• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುದ್ಧಿವಂತ ಮಾನವನನ್ನೇ ಧೂಳೆಬ್ಬಿಸುವ ಪರಾಕ್ರಮಿ ಧೂಳು!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇಂದಿನ ಬರಹ ಬರೀ ಧೂಳು. very dusty! ಲೇಖನ ಬರೆಯುವ ಮುನ್ನ ಯಾರನ್ನೋ ಸಂದರ್ಶನ ಮಾಡುವ ಸಲುವಾಗಿ ಅವರ ದರ್ಶನ ಮಾಡಲು ಹೋಗಿದ್ದೆ. ಅವರಿಗೆ ನನ್ನ ಪ್ರಶ್ನೆ 'ನಿಮ್ಮ ಮನೆಯಲ್ಲಿ ಧೂಳು ಇದೆಯೇ?' ಅವರಿಗೆ ತಬ್ಬಿಬ್ಬಾಯ್ತು. ಇದ್ದಕ್ಕಿದ್ದ ಹಾಗೆ ಮನೆಯ ಬಾಗಿಲು ತಟ್ಟುವ ಅಬ್ಬಾಸ್ 'ನಿಮ್ಮ ಬಾತ್ರೂಮ್ ಸ್ವಚ್ಛ ಇದೆಯೇ?' ಅಂತ ಕೇಳೋ ಹಾಗೆ, ನಾನ್ಯಾಕೆ ಈ ಪ್ರಶ್ನೆ ಕೇಳ್ತಿದ್ದೀನಿ ಅಂತ ಅವರಿಗೆ ಅನುಮಾನ. ಅವರು ಸಾವರಿಸಿಕೊಂಡು "ಇದೆ. ನಿಮಗೆ ಬೇಕಿತ್ತೇ?" ಅಂತ ಕೇಳಿದಾಗ ತಬ್ಬಿಬ್ಬಾಗುವ ಸರದಿ ನನ್ನದಾಗಿತ್ತು.

ಯಾರಾದರೂ ಮನೆಗೆ ಬಂದರು ಅಂದಾಗ ಅವರನ್ನು ಕೂಡಿಸುವ ಮುನ್ನ seat ಧೂಳಿದೆಯಾ ಅಂತ ಒಮ್ಮೆ ನೋಡಿ ಆಮೇಲೆ ಅವರನ್ನು ಕೂಡಿಸೋದು ಪದ್ಧತಿ.

ಮೌನ ಬಂಗಾರವೂ ಆಗಬಹುದು, ಬಣ್ಣವನ್ನೂ ಕಳೆದುಕೊಳ್ಳಬಹುದು!

ಶೆಲ್ಫ್'ಗಳಲ್ಲಿ ಪುಸ್ತಕ ಜೋಡಿಸಿ ಇಡುವುದು ಒಂದು ಫ್ಯಾಷನ್. ಒಂದು ಬಾಗಿಲಿಲ್ಲದ ಕಪಾಟು. ಅದರಲ್ಲಿ ಸಾಲುಸಾಲಾಗಿ ಜೋಡಿಸಿರುವ ಪುಸ್ತಕಗಳು. ಅಲ್ಲಿರೋದೆಲ್ಲಾ encyclopedia ದಂತಹ series. ಆ ಪುಸ್ತಕವನ್ನು ಯಾವುದಾದರೂ ಕಾರಣಕ್ಕೆ ತೆರೆಯಬೇಕು ಎಂದರೆ ಮೊದಲು ಮಾಡೋ ಕೆಲಸವೇ ಧೂಳು ಝಾಡಿಸೋದು. refer ಮಾಡೋದು ಆಮೇಲಿನ ಕೆಲಸ.

