ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್

By Staff
|
Google Oneindia Kannada News

Laura Elizabeth Ingalls Wilder
ಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!

* ಶ್ರೀನಿಧಿ ಡಿ. ಎಸ್.

ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು ಎಂದಿಗೂ ಮರೆತು ಹೋಗಲಾರದಂತಹವಾಗಿದ್ದವು. ಹಾಗಾಗಿಯೇ ಅವಳು ತಾನು ಕಂಡು ಅನುಭವಿಸಿದ್ದನ್ನು ಕತೆಗಳ ರೂಪದಲ್ಲಿ ಮಕ್ಕಳಿಗಾಗಿ ಪ್ರೀತಿಯಿಂದ ಬರೆದಳು. ಮತ್ತು ಅವು ಅವಳಿಗೇ ಅಚ್ಚರಿ ತರುವಷ್ಟು ಬೇಗ ಜಗತ್ ಪ್ರಸಿದ್ಧವಾಗಿಬಿಟ್ಟವು. ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾದವು ಮತ್ತು ಇಂದಿಗೂ ಅನುವಾದಗೊಳ್ಳುತ್ತಲೇ ಇವೆ. ಆಕೆಯ ಹೆಸರು ಲಾರಾ ಇಂಗಲ್ಸ್ ವೈಲ್ಡರ್ ಮತ್ತು ಅವಳು ಬರೆದಿದ್ದು,'ಲಿಟಲ್ ಹೌಸ್' ಕಥಾ ಸರಣಿಯನ್ನು.

ಲಾರಾ ಹುಟ್ಟಿದ್ದು 1867ರಲ್ಲಿ, ಅಮೆರಿಕದಲ್ಲಿ. ಅಕೆಯ ಬಾಲ್ಯ ಅಮೆರಿಕದ ಕಾಡುಗಳ ಮಧ್ಯದ ಮನೆಯಲ್ಲಿ ಕಳೆಯಿತು. ಅಲ್ಲಿನ ಜನಪದ ಸಂಸ್ಕೃತಿ ಮತ್ತು ಕಿನ್ನರ ಲೋಕಕ್ಕೆ ಸಮ ಎನಿಸುವ ವಾತಾವರಣದಲ್ಲಿ ಲಾರಾ ಬೆಳೆದಳು. ಮುಂದೆ, ಬಹಳ ಕಾಲ ಕಳೆದ ಮೇಲೆ, ಅಮೆರಿಕ ಅಭಿವೃದ್ಧಿಯ ಭರದಲ್ಲಿ ತನ್ನ ಹಳೆಯದೆಲ್ಲವನ್ನು ಕಳೆದುಕೊಂಡು ಸಾಗುತ್ತಿದ್ದಾಗ ಆಕೆಗೆ ತನ್ನ ಬಾಲ್ಯದ ಸೊಗಸನ್ನು ಇಂದಿನ ಪೀಳಿಗೆಯ ಮಕ್ಕಳ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು.

ಹೀಗಾಗಿ, ಮೊದಲಿಗೆ, 1932ರಲ್ಲಿ, ಲಿಟಲ್ ಹೌಸ್ ಇನ್ ದಿ ಬಿಗ್ ವುಡ್ಸ್- ಅನ್ನುವ ಮಕ್ಕಳ ಕಾದಂಬರಿ ಬರೆದಳು. 1870 ಮತ್ತು 1880 ದಶಕದ ಅಮೇರಿಕ ಹೇಗಿತ್ತು, ಅಂದಿನ ಜೀವನ ಶೈಲಿ ಹೇಗಿತ್ತೆನ್ನುವುದನ್ನು ಲಾರಾ, ಬಾಲ್ಯ ಕಾಲದ ಲಾರಾನ ಮೂಲಕವೇ ಕಥೆಯಲ್ಲಿ ಹೇಳಿಸಿದಳು.

