ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಅಲ್ಲೇ ಇದೆ ಸ್ವಾರಸ್ಯ

|
Google Oneindia Kannada News

"ಆಗ್ಲಿಂದಾ ಹೇಳ್ತಾ ಇದ್ದೀನಿ . . . ಹೂ ಹೂ ಅಂತಿದ್ದೀ. ಈಗ ನೋಡಿದ್ರೆ ಏನೂ ಅರ್ಥವೇ ಆದ ಹಾಗಿಲ್ಲ? ಎಲ್ಲಿತ್ತು ಜ್ಞಾನ ಅಂತೀನಿ"

"ಆಲೂಗಡ್ಡೆ ತನ್ನಿ ಅಂದ್ರೆ ಈರುಳ್ಳಿ ತಂದಿದ್ದೀರಾ? ಎರಡೂ ಭೂಮಿಯ ಕೆಳಗೇ ಬೆಳೆಯುತ್ತೆ ಸರಿ ಹಾಗಂತ ಒಂದರ ಬದಲಿಗೆ ಇನ್ನೊಂದು ಬಳಸೋಕ್ಕಾಗುತ್ತಾ?" ಅಂತ ಅಮ್ಮನ ಬಾಯಲ್ಲೋ, ಹೆಂಡತಿಯ ಬಾಯಲ್ಲೋ ಒಮ್ಮೆಯಾದರೂ ಬೈಸಿಕೊಂಡೇ ಇರ್ತೀವಿ ಆಲ್ವಾ?

ಒಬ್ಬೊಬ್ಬರೂ ಭಿನ್ನ, ಆಕಾರವೂ ಭಿನ್ನ, ವಿಕಾರವೂ ಭಿನ್ನ!ಒಬ್ಬೊಬ್ಬರೂ ಭಿನ್ನ, ಆಕಾರವೂ ಭಿನ್ನ, ವಿಕಾರವೂ ಭಿನ್ನ!

ಮೇಲೆ ಹೇಳಿದ ಸನ್ನಿವೇಶಗಳಲ್ಲಿನ ಸಾಮಾನ್ಯ ಅಂಶ ಎಂದರೆ ಒಬ್ಬರು ಹೇಳಿದ್ದು ಮತ್ತೊಬ್ಬರಿಗೆ ಕೇಳಿಸಿರುತ್ತದೆ, ಆದರೆ ಅರ್ಥವಾಗಿರುತ್ತದೆ ಅಂತಲ್ಲ!

Listeningಗೂ hearingಗೂ ಬಹಳ ವ್ಯತ್ಯಾಸವಿದೆ. ಕಿವಿ ಕೇಳಿಸದೇ ಇರುವವರಿಗೆ hearing aid ಹಾಕುತ್ತಾರೆ. ಅದು ಹಿಯರಿಂಗ್ aid ಮಾತ್ರ ಆದರೆ listening aid ಅಲ್ಲ. ಕಿವಿಯ ಪರೀಕ್ಷೆ ನಡೆಸುವ ವೈದ್ಯರೂ ಸದ್ದು ಕೇಳುತ್ತಿದೆಯೇ ಎಂದು ಪರೀಕ್ಷೆ ಮಾಡುತ್ತಾರೆ.

What is the difference between listening and hearing

ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಯಾರೋ ನಿಮ್ಮ ಮುಂದೆ ಕೂತು ನಿಮಗೆ ಇಷ್ಟವೇ ಇಲ್ಲದ ವಿಷಯದ ಬಗ್ಗೆ ಮಾತನ್ನಾಡುತ್ತಿದ್ದಾರೆ ಎಂದುಕೊಳ್ಳಿ. ಅದನ್ನು ನೀವು ಕೇಳಿಸಿಕೊಳ್ಳುತ್ತಿರುತ್ತೀರಾ. ಆದರೆ ಅದರಾಚೆ ಏನಿಲ್ಲ. ಇಂಟರ್ವ್ಯೂ'ಗಳಲ್ಲಿ ನಿಮ್ಮತ್ತ ಪ್ರಶ್ನೆ ಒಗೆದು ನಿಮ್ಮ ಉತ್ತರವನ್ನು ಆಲಿಸುತ್ತಾರೆ. ನೀವು ಕೊಡುವ ಉತ್ತರಕ್ಕೆ ಪ್ರತಿಸ್ಪಂದಿಸುತ್ತಾರೆ. ಉತ್ತರ ನೀಡುವಾಗಿನ ನಿಮ್ಮ confidence ಗಮನಿಸುತ್ತಾರೆ. ಉತ್ತರ ನೀಡುವಾಗ ನಿಮ್ಮ body language ಗಮನಿಸುತ್ತಾರೆ. ಇದರಾಚೆಗೆ ನಿಮ್ಮ ಉತ್ತರ ಸರಿಯೇ ಮತ್ತು ಎಷ್ಟರ ಮಟ್ಟಿಗೆ ಅದು ನಿಮ್ಮ ಅನುಭವದಿಂದ ಕೂಡಿದ ಉತ್ತರ ಎಂಬುದನ್ನು ಅರ್ಥೈಸಿಕೊಳ್ಳುತ್ತಾರೆ.

