ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರತಿ ವಿಜ್ಞಾನ ದರ್ಪಣ, ಲಂಕೇಶ್ ಮತ್ತು ಆ ದಿನಗಳು

By ಶಾಮ್
|
Google Oneindia Kannada News

1980ನೇ ಇಸವಿ. ನೆಟ್ಟಗೆ ಮೂರು ವಾಕ್ಯ ಬರೆಯುವುದಕ್ಕೆ ಬರದಿದ್ದರೂ "ರತಿ ವಿಜ್ಞಾನ ದರ್ಪಣ" ಎಂಬ ಮಾಸ ಪತ್ರಿಕೆಗೆ ಅಧಿಕೃತವಾಗಿ ನಾನು ಸಂಪಾದಕನಾಗಿದ್ದೆ. ಪತ್ರಿಕೆಯ ವಿಷಯ - ವಿಚಾರಗಳಿಗೆ ಅಕ್ಷರ ಬೆನ್ನೆಲುಬಾಗಿದ್ದವರು ದಿವಂಗತ ಮ ಶ್ರೀಧರಮೂರ್ತಿ ಮತ್ತು ಅವರ ಮಗ ದಿವಂಗತ ಶ್ರೀಹರ್ಷ. ನನಗಿಂತ 2 ವರ್ಷ ಹಿರಿಯರಾಗಿದ್ದ ಹರ್ಷ ನನ್ನ ಪರಮಾಪ್ತ ಸ್ನೇಹಿತ. ಮಶ್ರೀಗಳು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರೆ, ಹರ್ಷ ಕನ್ನಡಪ್ರಭ ಪತ್ರಿಕೆಯಲ್ಲಿ ಮುಖ್ಯ ಉಪ ಸಂಪಾದಕರಾಗಿದ್ದರು.

ಮೂರು ತುತ್ತು ಅನ್ನ ತಿಂದರೆ ಸುಸ್ತಾಗುತ್ತಿದ್ದ ಮರಡಿಹಳ್ಳಿ (ಚಿತ್ರದುರ್ಗ ಜಿಲ್ಲೆ) ಶ್ರೀಧರಮೂರ್ತಿಗಳು ಬಕಾಸುರನಂತೆ ಓದುತ್ತಿದ್ದರು. ವಿಜ್ಞಾನ, ರತಿ ವಿಜ್ಞಾನ, ಇತಿಹಾಸ, ಪ್ರಾಕ್ತನ ಸಂಶೋಧನ ಗ್ರಂಥಗಳ ಜತೆಜತೆಗೆ ಇತ್ತೀಚೆಗೆ ಪ್ರಕಟವಾದ ಕಾದಂಬರಿ, ಕವನ, ಪತ್ರಿಕಾ ಸಾಹಿತ್ಯ, ಪ್ರಬಂಧಗಳನ್ನು ಗಮನಿಸುತ್ತಿದ್ದರು. ವಾತ್ಸಾಯನ, ಕೊಕ್ಕೋಕ, ಲಾರೆನ್ಸ್ , ಜನ್ನನ ಜತೆಗೆ ಅಲೆಯೆಬ್ಬಿಸುವ ಪುಸ್ತಕಗಳನ್ನು, ಶಾಸ್ತ್ರ ಗ್ರಂಥಗಳನ್ನು, ಪ್ರತಿದಿನ ಏಳೆಂಟು ಪತ್ರಿಕೆಗಳನ್ನು ಓದುತ್ತಿದ್ದರು. ಓದಲೇ ಬೇಕಾಗಿತ್ತು. ಯಾಕಂದರೆ, ಬೆಳಗಾದರೆ ಪ್ರಜಾವಾಣಿ ಪತ್ರಿಕೆಗೆ ಸಂಪಾದಕೀಯ ಬರೆಯಬೇಕಿತ್ತು.

