ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಿಲ ಬಳಿಯಲ್ಲಿ ಹಸಿರುಗಣ್ಣಿನ ಭೂತ..

By Staff
|
Google Oneindia Kannada News

A terrorist arrested in Mangaluruಹೆಗಲ ಮೇಲೆ ಕೈಯಿಟ್ಟು ಗೋಲಿ ಆಡಿದ ಕೈಗಳಿಗೆ ಬಾಂಬುಗಳು ನಲಿದಾಡುತ್ತಿವೆ. ಕೂಲಿನಾಲಿ ಮಾಡಿ ಹೊಟ್ಟೆಹೊರೆದುಕೊಳ್ಳುತ್ತಿದ್ದವರ ಮನೆಯಲ್ಲಿ ಟಿವಿ, ಫ್ರಿಜ್ಜುಗಳು ಬಂದಿವೆ. ಕಾಲ ಬದಲಾದಂತೆ ಇಲ್ಲಿನ ಮುಸ್ಲಿಂ ಜನರೂ ಬದಲಾಗುತ್ತಿದ್ದಾರೆ. ಭಾರತದ ಎರಡನೇ ಅತ್ಯಂತ ಶ್ರೀಮಂತ ಹಳ್ಳಿ ಎಂಬ ಹೆಗ್ಗಳಿಕೆಗೆ ಒಂದಾನೊಂದು ಕಾಲದಲ್ಲಿ ಪಾತ್ರವಾಗಿದ್ದ ಕಿನ್ನಿಗೋಳಿ ಎಂಬ ಗ್ರಾಮ ಇಂದು ಉಗ್ರರ ತಾಣವೆಂಬ ಹಣೆಪಟ್ಟಿ ಕಟ್ಟಿಕೊಳ್ಳಿಸುವ ಭೀತಿಯಲ್ಲಿದೆ.

ಅಂಕಣಕಾರ : ಶ್ರೀನಿಧಿ ಡಿ.ಎಸ್.

ನಾನು ಹುಟ್ಟಿ ಬೆಳೆದಿದ್ದು, ಮಂಗಳೂರು ಸಮೀಪದ ಕಿನ್ನಿಗೋಳಿ ಎನ್ನುವ ಊರಿನಲ್ಲಿ. ನಿಮ್ಮೂರಿನ ವಿಶೇಷ ಏನಪಾ ಅಂತ ಯಾರಾದರೂ ಕೇಳಿದಾಗ, ಕೂಡಲೇ ಏನುತ್ತರ ಕೊಡಬೇಕು ಅನ್ನುವುದು ನನಗೆ ಸಮಸ್ಯೆಯಾಗಿ ಹೋಗಿತ್ತು. ಏಕೆಂದರೆ, ಅಂತಹ ಹೇಳಿಕೊಳ್ಳುವ ವಿಶೇಷತೆಗಳೇನೂ ನನ್ನೂರಿಗೆ ಇರಲಿಲ್ಲ. ಕರಾವಳಿ ತೀರದ, ಒಂದು ತೀರಾ ಸಾಮಾನ್ಯ ಊರುಗಳಲ್ಲೊಂದು ಕಿನ್ನಿಗೋಳಿ. ಹತ್ತು ಸಾವಿರ ಜನ ಸಂಖ್ಯೆ ಇರುವ ಹೋಬಳಿ ಮಟ್ಟೂದೂರು ಅಷ್ಟೇ. ಪಕ್ಕದಲ್ಲೇ ಕಟೀಲು ದುರ್ಗಾಪರಮೇಶ್ವರೀ ದೇಗುಲ ಇದೆ ಎನ್ನುವುದು ಹೇಳಿಕೊಳ್ಳಬಹುದಾದ ಒಂದೇ ಒಂದು ಹೆಗ್ಗಳಿಕೆ.

