ಹೃದಯ ಮುಟ್ಟಿ ಮನವನು ತಟ್ಟುವ ಅಳಿಸಲಾರದ ನೆನಪು

By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ಈ ಆಲೋಚನೆಗಳೇ ಹಾಗೆ, ಹೊಸತಾಗಿ ಹಾಕಿದ ಟಾರ್ ರೋಡ್ ಮೇಲೆ ನಡೆದಾಗ ಚಪ್ಪಲಿಗೆ ಅಂಟಿಕೊಂಡ ಟಾರಿನಂತೆ. ಯಾರೋ ಜಗಿದು ಉಗಿದ ಬಬಲ್ ಗಮ್ ಪಾದಕ್ಕೆ ಅಂಟಿದಂತೆ. ಮಳೆಗಾಲದಲ್ಲಿ ಹವಾಯ್ ಚಪ್ಪಲಿಯಿಂದ ಪ್ಯಾಂಟ್'ಗೆ ಹಾರಿದ ಕೊಚ್ಚೆ ನೀರಿನಂತೆ. ಕೊಡವಿದರೆ ಹೋಗೋದೇ ಇಲ್ಲ. ಇನ್ನೊಂದರ್ಥದಲ್ಲಿ ಕೊಡವಿದರೇ ಹೋಗದಿರುವುದು ಕೊಡವದೇ ಹೋದರೆ ಎಂದಿಗೂ ಹೋಗದು.

ನಾಯಿ ಬಾಲ ಡೊಂಕೆ, ಸರಿಮಾಡೋಕೆ ಹೋಗ್ಬೇಡ ಮಂಕೆ!

ಈ ಕೊಡವುವಿಕೆಯ ಬಗ್ಗೆ ಹೇಳುವಾಗ, ರಾಜಪಾಲ್ ಯಾದವ್'ರ ಒಂದು ಸಿನಿಮಾ ಸನ್ನಿವೇಶ ನೆನಪಾಗುತ್ತೆ. ಹಾದಿಯಲ್ಲಿ ಬರುವಾಗ ಆತನ ಚಪ್ಪಲಿಗೆ ಏನೋ ಮೆತ್ತಿಕೊಳ್ಳುತ್ತದೆ. ಮನಸ್ಸಿಗೆ ಕಸಿವಿಸಿಯಾಗಿ ಅಲ್ಲೇ ಮೂಲೆಯಲ್ಲಿದ್ದ ಒಂದು ಕಂಬಿಯನ್ನು ಹಿಡಿದುಕೊಂಡು ಚಪ್ಪಲಿಯನ್ನು ಅದೇ ಕಂಬಿಗೆ ಉಜ್ಜಿ ಮೆಟ್ಟಿದ್ದನ್ನು ಹೋಗಿಸಲು ತೊಡಗುತ್ತಾನೆ. ಆತನ ವರ್ತನೆ ದೂರದಿಂದ ಕೆಲವರು ನೋಡುತ್ತಾರೆ. ಎಲೆಕ್ಟ್ರಿಕ್ ಕಂಬಿಯನ್ನು ಹಿಡಿದುಕೊಂಡವನಿಗೆ ಶಾಕ್ ಹೊಡೆದಿದೆ ಎಂದುಕೊಂಡು ಕೈಗೊಬ್ಬ ಕಟ್ಟಿಗೆಯನ್ನು ತೆಗೆದುಕೊಂಡು ಬಂದು ಆತನನ್ನು ಬಡಿಯುತ್ತಾರೆ.

Most beautiful things are associated with memories

ಕೆಲವೊಮ್ಮೆ ಈ ಮೆತ್ತಿಕೊಂಡ ನೆನಪುಗಳೂ ಅಷ್ಟೇ ಆಲೋಚನೆಗಳನ್ನು ಬಡಿದೆಬ್ಬಿಸುತ್ತವೆ, ಕನಸುಗಳಾಗಿ ಕಾಡುತ್ತವೆ, ಹಾಡಾಗಿ ಗುನುಗುನಿಸುತ್ತದೆ.

