಹ ನವೋದಯ ಕಾಲದ ಕಾಲ್ಪನಿಕ, ರಂಜಕವಾದ ರೋಮ್ಯಾಂಟಿಕ್ ಕಾಲಘಟ್ಟದಿಂದ ಪರಿವರ್ತನೆ ಹೊಂದಿ, ಅಡಿಗರ ಕಟು ವಾಸ್ತವವನ್ನು ಅಷ್ಟೇ ಕಟುವಾಗಿ ಹೇಳುವ ನವ್ಯ ಮಾರ್ಗದತ್ತ ಕನ್ನಡ ಸಾಹಿತ್ಯ ಮುನ್ನಡೆಯಿತು ಎಂದು ಅದ್ಭುತವಾಗಿ ಕಲಿಸಿದರು. ಈ ಹಿನ್ನೆಲೆಯಲ್ಲಿ 'ಪುಷ್ಪ ಕವಿಯ ಪರಾಕು' ಕವಿ ಯಾವುದೇ ಒಬ್ಬ ಕವಿಯನ್ನು ಗೇಲಿ ಮಾಡಿದ ಪದ್ಯವಲ್ಲ. ಅಂದಿನ ರೋಮ್ಯಾಂಟಿಕ್ ಕವಿಗಳ ಪ್ರತಿನಿಧಿಯೊಬ್ಬನನ್ನು ಕಲ್ಪಿಸಿ ಅವನ ಸ್ವಗತದ ಮೂಲಕ ಆ ಪದ್ಯ ಪ್ರಕಾರವನ್ನೇ ಗೇಲಿ ಮಾಡಿದ ವಿಡಂಬನಾತ್ಮಕ ಪದ್ಯ ಎಂದು ಹೇಳಿದರು. ಅದು ಹೇಗೆ ತಮ್ಮ ಹತ್ತಿರದ ಭೂತಕಾಲದ ಕಾವ್ಯ ಪ್ರಕಾರವನ್ನು ಧಿಕ್ಕರಿಸಿ ಹೊಸ ಮಾರ್ಗವನ್ನು ಸೃಜಿಸುವತ್ತ ಅಡಿಗರು ಹೆಜ್ಜೆ ಹಾಕಿದರು ಎಂದು ವಿವರಿಸಿದಾಗ, ಅಧುನಿಕ ಕನ್ನಡ ಕಾವ್ಯ ಲೋಕ ನಡೆದು ಬಂದ ದಾರಿಯನ್ನು ಮಿಂಚಿನ ಬೆಳಕಿನಲ್ಲಿ ಸ್ಪಷ್ಟವಾಗಿ ನೋಡಿದ ಅನುಭವವಾಯಿತು.

ಅಂದ ಹಾಗೆ, ನಮ್ಮನ್ನು ಈ ರೀತಿಯಾಗಿ ಪ್ರಸಿದ್ಧ ಕವಿಗಳ ಕೃತಿಗಳನ್ನು ಅಭ್ಯಾಸ ಮಾಡಲು ಪ್ರೇರೇಪಿಸಿದವರೇ ಎಚ್ ಎಸ್ ವೆಂಕಟೇಶ ಮೂರ್ತಿ ಅವರು. ಒಮ್ಮೆ ವೆಂಕಟ್ ಅವರು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ ಅವರೊಂದಿಗೆ ಮಾತನಾಡುತ್ತಿದ್ದಾಗ "ನಮಗನಿಸಿದ್ದನ್ನು ನಾವು ಬರೆಯುತ್ತಿದ್ದೇವೆ. ಆದರೆ ನಾವು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ? ಈ ಮಾರ್ಗದಲ್ಲಿ ಹೇಗೆ ಮುಂದುವರೆಯಬೇಕು?" ಎಂದು ಕೇಳಿದಾಗ, ಎಚ್ಚೆಸ್ವಿ ಅವರು ನೀವು ಮತ್ತು ಕುಲಕರ್ಣಿ ಅವರು ಸೇರಿಕೊಂಡು ಕನ್ನಡದ ಪ್ರಸಿದ್ಧ ಕವಿಗಳ ಕೃತಿಗಳನ್ನು ಓದಿ, ಅಭ್ಯಸಿಸಿ. ಅವುಗಳ ಲಯ, ಅಲಂಕಾರ ಮತ್ತು ಅಂತರಾರ್ಥಗಳನ್ನು ಕುರಿತು ಚರ್ಚಿಸಿ ಎಂದು ಹೇಳಿದ್ದರಂತೆ. ಅಲ್ಲದೇ ನಮಗಿಬ್ಬರಿಗೂ ಓದಲು ಕೆಲವು ಪುಸ್ತಕಗಳನ್ನು ಹೆಸರಿಸಿದರಂತೆ. ಅದರಂತೆ ವೆಂಕಟ್ ನನಗೊಂದು ಮತ್ತು ತಮಗೊಂದರಂತೆ ಆ ಪುಸ್ತಕಗಳ ಎರಡು ಪ್ರತಿಗಳನ್ನು ತಂದೇ ಬಿಟ್ಟರು. ಅಂದಿನಿಂದ ನಾವು ಆ ಪುಸ್ತಕಗಳನ್ನು ಓದಿ ಅಭ್ಯಸಿಸುತಿದ್ದೇವೆ.