Listeningನ ವಿಶೇಷತೆ ಎಂದರೆ ಹೇಳಿದ್ದನ್ನು ಕೇಳಿಸಿಕೊಳ್ಳುವುದು, ಅರ್ಥೈಸಿಕೊಳ್ಳುವುದು, ತಪ್ಪಿಲ್ಲದೆ ನೋಟ್ ಮಾಡಿಕೊಳ್ಳುವುದು. ಬಹುಶ: ವ್ಯಾಸರು ಹೇಳಿದ ಮಹಾಭಾರತದ ಶ್ಲೋಕಗಳನ್ನು ಕೇಳಿಸಿಕೊಂಡು, ಅರ್ಥೈಸಿಕೊಂಡು ತಪ್ಪಿಲ್ಲದೆ ಬರೆದ ನಮ್ಮ ಗಣಪತಿ ನೆನಪಾಗಿರಬೇಕಲ್ಲವೇ?

ಗಣೇಶನ ಹಬ್ಬಕ್ಕೂ ಸುಬ್ಬನಿಗೂ ಏನ್ ನಂಟು ಅಂತೀರಿ!ಗಣೇಶನ ಹಬ್ಬಕ್ಕೂ ಸುಬ್ಬನಿಗೂ ಏನ್ ನಂಟು ಅಂತೀರಿ!

ಪುರಾಣದ ಪ್ರಕಾರ ಘಟಾನುಘಟಿಗಳಾದ ವೇದವ್ಯಾಸರು ಮತ್ತು ದೇವ ಗಣಪತಿಯ ನಡುವೆ ಈ ಒಪ್ಪಂದವಾಗಿತ್ತಂತೆ. ತಾವು ಹೇಳುವ ಶ್ಲೋಕಗಳನ್ನು ಬರೆದುಕೊಡಬೇಕು ಎಂಬ ಕೋರಿಕೆಗೆ ಗಣೇಶನ ಕರಾರು 'ಒಮ್ಮೆಯೂ ನಿಲ್ಲಿಸದೆ ಶ್ಲೋಕಗಳನ್ನು ಹೇಳಿಕೊಂಡೇ ಹೋದಲ್ಲಿ ನಾನು ಬರೆಯಲು ಸಿದ್ದ' ಎಂದಾಗ ವ್ಯಾಸರು "ನಾನು ಹೇಳುತ್ತಾ ಸಾಗುತ್ತೇನೆ, ಆದರೆ ನೀನು ಅರ್ಥೈಸಿಕೊಂಡು ಬರೆಯುತ್ತಾ ಸಾಗಬೇಕು" ಎಂಬ ಮರು ಕರಾರು ಹಾಕಿದರಂತೆ. ಅದಪ್ಪಾ ವರಸೆ ಎಂದರೆ.

