ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಚಂದಕ್ಕಿಂತ ಚಂದ ನೀನೇ ಸುಂದರ...

|
Google Oneindia Kannada News

ಹಲವು ದಿನಗಳ ಮುಂಚೆ ಒಂದು ವಿಶಿಷ್ಟ ಕೋರಿಕೆಯೊಂದು ಬಂತು. ಒಂದು ಚಂದ ಬರಹ ಬರೀತೀರಾ? ಅಂತ. ಮೆಸೇಜಿನಲ್ಲಿ ಬಂದ ಕೋರಿಕೆಯು ಕೊಂಚ ಗೊಂದಲ ಮೂಡಿಸಿದ್ದು ಸಹಜ. ಹೀಗೇಕಾಯ್ತು ಎಂದರೆ ಯಾವುದೇ ಒಂದು ವಾಕ್ಯವನ್ನು ಓದುವಾಗ ಅಲ್ಲಿ ನಮ್ಮ ಮನದ ಭಾವನೆಗಳು ಸೇರಿಕೊಳ್ಳುತ್ತೆ. ಆದರೆ ಅದೇ ವಾಕ್ಯವನ್ನು, ಆಡುವವರಿಂದ ಕೇಳಿದಾಗ ಅವರ ಅದೇ ಭಾವದಲ್ಲಿ ಅರ್ಥವಾಗುತ್ತದೆ.

ಈ ವಾಕ್ಯ ಓದಿದ ಕೂಡಲೇ ಮೊದಲನೆಯ ಪ್ರಶ್ನೆ ಮೂಡಿದ್ದೇ, ನಾನು ಈವರೆಗೂ ಬರೆದದ್ದು ಚಂದ ಇರಲಿಲ್ಲವೇ? ಈ ಓದುಗರಿಗೆ ನನ್ನ ಬರಹ ಇಷ್ಟವಾಗಲಿಲ್ಲವೇ? ಅಥವಾ ನೋವಾಯಿತೇ? ಕಾಂಪ್ಲಿಕೇಟೆಡ್ ಅನ್ನಿಸಿತೇ? ತೀರಾ ಬಾಲಿಶ ಅನ್ನಿಸಿತೇ? ಏನಿರಬಹುದು ಅಂತ ತಲೆ ಕೆರೆದುಕೊಳ್ಳುವ ಹಾಗಾಗಿದ್ದು ಸುಳ್ಳಲ್ಲ.

ಶ್ರೀನಾಥ್ ಭಲ್ಲೆ ಅಂಕಣ: ಜೀವನದಲ್ಲಿ form ಕಳೆದುಕೊಳ್ಳೋದು ಅಂತ ಹೇಳಿದರೆ ಏನಿರಬಹುದುಶ್ರೀನಾಥ್ ಭಲ್ಲೆ ಅಂಕಣ: ಜೀವನದಲ್ಲಿ form ಕಳೆದುಕೊಳ್ಳೋದು ಅಂತ ಹೇಳಿದರೆ ಏನಿರಬಹುದು

ಆಡುವ ಮಾತುಗಳೆಲ್ಲಾ ಆಡಿದ ಭಾವದಂತೆಯೇ ಇದ್ದಿದ್ದರೆ ಜಗತ್ತೇ ಬೇರೆ ರೀತಿ ಇರುತ್ತಿತ್ತು. ಬೇಡಾ ಬಿಡಿ, ಟಿವಿ ಧಾರಾವಾಹಿಗಳ ರೀತಿ ಆಲೋಚಿಸಬೇಡಿ. ಹೇಳೋದೊಂದು ಆದರೆ ಮನದಲ್ಲಿ ಇರುವುದೇ ಮತ್ತೊಂದು ಎಂಬ ಪಾತ್ರಗಳೇ ಹೆಚ್ಚು. ಒಂದು ವಾಕ್ಯ ಅನ್ನೋದು ಅದೆಷ್ಟು ಗಾಢವಾದ ಚಿಂತೆಗಳನ್ನೂ ಹುಟ್ಟುಹಾಕಬಹುದು ಅಂತ ಅರಿವಾಗುತ್ತದೆ. ಚಿಂತನೆ ಆಮೇಲಿನ ವಿಷಯವಾಯ್ತು. ಈಗ ಈ ವಿಷಯವನ್ನೆಲ್ಲಾ ಬಿಟ್ಟುಹಾಕಿ, ಕೋರಿಕೆಯ ಬಗ್ಗೆ ಮಾತನಾಡೋಣ.