ಒಂದು ದಿನ ಕರ್ನಾಟಕ ಬ್ಯಾಂಕ್‌ನ ಅಗಿನ ಅಧ್ಯಕ್ಷರಾಗಿದ್ದ ಅನಂತಕೃಷ್ಣ ಭಟ್ ನಮ್ಮೂರಿನ ಸಮಾರಂಭವೊಂದರಲ್ಲಿ ಭಾಗವಹಿಸಿದವರು, ಕೂತ ನಮಗೇ ಒಂದು ಪ್ರಶ್ನೆ ಕೇಳಿದರು, ನಿಮ್ಮೂರಿನ ವಿಶೇಷತೆ ಏನು ಅನ್ನೋದು ನಿಮಗೆ ಗೊತ್ತೇ ಅಂತ, ಅವರೇ ಮುಂದುವರಿಸಿ, ಭಾರತದ ಅತ್ಯಂತ ಶ್ರೀಮಂತ ಹಳ್ಳಿಗಳಲ್ಲಿ ಎರಡನೇ ಸ್ಥಾನ ಕಿನ್ನಿಗೋಳಿಗೆ ಸಲ್ಲುತ್ತದೆ ಎಂದರು, ಅಂಕಿಅಂಶಗಳ ಸಮೇತ. ಅವತ್ತಿಂದ, ನಿಮ್ಮೂರ ಸ್ಪೆಶಲ್ ಏನು ಅಂದರೆ, ಈ ಉತ್ತರ ಸಿದ್ಧವಿರುತ್ತದೆ. ಪ್ರಶ್ನೆ ಕೇಳಿದವರೂ ಕಣ್ಣರಳಿಸುತ್ತಾರೆ. ಖುಷಿಯಾಗುತ್ತದೆ. ಅದರೆ ಅಂತಹ ಖುಷಿ ಬಹಳ ದಿನ ಇರುವ ಲಕ್ಷಣವೇನೂ ಕಾಣುತ್ತಿಲ್ಲ.

ಮತ್ತೂ ಒಂದು ಹೊಸ ಕಾರಣಕ್ಕೆ ಎಲ್ಲಿ ನನ್ನೂರು 'ವಿಶೇಷ'ವಾಗುತ್ತದೆಯೋ ಅನ್ನುವ ಹೆದರಿಕೆ ಕಾಡುತ್ತಿದೆ. ಮೊನ್ನೆ ಮೊನ್ನೆ ಮಂಗಳೂರಿನ ಉಳ್ಳಾಲದಲ್ಲಿ ಒಂದಿಷ್ಟು ಜನ ಶಂಕಿತ ಉಗ್ರರನ್ನು ಪೋಲೀಸರು ಸೆರೆ ಹಿಡಿದರು. ಅವರುಗಳ ಮೂಲ ಎಲ್ಲಿ ಅಂತ ಹುಡುಕುತ್ತ ಹೋದ ಪೋಲೀಸರೂ ನಮ್ಮೂರಿಗೂ ಬಂದರು! ಅರೆಸ್ಟಾದ ಮಹಾಶಯನ ಖಾಸಾ ಖಾಸಾ ತಮ್ಮನೊಬ್ಬ ನಮ್ಮಲ್ಲಿನ ಬಸ್ ಸ್ಟಾಂಡ್ ಮಳಿಗೆಯಲ್ಲೇ ಅಂಗಡಿ ಹೊಂದಿದ್ದ. ಅತನ ಜೊತೆ ಲಿಂಕ್ ಹೊಂದಿದ್ದ ಇನ್ನೊಬ್ಬಾತನ ಅಂಗಡಿಯೂ ನಮ್ಮ ಪೇಟೆಯಲ್ಲೇ ಇತ್ತು. ನಮ್ಮಲ್ಲಿನ ಹಲವು ಕಾಯಿನ್ ಬಾಕ್ಸುಗಳಿಂದ, ಎಸ್ಟಿಡಿ ಬೂತುಗಳಿಂದ ಶಂಕಿತನಿಗೆ ಫೋನುಗಳೂ ಹೋಗಿವೆ ಅನ್ನೋದು ತನಿಖೆಯಿಂದ ಸಾಬೀತಾಗಿದೆ ಕೂಡ.

