ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಳಿಸಾರು ಮತ್ತು ನನ್ನಮ್ಮನ ಅಕ್ಕರೆ (ಭಾಗ 1)

By ಕೆ. ತ್ರಿವೇಣಿ ಶ್ರೀನಿವಾಸರಾವ್‌
|
Google Oneindia Kannada News

ಅಮ್ಮ ಮಾಡುತ್ತಿದ್ದ ಗೊಜ್ಜು, ಚಟ್ನಿ, ಅಕ್ಕಿ ರೊಟ್ಟಿ, ಸೊಪ್ಪಿನ ಸಾರು, ತಿಳಿಸಾರು -ಹೀಗೆ ಯಾವುದೋ ಒಂದು ನಮ್ಮನ್ನು, ನಮ್ಮ ನಾಲಿಗೆ ರುಚಿಯನ್ನು ತಣಿಸಿರುತ್ತದೆ. ಆ ಪದಾರ್ಥದಲ್ಲಿ ರುಚಿಯಿತ್ತೋ ಅಥವಾ ಅಮ್ಮನ ಪ್ರೀತಿ ಸೇರಿಕೊಂಡು ರುಚಿ ದ್ವಿಗುಣಗೊಂಡಿತ್ತೋ ಗೊತ್ತಿಲ್ಲ! ಆ ರುಚಿ ಮಾತ್ರ ಎಲ್ಲೂ ಸಿಗುವುದಿಲ್ಲ. ಅದು ಹೋಲಿಕೆಯಿಲ್ಲದ ಅನುಪಮ ರುಚಿ!

ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

''ನಿಮಗೆ ಅತ್ಯಂತ ಇಷ್ಟದ ತಿಂಡಿ, ತಿನಿಸು, ಅಡುಗೆ ಯಾವುದು?’’ ಇದು ಅತಿ ಸುಲಭದ ಪ್ರಶ್ನೆ ಮತ್ತು ಕಠಿಣವಾದ ಪ್ರಶ್ನೆಯೂ ಹೌದು! ಎಷ್ಟೇ ಸರಳ ಅನ್ನಿಸಿದರೂ, ಯಾರಾದರೂ ಇದ್ದಕ್ಕಿದ್ದಂತೆ ನಮ್ಮನ್ನು ನಿಲ್ಲಿಸಿ ಈ ಪ್ರಶ್ನೆ ಕೇಳಿದರೆ, ಕ್ಷಣ ಕಾಲವಾದರೂ ಯೋಚಿಸಲೇ ಬೇಕಾಗುತ್ತದೆ.

ಮೈಸೂರು ಪಾಕ್‌ ಇಷ್ಟವೆಂದರೆ ಜಿಲೇಬಿ, ಜಾಮೂನುಗಳು ''ನನ್ನಲ್ಲಿ ಕೋಪವೇ? ನಾ ನಿನಗೆ ಬೇಡವೇ?’’ ಎಂದು ಪೆಚ್ಚುಮುಖ ಹಾಕಿಕೊಂಡಂತಾಗುತ್ತದೆ. ವಾಂಗಿಭಾತ್‌ ನನ್ನ ಅಚ್ಚುಮೆಚ್ಚು ಎಂದರೆ ಮಾವಿನಕಾಯಿ ಚಿತ್ರಾನ್ನಕ್ಕೆ ಅನ್ಯಾಯವಾಗುತ್ತದೆ. ಬೋಂಡ ಮೆಚ್ಚೆಂದರೆ ಪಕೋಡ ಒಲ್ಲೆನೆಂಬ ಅರ್ಥ ಮೂಡುತ್ತದೆ.

