• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸವರ್ಷದಲ್ಲಿ ದುರ್ವಾಸನೆ ದೂರವಾಗಿ ಸುವಾಸನೆ ಹೆಚ್ಚಾಗಲಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ವರ್ಷಾಂತ್ಯ ಮೂಡುತ್ತಿದ್ದಂತೆ 2018ರನ್ನು ಘಮ ಘಮ ಘಮಾಡಿಸ್ತಾ ಕಳಿಸಿಕೊಡೋಣ ಎನಿಸಿದೆ. 'ಘಮ್ ಎನ್ನುವಾ ತಾವರೆ ಹೂವಿನ ಕಂಪಿಗೆ' ಹಾಡುತ್ತಾ ಕಳಿಸಿಕೊಡೋಣ ಎನಿಸಿದೆ ಇಂದಿನ ಬರಹಕ್ಕೆ.

ವಿದೇಶದಿಂದ ಬಂದ ಮಂದಿ, ಬಂದ ಕೂಡಲೇ ಬಂಧು ಬಳಗದವರನ್ನು ಕಂಡಾಗಲೂ ಸ್ವಲ್ಪ ಅಂತರ ಇರಲಿ ಅಂತ ಬಯಸುತ್ತಾರೆ. ಅದೇನೋ ದೇವಲೋಕದಿಂದ ಬಂದಂತೆ ಆಡುತ್ತಾರೆ ಅಂತ ಮೂಗೆಳೆಯದಿರಿ. ಸ್ನಾನ ಮಾಡಿ ಕೇವಲ ಇಪ್ಪತ್ತನಾಲ್ಕರಿಂದ ಮೂವತ್ತು ಘಂಟೆ ಆಗಿರುತ್ತೆ ಅಷ್ಟೇ! ನಮ್ಮಿಂದ ಹೊರಹೊಮ್ಮುವ 'ವಾಸನೆ' ಅಷ್ಟು ಚೆನ್ನಾಗಿರೊಲ್ಲ. ನಿಮ್ಮ ಒಳಿತಿಗಾಗಿ ನಾವು ಹಾಗೆ ಮಾಡುತ್ತೇವೆ ಅಷ್ಟೇ, ಬಂಧುಗಳೇ.

ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?

ಸಾಮಾನ್ಯವಾಗಿ ಬೆಂಗಳೂರಿಗ ವಾಸನೆ ಅಂತಲೇ ಹೇಳೋದು. ಆದರೆ ಹಾಗೆ ಹೇಳುವಾಗ ಭಾವನೆ ಗಮನಿಸಿದಾಗ ವಾಸನೆಯ ಅರ್ಥವಾಗುತ್ತದೆ. ಮುಖ ಕಿವುಚಿ 'ಅಬ್ಬಾ ವಾಸನೆ' ಎಂದಾಗ ಅದು ದುರ್ಗಂಧ. ಮುಖವರಳಿಸಿ 'ಆಹಾ! ಏನು ವಾಸನೆ' ಎಂದಾಗ ಅದು ಸುಗಂಧ. ಅಪ್ಪಟ ಕನ್ನಡಿಗರು ಭಾವನೆ ಗೋಜು ಬೇಡ ಅಂತ 'ದುರ್ವಾಸನೆ' ಮತ್ತು 'ಪರಿಮಳ' ಎಂಬ ಪದಗಳನ್ನು ಬಳಸುತ್ತಾರೆ.

ಪದಬಳಕೆಯಲ್ಲೇ ಇಷ್ಟೆಲ್ಲಾ ವೈವಿಧ್ಯ ಇರುವ ಈ ಪರಿಮಳವನ್ನು ಸುಗಂಧದ್ರವ್ಯ ರೂಪದಲ್ಲಿ ಕೊಂಚ ನೋಡೋಣ ಬನ್ನಿ.