Srinath Bhalle Column: A Writing About Beauty In Navarasayana

ಕೋರಿಕೆಗೆ ನನ್ನ ಪ್ರಶ್ನೆ ಹಾಕಿದೆ, ಈವರೆಗೂ ನಾನು ಬರೆದದ್ದು ನಿಮಗೆ ಇಷ್ಟವಾಗಲಿಲ್ಲವೇ? ಕೊರತೆ ಹೇಳಿದರೆ ತಿದ್ದಿಕೊಳ್ಳುತ್ತೇನೆ ಅಂತ. ಅದಕ್ಕವರು ಹೇಳಿದ್ದು ಕೇಳಿ ನಗು ಬಂದಿದ್ದು ಸುಳ್ಳಲ್ಲ. ನಾನು ಹೇಳಿದ್ದು ಹಾಗಲ್ಲಾ, ತಪ್ಪು ತಿಳೀಬೇಡಿ, ಚಂದದ ಬಗ್ಗೆ ಬರೀರಿ. ಚಂದ ಬರೀರಿ, ಪ್ರಶ್ನೆ ಹಾಕಬೇಡಿ ಅಂತ.

ಒಂದು ಚಂದ ಬರಹ ಬರೀತೀರಾ ಎಂಬುದರ ಬದಲು, ಚಂದದ ಬಗ್ಗೆ ಬರೀತೀರಾ ಅಂದಿದ್ರೆ ಚೆನ್ನಿತ್ತು. ವ್ಯಾಕರಣ ದೋಷ ಅತ್ಲಾಗೆ ಇಟ್ಟು ಅವರ ಮನಸ್ಸಿನ ಭಾವನೆಯನ್ನು ಗೌರವಿಸಿ ಚಂದದ ಬರಹ ಬರೆಯೋಣ ಅನ್ನಿಸಿ, ಆಯ್ತು ಅಂದಿದ್ದೇ ಈ ಪುಟ್ಟ ಪ್ರಯತ್ನ.

ಚಂದ ಎಂದ ಕೂಡಲೇ ಅದಕ್ಕೆ ಸಂಬಂಧಿಸಿದ೦ತೆ ತಲೆಗೆ ಬರುವ ವಿಷಯಗಳು ಹಲವಾರು. ಅದರಲ್ಲಿ ಮೊದಲಿಗೆ ನಿಲ್ಲೋದು ಪ್ರಕೃತಿ ಮತ್ತು ಕನ್ನಡಿ. ಹೆಣ್ಣು ಎಂದರೆ ಪ್ರಕೃತಿ ಎಂಬುದು ನಿಮಗೂ ಗೊತ್ತು ಹಾಗಾಗಿ ಇಲ್ಲಿ ಪ್ರಕೃತಿ ಎಂದರೆ ಯಾವ ಅರ್ಥಬೇಕಾದರೂ ತೆಗೆದುಕೊಳ್ಳಬಹುದು.

ನವರಸಾಯನ ಅಂಕಣದಲ್ಲಿ ನವರಸಗಳ ಬಗ್ಗೆ ಬರೆಯದಿದ್ದರೆ ಹೇಗೆ? ಹೆಣ್ಣು ಸೌಂದರ್ಯದ ಪ್ರತೀಕ. ಶೃಂಗಾರ ಮಾಡಿಕೊಳ್ಳುವುದಕ್ಕೆ ಹೆಣ್ಣು ಎಂದೂ ಹಿಂದೆ ಬೀಳುವುದಿಲ್ಲ. ಸಿಂಗರಿಸಿಕೊಂಡ ಹೆಣ್ಣು ಚಂದದ ಪ್ರತೀಕ. ಸರ್ವಾಲಂಕಾರ ಭೂಷಿತೆಯಾಗಿ ಬಂದವಳು ಒಂದು ಫೋಟೋ ತೆಗೀರಿ ಎಂದಾಗ ಆಗೋದಿಲ್ಲ ಎಂಬ ವೀರ ಗಂಡನ್ನು ನಾನು ನೋಡಿಲ್ಲ ಬಿಡಿ.