ಲಾರಾ, ಅವಳ ಅಪ್ಪ, ಅಮ್ಮ,ಅಕ್ಕ ಮತ್ತು ತಂಗಿ ಮಾತ್ರ ಒಂದು ಮರದ ದಿಮ್ಮಿಗಳನ್ನು ಜೋಡಿಸಿ ಮಾಡಿದ ಮನೆಯಲ್ಲಿ, ವಿಸ್ಕಾನ್ಸಿನ್ ಪ್ರಾಂತ್ಯದ ಕಾಡಿನಂಚಿನಲ್ಲಿ ವಾಸಮಾಡುವ ಕಥೆ ಅದು. ಆಕೆಗೆ ತಿಳಿದ ಹಾಗೆ ಅಲ್ಲಿ ಸುತ್ತ ಮುತ್ತ ಯಾರೂ ವಾಸ ಮಾಡುವುದಿಲ್ಲ. ಮನೆಯ ಸುತ್ತ ಉದ್ದನೆಯ ಕರಿಯ ಮರಗಳಷ್ಟೇ ಕಾಣುತ್ತವೆ. ಮನುಷ್ಯರ ಸುಳಿವಿಲ್ಲ. ಯಾವಾಗಾದರೂ ವಿಶೇಷ ಸಂದರ್ಭಗಳಲ್ಲಿ ಅಪರೂಪಕ್ಕೊಮ್ಮೆ ಬಂಡಿಯಲ್ಲಿ ಬರುವ ನೆಂಟರು ಬಿಟ್ಟರೆ ಬೇರಾರೂ ಬರುವುದೂ ಇಲ್ಲ.

ಅಪ್ಪನ ಶಿಕಾರಿ, ಅಮ್ಮನ ರುಚಿರುಚಿ ಅಡುಗೆ, ಅಕ್ಕನ ಜೊತೆಗಿನ ಕಲಿಕೆ, ಭಾನುವಾರಗಳ ಪ್ರಾರ್ಥನೆ ಮತ್ತು ಕಲಿಕೆ, ಲಾರಾ ಮತ್ತವಳ ಗೊಂಬೆ, ಚಳಿಗಾಲದ ದಿನಗಳ ಮಂಜಿನ ಹೊದಿಕೆಗಳು.. ಹೀಗೆ ತನ್ನ ಸುತ್ತ ಕಂಡಿದನ್ನು ಲಾರಾ ತನ್ನ ಬಾಲ್ಯ ಸಹಜ ಕುತೂಹಲದೊಡನೆ ವಿವರಿಸುತ್ತ ಹೋಗುತ್ತಾಳೆ. ಓದುತ್ತ ಕುಳಿತ ಯಾರೇ ಆದರೂ, ಮೆಲ್ಲ ಮೆಲ್ಲನೆ ಅಮೆರಿಕದ, ಆ ಕಾಲದ, ಮರದ ದಿಮ್ಮಿಯ ಮನೆಯೊಳಕ್ಕೇ ಮೆಲ್ಲನೆ ಹೊರಟುಬಿಡುವಂತೆ ಮಾಡುವ ಮಾಯಾ ಶಕ್ತಿ ಆ ಬರಹದಲ್ಲಿದೆ.

ಹೀಗಾಗಿ ಪುಟ್ಟ ಹುಡುಗಿಯೊಬ್ಬಳು ತನ್ನ ಬೆರಗುಗಣ್ಣುಗಳಲ್ಲಿ ತನ್ನೆದುರಿನ ಜಗತ್ತನ್ನ ನೋಡಿ ಅಪ್ಪ ಅಮ್ಮ, ಹೊರಗಿನ ಕಾಡು, ಪೇಟೆ, ಶಿಕಾರಿಗಳನ್ನು ವರ್ಣಿಸುತ್ತ ಹೋಗುವ ಆಕೆಯ ಮೊದಲ ಕಾದಂಬರಿಗೇ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಅಮೇಲೆ, 1943ರವರೆಗೆ ಒಟ್ಟು ಎಂಟು ಪುಸ್ತಕಗಳನ್ನು ಲಾರಾ ಬರೆದಳು. ಲಿಟಲ್ ಹೌಸ್ ಇನ್ ದಿ ಪ್ರೈರಿ, ಆನ್ ದ ಬ್ಯಾಂಕ್ ಆಫ್ ಪ್ಲಮ್ ಕ್ರೀಕ್.. ಹೀಗೆ. ಈ ಪುಸ್ತಕಗಳೆಲ್ಲ ಅಮೆರಿಕದ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಹುಚ್ಚು ಹಿಡಿಸಿತು. ಆ ಕಾಲದಲ್ಲೇ ಜಗತ್ತಿನ ಇತರ ಭಾಷೆಗಳಿಗೂ ಈ ಸರಣಿ ಅನುವಾದಗೊಂಡಿತು.