Relationship between My Mother and Tilisaaru

ಯಾರಾದರೂ ಶ್ರಮ ವಹಿಸಿ ಇಂತಹದೊಂದು ಮೋಜಿನ ಸರ್ವೇ ನಡೆಸಿದ್ದೇ ಆದಲ್ಲಿ ಬಹಳ ಚೆನ್ನಾಗಿರುತ್ತದೆ. ಆಗ ವಿವಿಧ ಬಗೆಯ ತಿಂಡಿ,ತಿನಿಸುಗಳ ದೊಡ್ಡದೊಂದು ಪಟ್ಟಿಯೇ ನಮ್ಮೆದುರು ಪ್ರತ್ಯಕ್ಷವಾಗಬಹುದು. ಎಲ್ಲರಿಗೂ ಚಿರಪರಿಚಿತವಾಗಿರುವ ಉತ್ತರ, ದಕ್ಷಿಣ ಭಾರತದ ಅಡುಗೆಗಳಲ್ಲದೆ, ಬೇರೆ ಬೇರೆ ಪ್ರಾಂತ್ಯಗಳ, ದೇಶ ವಿದೇಶಗಳ ರುಚಿಕರ ಖಾದ್ಯಗಳ ಸುಂದರ ಮೆರವಣಿಗೆ ನಮ್ಮೆದುರು ನಡೆಯುವುದಂತೂ ಖಂಡಿತ.

ಯಾವುದೋ ಒಂದು ಬಗೆಯ ತಿಂಡಿಯನ್ನು ಇಷ್ಟವೆಂದು ಮತ್ತೆ ಮತ್ತೆ ತಿನ್ನುತ್ತಾ ಹೋದರೆ, ಆ ಪದಾರ್ಥ ತನ್ನ ತುಷ್ಟಿ ಗುಣವನ್ನು ಕಳೆದುಕೊಳ್ಳುತ್ತದೆ. ಸಿಹಿ ತಿಂಡಿ ಎಷ್ಟೇ ಇಷ್ಟವಾದರೂ ಅತಿಯಾದ ಸಿಹಿ ನಾಲಿಗೆಗೆ - ದೇಹದ ಆರೋಗ್ಯಕ್ಕೂ ಕಹಿ ಅನ್ನಿಸುತ್ತದೆ. ''ಲೋಕೋ ವಿಭಿನ್ನ ರುಚಿಃ’’ ಎನ್ನುವಂತೆ ಒಬ್ಬರಿಗೆ ರುಚಿಯೆನಿಸಿದ್ದು ಇನ್ನೊಬ್ಬರಿಗೆ ಸಹಿಸದು. ಒಬ್ಬರಿಗೆ ಅನಿಷ್ಟವೆನಿಸಿದ್ದು ಮತ್ತೊಬ್ಬರಿಗೆ ಪರಮ ಪ್ರಿಯ. ಈ ಮಾತಿಗೆ ಉಪ್ಪಿಟ್ಟಿನ ವಿಷಯದ ಕುರಿತು ನಡೆದ ''ಉಪ್ಪಿಟ್ಟು ರಾಮಾಯಣ’’ ಕ್ಕಿಂತ ಹೆಚ್ಚಿನ ಪುರಾವೆ ಬೇಕಿದೆಯೇ?

ನಿಮ್ಮೆಲ್ಲರ ಅಚ್ಚುಮೆಚ್ಚಿನ ಅಡುಗೆ, ತಿಂಡಿ ಯಾವುದಿರಬಹುದೆಂಬ ಕುತೂಹಲ ನನಗೂ ಇದೆ. ನೀವೆಲ್ಲ ಅದನ್ನು ಬರೆದು ತಿಳಿಸುವವರೆಗೆ ಕಾಯುತ್ತೇನೆ. ಅದಕ್ಕೆ ಮೊದಲು ನನ್ನ ಇಷ್ಟವೇನೆಂದು ಹೇಳಿಬಿಡುತ್ತೇನೆ. ಯಾವುದೋ ''ಒಂದು’’ ತಿನಿಸನ್ನು ನನ್ನ ಮೆಚ್ಚಿನದೆಂದು ಗುರುತಿಸುವುದು ಕಷ್ಟವಾದರೂ, ಸದಾಕಾಲವೂ ನನಗೆ ಬೇಕು ಎಂದು ಅನ್ನಿಸುವ ಏಕಮಾತ್ರ ಅಡುಗೆಯೆಂದರೆ ತಿಳಿಸಾರು. ಹಳತಾಯಿತೆಂದು ಕಳಚಿಕೊಳ್ಳಲಾಗದ ಸತಿ-ಪತಿಯರ ಸಂಬಂಧದ ಹಾಗೆ! ಹಳೆಯ ಅಡುಗೆಯೇ ಆದರೂ ದಿನದಿನವೂ ಹೊಸದಾಗಿಯೇ ಕಾಣಿಸುವ ಮೋಹಕತೆ ತಿಳಿಸಾರಿಗಿದೆ. ತಿನ್ನಲು ಸುಲಭ, ಮಾತ್ರವಲ್ಲ ತಯಾರಿಸುವುದು ಕೂಡ ಬಹಳ ಸುಲಭ.