What is the difference between listening and hearing

ಮೀಟಿಂಗುಗಳಲ್ಲಿ ಸಾಮಾನ್ಯವಾಗಿ ಈ ಕೇಳಿಸಿಕೊಳ್ಳುವುದೂ ಮತ್ತು ಆಲಿಸುವುದರ ನಡುವೆ ಇರುವ ವ್ಯತ್ಯಾಸವು ಎದ್ದೆದ್ದು ಕಾಣುತ್ತೆ. ಯಾರೋ ಒಬ್ಬಾತ / ಆಕೆ ಏನೋ ವಿಷಯ ಹೇಳುತ್ತಾ ಇರುತ್ತಾರೆ. ಐದು ನಿಮಿಷ ವಟವಟ ಮಾತನಾಡಿ ಕೊನೆಗೆ ಒಂದು ಪ್ರಶ್ನೆ ಒಗೀತಾರೆ. ಆ ಪ್ರಶ್ನೆ ಯಾರನ್ನು ಕುರಿತು ಕೇಳಿರುತ್ತಾರೋ ಅವರು, 'ಓ ಸಾರಿ, ಇಲ್ಯಾರೋ ಏನೋ ಕೇಳಿದರು ಅಂತ attention deviate ಆಯ್ತು. can you please repeat?' ಅಂದಾಗ ಉರಿದುಹೋಗುತ್ತೆ. ವಿಷಯ ಇಷ್ಟೇ ಅವರು ಇಷ್ಟೂ ಹೊತ್ತು ಕೇಳಿಸಿಕೊಂಡಿರುತ್ತಾರೆ ಅಷ್ಟೇ, ಆದರೆ ಅರ್ಥೈಸಿಕೊಂಡಿರೋದಿಲ್ಲ. ಪ್ರಶ್ನೆ ಕೇಳಿಸಿಕೊಂಡ ಕೆಲವರು ಬೇರೊಂದು ರೀತಿಯೂ ಹಿಂಸೆ ಮಾಡುತ್ತಾರೆ. ಪ್ರಶ್ನೆ ಅರ್ಥೈಸಿಕೊಳ್ಳುವ ಮುನ್ನವೇ ಉತ್ತರ ನೀಡಲು ಆರಂಭಿಸಿ, ಕೊನೆಗೆ ಉತ್ತರವನ್ನೇನೋ ಕೊಟ್ಟಿರುತ್ತಾರೆ ಆದರೆ ಆ ಪ್ರಶ್ನೆಗೂ ಉತ್ತರಕ್ಕೂ ಏನೂ ಸಂಬಂಧ ಇರೋದಿಲ್ಲ.

ತಲ್ಲಣಸಿದಿರು ಕಂಡ್ಯ ತಾಳು ಮನವೆ . . . .
ಆಲಿಸುವಿಕೆ ಎಂಬ ಪದ ಕೇಳಿದೊಡನೆ ಅದನ್ನು ಮೊದಲು ಹೊಂದಿಸುವುದೇ 'ಸಂಗೀತ'ಕ್ಕೆ. ಹಾಡುಗಳನ್ನು, ವಾದ್ಯಗಳನ್ನು ಆಲಿಸಿದರೆ ಅದರ ಪರಿಣಾಮವೇ ಬೇರೆ. ಸಂಗೀತವನ್ನು ಕೇಳಿಸಿಕೊಂಡಾಗ ಯಾವ ಪರಿಣಾಮವೂ ಇರುವುದಿಲ್ಲ ಬದಲಿಗೆ ಆಲಿಸಿದರೆ ತುಂಬಾ ಪ್ರಯೋಜನಕಾರಿ. ಸಂಗೀತವು ಮನಸ್ಸಿನ ತಳಮಳವನ್ನು ಕಡಿಮೆ ಮಾಡುತ್ತದೆ, ನಿರಾಳತೆಯನ್ನು ನೀಡುತ್ತದೆ. ಮನಸ್ಸು ನಿರಾಳವಾದರೆ ಆರೋಗ್ಯ ತಂತಾನೇ ಸರಿಯಾಗುತ್ತೆ, ಒಳ್ಳೆಯ ನಿದ್ರೆ ಬರುತ್ತದೆ, ಜೀವನ ಉಲ್ಲಾಸಮಯವಾಗಿರುತ್ತದೆ, ಹಾಡಲು ಬಾರದವರ ಮನಸ್ಸು ಹಾಡುತ್ತಲೇ ಇರುತ್ತದೆ ಕೂಡ.

ಸಂಗೀತಕ್ಕೆ ಈ ಶಕ್ತಿ ಇದೆ ಎನ್ನಬೇಕೇ ಆದರೆ ಆ ಶಕ್ತಿಯನ್ನು ಆಸ್ವಾದಿಸುವ 'ಆಲಿಸುವಿಕೆ'ಗೆ ಆ ಶಕ್ತಿ ಇದೆಯೇ? ಒಂದು ರೀತಿಯಲ್ಲಿ ಇದು ಹಸ್ತಲಾಘವ ಎನ್ನಬಹುದು.

