• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಪ್ತಗಾಮಿನಿ ವೃಷಭಾವತಿಯ ಮೇಲೆ ಅತ್ಯಾಚಾರ

By Staff
|

ಮೈಸೂರು ರಸ್ತೆ ಗುಂಟ ಓಡಾಡುವವರಿಗೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಬೆಂಗಳೂರಿನ ಒಂದಾನೊಂದು ಕಾಲದ ಜೀವನದಿಯಾಗಿದ್ದ ವೃಷಭಾವತಿಯ ಸ್ಥಿತಿ ಏನಾಗಿದೆಯೆಂದು ಪ್ರತಿನಿತ್ಯ ಕಾಣುತ್ತಿರುತ್ತದೆ. ಮೊಳಕಾಲುದ್ದ ಕೊಚ್ಚೆ ನೀರಿನಲ್ಲಿ ಆಯ್ದ ವಸ್ತುಗಳಿಂದ ಜೀವನ ಸಾಗಿಸುತ್ತಿರುವ ಹುಡುಗರ ಆರೋಗ್ಯದ ಬಗ್ಗೆ ಚಿಂತಿಸಿದರೆ ಜೀವವೇ ಹಿಂಡಿದಂತಾಗುತ್ತದೆ. ಬೃಹತ್ ಚರಂಡಿಯಾಗಿ ಮಾರ್ಪಟ್ಟಿರುವ ವೃಷಭೆಗೆ ಮುಕ್ತಿಯೆಂದು?

* ಶ್ರೀನಿಧಿ ಡಿಎಸ್

ಬೆಂಗಳೂರಲ್ಲಿ, ಒಂದು ಕಾಲದಲ್ಲಿ ನಾಲ್ಕು ನದಿಗಳು ಹರಿಯುತ್ತಿದ್ದವಂತೆ. ವೃಷಭಾವತಿ, ಅರ್ಕಾವತಿ, ಕುಮುದ್ವತಿ, ಸುವರ್ಣವತಿ. ಹಿಂದೆ ಈ ನದಿಗಳ ನೀರನ್ನ ಕುಡಿಯೋಕೆ ಬಳಸ್ತಿದ್ರು. ದೈನಂದಿನ ಕೆಲಸಗಳಿಗೆ ಈ ನದಿಗಳ ನೀರು ಬಳಕೆಯಾಗುತ್ತಿತ್ತು. ಇಂದು ಬೆಂಗಳೂರು ಬೆಳೆಯುತ್ತಿದ್ದ ಹಾಗೆ ಈ ನದಿಗಳೇ ಮಾಯವಾಗ್ಬಿಟ್ಟಿವೆ. ಕೇವಲ ಅರ್ಕಾವತಿ ಮತ್ತು ವೃಷಭಾವತಿ ನದಿಗಳು ಮಾತ್ರ ಹೆಸರಿಗೆ ಉಳಿದುಕೊಂಡಿದೆಯಾದರೂ, ಗುರುತೇ ಸಿಗದ ಹಾಗೆ ಬದಲಾಗಿ ಬಿಟ್ಟಿವೆ. ವೃಷಭಾವತಿಯಂತೂ, ಕೊಳಚೆಯದೇ ನದಿಯಾಗಿದೆ. ಈ ನದಿ ಇಷ್ಟೊಂದು ಹಾಳಾಗಿರುವುದಕ್ಕೆ ಅತಿ ದೊಡ್ಡ ಕೊಡುಗೆ ನೀಡ್ತಿರೋದು ಬೆಂಗಳೂರಿನ ಕೈಗಾರಿಕೆಗಳು. ಅವುಗಳ ಜೊತೆಗೆ ಬೆಂಗಳೂರಿನ ಅಷ್ಟೂ ಕೊಳಚೆ ಕೂಡ ಈ ನದಿಯನ್ನ ಸೇರುತ್ತಿದೆ.