ಕನ್ನಡ ಕಾದಂಬರಿಗಳ ಹುಚ್ಚು ಹಿಡಿಸಿದ ಸಂಕೇಶ್ವರದ ದಿನಗಳು ಕನ್ನಡ ಕಾದಂಬರಿಗಳ ಹುಚ್ಚು ಹಿಡಿಸಿದ ಸಂಕೇಶ್ವರದ ದಿನಗಳು

ಇಂದು ನಾನು ಎಚ್ಚೆಸ್ವಿ ಅವರ ಜೊತೆ ಒಡನಾಟ ಹೊಂದುವಲ್ಲಿ ವೆಂಕಟ್ ಅವರದು ಮಹತ್ವದ ಪಾತ್ರ. 2016ರಲ್ಲಿ ಪ್ರಖ್ಯಾತ ಸಂಗೀತ ಸಂಯೋಜಕ ಮತ್ತು ಭಾವಗೀತೆಗಳ ಹೊಸ ಹರಿಕಾರ ಉಪಾಸನಾ ಮೋಹನ್ ನಮ್ಮಿಬ್ಬರ ಕವನಗಳನ್ನು ಸೇರಿಸಿ ಒಂದು ಸಿಡಿ ಹೊರತಂದಾಗ ಸಿಂಗಾಪುರದಲ್ಲಿ ಅದನ್ನು ಬಿಡುಗಡೆ ಮಾಡಲು ಬಂದಿದ್ದು ಎಚ್ಚೆಸ್ವಿ ಅವರು. ಅಧುನಿಕ ಕನ್ನಡದ ಮಹತ್ತರ ಕವಿ ನಮ್ಮಿಬ್ಬರಂತಹ ಉದಯೋನ್ಮುಖರನ್ನು ಹರಸಲು ಅಷ್ಟು ದೂರದಿಂದ ಬಂದಿದ್ದು ಅವರ ಸಹೃದಯತೆಯನ್ನು ಎತ್ತಿ ತೋರಿಸುತ್ತದೆ.

ನಿಜ ಹೇಳಬೇಕೆಂದರೆ 2005ರವರೆಗೂ ನನಗೆ ಎಚ್ಚೆಸ್ವಿ ಅವರ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಅಲ್ಲಿಯವರೆಗೆ ನನ್ನ ಕಾವ್ಯದ ಜ್ಞಾನ ಬಹಳ ಸೀಮಿತವಾಗಿತ್ತು. ಕುವೆಂಪು, ಬೇಂದ್ರೆ, ಪುತಿನ ಮತ್ತು ಕೆ ಎಸ್ ನ ಅವರ ಹೆಸರನ್ನು ಮಾತ್ರ ಕೇಳಿದ್ದೆ. ಸ್ವಲ್ಪ ಮಟ್ಟಿಗೆ ಅವರ ಕೃತಿಗಳನ್ನು ಮಾತ್ರ ಓದಿಕೊಂಡಿದ್ದೆ. ಇಂದಿನ ಪ್ರಸಿದ್ಧ ಕವಿಗಳಲ್ಲಿ ಕೆಲವರ ಹೆಸರು ಮಾತ್ರ ಕೇಳಿದ್ದೆನೇ ಹೊರತು ಅವರ ಕೃತಿಗಳನ್ನು ಓದಿರಲಿಲ್ಲ.

