ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತರ ಬಂಟ ಕೆಂಚನೂರು ಶಂಕರ್

By * ಧವಳ
|
Google Oneindia Kannada News

Kenchanur Shankar
ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ 1976ರ ಸಮಯದಲ್ಲಿ ದಲಿತೋದ್ಧಾರ ಪರ ನಾಟಕವೊಂದು ರಂಗದ ಮೇಲೆ ವಿಜೃಂಭಿಸುತ್ತಾ ಇತ್ತು. ಆ ನಾಟಕದಲ್ಲಿ ನೀನಾ ಭಗವಂತ ಹಾಡನ್ನು ಹಾಡಿರುವ ಜಿ. ಬಾಲಕೃಷ್ಣ (ಪ್ರಸಿದ್ಧ ಸಂಗೀತ ನಿರ್ದೇಶಕ ಹಂಸಲೇಖ ಅಣ್ಣ) ಅವರ ಸಂಗೀತವಿತ್ತು.'ಜಾತಿ ಬೆಳಗಿದ ಜ್ಯೋತಿ' ನಾಟಕ ಅಪಾರ ಸಂಖ್ಯೆಯ ಪ್ರೇಕ್ಷಕ ವರ್ಗವನ್ನು ಆಕರ್ಷಿಸಿತ್ತು. ಇದರ ರಚನೆ ಮತ್ತು ನಿರ್ದೇಶನ ಮಾಡಿದವರು ಕೆಂಚನೂರು ಶಂಕರ್. ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ ಎಂದು ಸಿನಿಮಾಗಳಲ್ಲೂ ಇದೆ ಥೀಮ್ ಬರಲು ಆರಂಭಿಸಿದ ಆ ಸಂದರ್ಭದಲ್ಲಿ ಅಪರೂಪದ ಪ್ರಯೋಗ ಮಾಡಿ ಯಶಸ್ವಿ ಆದ ರಂಗಭೂಮಿಯ ದಲಿತ ನಾಟಕಗಳ ಕಣ್ವ ಕೆಂಚನೂರು ಶಂಕರ್.

ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ರಂಗಭೂಮಿಯ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ ಈ ಕಲಾವಿದ. ಕುಂದಾಪುರ ತಾಲೂಕಿನ ಕೆಂಚನೂರು ಇವರ ಮಾತೃಭೂಮಿ. ಅಲ್ಲಿನ ಪ್ರಭಾವಶಾಲಿ ಜಾತಿಯಾದ ಬಂಟ್ ಸಮುದಾಯದಲ್ಲಿ ಹುಟ್ಟಿದ ಶಂಕರ್ ಅವರಿಗೆ ತನ್ನ ಪರಿಸರದಲ್ಲಿ ಎಲ್ಲ ರೀತಿಯಿಂದಲೂ ಹಿಂದುಳಿದ ಜನಾಂಗವಾದ ಕೊರಗರ ಮೇಲೆ ನಡೆಯುತ್ತಿದ್ದ ಅನ್ಯಾಯವನ್ನು ಕಂಡಾಗ ಕರಳು ಕಿವುಚುತ್ತಿತ್ತು. ನಾಗರೀಕ ಸಮಾಜ ಮಾಡುತ್ತಿರುವ ಶೋಷಣೆಗೆ ಕೊನೆ ತರಬೇಕೆನ್ನುವ ಅದಮ್ಯ ಬಯಕೆ ಶಂಕರ್ ಅವರಲ್ಲಿ ಸದಾ ಜಾಗೃತವಾಗಿ ಇತ್ತು. ಆದರೆ ಇವರ ಬಂಡಾಯವಾದಕ್ಕೆ ಸಮಾಜ ಒಪ್ಪಬೇಕಲ್ಲ .. ತಮ್ಮ ಕನಸು ನನಸು ಮಾಡ್ಕೊಳ್ಳುವ ಉದ್ದೇಶದಿಂದ ಚಿತ್ತ ಬೆಂಗಳೂರಿನತ್ತ ಇಟ್ಟರು.

1973ರ ಸಮಯ ಕೆಂಚನೂರು ಶಂಕರ್ ಅವರ ಮನದಲ್ಲಿದ್ದ 'ಜಾತಿ ಬೆಳಗಿದ ಜ್ಯೋತಿ'ಯು ಅಕ್ಷರ ರೂಪದಲ್ಲಿ ಹೊರಹೊಮ್ಮಿ ಕೊನೆಗೆ ನಾಟಕ ರೂಪಕ್ಕೆ ಬದಲಾಗಿ ರಾಜ್ಯದಲ್ಲಿ ಪ್ರಪ್ರಥಮ ದಲಿತೋದ್ಧಾರದ ನಾಟಕವೆನ್ನುವ ಅಗ್ಗಳಿಕೆಗೆ ಪಾತ್ರವಾಯಿತು. ಅಂದಿನ ಸುಭಾಷ್ ನಗರದ ಮೈದಾನ ಅಂದರೆ ಇಂದಿನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ವಸ್ತು ಪ್ರದರ್ಶನದಲ್ಲಿ ಸುಮಾರು 500 ಪ್ರದರ್ಶನಗಳನ್ನು ನೀಡಿ ದಾಖಲೆ ಸ್ಥಾಪಿಸಿತ್ತು.

