ವೈರಲ್ ಆದ ಬಿಕಿನಿ ವಿಡಿಯೋ ನನ್ನದಲ್ಲ: ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬಿಕಿನಿ ವಿಡಿಯೋ ಮತ್ತು ಫೋಟೋಗಳ ವಿವಾದದ ಕುರಿತು ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡು ಸೃಷ್ಟಿಸಲಾಗಿರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ದೃಶ್ಯಗಳ ವಿರುದ್ಧ ಅವರು ತೀವ್ರ ಆಕ್ರೋಶ ಹೊರಹಾಕಿದ್ದು, ಕಿಡಿಗೇಡಿಗಳ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
"ಅವೆಲ್ಲವೂ ಸಂಪೂರ್ಣ ನಕಲಿ ಮತ್ತು ಸೃಷ್ಟಿ ಮಾಡಿರುವುದು"
ಈ ಕುರಿತು ರುಕ್ಮಿಣಿ ವಸಂತ್ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ವೈರಲ್ ಆಗುತ್ತಿರುವ ದೃಶ್ಯಗಳ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿರುವ ರುಕ್ಮಿಣಿ, "ನನ್ನ ಹೋಲಿಕೆಯಿರುವ ಕೆಲವು ಕೃತಕ ಬುದ್ಧಿಮತ್ತೆ (AI-generated) ಆಧಾರಿತ ಚಿತ್ರಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವುದು ನನ್ನ ಹಾಗೂ ನನ್ನ ತಂಡದ ಗಮನಕ್ಕೆ ಬಂದಿದೆ. ಈ ಮೂಲಕ ನಾನು ಅತ್ಯಂತ ಸ್ಪಷ್ಟವಾಗಿ ಹೇಳಲು ಬಯಸುವುದೇನೆಂದರೆ, ಆ ಚಿತ್ರಗಳು ಸಂಪೂರ್ಣವಾಗಿ ನಕಲಿ ಹಾಗೂ ಕೃತಕವಾಗಿ ಸೃಷ್ಟಿ ಮಾಡಲಾದವುಗಳಾಗಿವೆ" ಎಂದು ಸ್ಪಷ್ಟನೆ ನೀಡಿದ್ದಾರೆ.

ಇದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಮುಖವನ್ನು ಬಳಸಿ ಡೀಪ್‌ಫೇಕ್ ದೃಶ್ಯಗಳನ್ನು ಸೃಷ್ಟಿಸುತ್ತಿರುವ ಸೈಬರ್ ವಂಚಕರ ವಿರುದ್ಧ ಕಿಡಿಕಾರಿರುವ ನಟಿ, "ಇಂತಹ ತಿರುಚಿದ ಮತ್ತು ನಕಲಿ ವಿಷಯಗಳನ್ನು ಸೃಷ್ಟಿಸುವುದು ಹಾಗೂ ಅವುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಡುವುದು ಅತ್ಯಂತ ಬೇಜವಾಬ್ದಾರಿತನದ ಪರಮಾವಧಿ. ಅಷ್ಟೇ ಅಲ್ಲದೆ, ಇದು ಒಬ್ಬ ವ್ಯಕ್ತಿಯ ವೈಯಕ್ತಿಕ ಗೌಪ್ಯತೆ ಮತ್ತು ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೈಬರ್ ಕ್ರೈಂ ಮೆಟ್ಟಿಲೇರಿದ ನಟಿ
ಈ ಮೌನವನ್ನು ಕೇವಲ ಸ್ಪಷ್ಟನೆಗೆ ಸೀಮಿತಗೊಳಿಸದ ರುಕ್ಮಿಣಿ ವಸಂತ್, ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದಾರೆ. "ನಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ಅಶ್ಲೀಲ ಹಾಗೂ ನಕಲಿ ಚಿತ್ರಗಳನ್ನು ಸೃಷ್ಟಿಸಿದ ಮತ್ತು ಅದನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಂಡ ಕಿಡಿಗೇಡಿಗಳ ವಿರುದ್ಧ ಈಗಾಗಲೇ ಅಗತ್ಯ ಕಾನೂನು ಕ್ರಮ ಹಾಗೂ ಸೈಬರ್ ಕ್ರೈಂ ದೂರು ದಾಖಲಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಅಧಿಕೃತ ಖಾತೆಗಳ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿರುವ ಅವರು, "ಯಾರೂ ಕೂಡ ಇಂತಹ ಸುಳ್ಳು ಮತ್ತು ನಕಲಿ ಕಂಟೆಂಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಹಾಗೂ ಅವುಗಳಿಗೆ ಯಾವುದೇ ರೀತಿಯಲ್ಲಿ ಪ್ರೋತ್ಸಾಹ ನೀಡಬೇಡಿ" ಎಂದು ಮನವಿ ಮಾಡಿದ್ದಾರೆ.
My team and I have come across certain AI-generated images being circulated online claiming to be me.
— rukmini (@rukminitweets) May 23, 2026
I want to state clearly that these images are entirely fake and fabricated.
The creation and circulation of such manipulated content is deeply irresponsible and a serious… pic.twitter.com/8iitXTvFvT
ಏನಿದು ವೈರಲ್ ವಿಡಿಯೋ?
'ಟಾಕ್ಸಿಕ್' ಮತ್ತು 'ಡ್ರ್ಯಾಗನ್' ನಂತಹ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರುಕ್ಮಿಣಿ ವಸಂತ್ ಅವರ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಸಂಚು ರೂಪಿಸಿದ್ದರು. ರುಕ್ಮಿಣಿ ವಸಂತ್ ಅವರದ್ದು ಎನ್ನಲಾದ ಬಿಕಿನಿ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಅದರಲ್ಲಿ ರುಕ್ಮಿಣಿ ಅವರು ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಫೋಟೋಶೂಟ್ ಮಾಡಿಸುತ್ತಾ ಇರುವಂತೆ ಕಂಡುಬಂದಿತ್ತು. ಇದನ್ನು ಕಂಡು ಅವರ ಅಭಿಮಾನಿಗಳು ಕೂಡ ಶಾಕ್ ಆಗಿದ್ದರು.
ಇದು ಎಐ ಫೋಟೋಗಳು ಎಂದು ನಟಿಯೇ ಸ್ಪಷ್ಟಪಡಿಸಿದ್ದು, ತಕ್ಷಣವೇ ಎಚ್ಚೆತ್ತುಕೊಂಡು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸೈಬರ್ ಪೊಲೀಸರ ಸಹಾಯ ಪಡೆಯುವ ಮೂಲಕ ಈ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ತಂತ್ರಜ್ಞಾನದ ದುರ್ಬಳಕೆಯ ವಿರುದ್ಧ ಧ್ವನಿ ಎತ್ತಿದ ನಟಿಯ ಧೈರ್ಯಕ್ಕೆ ಸದ್ಯ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.













Click it and Unblock the Notifications