ಹಾಗೆ ಅಂದಿದ್ದೇ ಆದರೆ, ಕಟ್ಟಿದ ತಲೆಗೂದಲನ್ನು ಬಿರಿಹಾಕಿಕೊಂಡು ಭೀಭತ್ಸ ತೋರಬಹುದು. ಆ ಸನ್ನಿವೇಶವನ್ನು ಅಪ್ಪಿತಪ್ಪಿ ಕೂಡಾ ಹಾಸ್ಯ ಎಂದುಕೊಂಡರೆ ಅದೇ ಸನ್ನಿವೇಶವೂ ಭಯಾನಕವೂ ಆಗಬಹುದು. ರೌದ್ರ ರೂಪ ತಾಳಿದ ಹೆಣ್ಣಿಂದ ಕಾಪಾಡಲು ಅದೇ ಹೆಣ್ಣೇ ಕರುಣಾ ತೋರಬೇಕು. ಇದು ಹೇಗೆ ಎಂದರೆ ಶಪಿಸಿದವರೇ ಪರಿಹಾರ ನೀಡುವಂತೆ. ಎಲ್ಲವೂ ಸರಿ ಹೋಗಿ ಶಾಂತ ವಾತಾವರಣ ಮೂಡಿರುವ ಮನೆ ನಿಜಕ್ಕೂ ಅದ್ಭುತ.

ಸಿಂಗರಿಸಿಕೊಂಡ ಹೆಣ್ಣು ಎಂದರೆ ಹೇಗೆ? ಭರ್ಜರಿ ಸೀರೆಯುಟ್ಟು, ಸರ್ವಾಭರಣ ಶೋಭಿತೆಯಾಗಿ ಶೋಭಿಸುವ ಎರಡು-ಕನಸು ಚಿತ್ರದ ತಂನಂ ತಂನಂ ಹಾಡುವ ಕಲ್ಪನಾರಂತೆ ಆಗಿರಬೇಕಿಲ್ಲ. ತಲೆ ಸ್ನಾನ ಮಾಡಿ, ಸಿಂಪಲ್ ಆದ ಸೀರೆಯುಟ್ಟು, ದೇವರ ಮುಂದಿರುವ ಕುಂಕುಮ ಇಟ್ಟುಕೊಂಡು, ತನ್ನ ನೀರ್ಜಡೆಗೆ ತೆಳುವಾದ ಬಟ್ಟೆ ಬಿಗಿದು ಅಥವಾ ಕೂದಲು ಇಳಿಬಿಟ್ಟು, ಆರತಿ ತಟ್ಟೆ ಹಿಡಿದು ತುಳಸೀ ಪೂಜೆ ಮಾಡುವ ಹೆಣ್ಣು ಅತ್ಯಂತ ನಿರಾಭರಣ ಸುಂದರಿ.