ಅಮೆರಿಕದಲ್ಲಿ, ಬೃಹತ್ ಮಳಿಗೆಗಳಿಂದ ಬರುವ advertisement ಮ್ಯಾಗಜಿನ್'ನಲ್ಲಿ ಸಾಮಾನ್ಯವಾಗಿ ಕಾಗದದಲ್ಲಿ ಪೂಸಿರುವ ಸುಗಂಧದ್ರವ್ಯವನ್ನೂ ಕೊಡುತ್ತಾರೆ. ಎಂಥಾ ಪರಿಮಳ ಇರುತ್ತದೆ ಎಂದರೆ, ಆ ಕ್ಷಣ ಅಂಗಡಿಗೆ ಹೋಗಿ ಕೊಳ್ಳಬೇಕು ಎನಿಸುವಷ್ಟು. ಎಷ್ಟೋ ಸಾರಿ ಆ ದ್ರವ್ಯ ಗಂಡಿಗಾಗಿಯೇ ಅಥವಾ ಹೆಣ್ಣಿಗಾಗಿಯೇ ಅಂತಲೇ ಅರ್ಥವಾಗುತ್ತಿರಲಿಲ್ಲ. ಹೆಣ್ಣಿನ ಚಿತ್ರ ಇದ್ದರೆ ಅದು ಹೆಣ್ಣಿನ perfume ಎಂಬ ನಂಬಿಕೆ ಇಟ್ಟುಕೊಂಡು ಆ ದ್ರವ್ಯವನ್ನು ನೋಡಿದಾಗ 'for men' ಅಂತ ಇತ್ತು. ಅರ್ಥಾತ್ ಚಿತ್ರದಲ್ಲಿರುವ ಹೆಣ್ಣನ್ನು ಆಕರ್ಷಿಸಲು ಗಂಡುಗಳೇ ಈ ಸುಗಂಧದ್ರವ್ಯ ಬಳಸೀ ಅನ್ನೋ ಜಾಹೀರಾತು. ಆದರೆ ಹೆಂಗಳ ಸುಗಂಧದ್ರವ್ಯಕ್ಕೆ ಗಂಡಿನ ಚಿತ್ರವೇ ಇರಲಿಲ್ಲ. ಮಾದಕ ಹೆಣ್ಣಿನ ಚಿತ್ರವಿತ್ತು. ಅದರಂತೆಯೇ ನೀಲಿ ಅಂದಾಗ ಗಂಡು ಪರ್ಫ್ಯೂಮ್, ಪರ್ಪಲ್ / ಪಿಂಕ್ ಆದರೆ ಹೆಣ್ಣಿನ ಪರ್ಫ್ಯೂಮ್ ಎಂಬೋದೂ ಸುಳ್ಳು.

ತಲೆಯ ಮೇಲೂ ಹೊರಲು ಯೋಗ್ಯತೆ ಪಡೆಯುವ 'ಪಾದರಕ್ಷೆ'!

ಹೆಣ್ಣು ಬಳಸುವ perfume ಯಾವುದು? ಗಂಡು ಬಳಸುವ perfume ಯಾವುದು ಎಂದು ಅರಿಯಲು ಸೀದಾ ಸ್ನೇಹಿತರ ಬಳಿ ಹೋದೆ. ಸ್ನೇಹಿತರಾದ ವೆಂಕಟೇಶ್ ಸುಗಂಧದ್ರವ್ಯದ ಅಂಗಡಿ ನಡೆಸುತ್ತಿದ್ದಾರೆ. ಅವರಿಂದ ಪಡೆದ ಜ್ಞಾನ ಜೊತೆ ನನ್ನ ಒಗ್ಗರಣೆ ಸೇರಿಸಿ ನಿಮ್ಮ ಮುಂದೆ.