ಲಾರಾ ಇಂಗಲ್ಸ್ ವೈಲ್ಡರ್ ಇರುವ ಮನೆ ಕೂಡ ಆವಾಗಲೇ ಪ್ರವಾಸೀ ತಾಣವಾಗಿ ಬಿಟ್ಟಿತು. ಲಾರಾ ತನ್ನ ತೊಂಬತ್ತರ ತುಂಬು ವಯಸ್ಸಿನಲ್ಲಿ ತೀರಿಕೊಂಡ ನಂತರ ಅವಳಿದ್ದ ಮನೆಯನ್ನು ಸ್ಮಾರಕವಾಗಿಸಲಾಯಿತು. ಇಂದಿಗೂ ಕೂಡ ಲಾರಾಳ ಮನೆಗೆ ಪ್ರವಾಸಿಗರು ತೆರಳುತ್ತಾರೆ. ಮತ್ತು ಅಕೆ ಬರೆದ ಪುಸ್ತಕಗಳನ್ನು ಜಗತ್ತಿನಾದ್ಯಂತ ಇವತ್ತಿಗೂ ಓದುತ್ತಿದ್ದಾರೆ.

ಈಗ ಯಾಕೆ ಈಕೆ ನೆನಪಾದಳು ಅನ್ನುತ್ತೀರಾ? ಲಾರಾ ಇಂಗಲ್ಸ್ ಬರೆದಿರುವ ಸರಣಿಯ ಮೊದಲ ಪುಸ್ತಕದಲ್ಲೇ, ಆಕೆ ಕ್ರಿಸ್ಮಸ್ ಸಮಯದ ಚಳಿಗಾಲವನ್ನು ವರ್ಣಿಸುತ್ತಾಳೆ. ಲಾರಾ ಇಂಗಲ್ಸ್ ವೈಲ್ಡರ್ ನ ಕೃತಿಗಳನ್ನು ಕನ್ನಡಕ್ಕೆ ಬಹಳ ಹಿಂದೆಯೇ ಅನಂತ ನಾರಾಯಣ ಅವರು ಅನುವಾದಿಸಿದ್ದಾರೆ. ಅವರದೇ ಅನುವಾದದ, 'ದೊಡ್ಡ ಕಾಡಿನಲ್ಲಿ ಪುಟ್ಟ ಮನೆ' ಕೃತಿಯಿಂದ ಒಂದೆರಡು ಪ್ಯಾರಾಗಳು ನಿಮಗಾಗಿ.

"ಕ್ರಿಸ್ಮಸ್ ಹತ್ತಿರವಾಯಿತು".

ಅ ಪುಟ್ಟ ಮರದ ದಿಮ್ಮಿಗಳ ಮನೆ ಈಗ ಹಿಮದ ರಾಶಿಯಲ್ಲಿ ಹೂತು ಹೋಗಿತ್ತು. ಹಿಮದ ಗಾಳಿಯು ಗೋಡೆಗಳು ಮತ್ತು ಕಿಟಕಿಗಳಿಗೆ ಹೊಡೆದು ಅಲ್ಲಿ ಹಿಮದ ಗುಡ್ಡೆಗಳಾಗಿದ್ದವು. ಬೆಳಗ್ಗೆ ಪಾ ಮುಂಬಾಗಿಲು ತೆರದರೆ ಅಲ್ಲಿ ಲಾರಾಳ ತಲೆಯ ಸಮಕ್ಕೆ ಮಂಜಿನ ಗೋಡೆ. ಪಾ ಅಗ ಗುದ್ದಲಿ ತೆಗೆದುಕೊಂಡು ಅದನ್ನೆಲ್ಲ ಬಾಚಿ ತೆಗೆದು ಅ ಕಡೆ ಹಾಕುವನು. ಅಲ್ಲಿಂದ ಅವನು ಕೊಟ್ಟಿಗೆಗೆ ಹೋಗುವ ದಾರಿಯಲ್ಲಿನ ಮಂಜನ್ನೂ ಎತ್ತಿ ಹಾಕಿದ. ಅಲ್ಲಿ ದನಗಳೂ, ಕುದುರೆಗಳೂ ಬೆಚ್ಚಗೆ ನೆಮ್ಮದಿಯಾಗಿರುತ್ತಿದ್ದವು.