ನಮ್ಮ ಪಠ್ಯಪುಸ್ತಕದ ಮೇಲೂ ಏಳಾಳುದ್ದ ಧೂಳು ಇದ್ದರೆ ಎಷ್ಟು ದಿನವಾಗಿರಬಹುದು ಅದನ್ನು ತೆರೆದು ಓದಿ ಅಂತ ಅಂದಾಜು ಬರುತ್ತೆ. ಮನೆಯೊಳಗೇ ಸೇರಿರುವ ಧೂಳು ಕೂಡಿ ಕೂಡಿ ceilingನಲ್ಲಿ ಉದ್ದೂಟಾಗಿ ಕಾಣೋದನ್ನ ಇಲ್ಲಣ ಅಂತ ನಮ್ಮ ಮನೆಯಲ್ಲಿ ಹೇಳುತ್ತಿದ್ದೆವು. ನೀವೇನಂತೀರಿ? ಬಚ್ಚಲ ಮನೆಯಲ್ಲಿ ಇವು ಕಾಣುತ್ತಿದ್ದುದು ಹೆಚ್ಚು. ವಾರಾಂತ್ಯದಲ್ಲಿ ಉದ್ದನೆಯ ಝಾಡು ತೆಗೆದುಕೊಂಡು ಗೋಡೆಯನ್ನೆಲ್ಲಾ ಬಳಿಯೋದು ನನ್ನ ಕೆಲಸಗಳಲ್ಲೊಂದು. ಹೇಳಿದೆ ಅಷ್ಟೇ, ಕರೀಬೇಡಿ!

ರಾಶಿರಾಶಿ ವಿಶ್ ಗಳ ನಡುವೆ ಮೌಲ್ಯ ಕಳೆದುಕೊಂಡ ಶುಭಾಶಯ

ರೂಮಿನ ಅಟ್ಟದ ಮೇಲೆ newspaperಗಳನ್ನು ಇಡೋದು ಒಂದು ಪರಿಪಾಠ. ಒಂದರ ಮೇಲೆ ಮತ್ತೊಂದು ಅಂತ ಬಾಳೆ ಎಲೆಯಂತೆ ಪೇರಿಸಿಡೋದು ಸಾಮಾನ್ಯವಾಗಿ ಎಲ್ಲರೂ ಮಾಡಿರುತ್ತಾರೆ. ಅದರಂತೆಯೇ ವಾರಪತ್ರಿಕೆಗಳನ್ನೂ ಕೂಡ. ವಾರಪತ್ರಿಕೆಯನ್ನಾದರೂ ಒಮ್ಮೊಮ್ಮೆ ಮತ್ತೆ ಕೆಳಗಿಳಿಸಿ ತೆರೆದು ಓದುತ್ತೇವೇನೋ. ಆದರೆ ಒಮ್ಮೆ ಅಟ್ಟ ಸೇರಿದ ಸುದ್ದಿಪತ್ರಿಕೆಯನ್ನು ಮತ್ತೆ ತೆರೆದು ಓದೋದು ಅಪರೂಪ. ಸಿಕ್ಕಾಪಟ್ಟೆ ಸೇರಿದೆ ಅಂತ ಖಾಲೀ ಸೀಸೆ, paperನವನಿಗೆ ಹಾಕಬೇಕು ಎಂದಾಗ ಪಾಪೇರುಗಳನ್ನು ಕೆಳಗಿಳಿಸಿದರೆ ಎಷ್ಟೋ ಸಾರಿ ಅಲ್ಲಿ ಸೇರಿರುವ ಧೂಳಿನ ಸ್ನಾನವಾಗಿ ಮುಳುಗೇ ಹೋಗುತ್ತೇವೇನೋ ಅನ್ನಿಸುತ್ತದೆ.