ಎರಡು ವಾರದ ಹಿಂದಿನ ಒಂದು ಸನ್ನಿವೇಶ. ಭಾರತದ ಮತ್ತು ಸ್ಥಳೀಯ ಕಲಾವಿದರು ಒಟ್ಟಾಗಿ ನಡೆಸಿಕೊಟ್ಟ ರಸಸಂಜೆ. ಅಪೂರ್ವಕಂಠದಿಂದ ತಮ್ಮದೇ ಛಾಪಿನ ಹಾಡುಗಳನ್ನು ಹಾಡಿ ಇಂದಿಗೂ ಎಲ್ಲರ ಮನಸ್ಸಿನಲ್ಲಿ ನಿಂತಿರುವ ಎಲ್.ಆರ್.ಈಶ್ವರಿಯವರು ಹಾಡಿದ್ದ ಹಾಡುಗಳನ್ನು ಮತ್ತೆ ಕೇಳಿದ ಮನಸ್ಸು ಅದನ್ನು ಹಾಗೆ ಹಿಡಿದಿರಿಸಿತ್ತು.

ಅದೇ ಈ ಮನುಷ್ಯ ಇದ್ದಾನೆ ನೋಡಿ, ಅಬ್ಬಬ್ಬಾ!

ಬೆಳಿಗ್ಗೆ ಹಾಸಿಗೆಯಿಂದ ಎದ್ದಿದ್ದೇ ತಡ ನನ್ನ ಮನ "ಸೊಂಟ ಬಳುಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸಪಡು ನೀ ಆಗಾ" ಅಂತ ಹಾಡಲು ಶುರು ಮಾಡಿತು. ಇದೇನು? ಬೆಳಿಗ್ಗೆ ಬೆಳಿಗ್ಗೆ ಈ ಹಾಡು ಎಂದುಕೊಂಡು ಜೋರಾಗಿ ಒಮ್ಮೆ ತಲೆ ಒದರಿ ಟಾಯ್ಲೆಟ್'ಗೆ ಹೋದರೆ "ದೂರದಿಂದ ಬಂದಂಥ ಸುಂದರಾಂಗ ಜಾಣ, ನೋಟದಲ್ಲೇ ಸೂರೆಗೊಂಡ ಅಂತರಂಗ ಪ್ರಾಣ" ಮನದಲ್ಲಿ ಓಡಲು ಶುರು. ಹಾಗೆ ಶುರುವಾಗಿದ್ದು ನೋಡಿ, ಇಡೀ ದಿನ ಒಂದಲ್ಲಾ ಒಂದು / ಹಲವು ಬಾರಿ ಅದೇ ಹಾಡುಗಳು ಮನಸ್ಸಿಡೀ ಆವರಿಸಿತ್ತು. ಮನಸ್ಸಿನಲ್ಲಿ ಮೆತ್ತೆ ಹಾಕಿಕೊಂಡ ಆಲೋಚನೆಗಳು ಗುನುಗುನಿಸುವಂತೆ ಮಾಡುತ್ತದೆ.

ಈ ವಾರದ ಸ್ಪೆಷಲ್ ಹೀಗಿದೆ. ಗರಾಜಿನಲ್ಲಿ ಏನೋ ಕೆಲಸ ಮಾಡುತ್ತಿದ್ದೆ. ಅಲ್ಲೇ ಇಟ್ಟಿದ್ದ ಒಂದು ಖಾಲೀ ಹೂವಿನ ಪಾಟ್ ಕೈತಾಗಿ ಕೆಳಗೆ ಬಿದ್ದು ಒಡೀತು. ಅಲ್ಲೇ ಇದ್ದ ಒಂದು ಮೊರ-ಪೊರಕೆ ತೆಗೆದುಕೊಂಡು ಬಳಿಯಲು ತೊಡಗಿದೆ. ಎಲ್ಲಿದ್ದರೋ ರಾಜಕಪೂರ್-ಮುಖೇಶ್, ಒಟ್ಟಾಗಿ ಬಂದು ಎನ್ನ ಮೈಯೊಳು ಸೇರಿ "ಕಲ್ ಖೇಲ್ ಮೇ, ಹಮ್ ಹೋ ನ ಹೋ, ಗರ್ದಿಷ್ ಮೆ ತಾರೆ ರಹೇಂಗೆ ಸದಾ" ಎನ್ನಲು ಶುರು ಮಾಡೋದೇ? ಎಂದೋ ಬಂದ ಸಿನಿಮಾ, ಎಷ್ಟೆಷ್ಟೋ ಸಾರಿ ಕೇಳಿದ ನೋಡಿದ ಹಾಡು ಮತ್ತಿನ್ಯಾವುದೋ ಅಂಥದ್ದೇ ಸಂದರ್ಭಕ್ಕೆ ಹೊಂದಿಕೊಂಡು ಜೋಡಿಯಾಗಿ ಬಂದು ಕಾಡುತ್ತದೆ.