What is the difference between listening and hearing

"Listening" ಎಂಬುದು ಮತ್ತೊಂದು ವಿಚಾರದಲ್ಲಿ ಅತೀ ಪ್ರಮುಖ ಪಾತ್ರವಹಿಸುತ್ತದೆ. ದು:ಖ ಯಾರಿಗಿಲ್ಲ ಹೇಳಿ? ಕೆಲವರು ತಮ್ಮಲ್ಲೇ ಹುದುಗಿಸಿ ಇಟ್ಟುಕೊಳ್ಳುತ್ತಾರೆ. ಮತ್ತೆ ಕೆಲವರು ಯಾರಲ್ಲಾದರೂ ಹೇಳಿಕೊಳ್ಳಲು ಬಯಸುತ್ತಾರೆ. ತಮ್ಮ ದು:ಖ ಹೇಳಿಕೊಳ್ಳಲು, ಸಾಂತ್ವನ ನೀಡುವ ಹೆಗಲನ್ನು ಅರಸುತ್ತ ಬಂದವರ ಸಂಕಷ್ಟವನ್ನು ಆಲಿಸುವ ಗುಣ ನಮ್ಮಲ್ಲಿದ್ದರೆ ಅರಸಿ ಬಂದವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆ ಗುಣದ ವಿಶೇಷತೆಯಾದರೂ ಏನು?

ಮನುಜನ ಬದುಕಲ್ಲಿ ನಾಯಿಯ ಪಾತ್ರ, ಮಧುರ ಬಾಂಧವ್ಯ!
ದು:ಖ ತೋಡಿಕೊಂಡವರ ಸಂಕಟವನ್ನು ಆಲಿಸಬೇಕು. ಅವರ ಮಾತಿಗೆ ತಲೆದೂಗುತ್ತಾ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ಸಾಗಬೇಕು. ಅತೀ ಮುಖ್ಯವಾದ ವಿಚಾರ ಎಂದರೆ, ನಮ್ಮ ನಾಲಿಗೆ ಬಿಗಿ ಹಿಡಿಯಬೇಕು. ಅರ್ಥಾತ್ ಆಲಿಸುವಾಗ ಆ ಮತ್ತೊಬ್ಬರಿಗೆ ಅವಕಾಶ ನೀಡಬೇಕೇ ಹೊರತು ಅದಕ್ಕೆ ನಮ್ಮ ಮಾತಿನ ಒಗ್ಗರಣೆಯಾಗಲಿ ಅಥವಾ ಅದನ್ನು ಸಮಸ್ಯೆ ಎಂದು ಪರಿಗಣಿಸಿ ಪರಿಹಾರ ನೀಡುವುದಾಗಲಿ ಮಾಡಬಾರದು. ಆ ಮತ್ತೊಬ್ಬರಿಗೆ ಆಲಿಸುವ ಕಿವಿ ಬೇಕಾಗಿರುತ್ತದೆ, ಸ್ಪಂದಿಸೋ ಹೃದಯ ಬೇಕಾಗಿರುತ್ತದೆ ಅಷ್ಟೇ. ಪರಿಹಾರ ಹುಡುಕಿಕೊಂಡು ಬಂದಿರಲಿಕ್ಕಿಲ್ಲ. ಅದರಂತೆಯೇ, ಅವರ ಮಾತಿನತ್ತ ಗಮನ ಇದೆ ಎಂದು ತೋರಿಸಿಕೊಂಡು ನಾವು ಮತ್ತೊಂದು ಕೆಲಸವನ್ನು ಮಾಡಬಾರದು. ಅರ್ಥಾತ್ ತಲೆದೂಗುತ್ತಾ ಇದ್ದೂ ಮತ್ತೆಲ್ಲೋ ನೋಡುವುದು, ಮೊಬೈಲ್ ನೋಡುವುದು ಇತ್ಯಾದಿ ಮಾಡಬಾರದು.

ಆಲಿಸುವ ಕಿವಿಗಳು ಮಾತನಾಡುವವರ ಎದುರಿಗೆ ಕುಳಿತಿರಬೇಕು. ಯಾವುದಾದರೂ interview'ಗಳಲ್ಲಿ ಅಕ್ಕಪಕ್ಕ ಕೂತು ಮಾತನಾಡುವುದನ್ನು ಕಂಡಿದ್ದೀರಾ? ಎದುರುಬದುರು ಕೂತು ನೋಡುವಾಗ, ಆಲಿಸುವಾಗ 'i am with you' ಎಂಬ ಸಂದೇಶ ತಂತಾನೇ ತಲುಪುತ್ತೆ. ಅಂದ ಹಾಗೆ ಇಲ್ಲೊಂದು ವಿಚಾರ ಅಡಗಿದೆ. ಎದುರಿಗೆ ಕೂತವರನ್ನು ನೋಡುತ್ತಿರಬೇಕು ಎಂದರೆ eye contact ಇರಬೇಕು ಅಂತಂದ ಮಾತ್ರಕ್ಕೆ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಅಂತಲ್ಲ. 'stare can scare people'. ನಿಮ್ಮೊಡನೆ ವಿಷಯ ಹಂಚಿಕೊಳ್ಳುವುದಿರಲಿ, ಮಾತನಾಡಲೇ ನಾಲಿಗೆ ಮೇಲೇಳದಿರಬಹುದು.