 HS Venkatesh Murthy 75 : The legendary Kannada poet

ಒಮ್ಮೆ ಸಾಹಿತ್ಯಾಸಕ್ತ ಮಿತ್ರರ ನಡುವೆ ಮಾತುಕತೆ ನಡೆದಾಗ ಹಿರಿಯ ಮಿತ್ರರೊಬ್ಬರು ಇಂದಿನ ಕವಿಗಳಲ್ಲಿ ಎಚ್ ಎಸ್ ವೆಂಕಟೇಶ ಮೂರ್ತಿ ಅಗ್ರಗಣ್ಯರು ಎಂದು ಹೇಳಿದರು. ನಾನು ಅವರ ಕೃತಿಗಳನ್ನು ಅಷ್ಟು ಓದಿಲ್ಲ, ಕೇಳಿಲ್ಲ ಎಂದು ಹೇಳಿದಾಗ, ಅವರು "ಅಯ್ಯೋ, ನೀವು ಪ್ರೀತಿಕೊಟ್ಟ ರಾಧೆಗೆ, ಮಾತು ಕೊಟ್ಟ ಮಾಧವ, ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ಮುಂತಾದ ಅದ್ಭುತ ಹಾಡುಗಳನ್ನು ನೀವು ಕೇಳಿಯೇ ಇಲ್ಲವೇ?" ಎಂದು ಬೆರಗಾಗಿ ಕೇಳಿದರು. ನನಗೆ ನನ್ನ ಅಜ್ಞಾನದ ಬಗ್ಗೆ ನಾಚಿಕೆಯಾಯಿತು.

ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು! ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು!

ಮುಂದೆ ನನಗೆ ಸಿಕ್ಕಿದಷ್ಟು ಅವರ ಕೃತಿಗಳನ್ನು ಓದುತ್ತಾ ಬಂದೆ. ಅವರು ಬರೆದ ಭಾವಗೀತೆಗಳನ್ನು ಆಗಾಗ ಕೇಳುತ್ತಿದ್ದೆ. ಮುಂದೆ ಉಪಾಸನಾ ಮೋಹನ್ ಅವರ ವರ್ಕ್ ಶಾಪ್‍ಗಳು ಸಿಂಗಪುರದಲ್ಲಿ ನಡೆದಾಗ ಎಚ್ಚೆಸ್ವಿ ಅವರ ಗೀತೆಗಳನ್ನು ಹಾಡುವುದನ್ನು ಕೂಡ ಕಲಿತೆ. ಮುಂದಿನ ವರ್ಷದ ವರ್ಕ್ ಶಾಪಿನಲ್ಲಿ ಎಚ್ಚೆಸ್ವಿ ಕೂಡಾ ಬಂದರು. ನಮ್ಮನ್ನೆಲ್ಲಾ ಕುರಿತು ಮಾತನಾಡಿದರು. ಅದೇ ಸಮಯದಲ್ಲಿ ನಮ್ಮ ಸಿಡಿ ಕೂಡಾ ಬಿಡುಗಡೆ ಮಾಡಿದರು. ಸಿಡಿ ಬಿಡುಗಡೆಯ ಸಂದರ್ಭದಲ್ಲಿ ನನ್ನ ಮಗಳು ವೃಂದಾ, ಕಲಾವಿದೆ ಭಾರ್ಗವಿ ಆನಂದ್ ಅವರ ನಿರ್ದೇಶನದಲ್ಲಿ ಎಚ್ಚೆಸ್ವಿ ಅವರ "ಅಮ್ಮಾ ನಾನು ದೇವರಾಣೆ" ಗೀತೆಗೆ ನೃತ್ಯವನ್ನು ಮಾಡಿದಳು. ಅವಳ ನೃತ್ಯವನ್ನು ನೋಡಿ ಬಹಳ ಖುಷಿ ಪಟ್ಟು ಶ್ಲಾಘಿಸಿದರು.