ಪ್ರತಿ ಬಾರಿ ನಮ್ಮ ಮನೆಯಲ್ಲಿ ಅಮ್ಮ ಅಕ್ಕಿ ರೊಟ್ಟಿ ಮಾಡುತ್ತಿದ್ದಾಗ, ಮತ್ತು ಇಂದಿಗೂ ನನ್ನಾಕೆ ಅಕ್ಕಿ ರೊಟ್ಟಿ ಮಾಡಿದಾಗ ಧುತ್ತನೆ ಬಂದು ನಿಲ್ಲೋದು ಸಿಪಾಯಿ ರಾಮು. ಒಂದೇ ರೊಟ್ಟಿಗಾಗುವಷ್ಟು ಹಿಟ್ಟಿನಲ್ಲಿ ರೊಟ್ಟಿ ಮಾಡುವಾಗ, ಹಸಿದು ಬಂದ ಮಗನಿಗೆ ನೀಡದೆ ಗಂಡನಿಗೆ ರೊಟ್ಟಿ ನೀಡಿದಾಗ, ರಾಮು ಅಸಹಾಯಕತೆಯ ಸಿಟ್ಟನ್ನು ತೋರುವ ದೃಶ್ಯ ಮನಸ್ಸನ್ನು ಆವರಿಸುತ್ತದೆ. ಆ ದಿನದ ರೊಟ್ಟಿಯ ಸಮಾರಾಧನೆಯಾದ ಮೇಲೆ ಮತ್ತೊಮ್ಮೆ ಮನಸ್ಸಿನ ಆಳಕ್ಕೆ ಹೋಗುವ ರಾಮು ಮತ್ತೊಮ್ಮೆ ರೊಟ್ಟಿ ಮಾಡಿದಾಗ ಎದ್ದು ಬರುತ್ತಾನೆ.

Most beautiful things are associated with memories

ಭಾನುವಾರ ಬೆಳಿಗ್ಗೆ ಹೀಗೆ ಆಯಿತು... ಮನೆ ಹತ್ತಿರದ ಮಾರ್ಕೆಟ್ ಕಫೆ ಬಳಿ ಕೆಲವು ಸ್ನೇಹಿತರು ಸೇರುವುದು ಎಂದಾಗಿತ್ತು. ಒಬ್ಬಾತ ಇನ್ನೂ ಬಂದಿರಲಿಲ್ಲ. ಆಗ ನನಗೆ ಬಂದ ಅನುಮಾನ ಈತ ಬೇರೊಂದು ಮಾರ್ಕೆಟ್ ಕಫೆಗೆ ಹೋಗಿರಬಹುದೇ? ಥಟ್ಟನೆ ನಗುವೂ ಬಂತು. ನಮ್ಮದೋ ಪುಟ್ಟ ಊರು. ಇರುವುದೊಂದೇ ಮಾರ್ಕೆಟ್ ಕಫೆ. ಅಪ್ಪಿತಪ್ಪಿ ಬೇರೊಂದೆಡೆ ತಲುಪಿ ಕಾಯುತ್ತಿರಬಹುದು ಎಂದುಕೊಳ್ಳಲು ಅವಕಾಶವೇ ಇಲ್ಲ. ಈ ಆಲೋಚನೆಯ ಹಿಂದೆಯೇ ಶಂಕರನಾಗ್ ನೆನಪಿಗೆ ಬಂದರು. "ನೋಡಿ ಸ್ವಾಮಿ ನಾವಿರೋದು ಹೀಗೆ" ಚಿತ್ರ. ಒಂದೆಡೆ ರಮೇಶ್ ಭಟ್ ಮತ್ತೊಂದೆಡೆ ಅರುಂಧತಿ ನಾಗ್. ಇಬ್ಬರ ಭೇಟಿಯ ಸ್ಥಳ ಬೆಂಗಳೂರಿನ ಕಾಮತ್ ಹೋಟಲ್. ಈಕೆ ಒಂದು ಕಾಮತ್ ಹೋಟಲ್ ಬಳಿ ಆಕೆ ಮತ್ತೊಂದು ಕಾಮತ್ ಬಳಿ. ಮನಸ್ಸು ಸಾಮ್ಯತೆಯನ್ನು ಎಷ್ಟು ಬೇಗ ಗುರುತಿಸುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