ಈ ನಾಟಕ ಪ್ರಖ್ಯಾತಿಯನ್ನು ಗಮನಿಸಿದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 1990ರಲ್ಲಿ ಈ ಪುಸ್ತಕವನ್ನು ಖರೀದಿಸಿ ಎಲ್ಲ ನಗರ ಗ್ರಂಥಾಲಯಗಳಿಗೂ ತಲಪುವಂತೆ ಮಾಡಿತು. ಸಾಹಿತ್ಯ ರಚನೆಯಲ್ಲಿಯು ಅಪಾರ ಕೆಲಸ ಮಾಡಿರುವ ಕೆಂಚನೂರು ಶಂಕರ್ ಅವರು ದೇವರ ಕಮಲ, ಯಾರು ಹೊಣೆ, ಹೆಂಡದ ಹೊಡೆತ, ಕೋಳಿ ಕೂಗಿತು, ಈ ಹೆಣ್ಣಿಗೆ ಯಾರು ಗತಿ... ಹೀಗೆ ಹಲವಾರು ನಾಟಕಗಳನ್ನು, ಅನೇಕ ಕವನಗಳನ್ನು, ಕಾದಂಬರಿಗಳನ್ನು ರಚಿಸಿದ್ದಾರೆ. ಜಗಜ್ಯೋತಿ ಬಸವೇಶ್ವರ, ಶ್ರೀ ಗುರು ರಾಘವೇಂದ್ರ ಮಹಾತ್ಮೆ, ರಾಷ್ಟ್ರ ವೀರ ಎಚ್ಚಮನಾಯಕ, ಮಂಗಳೂರ್ ಮಾಣಿ ಬೆಂಗಳೂರ್ ರಾಣಿ .. ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಚಲನಚಿತ್ರ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ಕೆಂಚನೂರು ಶಂಕರ್ ಚಿತ್ರರಂಗದ ಹಿರಿಯ ಸಾಹಿತಿ, ನಿರ್ದೇಶಕರಾದ ಸಿ.ವಿ ಶಿವಶಂಕರ್ ಬಳಿ ಸಹ ನಿರ್ದೇಶಕರಾಗಿ ದುಡಿದಿದ್ದಾರೆ. ಅಲ್ಲದೆ ಈಗಿನ ಪ್ರಸಿದ್ಧ ಸಂಕಲನಕಾರ ಸುರೇಶ್ ಅರಸ್, ಕೋಡ್ಲು ರಾಮಕೃಷ್ಣ, ಎಂ.ಡಿ ಶ್ರೀಧರ್, ಮುಂತಾದ ನಿರ್ದೇಶಕರ ನಮ್ಮ ಊರು, ಮನೆ ಕಟ್ಟಿ ನೋಡು, ವೀರ ಮಹಾದೇವ, ಹೊಯ್ಸಳ, ಪದವೀಧರ, ಛಲಗಾರ, ಕಚ್ಚಾ ರಸ್ತಾ ಎನ್ನುವ ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ದಿ.ಸುಂದರಕೃಷ್ಣ ಅರಸ್, ಚಿತ್ರ ನಿರ್ದೇಶಕ ಶ್ರೀವತ್ಸ ರಂಗನಾಥ್ ಜೊತೆ ಚಿತ್ರರಂಗದ ವಿವಿಧ ಸ್ತರಗಳಲ್ಲಿ ಭಾಗಿಯಾಗಿದ್ದಾರೆ.

ಇಲ್ಲಿ ಇನ್ನೊಂದು ಮುಖ್ಯ ವಿಷಯ ತಿಳಿಸಬೇಕಾಗಿದೆ. ಎಪ್ಪತ್ತರ ದಶಕದಲ್ಲಿ ತಮ್ಮ ಬಂಡಾಯ ಪ್ರವೃತ್ತಿಯಿಂದ ಹುಟ್ಟೂರಿನಿಂದಲೇ ಬಹಿಷ್ಕೃತರಾಗಿದ್ದ ಕೆಂಚನೂರು ಶಂಕರ್ ಅವರನ್ನು ಇತ್ತಿಚೆಗೆ ಅದೇ ಊರಿನವರು ಸನ್ಮಾನಿಸಿದ್ದು ಅವರ ಸಾಧನಾ ಬದುಕಿನ ವಿಶೇಷ. ಕಲಾ ಕಾಮಧೇನು, ಕರ್ನಾಟಕ ತಿಲಕ, ಕರ್ನಾಟಕ ಭೂಷಣ, ಗಡಿನಾಡ ಸುವರ್ಣ ಕನ್ನಡಿಗ, ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದೆ. ಇಷ್ಟೆ ಅಲ್ಲದೆ ನಾಡಿನ ಪ್ರಸಿದ್ಧ ಪತ್ರಿಕೆ 'ವಿಜಯ ಕರ್ನಾಟಕ' ದಲಿತೋದ್ಧಾರ ಪರ ಕವಿ ಶಂಕರ ಎಂದು ಬಿಂಬಿಸಿ ಅಭಿಜಾತ ಪ್ರತಿಭೆಗೆ ಗೌರವ ಸಲ್ಲಿಸಿದೆ.

ಕೆಂಚನೂರು ಶಂಕರ್ ಇಲ್ಲಿ ಸಿಗುತ್ತಾರೆ : 98800 96149, [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X