ಅದೊಂದು ದಿನ ನನ್ನ ಮನೆಗೆ ಬಂದು ಒಂದು ಅರ್ಧ ದಿನ ನಮ್ಮೊಂದಿಗಿದ್ದರು. ನನ್ನ ಕೆಲವು ಕವನಗಳನ್ನು ಓದಿ ಎಲ್ಲಿ, ಹೇಗೆ ತಿದ್ದಬೇಕು ಎಂದು ತಿಳಿಸಿಕೊಟ್ಟರು. ಕವಿತೆಗಳ ರಚನೆಯಲ್ಲಿ ಹೊಸತನ, ಹೊಸ ದೃಷ್ಟಿಕೋನ ಮತ್ತು ಹೊಸ ರೂಪಕಗಳ ಪಾತ್ರಗಳನ್ನು ತಿಳಿಸಿಕೊಟ್ಟರು. ಅಂದು ನಡೆದ ಸುಮಾರು ಒಂದು ಗಂಟೆಯ ಮಾತುಕತೆ ಇಂದು ಮೂರುವರ್ಷಗಳ ನಂತರವೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿದೆ. ಅಂದು ನನ್ನ ಪತ್ನಿ ಮಾಡಿದ ಉತ್ತರ ಕರ್ನಾಟಕದ ಎಣ್ಣೆಗಾಯಿ ಪಲ್ಯ, ಚಪಾತಿ, ಹುಳಿ, ಚಟ್ನಿ ಮುಂತಾದ ಪದಾರ್ಥಗಳನ್ನು ಬಹಳ ಖುಷಿಯಿಂದ ಉಂಡರು. ಅದರ ರುಚಿಯನ್ನು ನಾವು ಹೋದಾಗಲೊಮ್ಮೆ ನೆನೆಸಿಕೊಳ್ಳುತ್ತಾರೆ!

ನನ್ನ ಹಿಂದಿನ ಲೇಖನವೊಂದರಲ್ಲಿ "ಸಂಜೆಯಾಗುತಿದೆ ನಡೆ ನಡೆ ಗೆಳೆಯಾ" ಎಂಬ ಅವರ ಉತ್ತರಾಯಣ ಕವನ ಸಂಕಲನದ ಗೀತೆಯ ಬಗ್ಗೆ ಬರೆದಿದ್ದೇನೆ. ಈ ಗೀತೆ ನನಗೆ ಮತ್ತು ವೆಂಕಟ್ ಅವರಿಗೆ ಅತ್ಯಂತ ಪ್ರಿಯವಾದ ಪದ್ಯ. ಈ ಪದ್ಯ ಎಚ್ಚೆಸ್ವಿ ಅವರು ಬರೆದದ್ದು ಎಂದು ವೆಂಕಟ್ ಅವರಿಗೆ ಕೂಡ ಗೊತ್ತಿರಲಿಲ್ಲವಂತೆ. ಅದು ಅವರಿಗೆ ಗೊತ್ತಾದ ಸಂಗತಿ ಅತ್ಯಂತ ರೋಚಕವಾದ ಕಥೆ. ಆ ಪ್ರಸಂಗವನ್ನು ಕುರಿತು ಬರೆಯಿರಿ ಎಂದು ವೆಂಕಟ್ ಅವರಿಗೆ ಹೇಳಿದ್ದೇನೆ. ಇಂದು ಎಚ್ಚೆಸ್ವಿ ಅವರ ಸಮಗ್ರ ಕವನಗಳು ನನ್ನ ಹತ್ತಿರ ಇದೆ. ಮೇಲಿಂದ ಮೇಲೆ ಅವರ ಕವಿತೆಗಳನ್ನು ಓದಿ ಅಭ್ಯಸಿಸುತ್ತೇನೆ. ಸಮಯ ದೊರೆತಾಗ ವೆಂಕಟ್ ಅವರ ಜೊತೆ ಚರ್ಚಿಸುತ್ತಿರುತ್ತೇನೆ. ಅವರ ಉತ್ತರಾಯಣ ಸಂಕಲನದ ಎಲ್ಲ ಪದ್ಯಗಳನ್ನು ಬಹಳ ಸೂಕ್ಷ್ಮವಾಗಿ ಓದಿದ್ದೇನೆ.

ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಸಂಕೇಶ್ವರದ ದಿನಗಳುಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಸಂಕೇಶ್ವರದ ದಿನಗಳು

ಈ ಜೂನ್ 23ರಂದು ಕನ್ನಡದ ಈ ಮೇರು ಕವಿಗೆ ಎಪ್ಪತ್ತೈದು ತುಂಬಿತು. ಅದಕ್ಕೂ ಒಂದು ವಾರದ ಮುಂಚೆ ಬೆಂಗಳೂರಿಗೆ ಹೋದಾಗ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗುವ ಸದವಕಾಶ ದೊರೆಯಿತು. ಅವರಿಗೆ ಹುಟ್ಟುಹಬ್ಬದ ಶುಭ ಕೋರಿ ಕಾಲು ಮುಟ್ಟಿ ನಮಸ್ಕರಿಸಿದೆ. ಸುಮಾರು ಒಂದು ಗಂಟೆ ಅವರ ಕೂಡ ಮಾತನಾಡಿದೆ. ಬಹಳ ಉತ್ಸಾಹದಿಂದ ತಮ್ಮ ಮನೆಯನ್ನು ತೋರಿಸಿದರು. ಮಹಡಿಯ ಮೇಲೆ ತುಂಬಾ ವಾತ್ಸಲ್ಯದಿಂದ ಹೂವಿನ ಗಿಡಗಳನ್ನು ಬೆಳೆಸಿದ್ದು, ಅಲ್ಲಿ ಕುಳಿತು ಯೋಚಿಸಲು, ಓದಲು ಮತ್ತು ಬರೆಯಲು ಕಟ್ಟೆಯನ್ನು ಕಟ್ಟಿಸಿದ್ದು ಇತ್ಯಾದಿಗಳನ್ನು ಹೇಳಿದರು. ಅವೆಲ್ಲವನ್ನೂ ತೋರಿಸಿದರು. ಎಪ್ಪತ್ತೈದರ ಇಳಿವಯಸ್ಸಿನಲ್ಲೂ ಅವರಲ್ಲಿ ತುಂಬಿದ ಜೀವನೋತ್ಸಾಹ, ಕನ್ನಡ ಸಾಹಿತ್ಯದ ಭವಿಷ್ಯದ ಬಗ್ಗೆ ಅವರ ಕಳಕಳಿ, ಇಂದಿಗೂ ಅವರು ಸಮೃದ್ಧವಾಗಿ ಮಾಡುತ್ತಿರುವ ಸಾಹಿತ್ಯ ಕೃಷಿ ನಮ್ಮೆಲ್ಲರಿಗೂ ಆದರ್ಶಪ್ರಾಯ.

"ವಸಂತ್, ನಿಮ್ಮ ಹತ್ತಿರ ನನ್ನ ಉತ್ತರಾಯಣ ಸಂಕಲನದ ಪ್ರತಿ ಇದೆಯೇ?" ಎಂದು ಕೇಳಿದರು.

"ಸರ್, ನಿಮ್ಮ 'ಸಮಗ್ರ ಕವಿತೆಗಳು' ಪುಸ್ತಕ ನನ್ನ ಹತ್ತಿರ ಇದೆ" ಎಂದು ಹೆಮ್ಮೆಯಿಂದ ಹೇಳಿದೆ.

"ಆದರೂ ಉತ್ತರಾಯಣದ ಪ್ರತಿಯನ್ನು ನಾನು ಸೈನ್ ಮಾಡಿ ಕೊಡುತ್ತಿದ್ದೇನೆ. ನೀವು ಇಟ್ಟುಕೊಳ್ಳಿ" ಎಂದು ಅತ್ಯಂತ ವಾತ್ಸಲ್ಯದಿಂದ ಕೊಟ್ಟರು. ನಾನು ದಿನವೂ ತೆಗೆದುಕೊಂಡು ಹೋಗುವ ಆಫೀಸಿನ ಬ್ಯಾಗಿನಲ್ಲಿ ಉತ್ತರಾಯಣದ ಈ ಪ್ರತಿ ಸದಾಕಾಲ ಇರುತ್ತದೆ. ನನ್ನ ಪಾಲಿಗೆ ಅದು ಭಗವದ್ಗೀತೆ.

English summary
HS Venkatesh Murthy 75 : The legendary Kannada poet. Vasant Kulkarni gives credit to HS Venkatesh Murthy and Venkat for learning more about rich Kannada poetry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X