ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಂತ್ಕೊಂಡೇ ನನ್ನ ಪರಿಚಯ, ಕೂತ್ಕೊಂಡೇ ನೀವು ಓದಿರಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಎಲ್ಲರಿಗೂ ನಮಸ್ಕಾರಗಳು. ದಟ್ಸ್-ಕನ್ನಡ ಪೋರ್ಟಲ್'ನಲ್ಲಿ ಅಂಕಣಕಾರನಾಗಿ ಬರೆಯುತ್ತಿರುವ ಮೊದಲ ಬರಹ. ಇಂಥಾ ಸದವಕಾಶ ಕಲ್ಪಿಸಿಕೊಟ್ಟ ಪ್ರಸಾದ ನಾಯಿಕ ಮತ್ತು ಆಡಳಿತವರ್ಗಕ್ಕೆ ಧನ್ಯವಾದಗಳು.

ಜೀವನದಲ್ಲಿ ಯಾವುದೇ 'ಮೊದಲು'ಗಳು ಸ್ವಲ್ಪ ಟೆನ್ಷನ್'ಯುಕ್ತವಾಗೇ ಇರುತ್ತದೆ. ಉದಾಹರಣೆಗೆ ಈಗ ನೀವು ಮೊದಲ ಬಾರಿಗೆ ಮದುವೆಯಾದಾಗ ಎಷ್ಟು ಟೆನ್ಷನ್ ಇತ್ತು ಅಂತ ಒಮ್ಮೆ ಊಹಿಸಿಕೊಳ್ಳಿ. ಹೋಗ್ಲಿ ಬಿಡಿ, ಜೀವನದ ಟೆನ್ಷನ್ ಬಗ್ಗೆ ಮಾತನಾಡುವುದು ಇಲ್ಲಿನ ಉದ್ದೇಶವಲ್ಲ. ಒಬ್ಬ ಅಂಕಣಕಾರನಾಗಿ ಬರೆಯುತ್ತಿರುವ 'ಮೊದಲ' ಬರಹ.

ಪೋರ್ಟಲ್ ಆರಂಭಗೊಂಡಾಗ ಒಬ್ಬ ಖಾಯಂ ಓದುಗಾರನಾಗಿ ನಂಟು ಬೆಳೆಸಿಕೊಂಡು ನಂತರದ ದಿನಗಳಲ್ಲಿ ನಾನೂ ಬರೆಯಬೇಕು ಎಂಬ ಆಸಕ್ತಿ ಮೂಡಿಸಿಕೊಂಡೆ. ಹಲವಾರು ಬರಹಗಾರರ ಅಂಕಣಗಳಿಗೆ ಕಾಮೆಂಟ್ಸ್ ಬರೆಯಲು ಆರಂಭಿಸಿದೆ. ನಂತರ ಆಗೊಮ್ಮೆ ಈಗೊಮ್ಮೆ ತಿಳಿಹಾಸ್ಯ ಪ್ರಸಂಗಗಳನ್ನು ಪೋರ್ಟಲ್'ನಲ್ಲಿ ಬರೆದೆ.

An introduction about new Kannada Columnist Srinath Bhalle

ಓದುಗನಿಂದ ಬರಹಗಾರನಾಗಿ ರೂಪಿತಗೊಳ್ಳಲು ಹಲವು ಜನ ಕಾರಣರಾಗಿದ್ದಾರೆ. ಮೊದಲಿಗೆ ದಟ್ಸ್ ಕನ್ನಡ ಪೋರ್ಟಲ್'ನ ಪರಿಚಯಿಸಿದವರು 'ಮೋಹನ್' ಎಂಬ ನಮ್ಮ ಬಂಧುವರ್ಗದವರು. ಬರಹ ಈ ರೀತಿ ಇದ್ದರೆ ಜನರ ಮನಸ್ಸಿನಲ್ಲಿ ನಿಲ್ಲುತ್ತದೆ ಎಂದು ತಿದ್ದಿದವರು ಆತ್ಮೀಯ ಸ್ನೇಹಿತರಾದ ಶ್ರೀವತ್ಸ ಜೋಶಿ!

ಮೊದಲ ವಾರದ ಈ ಬರಹದಲ್ಲಿ, ಇತರ ಮೊದಲುಗಳನ್ನು ಕೊಂಚ ಪಕ್ಕಕ್ಕೆ ಇಟ್ಟು, ಮೊದಲ ಬಾರಿಗೆ ನನ್ನ ಬರಹ ಓದುತ್ತಿರುವ ಸಹೃದಯರಿಗೆ ನನ್ನ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಾಸ್ಯರೂಪದಲ್ಲಿ ತಿಳಿಸಿಕೊಡುತ್ತೇನೆ.