ದಕ್ಷಿಣ ಕನ್ನಡ ಶಾಂತಿ ಪ್ರಿಯರ ನಾಡು ಎಂಬ ಹಣೆಪಟ್ಟಿ ಕಳೆದುಕೊಂಡು ಬಹಳ ಕಾಲವಾಗಿದೆ. ಕಳೆದೊಂದೆರಡು ವರುಷಗಳಿಂದ ಬೂದಿ ಮುಚ್ಚಿದ ಕೆಂಡವಾಗಿದೆ ಮಂಗಳೂರು ಪರಿಸರ. ನಿಮಗೂ ಕೂಡ ಈ ಬಗ್ಗೆ ಗೊತ್ತಿರುತ್ತದೆ, ಮತ್ತೆ ಹೊಸದಾಗೇನೂ ಹೇಳಬೇಕಿಲ್ಲ. ಅದರೆ ತೀರಾ ಉಗ್ರಗಾಮಿಗಳಿಗೆ ಅಶ್ರಯ ನೀಡುವ ಮಟ್ಟಕ್ಕೆ ಹಾಳಾಗಿ ಹೋಗಿದೆ ಎನ್ನುವುದು ನಿಜಕ್ಕೂ ಖೇದಕರ. ಮೊನ್ನೆ ಉಳ್ಳಾಲದಲ್ಲಿ ಶಂಕಿತ ಉಗ್ರರನ್ನು ಬಂಧಿಸುವ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಎಲ್ಲ ಮಾಧ್ಯಮಗಳೂ- ಟಿ.ವಿ ಮತ್ತು ಪತ್ರಿಕೆಗಳು ಒಂದು ಸಾಲಿನಲ್ಲಿ ವರದಿ ಮಾಡಿದವು. 'ಶಂಕಿತ ಉಗ್ರರ ಬಂಧನ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಅಡ್ಡಿ' ಅಂತ.

ವಿಚಾರ ಮಾಡಿ, ನಾಡಬಾಂಬುಗಳೂ, ಜಿಹಾದಿ ಸಾಹಿತ್ಯ, ಸಿಡಿಗಳು, ದೇಶದ ವಿವಿಧ ನಗರಗಳ ನಕ್ಷೆಯನ್ನು ತಮ್ಮ ಬಳಿ ಹೊಂದಿದ್ದ ಪಕ್ಕಾ ಉಗ್ರಗಾಮಿ ಮನಸ್ಥಿತಿಯ ವ್ಯಕ್ತಿಗಳನ್ನು ಬಂಧಿಸಿ ಕೊಂಡೊಯ್ಯುವಾಗ, ರಸ್ತೆಗಳಲ್ಲಿ ಟಯರಿಗೆ ಬೆಂಕಿ ಹಚ್ಚಿ ಅಡ್ಡಿ ಪಡಿಸುವವರಿದ್ದಾರೆ ಎಂದರೆ, ಅವರು ಯಾವ ರೀತಿ ಯೋಚನೆಗಳನ್ನು ಹೊಂದಿದವರಾಗಿದ್ದಾರು? ಮಾಧ್ಯಮಗಳ ಪಾಲಿಗೆ ಇದು ಸುದ್ದಿಯೇ ಅಲ್ಲ, ವಿಚಾರವಾದಿಗಳೆಂಬ ಅಷಾಢಭೂತಿಗಳಿಗೆ ಇದೆಲ್ಲ ಕಾಣುವುದೇ ಇಲ್ಲ. ಇಂದೇನೋ ನಾಲ್ಕು ಜನರನ್ನು ಬಂಧಿಸಿ ಪೋಲೀಸ್ ಇಲಾಖೆ ಬೀಗಬಹುದು, ಅದರೆ ಟಯರಿಗೆ ಬೆಂಕಿ ಹಚ್ಚಿದಾತ ನಾಳೆ ಇನ್ಯಾವ ಮಟ್ಟಕ್ಕೆ ಬೆಳೆದಾನು?

ನಮ್ಮೂರು ಬದಲಾಗುತ್ತಿದೆ. ಯಾವುಯಾವುದೇ ಸಂಘಟನೆಗಳ ಹೆಸರು ಹೇಳಿಕೊಂಡು ಓಡಾಡುತ್ತಿದ್ದ, ನನ್ನ ಸ್ನೇಹಿತರಾಗಿದ್ದ ಮುಸ್ಲಿಂ ಹುಡುಗರು ರಾತ್ರೋ ರಾತ್ರೆ ನಾಪತ್ತೆಯಾಗುತ್ತಿದ್ದಾರೆ. ಯಾರನ್ನು ನೋಡಿದರೂ, ಅನುಮಾನ ಬರುವಂತಾಗಿದೆ. ನಮ್ಮ ಮನೆ ಹತ್ತಿರದ ಹುಡುಗನೊಬ್ಬ ನಾಲ್ಕಾರು ಬಾರಿ ಪೋಲೀಸ್ ಸ್ಟೇಶನ್‌ಗೆ ಹೋಗಿ ಬಂದಾತ, ದುಬೈಗೆ ಹಾರಿದ್ದಾನೆ. ಪೋಲೀಸ್ ವಿಚಾರಣೆ ಭೀತಿಯಿಂದಲೇ ಹೀಗೆ ಮಾಡುತ್ತಿದ್ದಾರೋ, ಅಥವಾ ನಿಜಕ್ಕೂ ಅವರ ಹಿಂದಿನ ಸತ್ಯ ಬೇರೆ ಇದೆಯೋ, ತಿಳಿಯದಾಗಿದೆ.