ಮನೆಗಳಲ್ಲಿ ಧೂಳು ಎಲ್ಲೆಲ್ಲಿಂದ ಸೇರಬಹುದು? ಹೊರಗಿನಿಂದ ಮನೆಯ ಒಳಗೆ ಬಂದಾಗ ಪಾದರಕ್ಷೆಗಳನ್ನು ಹೊರಗೆ ಬಿಡುವ ಕಾಲ ಈಗಿಲ್ಲ. ಹೊರಗೆ ಬಿಟ್ಟು ಒಳಗೆ ಹೋಗಿ ಬರುವಷ್ಟರಲ್ಲಿ ಚಪ್ಪಲಿಯೇ ಮಾಯವಾಗಿರುತ್ತದೆ. ವಿಧಿಯಿಲ್ಲದೇ ಮನೆಯೊಳಗೇ ಚಪ್ಪಲಿ ಬಿಡಬೇಕಾಗುತ್ತದೆ. ಅರ್ಥಾತ್ ಧೂಳು ಮನೆಯೊಳಗೇ ಮೊದಲ ಹೆಜ್ಜೆ ಇಟ್ಟಾಯ್ತು. ಮಿಕ್ಕವು ಎಂದರೆ ಹೊರಗಿಂದ ಗಾಳಿಗೆ ಬರುವ ಧೂಳು, ಮನೆಯಲ್ಲಿ ಸಾಕುಪ್ರಾಣಿಗಳಿಂದ ಉದುರುವ ಕೂದಲು, ಮನೆಯೊಳಗಿನ ಕಾರ್ಪೆಟ್, ಬಟ್ಟೆಗಳು, pollution ಇತ್ಯಾದಿಗಳಿಂದ ಬರುವ ಧೂಳು. ಹೊರಗಿನಿಂದ ಬಂದು ಸೇರುವ ಧೂಳು / ಕೊಳಕು ಮೂರರಲ್ಲಿ ಎರಡು ಭಾಗವಾದರೆ ಮತ್ತೊಂದು ಭಾಗ ಮನುಜರಾದ ನಮ್ಮಿಂದ ಉದುರುವ ನಿರ್ಜೀವ ಚರ್ಮ.

ಮರೆಯಬೇಕು ಅನ್ನೋದನ್ನ ನೆನಪಿಟ್ಟುಕೊಳ್ಳುವುದನ್ನು ಮರೆಯದಿರಿ!

ಮನೆಯೊಳಗೇ ಇಡುವ ಗಿಡಗಳಿಂದ, ಗಿಡಗಳ potಗಳಿಂದ, ಅವಕ್ಕೆ ಹಾಕುವ ಮಣ್ಣು, ಗೊಬ್ಬರ ಹೀಗೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಧೂಳು ಸೇರಬಹುದು. ಮುಂಜಾನೆದ್ದು ಮನೆಯ ಕಸ ಬಳಿಯುವಾಗ ಎಲ್ಲಿಂದ ಬಂತು ಈ ಪಾಟಿ ಧೂಳು ಎಂದು ಅಚ್ಚರಿಯಾಗುತ್ತದೆ. ವಾತಾವರಣದಲ್ಲಿ ನಮ್ಮ ಕಣ್ಣಿಗೆ ಕಾಣದಷ್ಟು ಧೂಳು ಎಲ್ಲೆಡೆ ಇರುತ್ತದೆ. ಕುರ್ಚಿಯ ಕೆಳಗೆ, ಸೋಫಾದ, ಮಂಚದ ಕೆಳಗೆ ಎಲ್ಲಿ ಹೆಚ್ಚು ಓಡಾಟ ಇರೋದಿಲ್ವೋ ಅಲ್ಲಿ ಧೂಳೇ ಚಕ್ರವರ್ತಿ. ಮನೆ ಕೆಲಸದ ಲಚ್ಚಿ, ನೀವು ಅಲ್ಲೇ ಓಡಾಡುತ್ತ ಅವಳ ಕೆಲಸ ಮೇಲೆ ಗಮನ ಇಟ್ಟಿದ್ದರೆ ಕುರ್ಚಿ / ಮಂಚದ ಕೆಳಗೂ ಕಸ ಬಳಿಯಬಹುದು. ನೀವು ಆಕೆಯನ್ನು ಗಮನಿಸಲಿಲ್ಲ ಎಂದರೆ ಆ ಧೂಳು ನಿಮಗೆ ಆಕೆಯ ಕಡೆಯಿಂದ ಗಿಫ್ಟ್!