ಚೆನ್ನೈನ ಪರಿಸರ ರಕ್ಷಣಾ ಸಂಸ್ಥೆಯೊಂದು ವೃಷಭಾವತಿಯ ನೀರಿನ ಬಗ್ಗೆ ಅಧ್ಯಯನ ನಡೆಸಿದೆ. ಅವರು ನಡೆಸಿರೋ ಸಂಶೋಧನೆಯಲ್ಲಿ ಕೆಲವೊಂದಿಷ್ಟು ಬೆಚ್ಚಿ ಬೀಳಿಸುವ ಅಂಶಗಳಿವೆ. ಬೆಂಗಳೂರಲ್ಲಿರುವ ಹೆಚ್ಚಿನ ಕೈಗಾರಿಕೆಗಳು ತಮ್ಮೊಳಗಿನ ಹಾಲಾಹಲವನ್ನು ವೃಷಭೆಗೆ ಸೇರಿಸುತ್ತಿವೆ. ಇದರಿಂದಾಗಿ ವೃಷಭಾವತಿಯ ನೀರಿನಲ್ಲಿರುವ ವಿಷದ ಪ್ರಮಾಣ ದಿನೇ ದಿನೇ ಏರುತ್ತಿದೆ. ಈ ನದಿಯ ನೀರಲ್ಲಿ 32ಕ್ಕೂ ಹೆಚ್ಚು ತರಹದ ವಿಷಕಾರಕ ರಾಸಾಯನಿಕಗಳು ಪತ್ತೆಯಾಗಿವೆ. ಅಮೋನಿಯಾ, ನೈಟ್ರೇಟ್, ನೈಟ್ರೇಟ್ ಅಸಿಡ್ ನಂತಹ ರಾಸಾಯನಿಕಗಳು ಈ ನೀರಲ್ಲಿ ನಿಗದಿತ ಪ್ರಮಾಣಕ್ಕೂ ಹೆಚ್ಚಾಗಿವೆ ಅನ್ನುತ್ತದೆ ಈ ಸಂಸ್ಥೆಯ ಶೋಧ. ಕ್ಲೋರೈಡ್ ನ ಪ್ರಮಾಣವಂತೂ 546 ಪಟ್ಟು ಹೆಚ್ಚಿದ್ದರೆ, ಕ್ಲೋರೋ ಎಥೈಲ್ ಪ್ರಮಾಣ 257 ಪಟ್ಟು, ಡೈ ಕ್ಲೋರೋ ಎಥೇನ್ ಅನ್ನೋ ಪ್ರಾಣಾಂತಕ ರಾಸಾಯನಿಕ 82 ಪಟ್ಟು ಹೆಚ್ಚಿದೆ.

ಕ್ಯಾಲ್ಸಿಯಂ ಕಾರ್ಬೋನೇಟ್ , ಮ್ಯಾಗ್ನೇಶಿಯಂನಂತಹ ಅತ್ಯುಗ್ರ ರಾಸಾಯನಿಕಗಳು ಕೂಡ ಈ ಕೈಗಾರಿಕೆಗಳಿಂದ ನೀರನ್ನ ಸೇರುತ್ತಿವೆ. ಇವೆಲ್ಲಕ್ಕೂ ಮುಖ್ಯವಾಗಿ, ಈ ನೀರಲ್ಲಿ ಇರಬೇಕಾದ್ದಕ್ಕಿಂತ 1800 ಪಟ್ಟು ಹೆಚ್ಚಿನ ಕ್ಲೋರೋಫಾರಂ ಇದೆ. ಕೇವಲ ಇದೊಂದೇ ಸಾಕು, ವೃಷಭಾವತಿ ನರಕನದಿ ಅನ್ನೋದನ್ನು ಸಾಬೀತು ಪಡಿಸುವುದಕ್ಕೆ. ಬೆಂಗಳೂರಿನುದಕ್ಕೂ ಇರುವ ಸೋಪು, ಶಾಂಪೂ, ಬಣ್ಣ ತಯಾರಿಕಾ ಕಂಪನಿಗಳ, ಫಾರ್ಮಸ್ಯೂಟಿಕಲ್, ಗಾರ್ಮೆಂಟ್ ಕಂಪನಿಗಳ ತ್ಯಾಜ್ಯ ನೀರು, ನೇರವಾಗಿ ವೃಷಭಾವತಿಗೆ ಸೇರ್ಪಡೆಯಾಗ್ತಾ ಇದೆ. ಇವುಗಳಿಂದ ಹೊರ ಬರುತ್ತಿರುವ ಅಮೋನಿಯಾ, ನೈಟ್ರೇಟ್ ಮತ್ತು ಫಾಸ್ಪೇಟ್ ಗಳು ಪ್ರಾಣಕ್ಕೇ ಕುತ್ತು ತರೋವಂತ ವಿಷಕಾರಕಗಳು.