ಕೆಲವು ವಿಷಯಗಳೇ ಹೀಗೆ. ಅಳಿಸಲಾರದ ನೆನಪು ಮೂಡಿಸಿಬಿಡುತ್ತದೆ. ಮನಸ್ಸಿನ ಮೇಲೆ ಕೊರೆದು ಬಿಡುತ್ತದೆ. ಯಾವುದೋ ಒಂದು ಸಣ್ಣ ಸಾಮ್ಯತೆಗೂ ಎದ್ದು ಬಂದು ನಿಮ್ಮ ಮುಂದೆ ನಿಲ್ಲುತ್ತದೆ. ಯಾರೋ ಹಾಡನ್ನು ಹಾಡುವಾಗ ಗತಿಸಿದ ಅಪ್ಪ ಅಥವಾ ಅಮ್ಮ ಹಾಡುತ್ತಿದ್ದ ಹಾಡು ನೆನಪಾಗಿ ದು:ಖ ಒತ್ತರಿಸಿಕೊಂಡು ಬರುತ್ತದಲ್ಲಾ ಹಾಗೆ!

ಇವೆಲ್ಲದರ ಹಿಂದಿನ ರಹಸ್ಯವೇನು? ಎಂದೋ ನಡೆದಿದ್ದು ಅದು ಹೇಗೆ ಧುತ್ತನೆ ಎದುರಿಗೆ ಬಂದು ನಿಲ್ಲುತ್ತದೆ ಎಂಬುದು ಮನೋವಿಜ್ಞಾನ.

Most beautiful things are associated with memories

ಮೆದುಳು ಯಾವ ರೀತಿ ಮಾಹಿತಿಗಳನ್ನು ಶೇಖರಿಸುತ್ತದೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳೋಣ. ಅತಿ ವೈಜ್ಞಾನಿಕವಾಗಿ ಹೇಳಲಾರೆ ಹಾಗಾಗಿ ಬಾಲ ಭಾಷೆಯಲ್ಲೇ ಅರ್ಥೈಸಿಕೊಳ್ಳುವ. ಮೆದುಳಿನಲ್ಲಿ ಮಾಹಿತಿಗಳು ಒಂದರ ಹಿಂದೆ ಮತ್ತೊಂದು ಎಂದು ಶೇಖರಿಸುವುದಿಲ್ಲ. ಅವುಗಳ ಶೇಖರಣೆ jigsaw puzzleನಂತೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುತ್ತವೆ. ಆದರೆ ಒಂದಕ್ಕೊಂದು ನಂಟು ಬೆಳೆಸಿಕೊಂಡಿರುತ್ತದೆ. ಈ ಮೆದುಳು ಎಷ್ಟರ ಮಟ್ಟಿಗೆ patternsಗಳನ್ನು ತಾಳೆ ಹಾಕಿ ಮಾಹಿತಿಯನ್ನು ಮನಸ್ಸಿನ compartmentಗೆ ನೂಕುತ್ತದೆ ಎಂದರೆ ವಿವರಿಸಲಸಾಧ್ಯ!

ಯಾವುದೇ ವಿಷಯ ನೆನಪಿಸಿಕೊಳ್ಳಲು ತೊಡಗಿದಾಗ ಥಟ್ಟನೆ ಒಂದಕ್ಕೊಂದು ಜೋಡಣೆಯಾಗಿ ಮನಸ್ಸಿನಲ್ಲಿ ರೂಪಗೊಳ್ಳುತ್ತದೆ. ಆದರೆ ಆ ನೆನಪುಗಳು ಹೊರಬರುವಾಗ ನಡೆದಿದ್ದು ನಡೆದಂತೆಯೇ ಬಾರದೆ ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಮತ್ತು ನಮಗೆ ಅರ್ಥವಾದಂತೆ ಮಸಾಲೆ ಹಾಕಿಕೊಂಡೇ ಬರುತ್ತದೆ. ಹಲವಾರು ಬಾರಿ ನಡೆದಿದ್ದೆ ಒಂದು ನಮ್ಮ ಮನಸ್ಸಿನಲ್ಲಿ ಶೇಖರಿಸಿರುವುದೇ ಒಂದು ಎಂಬುದೂ ಇದಕ್ಕೇ.