ಆಗಲೇ ಹೇಳಿದಂತೆ, ಮಾತುಗಳನ್ನು ಆಲಿಸುವಾಗ ಅವರು ಹೇಳುತ್ತಿರುವುದು ಸರಿಯಾ ತಪ್ಪಾ ಅಂತ ವಿಶ್ಲೇಷಣೆ ಮಾಡದೆ ಆಲಿಸಬೇಕು. ಜೊತೆಗೆ ಮಾತನಾಡುವವರು ತಮ್ಮ ಮಾತನ್ನು ನಿಲ್ಲಿಸಿದಾಗ ಬಹುಶ: ನಿಮಗೆ ಮಾತನಾಡಲು ಅವಕಾಶ ನೀಡುತ್ತಿದ್ದಾರೆ ಎಂದು ಅರಿತು ನೀವು ಶುರು ಮಾಡಬಹುದು. ಆಗಲೂ ನಿಮ್ಮ ಮಾತಿನ ಮೇಲೆ ಹಿಡಿತ ಇರಬೇಕು, ನಾಲಿಗೆಯ ಮೇಲೆ ಹಿಡಿತ ಇರಬೇಕು. ನಿಮಗೆ ಅರ್ಥವಾಗಿರುವ ವಿಚಾರವನ್ನು ಮತ್ತೊಂದು ರೀತಿಯಲ್ಲಿ ಅವರ ಮುಂದೆ ಅರುಹಿದರೂ ಸರಿ, ಅಥವಾ ಅರ್ಥವಾಗದ ವಿಷಯವನ್ನು ಅವರಿಗೆ ಬೇಸರವಾಗದಂತೆ ಪ್ರಶ್ನೆ ಹಾಕಿ ವಿಷಯ ಎಳೆದರೂ ಸರಿ ಆದರೆ ಪರಿಹಾರ ಮಾತ್ರ ಸೂಚಿಸಬಾರದು.

ಮಾತುಗಳನ್ನು ಆಲಿಸುವಾಗ ಆ ಸನ್ನಿವೇಶವನ್ನು ಚಿತ್ರಿಸಿಕೊಳ್ಳಬೇಕು, ಮನಸ್ಸಿನಲ್ಲಿ ಅನುಭವಿಸಬೇಕು ಆದರೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ನಾಟಕೀಯವಾಗಿ "ಓಹ್ ಮೈ ಗಾಡ್" ಎಂಬ ಉದ್ಗಾರಗಳು ಹೊರಬೀಳದಂತೆ ಎಚ್ಚರವಹಿಸಬೇಕು. ಇಂಥಾ ಉದ್ಗಾರಗಳು ಆ ವ್ಯಕ್ತಿಯ ಆಲೋಚನಾ ಸರಣಿಯನ್ನು ಬಾಧಿಸುವುದೇ ಅಲ್ಲದೆ ಮತ್ತೆಲ್ಲೋ ಸೆಳೆದುಕೊಂಡು ಹೋಗಬಹುದು.

ಆಲಿಸುವಿಕೆ ಎಂಬುದು ಇವತ್ತಿನಿಂದ ಆರಂಭಿಸಿ ನಾಳೆಗೆ master ಆಗಿಬಿಡುತ್ತೇನೆ ಎಂಬ ಹುಂಬತನ ಬೇಡ. ಇದು ಅಸಾಧ್ಯ. ಈ ಕಲೆಯನ್ನು ಉಸಿರಾಟದಂತೆ ದಿನನಿತ್ಯದಲ್ಲಿ ಸೇರಿಸಿಕೊಳ್ಳಬೇಕು. ಅಭ್ಯಾಸಮಾಡಬೇಕು.

ಆಲಿಸುವ ಕಿವಿಗಳು ನಿಮ್ಮದಾಗಲಿ. ಸ್ಪಂದಿಸುವ ಹೃದಯ ನಿಮ್ಮದಾಗಲಿ.

English summary
What is the difference between listening and hearing?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X