ಒಂದೆಡೆ ಕಾರ್ಖಾನೆಗಳಾದರೆ, ಮತ್ತೊಂದೆಡೆ ಬೆಂಗಳೂರಿನ ತ್ಯಾಜ್ಯಗಳೂ ವೃಷಭಾವತಿಗೆ ಬಂದು ಬೀಳುತ್ತಿದೆ. ಬೆಂಗಳೂರಿನ ತ್ಯಾಜ್ಯನಿರ್ವಹಣೆಯ ಜವಾಬ್ದಾರಿ ಹೊತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಕೆಲಸವನ್ನು ಖಾಸಗಿ ಗುತ್ತಿಗೆದಾರರ ಕೈಗೆ ಕೊಟ್ಟು ತಣ್ಣಗೆ ಕುಳಿತಿದೆ. ನಗರದ ಎಲ್ಲೆಡೆಯಿಂದ ಸಂಗ್ರಹಿಸಲಾಗುವ ತ್ಯಾಜ್ಯವನ್ನು ಇಂತಹದೇ ಜಾಗದಲ್ಲಿ ತಂದು ಹಾಕಬೇಕೆಂದು ನಿಗದಿಪಡಿಸಿ, ಅದಕ್ಕೆ ಬೇಕಾದ ದುಡ್ಡನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಆದರೆ ಈ ಗುತ್ತಿಗೆದಾರರು ಕಸವನ್ನು ವೃಷಭಾವತಿಗೆ ಸುರಿದು ಹಾಯಾಗಿ ವಾಪಸಾಗುತ್ತಾರೆ. ಗುತ್ತಿಗೆದಾರರು ತಮ್ಮ ಲಾಭಕ್ಕಾಗಿ ನಡೆಸುವ ಅವ್ಯವಹಾರದಿಂದಾಗಿ ನದಿಯ ನೀರು ಹಾಳಾಗುವುದರ ಜತೆಗೆ ಜನರ ಆರೋಗ್ಯ ಕೆಡುತ್ತಿದೆ. ಹಾಗೆಂದು ಕಸ ತಂದುಹಾಕುವವರನ್ನು ತಡೆಯಲು ಕೂಡ ನಾಗರಿಕರಿಗೆ ಸಾಧ್ಯವಾಗುತ್ತಿಲ್ಲ. ಅರ್ಥವಾಯಿತಲ್ಲ? ಮರ್ಯಾದಸ್ಥ ನಾಗರಿಕರು ಅವರುಗಳ ಬಳಿ ಎರಡು ನಿಮಿಷ ಕೂಡ ಮಾತನಾಡಲು ಅಗುವುದಿಲ್ಲ.

ವೃಷಭಾವತಿ ನದಿ ಕೊಳ್ಳದಲ್ಲಿ ನಡೆಯುತ್ತಿರುವ ಇನ್ನೊಂದು ಆಘಾತಕಾರೀ ವಿಷಯ ನಿಮಗೆ ಹೇಳಲೇಬೇಕು. ಇಲ್ಲಿ ಬೆಂಗಳೂರಿನ ಎಲ್ಲೆಡೆಯಿಂದ ಬಂದು ಬೀಳುವ ಕಸವನ್ನೆ ನಂಬಿಕೊಂಡು ಜೀವನ ನಡೆಸುವ ಸಾಕಷ್ಟು ಕುಟುಂಬಗಳಿವೆ. ವೃಷಭಾವತಿಯ ದಂಡೆಯಲ್ಲಿನ ಕೆಲ ಮನೆಗಳ ಮಕ್ಕಳು ದಿನಬೆಳಗಾದರೆ ಸಾಕು ಕೊಚ್ಚೆಗಿಳೀತಾರೆ. ನೀರಿನಲ್ಲಿ ತೇಲಿಬರುವ ಪ್ಲಾಸ್ಟಿಕ್ ಬಾಟಲಿಗಳು.. ಹಾಲಿನ ಪ್ಯಾಕೆಟ್ ಇತ್ಯಾದಿ ಮರುಬಳಕೆ ಆಗೋ ವಸ್ತುಗಳನ್ನ ಸಂಗ್ರಹಿಸ್ತಾರೆ. ಕೇವಲ ಎಂಟು- ಹತ್ತು ವಯಸ್ಸಿನ ಹುಡುಗರು, ತಮ್ಮ ಜೀವನವನ್ನೇ ಪಣಕ್ಕಿಟ್ಟು ಇಲ್ಲಿನ ನೀರಲ್ಲಿ ಮುಳುಗೇಳುತ್ತಾರೆ.