ನನ್ನ ಬಗ್ಗೆ ಒಂದು ಆಟೋ-ಬಯಾಗ್ರಫಿ ಬರೆಯಬೇಕೂ ಅಂತಲೇ ಇದ್ದೆ. ಆದರೆ ಏನ್ ಮಾಡೋದು 'ಆಟೋ'ದಲ್ಲಿ ಕೂತು ಬರೆಯೋಣ ಅಮೆರಿಕಾದಲ್ಲಿ 'ಆಟೋ'ನೇ ಇಲ್ವೇ? ಅಂದ ಹಾಗೆ, ನಾನಿರೋದು ಅಮೆರಿಕದಲ್ಲಿ. ನನ್ನ ಬಗ್ಗೆ ಹೇಳಿಕೊಳ್ಳೋದ್ ಯಾಕೆ ಅಂದ್ರೆ, ಭಾರತಕ್ಕೆ ಅರ್ಥಾತ್ ಬೆಂಗಳೂರಿಗೆ ನಾನು ಬಂದಾಗ ನೀವು ಕಂ.ಕ.ಕಾ.ಕೊ ಅಂತ. ಇದ್ಯಾವ ಭಾಷೆ ಅಂದುಕೊಂಡಿರಾ? ಈಗ ಸಾಮಾಜಿಕ ತಾಣದಲ್ಲಿ ttyl, lol, yw ಅಂತೆಲ್ಲಾ ಸನ್ನೆ ಭಾಷೆಗಳು ಪ್ರಚಲಿತವಾಗಿರುವಂತೆ ನನ್ನ ಕನ್ನಡದ ಸನ್ನೆ ಭಾಷೆ ಇದು. "ಕಂ.ಕ.ಕಾ.ಕೊ" ಅಂದ್ರೆ 'ಕಂಡ್ರೆ ಕರೆದು ಕಾಫಿ ಕೊಡಿ' ಅಂತ. ಮುಂದೆ ನನ್ನ ಬಗ್ಗೆ ಚಿಕ್ಕದಾಗಿ ನಲವತ್ತು ಮಾತುಗಳು.

ಮೊದಲಿಗೆ ನನ್ನ ಆಕಾರದ ಸಕಾರಾತ್ಮಕ ವಿವರಣೆ.

ನನ್ನನ್ನು ಬಲ್ಲವರು ನನ್ನ ಬಗ್ಗೆ ಹೇಳೋ ಮಾತು ನಾನು ಡೌನ್ ಟು ಅರ್ಥ್ ಪರ್ಸನ್ನು (down to earth person) ಅಂತ. ನಾನು ಅವರಿಗೆಲ್ಲ ಹೇಳೋದು ಒಂದೇ ಮಾತು "ಸುತ್ತಿ ಬಳಸಿ ಹೇಳೋ ಬದಲು ನೇರವಾಗೇ ಹೇಳಿ ನಾ ಕುಳ್ಳಗೆ ಇದ್ದೀನಿ ಅಂತ ಹೇಳಿ. ನನಗೇನೂ ಬೇಸರವಿಲ್ಲ" ಅಂತ! ಇಂಥಾ ಪ್ರಸಂಗಗಳು ಹಲವಾರು ಇವೆ. ಒಂದೆರಡು ನಿಮ್ಮ ಮುಂದೆ.

ಹೀಗೇ ಒಮ್ಮೆ ಒಂದು ಕವಿ ಸಮ್ಮೇಳನಕ್ಕೆ ಹೋಗಿದ್ದೆ. ಹಲವಾರು ಹಿರಿಯ ಕವಿಗಳ ನಡುವೆ ನಾನೊಂದು ಮರಿ. ಮೊದಲ ನಾಲ್ವರು ಆಗುವ ವೇಳೆಗೆ ಮುಂದಿನ ಸರದಿ ನಿಮ್ಮದೇ ಎಂದು ಹೇಳಿದ್ದರಿಂದ ಸ್ಟೇಜ್ ಬಳಿ ಹೋಗಿ ಕಾದಿದ್ದೆ. ಒಬ್ಬರದ್ದು ಮುಗಿದು ನನ್ನನ್ನು ಸ್ಟೇಜ್ ಮೇಲೆ ಕರೆಯುವ ವೇಳೆಗೆ ಹೆಚ್ಚುವರಿ ಜನ ತಲೆಬಗ್ಗಿಸಿ ತಮ್ಮ ಮೊಬೈಲ್ ನೋಡುತ್ತಿದ್ದರು. ಹಾಗಾಗಿ ನಾನು ಸ್ಟೇಜ್ ಹತ್ತಿದ್ದು ಯಾರೂ ನೋಡಲಿಲ್ಲ.