Scent ಎಂದರೆ ಸುಗಂಧದ್ರವ್ಯ. ಬಾಲ್ಯದಿಂದ ನಮಗೆ ಅರಿವಿದ್ದ ಪದ ಎಂದರೆ scent. ಬುದ್ದಿ ಬಲಿತಂತೆ ಅದು ಸವಕಲು ಪದ ಅಂತ ಗೊತ್ತಾಯ್ತು. ಈಗಿನ ಜಗತ್ತಿನಲ್ಲಿ scent ಎಂದರೆ ಶುಂಠಿ ತಿಂದವರಂತೆ ನೋಡ್ತಾರೆ. Perfume, cologne, fragrance ಅಂತೆಲ್ಲಾ ಎನ್ನಬೇಕು. ಒಟ್ಟಾರೆ ಅದು ಸುಗಂಧ.

ಯಾವುದೇ ತಿನ್ನುವ ಪದಾರ್ಥದಲ್ಲಿ nutrition facts ಇರುವಂತೆ ಸುಗಂಧದ್ರವ್ಯದಲ್ಲೂ fragrance facts ಇರುತ್ತೆ. ಇವುಗಳಲ್ಲಿ ಪ್ರಭೇದಗಳನ್ನು french ಹೆಸರಿನಲ್ಲೇ ಕೊಂಚ ತಿಳಿಯೋಣ ಬನ್ನಿ. ಫ್ರಾನ್ಸ್ ದೇಶ perfume industry ದೊರೆ.

Parfum ಎಂಬೋದು ಹೆಚ್ಚು fragrance oil 20%-40% ಮತ್ತು ಕಡಿಮೆ ಆಲ್ಕೋಹಾಲ್'ಯುಕ್ತ ಮತ್ತು ಬೆಲೆ ಹೆಚ್ಚು. ಕನಿಷ್ಠವೆಂದರೂ ಆರರಿಂದ ಎಂಟು ಘಂಟೆಯವರೆಗೆ ನಿಮ್ಮಿಂದ ಬರುವ ದುರ್ವಾಸನೆಯನ್ನು ತಡೆಯುತ್ತದೆ.

ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಅಲ್ಲೇ ಇದೆ ಸ್ವಾರಸ್ಯ

Eau De Parfum(EDP)ನಲ್ಲಿ fragrance oil 15%-20% ಇದ್ದು ನಾಲ್ಕರಿಂದ ಐದು ಘಂಟೆಗಳ ಕಾಲ ನಿಮ್ಮೊಂದಿಗಿದ್ದು, ನಂತರ ಮಾಯವಾಗುವ ಸುಗಂಧ. ದಿನನಿತ್ಯದ (ಆಫೀಸ್) ಬಳಕೆಗೆ ಯೋಗ್ಯ. Parfum'ಗಿಂತ ಒಂದು ಲೆವಲ್ ಕಡಿಮೆ.

Eau De Toilette(EDT)ನಲ್ಲಿ fragrance oil 5%-15% ಇದ್ದು ಸಾಮಾನ್ಯವಾಗಿ ಮೂರರಿಂದ ನಾಲ್ಕು ಘಂಟೆವರೆಗೆ ನಿಮ್ಮ ಜೋಡಿ ಇರುತ್ತೆ. ಬಹುಶ: ಕೆಲಸದ ಇಂಟರ್ವ್ಯೂಗಳಿಗೆ ಸೂಕ್ತ. ಮೇಲಿನ ಎರಡು ಪಂಕ್ತಿಗಳಿಗಿಂತ ಆಲ್ಕೋಹಾಲ್ ಹೆಚ್ಚಿರುತ್ತದೆ.

ಇನ್ನು ಕೊನೆಯದ್ದು Eau De Cologne(EDC)ನಲ್ಲಿ fragrance oil 5%-10% ಮಾತ್ರ ಇದ್ದು ಹೆಚ್ಚು ಆಲ್ಕೋಹಾಲ್'ಯುಕ್ತವಾಗಿರುತ್ತದೆ.

ಕೇಶದ ಕ್ಲೇಶವಿದೇನಯ್ಯಾ ಕೇಶವಾ?