ಇನ್ನು ಕೆಲ ಹುಡುಗರು ಈ ನೀರಿಂದ ಕಬ್ಬಿಣದ ಚೂರುಗಳನ್ನ ಸಂಗ್ರಹಿಸುತ್ತಾರೆ. ಇದಕ್ಕಾಗಿ ಇದೇ ಕೊಚ್ಚೆ ನೀರಿಗಿಳಿದು -ಮುಳುಗಿ, ಈಜಾಡುತ್ತಾರೆ. ಉದ್ದ ಮರದ ಕೋಲಿಗೆ ಅಯಸ್ಕಾಂತವನ್ನು ಕಟ್ಟಿ ಅದನ್ನು ನೀರಿಗಿಳಿಸಿ, ಸಿಕ್ಕೋ ಕಬ್ಬಿಣದ ಚೂರುಗಳನ್ನ ಒಟ್ಟು ಮಾಡ್ತಾರೆ. ದಿನವಿಡೀ ಇಷ್ಟೆಲ್ಲ ಒದ್ದಾಡಿದರೆ ಸಿಗೋದು 70-80 ರೂಪಾಯಿಗಳು. ಮೇಲೆ ಕೆಲ ವಿಷಕಾರೀ ರಾಸಾಯನಿಕಗಳ ಬಗ್ಗೆ ಹೇಳಿದ್ದೆನೆಲ್ಲ- ವಿಚಾರ ಮಾಡಿ, ಪ್ರತಿದಿನ ಈ ಕೊಚ್ಚೆಯಲ್ಲೇ ಓಡಾಡಿಕೊಂಡಿದ್ದರೆ, ಈ ಹುಡುಗರ ಅರೋಗ್ಯವೇನಾದೀತು? ಮಕ್ಕಳ ದಿನಾಚರಣೆಯಂದು ಈ ಹುಡುಗರ ಚಿತ್ರ ಯಾವುದಾದರೂ ಪತ್ರಿಕೆಗಳಲ್ಲಿ ಬರುತ್ತದೆ ಮತ್ತು ಮಾರನೇ ದಿನ ನಾವೆಲ್ಲ ಇದನ್ನ ಮರೆತುಬಿಡುತ್ತೇವೆ. ಇಲ್ಲಿನ ಹುಡುಗನೊಬ್ಬ, ಆ ಕೊಳಚೆ ನೀರಲ್ಲಿ ಹರಿದುಬರುತ್ತಿದ್ದ ಬಾಳೇಹಣ್ಣನ್ನು ಪಟಕ್ಕನೆ ಎತ್ತಿ ತಿಂದ ದೃಶ್ಯ ಪ್ರಾಯಶ: ನನ್ನ ಜನ್ಮ ಪೂರ್ತಿ ಕಾಡುತ್ತಲೇ ಇರುತ್ತದೆ.

ಬೆಂಗಳೂರು ಒಳಚರಂಡಿ ಮಂಡಳಿ ಲಕ್ಷಾಂತರ ಖರ್ಚು ಮಾಡಿ ಪ್ರತಿನಿತ್ಯ ವೃಷಭೆಯ ಕೊಳಕನ್ನು ಶುದ್ಧಿ ಮಾಡೋ ಕೆಲಸ ಮಾಡ್ತಾ ಇದ್ದರೂ ಕೂಡ, ಅಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣಕ್ಕೂ, ಶುದ್ಧೀಕರಣಕ್ಕೂ ಅಜಗಜಾಂತರವಿದೆ. ಹೀಗಾಗಿ ಈ ಶುದ್ಧೀಕರಣ ಪ್ರಕ್ರಿಯೆಯಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ.

ಇಸ್ರೇಲ್ ದೇಶದಲ್ಲೊಂದು ಕಾನೂನಿದೆ. ತಮ್ಮ ಮುಂದಿನ ಪೀಳಿಗೆಯ ಬದುಕಿಗೆ, ಅರೋಗ್ಯಕ್ಕೆ ಧಕ್ಕೆ ಉಂಟಾಗೋ ಅಂತಹ ಯಾವುದೇ ಅಭಿವೃದ್ಧಿ ಕಾರ್ಯವನ್ನ ಅಲ್ಲಿ ಕೈಗೊಳ್ಳುವುದಿಲ್ಲ. ನಮ್ಮಲ್ಲೂ ಇಂಥ ಕಾನೂನು ಬಂದಿದ್ದರೆ ಎಷ್ಟು ಚೆನ್ನಿರುತ್ತಿತ್ತು! ಈ ಭೂಮಿ, ನಮ್ಮ ತಾತ ಮುತ್ತಾತರು ಕೊಟ್ಟ ಬಳುವಳಿಯಲ್ಲ..ನಮ್ಮ ಮಕ್ಕಳು ಮೊಮ್ಮಕ್ಕಳಿಂದ ಎರವಲು ಪಡೆದಿದ್ದು ಅನ್ನುವ ಮಾತಿದೆ- ಅದರೆ ಇದು ಯಾರಿಗೆ ಅರ್ಥವಾಗುತ್ತದೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more