ಇದು ಕೇವಲ ಕಿನ್ನಿಗೋಳಿಯ ಕಥೆ ಮಾತ್ರವಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಮುಸ್ಲಿಂ ಹುಡುಗರ ಮನಸ್ಥಿತಿ ಮತ್ತು ಮನೆ- ಸ್ಥಿತಿ ಎರಡೂ ಬದಲಾಗುತ್ತಿದೆ. ತೀರಾ ಕೂಲಿ ಮಾಡಿಕೊಂಡು ಬದುಕುವ, ನಾಲ್ಕಾರು ಮಕ್ಕಳಿರುವ ಮನೆಗಳಲ್ಲೂ ಕೂಡ ಟಿವಿ, ವಾಶಿಂಗ್ ಮಶಿನ್‌ಗಳು ಕಾಣುತ್ತಿವೆ. ಅ ಮನೆಗಳ ಹುಡುಗರ ಬಳಿ ನೀವು ಏನು ಕೆಲಸ ಮಾಡುತ್ತಿದ್ದೀರಪ್ಪಾ ಅಂತ ಪ್ರಶ್ನೆ ಕೇಳಿದರೆ, ನಿಗೂಢವಾಗಿ ನಮ್ಮನ್ನು ನೋಡಿ, ಮುಂದೆ ಸಾಗುತ್ತಾರೆ, ಉತ್ತರ ಬರುವುದಿಲ್ಲ. ಒಂದು ಬಿಗುವಿನ ವಾತಾವರಣ ಎಲ್ಲ ಕಡೆ ನಿರ್ಮಾಣವಾದಂತೆ ಅನ್ನಿಸುತ್ತದೆ.

ಇಲ್ಲಿನ ಜನರು ಜಗತ್ತಿನ ತಲೆಬಿಸಿ ಮರೆತು ಬದುಕುವವರು. ತೀರಾ ಕಾಲ ಬುಡಕ್ಕೆ ಏನಾದರೂ ಸಮಸ್ಯೆ ಬರುವತನಕ ಏನೂ ಮಾಡಲು ಹೋಗುವುದಿಲ್ಲ ಎನ್ನುವ ಮಾತುಗಳು ಮೊದಲಿಂದಲೂ ದಕ್ಷಿಣ ಕನ್ನಡಿಗರ ಬಗ್ಗೆ ಕೇಳಿ ಬರುತ್ತಿತ್ತು. ಆದರೀಗ ಸಮಸ್ಯೆ ಬರುವ ಮೊದಲೇ ಎಚ್ಚೆತ್ತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತಪ್ಪು ಮಾಡಿದವರ ಜೊತೆಗೆ, ತಪ್ಪೇ ಮಾಡದವರ ಬಗೆಗೂ ಸಂಶಯಿಸುವಂತಾಗಿದೆ. ಊರಿಂದ ಬರುವ ಫೋನುಗಳಲ್ಲಿ, ದಿನನಿತ್ಯ ಒಂದಿಲ್ಲೊಂದು ತಲೆ ಹಾಳು ಮಾಡುವಂತಹ ವಿಷಯವೇ ಇರುತ್ತದೆ.