EDT ಮತ್ತು EDCಗಳಲ್ಲಿ ಆಲ್ಕೋಹಾಲ್ ಅಂಶ ಹೆಚ್ಚು ಎಂದಾಗ ಸ್ನೇಹಿತರ ಮಾತಿನ ಮರ್ಮ ಅರ್ಥವಾಯ್ತು. ಅವರೇಕೆ ಇವೆರಡೂ ಗಂಡಸರು ಬಳಸುವ ಸುಗಂಧದ್ರವ್ಯ ಅಂತ ಹೇಳಿದರು ಅಂತ.

Eau Fraiche ಅಂತಲೂ ಒಂದಿದೆಯಂತೆ. ಇತ್ಲಾಗೆ oil ಕೂಡಾ ಇಲ್ಲ, ಅತ್ಲಾಗೆ ಆಲ್ಕೋಹಾಲ್ ಕೂಡ ಇಲ್ಲ. ನೀರಿನ ಅಂಶವೇ ಹೆಚ್ಚು.

ಬಿಸಿಲುನಾಡಿನಲ್ಲಿ ಹೆಚ್ಚಾಗಿ ಬಳಸುವ ಅತ್ತರಿನಲ್ಲಿ ಆಲ್ಕೋಹಾಲ್ ಇರುವುದಿಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ ಸುವಾಸನೆ ಬೀರುವ ಅತ್ತರು ದುಬೈ'ನಲ್ಲಿ ದೊರೆಯುತ್ತದೆ. ಅತ್ತರನ್ನು ದೇಹಕ್ಕೆ ಹಾಕಿಕೊಳ್ಳತಕ್ಕದ್ದು. ಇದು ಔಷಧಯುಕ್ತವಾಗಿದ್ದು ದೇಹಕ್ಕೆ ಹಾನಿಕಾರಕವಲ್ಲ. perfume'ಗಳನ್ನು ಬಟ್ಟೆಗೆ ಪೂಸಿಕೊಳ್ಳತಕ್ಕದ್ದು, ದೇಹಕ್ಕಲ್ಲಾ. ಹಾಗೆಯೇ deodorant'ಗಳನ್ನು ಕಂಕುಳಸಂದಿಗಳಿಗೆ ಬಳಸತಕ್ಕದ್ದು.

ಇಷ್ಟೆಲ್ಲಾ ಕಥೆ ಹೇಳಿದ್ದರೂ, ಪರ್ಫ್ಯೂಮ್ ಅಂಗಡಿಗೆ ಹೋಗಿ ಅಲ್ಲಿ ಖರೀದಿ ಮಾಡುವ ಕ್ರಿಯೆ ಸವಾಲಿನ ಕೆಲಸ. ಮೊದಲು ಹೀರಿದ ಸುವಾಸನೆಗಿಂತಲೂ ಎರಡನೆಯದ್ದು ಸೊಗಸು. ಮೂರನೆಯದ್ದು ಮೊದಲೆರಡರಿಗಿಂತಲೂ ಮಸ್ತು. ಇನ್ನು ನಾಲ್ಕನೇಯದ್ದು ಅದ್ಬುತ. ಇದೇನು ಐದನೆಯದ್ದು ಬೇರೆ ರೀತಿ ಇದೆಯಲ್ಲಾ ಅಂತ ಮೂಗು ಮುರಿಯುವ ಮುನ್ನ ಒಮ್ಮೆ ಯೋಚಿಸಿ, ನಿಮ್ಮ ಅಘ್ರಾಣಿಸುವ ಶಕ್ತಿ ಬಂದ್ ಆಗಿದೆ ಅಂತ. ಎಲ್ಲಕ್ಕೂ ಒಂದು limit ಇರುತ್ತೆ ಅಂತಾರಲ್ಲ ಹಾಗೆ. ಆ ಸಮಯದಲ್ಲಿ ಅಂಗಡಿಯವರು ನಿಮ್ಮ ಮುಂದೆ ಒಂದು ಡಬ್ಬಿ ಹಿಡಿಯುತ್ತಾರೆ. ಏನು? ಅಂತ ನೀವು ಪ್ರಶ್ನಿಸಿದರೆ, ಅದನ್ನು ತೆರೆದು ನಿಮಗೆ ಅದರ ಸುವಾಸನೆ ಹೀರಲು ಹೇಳುತ್ತಾರೆ. ಆ ನಂತರ ಮತ್ತೆ ನಾಲ್ಕು ಸುಗಂಧದ್ರವ್ಯ ಹೀರಲು ನಿಮ್ಮ ಮೂಗು ಸಿದ್ದ. ಇಷ್ಟಕ್ಕೂ ಆ ಡಬ್ಬಿಯಲ್ಲಿ ಇದ್ದಿದ್ದಾರೋ ಏನು? ಹುರಿದ ಕಾಫಿ ಬೀಜ!