ಧೂಳಿನಲ್ಲಿ ಕಣ್ಣಿಗೆ ಕಾಣದಂತಹ (ಮೈಕ್ರೋಸ್ಕೋಪಿಕ್) ಜೀವಿಗಳು (mites) ಇರುತ್ತವೆ. ಅವು ಭಾರವಿದ್ದು ಗಾಳಿಯಲ್ಲೇ ತೇಲಾಡದೆ ನೆಲದ ಮೇಲೆ ಅಥವಾ ಸೋಫಾ, ಹಾಸಿಗೆ ಬಟ್ಟೆ ಹೀಗೆ ಎಲ್ಲೆಲ್ಲೂ ಅಡ್ಡಾಡಿಕೊಂಡು ಇರುತ್ತವೆ. ಆದರೆ ಈ ಹುಳುಗಳು ತಮ್ಮ ಆಹಾರಕ್ಕೆ ನಮ್ಮ ದೇಹದ ಮೇಲೆ ನೇರವಾಗಿ ಆಕ್ರಮಣ ಮಾಡುವುದಿಲ್ಲ. ಅವು ನಮ್ಮಿಂದ ಉದುರಿದ ಚರ್ಮವನ್ನು ತಿಂದು ಜೀವಿಸುತ್ತವೆ. ಧೂಳು ಎಲ್ಲಿವೆಯೋ ಅಲ್ಲಿ ಈ ಸೂಕ್ಷ್ಮಜೀವಿಗಳು ಇದ್ದೇ ಇರುತ್ತದೆ. ಕೆಲವೊಮ್ಮೆ ನಮ್ಮ ಮೈ ಚಿಟಚಿಟ ಎನ್ನುವಂತೆ ಆಗುವುದು, ಕಾರಣವಿಲ್ಲದೆ ಕೆರೆತ ಉಂಟಾಗೋದು ಇತ್ಯಾದಿಗಳಿಗೆ ಇವು ಮೂಲ ಕಾರಣ.

ಹೊಸವರ್ಷದಲ್ಲಿ ದುರ್ವಾಸನೆ ದೂರವಾಗಿ ಸುವಾಸನೆ ಹೆಚ್ಚಾಗಲಿ!

ಹಾಸಿಗೆಯ ಮೇಲೆ ಮಲಗೋ ಮುನ್ನ ಝಾಡಿಸೋದು, ಕೂರುವ ಯಾವುದೇ ರೀತಿ ಆಸನಗಳನ್ನು ಕೂರುವ ಮುನ್ನ ಒರೆಸುವುದು, ಆಹಾರದ ಪಾತ್ರೆ / ತಟ್ಟೆಗಳನ್ನು ಇಡುವ ಮುನ್ನ ಡೈನಿಂಗ್ ಟೇಬಲ್ ಒರೆಸುವುದು ಇತ್ಯಾದಿಗಳನ್ನು ಮಾಡುವುದರಿಂದ ಧೂಳನ್ನು ತಹಬದಿಗೆ ತರಬಹುದು. Asthma ಖಾಯಿಲೆ ಇರುವವರಿಗೆ ಈ ಧೂಳು ಮಾರಕ ಎಂದರೆ ತಪ್ಪಾಗಲಾರದು.

ಉಸಿರನ್ನು ಎಳೆದುಕೊಂಡಾಗ ಈ ಧೂಳು ನಮ್ಮ ದೇಹದ ಒಳಗೆ ಹೊಕ್ಕು ಅಲ್ಲಿ ಮನೆಮಾಡಿಕೊಂಡು ಬಾಧಿಸುವುದು ಅತ್ಯಂತ ಸಾಮಾನ್ಯ ಖಾಯಿಲೆ. ಗಂಟಲಲ್ಲಿ ಸಿಕ್ಕಿಕೊಳ್ವ ಧೂಳಿನಿಂದ ಕೆಮ್ಮು ಬರುತ್ತದೆ. ಮೂಗಿನಲ್ಲೇ ಆದರಿಕೊಳ್ಳುವ ಧೂಳಿನಿಂದ ಸೀನು ಬರುತ್ತವೆ. ದೇಹವು ಸಾಧ್ಯವಾದಷ್ಟೂ ಇದರ ವಿರುದ್ಧ ಹೋರಾಡಿದರೂ ಎಂದೋ ಒಮ್ಮೆ ಯುದ್ಧ ಮಾಡುವುದನ್ನು ನಿಲ್ಲಿಸಿದಾಗ ಧೂಳಿನ ಕೈ ಮೇಲಾಗುತ್ತವೆ. ಇದಕ್ಕೆ ಅಂಟಿಕೊಂಡಂತೆ ನಾನಾ ರೋಗಗಳು ಮನುಷ್ಯನನ್ನು ಅಟಕಾಯಿಸಿಕೊಂಡು ಹಿಂಸೆ ಮಾಡುತ್ತದೆ.