ಪ್ರತಿಬಾರಿ ನೆನಪಿನಿಂದ ವಿಷಯ ಹೊರತೆಗೆದಾಗ, ಕೆಲಸವಾದ ಮೇಲೆ ಅವು ಮತ್ತೊಮ್ಮೆ ಹೊಸತಾಗಿ ಶೇಖರಣೆಯಾಗುವುದರಿಂದಲೇ ಆ ನೆನಪುಗಳು ನವನವೀನ. ಯಾವ ವಿಷಯಗಳು ಶೇಖರಣೆಯಾಗಿದ್ದೂ ಒಮ್ಮೆಯೂ ಹೊರತಾರದೇ ಹೋದರೆ ಅವು ಸಂಪೂರ್ಣ ಮಾಸಿ ಹೋಗುತ್ತವೆ ಅಥವಾ ಅಲ್ಲಲ್ಲೇ ನೆನಪಿನಲ್ಲಿ ಉಳಿದಿರುತ್ತದೆ. ಓದಿದ್ದನ್ನು ಮನನ ಮಾಡಿಕೊಂಡರೆ ಪರೀಕ್ಷೆಯ ಸಮಯದಲ್ಲಿ ನೆನಪಿಗೆ ಬರುತ್ತದೆ ಎಂಬಷ್ಟು ಸುಲಭ ವಿಚಾರವಿದು. ಸುಮ್ಮನೆ ಓದುತ್ತಾ ಹೋದರೆ ಅವು ನಿಂತ ನೀರಿನ ಮೇಲಿನ ಸೊಳ್ಳೆಯಂತೆ. ಗಾಳಿ ಬೀಸಿದಾಗ ಹಾರಿ ಹೋಗುತ್ತವೆ.

ಮನನ ಎಂದಾಗ ಒಂದು ಹಳೆಯ ಚಂದಮಾಮ ಕಥೆ ನೆನಪಾಯ್ತು. ದೇಶಪರ್ಯಟನೆ ಮಾಡುತ್ತಾ ಒಬ್ಬ ಸಾಧು ಯಾರದೋ ಮನೆಯಲ್ಲಿ ಆಶ್ರಯ ಬೇಡಿ ಬರುತ್ತಾನೆ. ಒಳ್ಳೆಯ ಮನಸ್ಸಿನವನಾದ ಆತ ಸಾಧುವಿಗೆ ರಾತ್ರಿ ತಮ್ಮ ಮನೆಯಲ್ಲೇ ಉಳಿದುಕೊಳ್ಳಲು ಅನುಮತಿ ನೀಡಿ ಊಟೋಪಚಾರಗಳನ್ನೂ ನೋಡಿಕೊಳ್ಳುತ್ತಾನೆ. ಸಂತುಷ್ಟನಾದ ಸಾಧು ಹೊರಡುವ ಮುನ್ನ ಅವನಿಗೆ ಒಂದು ಮಂತ್ರೋಪದೇಶ ಮಾಡುತ್ತಾನೆ. ಯಾವುದೇ ಒಂದು ಕಬ್ಬಿಣದ ವಸ್ತುವನ್ನು ಮುಟ್ಟಿ ಮಂತ್ರ ಜಪಿಸಿದಲ್ಲಿ ಆ ಕಬ್ಬಿಣವು ಬಂಗಾರವಾಗುತ್ತದೆ ಎಂಬ ಮಂತ್ರ.