ವ್ಯಾಪಾರ ಮಾಡುವಾಗ ಒಂದು ತಿಳಿದುಕೊಳ್ಳಬೇಕಾದ್ದು ಏನೆಂದರೆ, ನೀವು ಹಾಕಿಕೊಳ್ಳುವ ಸುಗಂಧದ್ರವ್ಯ ನಿಮಗಾಗಿ ಅಲ್ಲ, ಬದಲಿಗೆ ಇತರರಿಗೆ ಅಂತ. ಒಬ್ಬ ಹೆಣ್ಣು ಅಂಗಡಿಗೆ ಬಂದು ವ್ಯಾಪಾರ ಮಾಡುವಾಗ ಅವಳು ಹೇಳೋದು 'ನನ್ನ ಸ್ನೇಹಿತೆ ಬಳಿ ಇಂಥದ್ದೇ ಇದೆ ಹಾಗಾಗಿ ಇದು ಬಿಟ್ಟು ಬೇರೆ ತೋರಿಸಿ' ಅಂತ. ಅದೇ ಗಂಡು "ನನ್ನ ಫ್ರೆಂಡ್ ಇಂಥದ್ದು ಹಾಕ್ಕೊಂಡ್ ಬಂದಿದ್ದ, ಸಕತ್ತಾಗಿತ್ತು (ಅರ್ಥಾತ್ ಹುಡುಗೀರು ಮೆಚ್ಚಿದ್ದರು) ನನಗೆ ಇಂಥದ್ದೇ ಕೊಡಿ ಅಂತ ಹೆಸರನ್ನೂ ಹೇಳುತ್ತಾರೆ". ಸೃಷ್ಟಿಕರ್ತನಿಗೆ ಜೈ ಅನ್ನೋಣ ಬನ್ನಿ.

ಗಂಡ ಹೆಂಡತಿ perfume ಅಂಗಡಿಗೆ ಶಾಪಿಂಗ್ ಹೋದಾಗ ಗಂಡನಿಗೆ ಇಷ್ಟವಾದ ಸುಗಂಧವನ್ನು ಹೆಂಡತಿ ತೆಗೆದುಕೊಳ್ಳುವುದು ಸರಿ. ಹಾಗೆಯೇ ಹೆಂಡತಿಗೆ ಇಷ್ಟವಾದ ಪರಿಮಳವನ್ನು ಗಂಡ ತೆಗೆದುಕೊಂಡಲ್ಲಿ ಜೀವನ ಸೊಗಸು. ಯಾವುದೇ ಕಾರಣಕ್ಕೂ ಇಬ್ಬರೂ ಮುನಿಸಿಕೊಂಡು ಅಂಗಡಿಗೆ ಹೋಗದಿರಿ. ಕೋಪದ ಸೇಡು ತೀರಿಸಿಕೊಳ್ಳಲು ಏನನ್ನೋ ಚೆನ್ನಾಗಿದೆ ಅಂತ ಹೇಳಿ ಜನ ನಿಮ್ಮಿಂದ ದೂರ ನಿಲ್ಲುವ ಹಾಗಾದೀತು. ನೆನಪಿರಲಿ Elizabeth Taylor 'ಹಿರಿಯರಿಗೆ' ಮಾತ್ರ ಎಂದು ಅರ್ಥೈಸಿಕೊಳ್ಳತಕ್ಕದ್ದು. ಬ್ಲಾಕ್ ಓಪಿಯಂ ಎಂಬುದು ಕರಿಜನಪ್ರಿಯ.