ಹಗಲೆಲ್ಲ ಹೊಳೆಯುತ್ತಿತ್ತು, ತಿಳಿಯಾಗಿರುತ್ತಿತ್ತು. ಕಿಟಕಿಯ ಪಕ್ಕದ ಕುರ್ಚಿಯ ಮೇಲೆ ನಿಂತು ಲಾರ, ಮೇರಿ ಹೊರಗೆ ಹೊಳೆಯುವ ಮರಗಳ ಮೇಲೆ ಹೊಳೆಯುವ ಮಂಜನ್ನು ನೋಡುತ್ತಿದ್ದರು. ಆ ಮರಗಳ ಬತ್ತಲೆ ಕರಿಯ ಕೊಂಬೆಗಳ ಮೇಲೆಲ್ಲಾ ಮಂಜು ದಟ್ಟವಾಗಿ ಬಿದ್ದಿತ್ತು, ಅದು ಸೂರ್ಯನ ಬೆಳಕಲ್ಲಿ ಹೊಳೆಯುತ್ತಿತ್ತು. ಮಂಜಿನ ಹರಳುಗಳು ಮನೆಯ ಛಾವಣಿಯ ಅಂಚಿಂದ, ಕೆಳಗೆ ಬಿದ್ದ ಮಂಜಿನ ರಾಶಿಯವರೆಗೆ ಇಳಿಬಿದ್ದಿದ್ದವು, ಇಳಿ ಹಳುಕುಗಳಂತೂ ಲಾರಾಳ ರಟ್ಟೆ ಗಾತ್ರದವು! ಅವು ಗಾಜಿನ ಹಾಗಿದ್ದು, ಹೊಳೆ ಬೆಳಕನ್ನು ಚೆಲ್ಲುತ್ತಿದ್ದವು.

ಕೊಟ್ಟಿಗೆಯಿಂದ ಪಾ ಹಿಂದಿರುಗಿದಾಗ ಅವನ ಉಸಿರು ಗಾಳಿಯಲ್ಲಿ ಹೊಗೆಯಂತೆ ಹಾಗೆಹಾಗೆಯೇ ನಿಲ್ಲುತ್ತಿತ್ತು, ಉಸಿರು ದಟ್ಟ ಮೋಡದಂತೆ ಬಾಯಿಂದ ಬಂದು ಅವನ ಗಡ್ಡ ಮೀಸೆಗಳ ಮೇಲೆ ಹೆಪ್ಪುಗಟ್ಟಿ ಹಿಮದ ಬಿಳಿ ಹಳಕುಗಳಾಗಿ ಅಂಟಿಕೊಳ್ಳುತ್ತಿತ್ತು.

ಪಾ ಒಳಕ್ಕೆ ಬಂದು , ತನ್ನ ಬೂಟ್ಸಿಗೆ ಅಂಟಿಕೊಂಡಿದ್ದ ಮಂಜನ್ನು ಜಾಡಿಸಿ, ಲಾರಾಳನ್ನು ಬಿಗಿಯಾಗಿ ತಬ್ಬಿಗೊಂಡಾಗ, ಅವನ ಮೀಸೆಯ ಮೇಲಿನ ಮಂಜಿನ ಹಳಕುಗಳು ಕರಗಿ ಹನಿಯಾಗಿ ಉದುರುತ್ತಿದ್ದವು"

ಎಲ್ಲರಿಗೂ ಹ್ಯಾಪಿ ಕ್ರಿಸ್ ಮಸ್!

ಕ್ರಿಸ್ಮಸ್ ವಾಲ್ ಪೇಪರ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X