ಕೂತಲ್ಲೇ ವಾಚ್ ನೋಡಿಕೊಂಡು ಮಿಸುಕಾಡುವವರ ನಡುವೆ ನನ್ನ ಕವನ ವಾಚಿಸತೊಡಗಿದೆ. "ಹೆಣ್ಣ ಮುಂದೆ ಮಂಡಿಯೂರು ಕೂರುವವರೆಲ್ಲಾ . ." ಎಂದು ಆರಂಭಿಸಿದೆ. ಹಾಲ್'ನ ಅರ್ಧ ಜನ ಸೈಲೆಂಟ್ ಮೋಡ್'ಗೆ ಹೋದರು. ನಂತರ "ಕೈಗೆ ಹೂವ ನೀಡುವವರಲ್ಲಾ" ಎಂದೆ. ಇಡೀ ಹಾಲ್'ನ ಗಿಜಿಗಿಜಿ ಸಂಪೂರ್ಣ ಬಂದ್ ಆಯ್ತು. ನನ್ನ ಕಂಚಿನ ಕಂಠದ ಶಕ್ತಿಯೇ ಇದಕ್ಕೆ ಕಾರಣ ಇರಬೇಕು. ನನಗೆ ಬಹಳಾ ಹೆಮ್ಮೆ ಆಯ್ತು. ಮತ್ತೊಮ್ಮೆ "ಹೆಣ್ಣ ಮುಂದೆ ಮಂಡಿಯೂರು ಕೂರುವವರೆಲ್ಲಾ . . ." ಎಂದೆ. ಹಾಲ್'ನ ಕೊನೆಯಿಂದ ಒಂದು ಪ್ರಶ್ನೆ ತೂರಿಬಂತು "ಕವನ ಓದುತ್ತಿರುವವರು ಯಾರು? ಸ್ಟೇಜ್ ಮೇಲೆ ಯಾರೂ ಕಾಣುತ್ತಲೇ ಇಲ್ಲಾ?" ಆಗಲೇ ಅರಿವಾಗಿದ್ದು 'ಪೋಡಿಯಂ ಹಿಂದೆ ನಿಂತಿದ್ದ ನಾನು ಯಾರ ಕಣ್ಣಿಗೂ ಕಾಣುತ್ತಿಲ್ಲಾ ಅಂತ! ಅಂದಿನಿಂದ ಇದುವರೆಗೂ ನಾನು ಪೋಡಿಯಂ ಹಿಂದೆ ನಿಂತಿಲ್ಲ. ಕವಿ ಸಮ್ಮೇಳನದ ನಂತರ ನನ್ನನ್ನು ಸ್ಟೇಜ್ ಮೇಲೆ ಯಾರೂ ಕರೆದಿಲ್ಲ, ಆದರೆ ಆ ಮಾತು ಬೇರೆ.

ನಾನು ಐದನೇಯವನಾಗಿ ಸ್ಟೇಜ್ ಹತ್ತಿದೆ ಎಂದು ಆಗಲೇ ಹೇಳಿದ್ನಲ್ಲಾ, ಇಲ್ಲೊಂದು ವಿಶೇಷವಿದೆ. ನನಗೂ ಸಂಖ್ಯೆ ಐದಕ್ಕೂ ಬಿಡಿಸಲಾರದ ನಂಟು. ಇಲ್ಲೂ ಅದು ಮುಂದುವರೆಯಿತು ಎಂಬುದು ಕಾಕತಾಳೀಯವೇನಲ್ಲ. ನಾನು ಹುಟ್ಟಿದ್ದೇ ಐದನೆಯ ತಿಂಗಳಲ್ಲಿ. ಬಹುಶ: ಅದಕ್ಕೆ ಇರಬೇಕು ಐದಡಿ ಮೇಲೆ ಹೋಗಲಿಲ್ಲ. ಅಮ್ಮ ಹೇಳ್ತಿದ್ರು ಏಪ್ರಿಲ್'ನಲ್ಲಿ ಹುಟ್ಟಬೇಕಿತ್ತು ಆದರೆ ಮೇ ತಿಂಗಳಿಗೆ ಹೋಯ್ತು ಅಂತ. ಅಲ್ಲೇ ಶುರುವಾಗಿದ್ದು ನನಗೂ ಐದು ಅನ್ನೋ ಸಂಖ್ಯೆಗೂ ನಂಟು. ನಾನು ಐದನೇ ತಿಂಗಳು ಅಂದರೆ ಮೇ ತಿಂಗಳಲ್ಲಿ ಹುಟ್ಟಿದ್ದು. ಮತ್ಯ್ಸ, ಕೂರ್ಮ, ವರಾಹ, ನಾರಸಿಂಹ ಅವತಾರಗಳಾದ ಮೇಲೆ ವಾಮನ ಐದನೆಯ ಅವತಾರ. ಅವನಂತೆ ನಾನೂ ವಾಮನ ಅವತಾರಿ.