ಥಳುಕುಬಳುಕು ಲೋಕದಲ್ಲಿನ ಸೆಲೆಬ್ರಿಟಿ'ಗಳ ಹೆಸರಿನಲ್ಲಿ ಇರುವ ಬ್ರಾಂಡ್'ಗಳನ್ನೇ ಜನ ಬಯಸೋದು. Rihanna, Britney spears, Jessica Parker, Paris Hilton, Katie Perry, Taylor Swift ಎಲ್ಲರ ಹೆಸರುಗಳಲ್ಲಿ ಇರುವ perfumeಗಳು ಸಿಕ್ಕಾಪಟ್ಟೆ ಬಿಕರಿಯಾಗುತ್ತವೆ. ತಾವು ಸೆಲೆಬ್ರಿಟಿಗಳಂತೆ ಬಟ್ಟೆ ಧರಿಸಿದರೆ ಅಥವಾ (ಹೋಗ್ಲಿಬಿಡಿ), perfume ಹಾಕಿಕೊಂಡರೆ ತಾವೂ ಅವರಂತೆಯೇ ಎಂಬ ಮಾಯೆ ಎಲ್ಲೆಲ್ಲೂ ಇದೆ.

ದೇಹದಿಂದ ಹೊರಹೊಮ್ಮುವ ದುರ್ನಾತ ಸಹಿಸಲಸಾಧ್ಯ. ಪ್ರತೀ ಮನುಷ್ಯನೂ ಭಿನ್ನ. ಅವರಿಂದ ಹೊರಹೊಮ್ಮುವ ದುರ್ವಾಸನೆಯೂ ಭಿನ್ನ. ಅದರಿಂದ ಇನ್ನೊಬ್ಬರು ಮೂರ್ಛೆ ಬೀಳದಿರಲಿ ಎಂದು ಪರ್ಫ್ಯೂಮ್ ಬಳಸುವುದರಲ್ಲಿ ತಪ್ಪೇನಿಲ್ಲ. ಹಾಗಂತ ಅದರ ಬಳಕೆ ಅತಿಯಾಗಿ ಅದರಿಂದಲೂ ಮತ್ತೊಬ್ಬರು ತಲೆಸುತ್ತಿ ಬೀಳುವ ಸಂಭವವಿದೆ.

ತಾ ಗಿಡದಲ್ಲಿದ್ದರೂ ಇಲ್ಲದಿದ್ದರೂ ಒಣಗಿ ಬಾಡೋ ಮುನ್ನ ಸದಾ ಪರಿಮಳವನ್ನೇ ಸುರಿಸೋ ಹೂವೆಲ್ಲಿ? ಬದುಕಿನಿಂದ ಸುಡೋವರೆಗೂ ದುರ್ಗಂಧ ಬೀರೋ ಮನುಜನೆಲ್ಲಿ?

ಬರುವ ಹೊಸವರ್ಷದಲ್ಲಿ 'ದು'ಕಾರಗಳು ದೂರಾಗಿ 'ಸು'ಕಾರಗಳೇ ಹೆಚ್ಚಾಗಲಿ ಎಂದು ಆಶಿಸುವಾಗ ದುರ್ವಾಸನೆ ದೂರವಾಗಲಿ, ಸುವಾಸನೆಗಳು ಹೆಚ್ಚಾಗಲಿ ಎಂದು ಆಶಿಸುವುದರಲ್ಲಿ ತಪ್ಪೇನಿದೆ.

English summary
Let's celebrate the new year with amazing perfumes. Which is your favourite fragrance? Srinath Bhalle takes us through a wonderful world of perfumes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X