ಮನೆಕಟ್ಟುವ ಕಡೆ ಏಳುವ ಧೂಳು ಮಹಾ ಹಾನಿಕರ. ಅಮೇರಿಕಾದ ಪರಿಸರ ಸಂರಕ್ಷಣಾ ಇಲಾಖೆಯವರು ಮನೆಯನ್ನು ಕಟ್ಟುವ ಕಂಪನಿ'ಯವರಿಗೆ ನಾನಾ ವಿಧವಾದ ಧೂಳನ್ನು ನಿಯಂತ್ರಣ ಮಾಡುವ ವಿಧಾನಗಳನ್ನು ಹೇರುತ್ತಾರೆ. ಹೀಗಾಗಿ ಮನೆಯ ಪಕ್ಕದಲ್ಲಿ ಮತ್ತೊಂದು ಮನೆ ಏಳುತ್ತಿದ್ದರೂ ಅದರಿಂದ ಉಂಟಾಗುವ ಧೂಳು ತಕ್ಕಮಟ್ಟಿಗೆ ಕಡಿಮೆ ಇರುತ್ತದೆ.

ಒಟ್ಟಾರೆ ಈ ಧೂಳು ಅತೀ ಬುದ್ದಿವಂತ ಅಂತ ಮೆರೆಯುವ ಮಾನವನನ್ನೇ ಧೂಳೆಬ್ಬಿಸುವಷ್ಟು ಪರಾಕ್ರಮಿ ಅಂತಾಯ್ತು. ಈ ಧೂಳು ಕೆಟ್ಟದ್ದು ಅಂತಾಯ್ತು. ಈ ಧೂಳಿಗೆ ಯಾವ ಒಳ್ಳೆಯ ಗುಣವೇ ಇಲ್ಲವೇ?

ಬಾಣಭಟ್ಟ 'ಕಾದಂಬರಿ'ಯಲ್ಲಿ ಯುದ್ಧಭೂಮಿಯಲ್ಲಿನ ಧೂಳಿನ ಬಗ್ಗೆ ಬರೆದಿದ್ದಾನೆ. ಕುದುರೆಗಳ ಖರಪುಟದನಿಯೊಂದಿಗೆ ಎದ್ದ ಧೂಳು ಸೂರ್ಯನ ರಶ್ಮಿಯೊಂದಿಗೆ ಸೇರಿ ಯಾವ ಹೊಳಪಿನ ಬಣ್ಣ ಹೊಂದಿತ್ತು ಎಂಬ ವರ್ಣನೆ ನಮಗೆ ಸಂಸ್ಕೃತ ಪಾಠದಲ್ಲಿತ್ತು. ವೀರಾವೇಶದಿಂದ ಕುದುರೆಯ ಮೇಲೆ ಬರುವ ಸೈನಿಕರು ಎಬ್ಬಿಸಿದ ಧೂಳು, ಸೋತುಸುಣ್ಣವಾಗಿ ಯುದ್ಧರಂಗದಿಂದ ಓಡುವಾಗ ಎದ್ದ ಧೂಳಿನ ಬಗ್ಗೆಯೂ ಓದಿದ ನೆನಪು.

ಮಹಾಮಹಿಮರು ಮನೆಗೆ ಬಂದರು ಎಂದಾಗ "ನಿಮ್ಮ ಪಾದಧೂಳಿಯಿಂದ ನಮ್ಮ ಮನೆ ಪಾವನವಾಯ್ತು" ಎನ್ನುತ್ತೇವೆ.. "ನನ್ನದೇನು ಸಾಧನೆ? ಅದು ನಿಮ್ಮ ಪಾದಧೂಳಿಗೆ ಸಮನಿಲ್ಲ" ಎಂದು ಹೇಳುತ್ತೇವೆ. ಹನುಮಾನ್ ಚಾಲೀಸಾ'ದಲ್ಲಿ ಆರಂಭದಲ್ಲೇ ಧೂಳಿನ ಬಗ್ಗೆ ಹೇಳಲಾಗಿದೆ "ಶ್ರೀ ಗುರು ಚರಣ ಸರೋಜಾ ರಜ" ಅಂತ. ಚಿಂದಿ ಉಡಾಯಿಸೋದು ಅನ್ನೋದರ ಶುದ್ಧ ಪದ ಧೂಳೀಪಟ.