ಹಸಿರು ಬಾಳೆ ಎಲೆಯ ಮೇಲೆ ಮಲ್ಲಿಗೆ ಹೂವಿನಂತಹ ಬಿಳುಪಾದ ಅನ್ನ. ಅದರ ಮೇಲೆ ತಿಳಿಸಾರು. ಒಂದು ಚಮಚ ತುಪ್ಪ. ಜೊತೆಗಿಷ್ಟು ಕರಿದ ಹಪ್ಪಳ, ಸಂಡಿಗೆಗಳು, ಉಪ್ಪಿನಕಾಯಿ. ರುಚಿಗೆ ಬೇಕಾದರೆ ಸೌತೆಕಾಯಿ ಕೋಸಂಬರಿ. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇಷ್ಟಿದ್ದರೆ ನನಗಂತೂ ಸಾಕೇ ಸಾಕು! ಇದರ ಮುಂದೆ ಪಂಚಭಕ್ಷ ಪರಮಾನ್ನಗಳು ಯಾರಿಗೆ ಬೇಕು? ಬೇಡವೇ ಬೇಡವೆಂದಲ್ಲ ಮತ್ತೆ. ಒಮ್ಮೊಮ್ಮೆ ಇದ್ದರೆ ಬೇಕು. ಇರದಿದ್ದರೂ ಸರಿಯೇ. ಹೆಂಡಕುಡುಕ ರತ್ನನಿಗೆ ಕೈಹಿಡಿದ ಪುಟ್ನಂಜಿ ನಗುತ್ತಾ ಕೊಟ್ಟ ಉಪ್ಪು ಗಂಜಿಯೇ ಪ್ರಪಂಚವಾದಂತೆ, ನಾನು ತಿಳಿಸಾರಿನಿಂದಲೇ ಸಂತೃಪ್ತಳು.

ಹಿಂದೆಲ್ಲಾ, ವಧು ಪರೀಕ್ಷೆಯ ಸಮಯದಲ್ಲಿ ''ಹುಡುಗಿಗೆ ಅಡುಗೆ ಮಾಡಲು ಬರುತ್ತದೆಯೇ?’’ ಎಂದು ವಿಚಾರಿಸಿದಾಗ, ''ಹೆಚ್ಚೇನೂ ಬರದಿದ್ದರೂ ’’ಅನ್ನ, ಸಾರು ಮಾಡಲಂತೂ ಬರುತ್ತದೆ’’ ಎಂಬ ಸಿದ್ಧ ಉತ್ತರ ಬರುತ್ತಿತ್ತು - ಸಾರು ಮಾಡಲು ಗೊತ್ತಿದ್ದರೆ ನೆಮ್ಮದಿಯಾಗಿ ಬದುಕಲಂತೂ ತೊಂದರೆಯಿಲ್ಲ ಎಂಬ ಕ್ಷೇಮ ಭಾವನೆಯೂ ಆ ಮಾತಿನ ಹಿಂದೆ ಪ್ರತಿಧ್ವನಿಸುತ್ತಿತ್ತು. ತಿಳಿಸಾರು ತಯಾರಿಸಲು ಪಾಕ ಪುಸ್ತಕವನ್ನು ತಿರುವಿ ಹಾಕುವುದೇನೂ ಬೇಕಾಗಿಲ್ಲ. ಕಷ್ಟದಿಂದ ಕಲಿಯುವ ಅಗತ್ಯವೂ ಇಲ್ಲ. ಎಲ್ಲರೂ ಕಲಿಯಬಹುದಾದ, ಎಲ್ಲರೂ ಮಾಡಬಹುದಾದ, ''ಸುಲಭದ ಮುಕ್ತಿಗೆ ಸುಲಭವೆಂದೆನಿಸುವ’’ ಸರಳ ಅಡುಗೆಯಿದು. [ತಿಳಿಸಾರು ಮತ್ತು ನನ್ನಮ್ಮನ ಅಕ್ಕರೆ (ಭಾಗ 2)]

English summary
Tulasivana Columnist Triveni Srinivasarao writes on Tilisaaru(Rasam).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X