ಇದೇ ನಿರಾಭರಣ ಸುಂದರಿಗೆ ಒಂದಷ್ಟು ಅಲಂಕರಿಸಿದರೆ ಹೇಗೆ? ನಾಚಿಕೊಳ್ಳಬೇಡಿ ಆಯ್ತಾ. ಕೂದಲು ಬಿಗಿದಿದ್ದರೆ ಸಡಿಲಿಸಿ ಇಳಿಬಿಟ್ಟು ಸಾಂಬ್ರಾಣಿ ಹೊಗೆಯಿಂದ ತಲೆಗೂದಲನ್ನು ಕೊಂಚ ಒಣಗಿಸಿ. ಕೆಲವರಿಗೆ ಒದ್ದೆ ತಲೆಗೂದಲು ಹಾಗೆಯೇ ಬಿಟ್ಟಿದ್ದರೆ ತಲೆನೋವು ಬರುತ್ತದೆ. ಆಮೇಲೆ, ಒಂದು ಹೇರ್ಪಿನ್ ತೆಗೆದುಕೊಂಡು ಅರ್ಧ ಮೊಳ ಮಲ್ಲಿಗೆ ಮುಡಿಸಿ. ಚಿಕ್ಕ ವಜ್ರದ ಹರಳಿನ ಮೂಗುತಿಯನ್ನು ಅಥವಾ ಪುಟ್ಟ ಬಂಗಾರದ ಮೂಗುತಿಯನ್ನು ಸಿಕ್ಕಿಸಿ. ಮೂಗನ್ನು ಎಲ್ಲರೂ ಚುಚ್ಚಿಕೊಂಡವರೇ ಇರುವುದಿಲ್ಲ ನೋಡಿ ಹಾಗಾಗಿ ಸಿಕ್ಕಿಸಿ ಎಂದೆ. ಇದೆಲ್ಲದರ ಜೊತೆಗೆ ಬಂಗಾರದ ಕಿವಿಯೋಲೆ ಇದ್ದರೆ ಚೆನ್ನ, ವಜ್ರದ ಬೆಂಡೋಲೆ ಬೇಡಾ ಬಿಡಿ.

ಕರಿಮಣಿ ಸರದೊಡನೆ ಒಂದೆಳೆ ಅವಲಕ್ಕಿ ಸರ ಹಾಕಿ ಸಾಕು. ಅವಲಕ್ಕಿ ಸರ ಇಲ್ಲವಲ್ಲಾ ಎಂದರೆ ಸಣ್ಣಕ್ಕಿ ಸರ ಹಾಕಿ ಸಾಕು. ಇದಾದ ಮೇಲೆ ಸೊಂಟಕ್ಕೆ ಡಾಬು, ತಲೆಗೆ ಕಿರೀಟ, ಕೈಗಳಿಗೆ ಕತ್ತಿ-ಗುರಾಣಿ ಕೊಡಬೇಡಿ. ಇದೇನೂ ನಾಟಕವಲ್ಲಾ ಜೀವನ ನಾಟಕ. ಹಾಗಾಗಿ ಸೀದಾ ಪಾದಕ್ಕೆ ಬೀಳಿ, ಆದರೆ ನಿಧಾನವಾಗಿ. ವಜ್ರದಿಂದ ಬಂಗಾರಕ್ಕೆ ಬಂದು, ಈಗ ಬೆಳ್ಳಿಗೆ ಬರೋಣ ಅಲ್ಲವೇ? ಗೊತ್ತಾಯ್ತಲ್ಲ, ಆ ಜಿಂಕೆ ಕಣಕಾಲಿಗೆ ಬೆಳ್ಳಿಗೆಜ್ಜೆಯನ್ನು ಕಟ್ಟಿ, ಮೂರುಸುತ್ತು ಇಲ್ಲಾ ಅಂದ್ರೂ ಬೇಡ ಕನಿಷ್ಠ ಒಂದು ಸುತ್ತಿನ ಬೆಳ್ಳಿ ಕಾಲುಂಗರ ತೊಡಿಸಿ, ಒಂದು ಸಣ್ಣ ಲೇಟೆಸ್ಟ್ ಹಾಡನ್ನು ಹಾಡಿಬಿಡಿ. ಯಾವುದು ಅಂದ್ರಾ? ಶೃಂಗಾರದ ಹೊಂಗೆಮರ ಹೂಬಿಟ್ಟಿದೆ.. ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ.. ಅಂತ ಹಾಡಿಬಿಡಿ.