ಗೋಧೂಳಿ ಕೇಳಿಯೇ ಇರುತ್ತೀರಾ. ಸಂಜೆ ಮತ್ತು ರಾತ್ರಿಯ ನಡುವೆ ಅಂದ್ರೆ ಮೇಯಲು ಹೊರಗೆ ಹೋಗಿದ್ದ ದನಕರುಗಳು ವಾಪಸಾಗುವ ಹೊತ್ತು. ಗೋಧೂಳಿ ಲಗ್ನಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವ ಇದೆ. ಶುಭ ಲಗ್ನ ಶುಭ ಯೋಗ ಅಂಬೋ ಘಳಿಗೆ ಸಿಗದೇ ಹೋದಾಗ ಗೋಧೂಳಿ ಲಗ್ನದಲ್ಲಿ ಮದುವೆ ಮಾಡುವವರು ಇದ್ದಾರೆ.

ನಮಗೆ ಇಲ್ಲಿರುವುದಕ್ಕೆ ಹೇಗೆ ಹಕ್ಕಿದೆಯೋ ಧೂಳಿಗೂ ಇದೆ. ನಮ್ಮ ದೇಹದಿಂದ ಉದುರಿದ ಸತ್ತ ಚರ್ಮವನ್ನು ತಿನ್ನಲೇ ಇರುವುದು ಆ ಕ್ರಿಮಿ. ಅಂದರೆ ಅದರಿಂದ ಒಳಿತೇ ಆಗಿದೆ, ಅಲ್ಲವೇ? ಈ ಕೆಟ್ಟದ್ದು ಒಳ್ಳೆಯದ್ದು ಅಂಬೋದು ನಾವು ನಮ್ಮ ಮೂಗಿನ ನೇರಕ್ಕೆ (point of view) ಇಂದ ಹೇಳುತ್ತೇವೆ.

ನಮಗೆ ಸರಿ ಇಲ್ಲದ್ದು ಕೆಟ್ಟದ್ದು. ನಮಗೆ ಸರಿ ಇದ್ದುದು ಒಳ್ಳೆಯದ್ದು. ಒಮ್ಮೆ ಆ ಕಡೆ ಹೋಗಿ ಇತ್ತ ಕಡೆ ನೋಡಿದರೆ ತಿಳಿಯುತ್ತೆ, ಮನುಷ್ಯ ಎಷ್ಟು ಸ್ವಾರ್ಥಿ ಅಂತ. ತಾನು ಬದುಕಲು ಮತ್ತೊಬ್ಬರನ್ನು ಕೊಲ್ಲೋದಕ್ಕೂ ಹೇಸೋಲ್ಲಾ ಅನ್ನೋ ಡಾನ್ ಇದ್ದ ಹಾಗೆ.

ನಾವು ಕಟುಕರು ಅಂತ ಯೋಚಿಸಿ ನಾಳೆಯಿಂದ ಧೂಳನ್ನು ತೆಗೆಯೋದು ನಿಲ್ಲಿಸಬೇಡಿ. ಆಹಾರ ಸರಪಳಿಯಲ್ಲಿ ಎಲ್ಲ ರೀತಿ ಜೀವಿಗಳೂ ನಿಯಂತ್ರಣದಲ್ಲಿ ಜೀವಿಸಬೇಕು. ಯಾವುದೇ ಅತೀ ಹೆಚ್ಚು ಆದರೆ ತಾಳತಪ್ಪುತ್ತೇ! ಧೂಳನ್ನು ಹೊಡೆಯೋಣ ಬನ್ನಿರೋ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is true that we are made of dust. And the world is also made of dust. But the dust has motes rising. Dust is good and bad as well, it depends on how we perceive it. Whatever way you try to clean up the dust, the dust will dust you.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more