ಈಗ ನಾನು ಹೇಗೆ ಕಾಣ್ತೀನಿ ಅನ್ನೋ ಐಡಿಯಾ ಬಂತು. ನೀವೇನಾದರೂ ನನ್ನನ್ನು ಸಂದರ್ಶನ ಮಾಡಿ 'ನಿಮಗಿಷ್ಟವಾದ ಬಣ್ಣ ಯಾವುದು' ಎಂದು ಕೇಳಿದರೆ, ರೋಸ್ಟ್ ಆಗಿರೋ ನನ್ನ ಮೈಬಣ್ಣ ಬಿಟ್ಟು ಮಿಕ್ಕೆಲ್ಲಾ ನನಗಿಷ್ಟ ಎಂಬ ಉತ್ತರ ನಿಮಗೆ ಸಿಗುತ್ತದೆ.

ನನಗೇನು ಇಷ್ಟ ಅಂದ್ರಾ? ತಿನ್ನೋದು ಅಂದ್ರೆ ನನಗೆ ಮಹಾ ಇಷ್ಟ. ಅಡುಗೆ ಮನೆಯಲ್ಲಿ ತಯಾರಾದ ಎಲ್ಲ ರುಚಿಕರವಾದ ಶಾಖಾಹಾರೀ ಪದಾರ್ಥಗಳೂ ನನಗೆ ಇಷ್ಟವಾದರೂ ಕೆಲವೊಮ್ಮೆ ನನಗೇ ಅನುಮಾನ. ನಾನು ಮಾಂಸಹಾರೀನಾ ಅಂತ! ಕಾರಣ ಇಷ್ಟೇ, ನನ್ನ ಕೈಲಿ ಸಿಕ್ಕಿಕೊಂಡವರು ಹೇಳೋದು ಒಂದೇ ಮಾತು 'ಅದೇನ್ ತಲೆ ತಿಂತೀರಪ್ಪಾ' ಅಂತ!

ಯಾವುದೋ 'ಚಹಾ'ದ ಜಾಹೀರಾತಿನಲ್ಲಿ ಬಣ್ಣ, ರುಚಿ, ಶಕ್ತಿಭರಿತ ಕಡು ಚಹಾದ ಬಗ್ಗೆ ಹೇಳಿದಂತೆ, ನನ್ನ ಬಣ್ಣ, ರುಚಿ, ಶಕ್ತಿ ನಿಮಗೆ ಅರಿವಾಯ್ತು ಅಂತ ನನ್ನನ್ನು ಚಹಾ ಮಾಡ್ಕೊಂಡ್ ಕುಡಿದುಬಿಡಬೇಡಿ ಅಥವಾ ಹುರಿದು ತಿಂದುಬಿಡಬೇಡಿ. ಓ! ಹುರಿದು ತಿನ್ನೋದು ಅಂದಾಗ ನೆನಪಾಯ್ತು ನೋಡಿ, ನನ್ನ ಹಲವಾರು ಆಸಕ್ತಿಗಳಲ್ಲಿ ಒಂದಾದ ವಿಚಾರ.