ಅವೆಲ್ಲ ನಮಗಾಗಲ್ಲಪ್ಪಾ! ಎದ್ರೆ ಕೂತ್ರೆ ಸೊಂಟ ನೋಯ್ತದೆ ಅಂತ ಹೇಳೋದಾದ್ರೆ - ಚಂದ ಚಂದ ಸಂಗಾತಿ ನೋಟವೇ ಚಂದ, ಅಂದ ಅಂದ ಗುಲಾಬಿ ತೋಟವೇ ಅಂದ, ಅಂತ ಒಂದು ಚಂದದ ಹಾಡನ್ನೇ ಹಾಡಬನ್ನಿ. ಅರರೇ! ನಾವು ಮುಡಿಸಿದ್ದು ಮಲ್ಲಿಗೆ ಹೂವು, ಗುಲಾಬಿ ಹಾಡು ಹೇಳಿದರೆ ಆಭಾಸವಾಗುವುದಿಲ್ಲವೇ? ಆಭಾಸವಾಗಿ ರಸಭಂಗವಾದೀತು ಎಂಬ ಭೀತಿ ಇದ್ದರೆ ಈ ಹಳೆಯ ಹಾಡನ್ನು ಹೇಳೋಣ. ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ, ನಿನಗೆಂದೇ ಬರೆದ ಪ್ರೇಮದ ಓಲೆ.

ಹೂವಿನ ವಿಷಯ ಆಯ್ತು ಆದರೆ ತಲೆಗೂದಲನ್ನು ಹರವಿದ್ದು ಮರೆತಿರಾ? ಆ ಚಂದದ ಬಗ್ಗೆ ಹೇಗೆ ಹೇಳೋದು ಎಂದಿರಾ? ಹೀಗೆ ಹಾಡಿ - ನನ್ನವಳು ನನ್ನೆದೆಯಾ ಹೊನ್ನಾಡನ್ನಾಳುವಳು ಬೆಳಗುಗೆನ್ನೆ ಚೆಲುವೆ ನನ್ನಾ ಹುಡುಗಿ ಎಂದು ಆರಂಭಿಸಿ, ಅವಳೊಮ್ಮೆ ಹೆರಳು ಕೆದರಿ ಕಪ್ಪುಗುರುಳನು ಬೆನ್ನ ಮೇಲೆಲ್ಲಾ ಹರಡಿದರೆ ಎಂಬ ಪ್ರೇಮಕವಿ ಕೆ.ಎಸ್ ನರಸಿಂಹಸ್ವಾಮಿಯವರ ಹಾಡನ್ನು ಮುಂದುವರೆಸಿ ಹಾಡಿದರೆ, ಅಲ್ಲೊಂದು ರಸಸಂಜೆಯಾಗುವುದರಲ್ಲಿ ಸಂದೇಹವೇ ಇಲ್ಲ.

ಹೆಣ್ಣು ನಿರಾಭರಣ ಸುಂದರಿಯಾಗಿದ್ದರೂ, ಒಂದು ಚಂದದ ಹಾಡನ್ನು ಹಾಡುವವ ಪೈಲ್ವಾನ್ ಆಗಿದ್ದರೂ, ಚಂದಕಿಂತ ಚಂದ ನೀನೇ ಸುಂದರ ಎಂದು ಹಾಡಿದಾಗ ಸಿಂಡರಿಸಿಕೊಂಡ ಸಿಂಡ್ರೆಲ್ಲಾ ಕೂಡಾ ಸಿಂಗರಿಸಿಕೊಂಡು ನಲ್ಲನ ತೋಳ್ತೆಕ್ಕೆಯಲ್ಲಿ ಕರ್ಪೂರದಂತೆ ಕರಗುವುದರಲ್ಲಿ ಸಂಶಯ ನನಗಿಲ್ಲ.

ಇದು ಚಂದದ ಬರಹ ಅಲ್ಲ ಎನಿಸಿದರೆ ಶೃಂಗಾರ ಬರೆಯಲು ನನಗೆ ಗೊತ್ತಿಲ್ಲ ಅಂತಾಯ್ತು, ನೀವೇನಂತೀರಾ?

English summary
There are a number of things that come to mind related to beauty. First stand out is nature and mirror.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X