ಇಂಥಾ ಅಪರೂಪದ ಮಂತ್ರ ಕಲಿತ ಆ ಸಾಮಾನ್ಯ ದುರಾಸೆಗೆ ಬೀಳುತ್ತಾನೆ. ತನ್ನಲ್ಲಿದ್ದ ಹಣದಿಂದ ಕಬ್ಬಿಣ ಕೊಳ್ಳುತ್ತಾನೆ. ಮನೆಯಲ್ಲಿದ್ದ ಪದಾರ್ಥ ಮಾರಿ ಕಬ್ಬಿಣ ಕೊಳ್ಳುತ್ತಾನೆ. ಸಾಲ ಸೋಲ ಮಾಡಿ ಕಬ್ಬಿಣ ಕೊಳ್ಳುತ್ತಾನೆ. ಹೀಗೆ ತನ್ನ ಸಮಯವನ್ನು ಕಬ್ಬಿಣವನ್ನು ಶೇಖರಿಸುವುದರಲ್ಲೇ ತೊಡಗಿಸಿಕೊಂಡವನು ಮಂತ್ರವನ್ನು ಮನನ ಮಾಡುವುದನ್ನು ಮರೆತಿರುತ್ತಾನೆ. ಕೊನೆಗೆ ಒಂದು ದಿನ ಆ ಮನೆಯಲ್ಲಿ ಅವನು ನಿಲ್ಲುವಷ್ಟು ಮಾತ್ರ ಜಾಗ ಉಳಿದು ಮತ್ತೆಲ್ಲ ಜಾಗ ಕಬ್ಬಿಣದಲ್ಲೇ ತುಂಬಿರಲು, ಎಲ್ಲವನ್ನೂ ಬಂಗಾರವಾಗಿಸಲು ಮಂತ್ರವನ್ನು ಉಚ್ಚರಿಸಲು ಹೋದಾಗ ಆ ಮಂತ್ರ ನೆನಪಿಗೆ ಬಾರದೆ ಹೋಗುತ್ತದೆ. ಮುಂದೇನಾಯ್ತು ಎಂಬುದು ಇಲ್ಲಿ ಅಪ್ರಸ್ತುತ.

ಮನನ ಮಾಡಿಕೊಳ್ಳುತ್ತಾ ಮನವನ್ನು ಪೀಡಿಸದೆ ಹೋದರೆ ಆ 'ಮನ' ಸಮಯಕ್ಕೆ ಸರಿಯಾಗಿ 'ನಕಾರ' ಹಾಡುವಲ್ಲಿ ಸಂಶಯವೇ ಇಲ್ಲ.

ಆಗಾಗ್ಗೆ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಲಿರುವುದರಿಂದ ನನ್ನ ಪ್ರೈಮರಿ ದಿನಗಳ ಸಹಪಾಠಿಗಳಾದ ನಳಿನಿ, ನಿರ್ಮಲ, ಸುನಂದಾ, ದಾಮೋದರ, ಅಣ್ಣನ ಸ್ನೇಹಿತನಾದ Andrew ಇನ್ನೂ ನೆನಪಿನಲ್ಲಿ ಇರುವುದು!

ಈ ಮೆದುಳಿನಲ್ಲಿ ಕುಳಿತ ವಿಷಯಗಳ ಆಟವೇ ಹೀಗೆ. ಕೊಕ್ಕೋ ಆಟದಲ್ಲಿ ಕುಳಿತ ಆಟಗಾರರಂತೆ, ಕೂತಿದ್ದರೆ ಕೂತೇ ಇರುತ್ತವೆ. ತಟ್ಟಿದರೆ ಎದ್ದು ಓಡುತ್ತವೆ ಮತ್ತೆ ಕೂರುವವರೆಗೆ. ಕೆಲವೊಮ್ಮೆ ತಟ್ಟಿಸಿಕೊಳ್ಳದೆ ಹಾಗೆ ಕೂತು ಆಟವೂ ಮುಗಿದು ಏಳುವುದರ ಅವಕಾಶದಿಂದ ವಂಚಿತವಾಗುತ್ತದೆ.

ಆಗಾಗ್ಗೆ ಮನವನ್ನು ತಟ್ಟಿ, ಹಾಗೆ ಎದ್ದ ನೆನಪುಗಳಲ್ಲಿ ಆಪ್ತರನ್ನು ಹುಡುಕಿ. ಅವರು ಇನ್ನೂ ಇದ್ದರೆ ಅವರ ಹೃದಯ ತಟ್ಟಿ. ಆಗ ನೋಡಿ ಈ ಲೋಕ ಎಂಥಾ ಸ್ನೇಹಮಯಿ ಅಂತ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The most beautiful things are not associated with money; they are memories and moments. If you don't celebrate those, they can pass you by.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