ತೀರಾ ನಮ್ಮ ಅಕ್ಕ ಪಕ್ಕದ ಮನೆಗಳ ಹುಡುಗರ ಹೆಸರುಗಳೇ ಪೊಲೀಸ್ ಕೇಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ನಿನ್ನೆ ಮೊನ್ನೆಯವರೆಗೆ ಅವರುಗಳು ನಮ್ಮ ಜೊತೆಗೇ ಕ್ರಿಕೆಟ್ ಅಟ ಅಡಿಕೊಂಡಿದ್ದವರು. ಅದ್ಯಾವ ಘಳಿಗೆಯಲ್ಲಿ ಬೇಡದ ವಿಷಯಗಳಿಗೆ ಬ್ರೇನ್ ವಾಷ್ ಅಗಿಬಿಟ್ಟಿದ್ದಾರೆ? ಇತ್ತೀಚೆಗೆ ಊರಿಗೆ ಹೋಗಿದ್ದಾಗ ನನ್ನ ಮುಸಲ್ಮಾನ ಗೆಳೆಯನೊಬ್ಬ, ನೀವು ಹಿಂದುಗಳು.. ಅಂತೆಲ್ಲ ಮಾತನಾಡಿಸಿದ. ಅವನು ಜಾತಿ ಹಿಡಿದು ಮಾತನಾಡಿದ್ದು ಕೇಳಿ ದಂಗಾಗಿ ಹೋದೆ. ನಮ್ಮ ಮಧ್ಯ ಅದ್ಯಾವಾಗಲೋ ಕಂದಕ ಬಂದಿದೆ, ಗೊತ್ತೇ ಆಗಲಿಲ್ಲ!

ಬಾಲಿವುಡ್ ಜಗತ್ತು ಭಯೋತ್ಪಾದನೆಯಂತಹ ವಿಷಯಗಳ ಮೇಲೆ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದೆ. ಸಿನಿಮಾಗಳಲ್ಲಿ ಭಯೋತ್ಪಾದಕರೆಂದರೆ ದಾಡಿ ಬಿಟ್ಟ, ಕುರಾನ್ ಮಾತುಗಳನ್ನು ಉಲ್ಲೇಖಿಸುವ, ಮಾತು ಮಾತಿಗೆ ಇನ್ ಶಾ ಅಲ್ಲಾ ಅನ್ನುವ ಘೋಷ ಹೊರಡಿಸುವ ಮಧ್ಯವಯಸ್ಕರು. ಅದರೆ ನಮ್ಮೂರ ಹುಡುಗರು ಯಾರೂ ಹೀಗಿಲ್ಲವಲ್ಲಾ.. ಹಾಗಾಗಿ ಮನಸ್ಸು, ಇಲ್ಲಪಾ, ಈ ಹುಡುಗರು ಖಂಡಿತಾ ಉಗ್ರಗಾಮಿಗಳಾಗಲು ಹೊರಡಲಾರರು ಅನ್ನುತ್ತದೆ. ಅದರೆ, ಅದೇ ಹೊತ್ತಿಗೆ, ಇನ್ಯಾರನ್ನೋ ಅರೆಸ್ಟ್ ಮಾಡಿದರಂತೆ, ಕರ್ನಾಟಕ ಮುಜಾಹಿದೀನ್ ಲಿಂಕ್ ಇದೆಯಂತೆ ಅನ್ನುವ ಸುದ್ದಿ ಬರುತ್ತದೆ...

ಸೇಡಿಯಾಪು ಕೃಷ್ಣ ಭಟ್ಟರು ದಶಕಗಳ ಹಿಂದೆ ಬರೆದಿದ್ದ ಎಣ್ಣೆ ಹೊಯ್ಯಮ್ಮಾ ದೀಪಕ್ಕೆ ಎನ್ನುವ ಕವನದಲ್ಲಿನ ಸಾಲೊಂದು ಹೀಗಿದೆ,

ಬಾಗಿಲ ಬಳಿಯಲ್ಲಿ ಹಸಿರುಗಣ್ಣಿನ ಭೂತ, ಅಲಳಗೆಯ ಬಳಿ ಸಾಗುತಿದೆ,
ಎಣ್ಣೆ ಹೊಯ್ಯಮ್ಮಾ ದೀಪಕ್ಕೆ...

ಹಸಿರುಗಣ್ಣಿನ ಭೂತ, ಬಾಗಿಲು ದಾಟಿ, ಒಳಬಂದಿದೆ. ಎಷ್ಟೇ ಎಣ್ಣೆ ಹೊಯ್ದರೂ ಕೂಡ, ದೀಪ ಅರದಂತೆ ಉಳಿಸಿಕೊಳ್ಳಲು ಹರಸಾಹಸಪಡಬೇಕಿದೆ ಅನ್ನಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X