ಒಮ್ಮೆ ನಮ್ಮ ಕನ್ನಡ ಸಂಘದವರು ದೀಪಾವಳಿಯ ಅಂಗವಾಗಿ ಯಾವುದಾದರೂ ಕಾರ್ಯಕ್ರಮ ಕೊಡಿ ಎಂದು ಕಮಿಟಿಯವರು ಕೇಳಿದಾಗ, ಅಂಗಾಂಗಗಳೆಲ್ಲ ರೋಮಾಂಚನವಾಗಿ, ಸ್ಟಾಂಡ್-ಅಪ್ ಕಾಮಿಡಿ ಮಾಡುವ ಇರಾದೆ ವ್ಯಕ್ತಪಡಿಸಿದೆ. ಕೂತರೆ ಕಾಣೋಲ್ಲ ಅಂತ ಸ್ಟಾಂಡ್-ಅಪ್. ಕಮಿಟಿಯವರಿಗೆ ಸಲಹೆ ಇಷ್ಟವಾಗಿ ವಸ್ತುವಿಷಯವಾಗಿ 'ಸೆಲ್ಫ್-ರೋಸ್ಟಿಂಗ್' ಮಾಡಿ ಅಂತ ಸಲಹೆ ನೀಡಿದರು. ಅರ್ಥಾತ್ ನಮ್ಮನ್ನು ನಾವೇ ಹುರಿದುಕೊಳ್ಳೋದು ಅಥವಾ ನಮ್ ಕಾಲು ನಾವೇ ಎಳೆದುಕೊಳ್ಳೋದು ಅಂತ. ಕಾಲು ಎಂದಾಗ ಮತ್ತೊಂದು ವಿಷಯ ತಲೆಗೆ ಬಂತು ನೋಡಿ. ಈ ಸೆಲ್ಫ್-ರೋಸ್ಟಿಂಗ್ ಅನ್ನೋದು ಜಗನ್ಮೋಹಿನಿ ಸ್ಟೈಲ್ ಥರ . . . ತನ್ನದೇ ಕಾಲನ್ನು ಅಗ್ಗಿಷ್ಟಿಕೆಯಲ್ಲಿ ನೂಕಿಕೊಂಡು ಬೆಂಕಿ ಹಚ್ಚಿಕೊಂಡಂತೆ! ಹೊತ್ತಿಕೊಂಡರೆ ನಮ್ದೇ ಉರಿಯೋದು!!

ಹಲವಾರು ವಿಚಾರಗಳಲ್ಲಿ 'ಸೆಲ್ಫ್-ರೋಸ್ಟಿಂಗ್' ಒಳ್ಳೆಯದು. ಇನ್ಯಾರನ್ನೋ ಆಡಿಕೊಂಡು ಮಾತನಾಡಿ ತೊಂದರೆಗೆ ಸಿಳುಕಿಕೊಳ್ಳೋ ಆತಂಕ ಇರೋದಿಲ್ಲ. ನಮ್ಮನ್ನೇ ನಾವು ಹಾಸ್ಯ ಮಾಡಿಕೊಂಡಾಗ ಮತ್ತೊಬ್ಬರು ನಮ್ಮನ್ನು ಆಡಿಕೊಂಡಾಗ ಬೇಸರವಾಗುವುದಿಲ್ಲ. ಮುಂದೊಂದು ದಿನ ನರಕದಲ್ಲಿ ಆ ಯಮಭಟರು ಎಣ್ಣೆ ಬಾಂಡ್ಲಿಯಲ್ಲಿ ನನ್ನನ್ನು ಹಾಕಿ ರೋಸ್ಟ್ ಮಾಡುವಾಗ ಅಷ್ಟೇನೂ ಹಿಂಸೆಯಾಗೋಲ್ಲ. ಆದರೆ ಒಂದೇ ಪ್ರಾಬ್ಲಮ್ಮು! ಭೂಮಿಗೆ ಬರುವಾಗ್ಲೇ ಸೀಕಲು ಗಾರಿಗೆ ಬಣ್ಣದಲ್ಲಿ ಇಳಿದಿರುವ ನಾನು ಈ ರೀತಿ ನಾಲ್ಕು ಸಾರಿ ಸೆಲ್ಫ್-ರೋಸ್ಟಿಂಗ್ ಮಾಡಿದರೆ ಸೂರ್ಯನ್ ಬೆಳಕಿಗೂ ನಾನು ಕಾಣಿಸದೆ ಹೋದ್ರೆ . . . ಯೋಚಿಸಬೇಕಾದ್ದ ವಿಚಾರ, ಅಲ್ವೇ?

ನನ್ನ ಬಗೆಗಿನ ಇದಿಷ್ಟು ವಿಚಾರ ತಿಳಿಸಿ ಸದ್ಯಕ್ಕೆ ಹೊರಟು ಮುಂದಿನ (ಗುರು)ವಾರ ಮತ್ತೆ ಬರ್ತೀನಿ! ಸೆಲ್ಫ್-ರೋಸ್ಟಿಂಗ್ ಬಿಟ್ಟು ಬೇರೆ ವಿಷಯದೊಂದಿಗೆ. ಅಂದ ಹಾಗೆ, ನನ್ನ ಹೊಸ ಅಂಕಣದ ಹೆಸರು 'ನವರಸಾಯನ'!

English summary
Oneindia Kannada is happy to introduce Srinath Bhalle, resident of Richmond, USA, our new columnist. In fact, he has introduced himself in a very humorous and entertaining way. We welcome all the Kannadigas in world to read, enjoy and spread laughter all over social media. Welcome to Oneindia Kannada Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X