P Lankesh, Gandhi Bazar and ever lasting memories

ನನಗೆ ಮತ್ತು ಶ್ರೀಹರ್ಷ ಅವರಿಗೆ ಅವೆಲ್ಲ ಬೇಕಾಗಿರಲಿಲ್ಲ. ಕೊಟ್ಟಿಗೆಯ ದನ ಕರುಗಳಿಗೆ ಸಂಜೆ ಹುಲ್ಲು ಬೂಸಾ ಹುರುಳಿ ತಂದೊಪ್ಪಿಸುವ ತರಹ, ಶ್ರೀಗಳಿಗೆ ದಿನದ ಓದಿಗೆ ಸಾಮಗ್ರಿಯನ್ನು ಸಪ್ಲೈ ಮಾಡುವುದೇ ಕೆಲಸವಾಗಿತ್ತು. ಆ ಕೆಲಸ ಮುಗಿಯಿತೆಂದರೆ ನಿರಾಳ. ನಾವಾಯಿತು ನಮ್ಮ ಇಂಗ್ಲಿಷ್ ಸಿನಿಮಾ ಮತ್ತು ಓಲ್ಡ್ ಮಾಂಕ್ ರಮ್ಮು ಮತ್ತು ಹಿರಿಯ ಪತ್ರಕರ್ತರ ಜತೆಗೆ ಸಮಯ ಕಳೆಯುವುದಾಯಿತು. ಸಂಜೆ ಬರಹಗಾರರೊಂದಿಗೆ ತಲೆ ಹರಟೆ, ಕಾಡು ಹರಟೆಯ ಸಮಾಗಮಗಳು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪಿ ಕೆ ಶ್ರೀನಿವಾಸನ್ , ಬೆಂಗಳೂರು ವಿವಿಯ ಕಿರಂ ನಾಗರಾಜ, ಡಿ ಆರ್ ನಾಗರಾಜ ಹಾಗೂ ಸಿದ್ದಲಿಂಗಯ್ಯ.

ಪಿ ಲಂಕೇಶ್ ಎಂಬ ಹೆಸರೇ ವಿಸ್ಮಯಪಿ ಲಂಕೇಶ್ ಎಂಬ ಹೆಸರೇ ವಿಸ್ಮಯ

ಅದೇ ಹೊತ್ತಿಗೆ ಲಂಕೇಶ್ ಪತ್ರಿಕೆ ಆರಂಭವಾಗಿತ್ತು. ದಿನ ಪತ್ರಿಕೆಗಳ - ಹೇಳಿದರು, ತಿಳಿಸಿದರು ಓದುವಿಕೆಗಿಂತ ಭಿನ್ನವಾದ ಬರಹಗಳು ಲಂಕೇಶ್ ಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ನಾನು ಮಡಿವಂತನಾದ್ದರಿಂದ ಟ್ಯಾಬ್ಲಾಯ್ಡ್ ಬರಹಕ್ಕೆ ಮನಸೋಲುತ್ತಿರಲಿಲ್ಲ. ಯಾವಾಗ, ಅದೇ ಹೊತ್ತಿಗೆ ಲಂಕೇಶರು ಪ್ರಜಾವಾಣಿ ಪತ್ರಿಕೆಯ ಎಡಿಟೋರಿಯಲ್ ಪೇಜಿನಲ್ಲಿ ಬಂ ಮತ್ತು ಗುಂ ಬರೆಯಲಾರಂಬಿಸಿದರೋ ಆ ಹೊತ್ತಿಗೆ ಮಡಿ ಸಡಿಲಗೊಂಡಿತು.

ಇಂಗ್ಲಿಷ್ ಸಿನಿಮಾ, ರಮ್ಮು, ಆಟೋ ರಿಕ್ಷ, ಮತ್ತು ಲಂಕೇಶ್ ಪತ್ರಿಕೆ - ನಾಲಕ್ಕಕ್ಕೂ ದುಡ್ಡು ಹೊಂಚುವುದು ಕಷ್ಟ ಆಗುತ್ತಿತ್ತು. ಖರ್ಚು ವೆಚ್ಚಗಳನ್ನು ಅದು ಹೇಗೆ ತೂಗಿಸುತ್ತಿದ್ದೆವೋ, ಗೊತ್ತಿಲ್ಲ. ಮಂಗಳವಾರ ಬಂತೆಂದರೆ ಲಂಕೇಶ್ ಪತ್ರಿಕೆಯ ಸಂಚಿಕೆ ಕೊಂಡು ಸೌತ್ ಎಂಡ್ ರಸ್ತೆ (ಈಗ ಡಾ ಪಾರ್ವತಮ್ಮ ರಾಜ್ ಕುಮಾರ್ ರಸ್ತೆ) ಮತ್ತು ಕೃಷ್ಣರಾಜೇಂದ್ರ ರಸ್ತೆಯ ಕೂಡುವ ಜಾಗದಲ್ಲಿ ಇದ್ದ ಬ್ಲೂ ಬರ್ಡ್ ಬಾರಿನಲ್ಲಿ ನಾನು ಮತ್ತು ನನ್ನ ಇನ್ನೊಬ್ಬ ಆಪ್ತ ಸ್ನೇಹಿತ ಗೋಪಾಲ ಸೇರದೆ ಬಿಡುತ್ತಿರಲಿಲ್ಲ. ಟೀಕೆ - ಟಿಪ್ಪಣಿ ಓದದೆ ಮಧುಪಾನಕ್ಕೆ ಆಜ್ಞೆ ಕೊಡುತ್ತಿರಲಿಲ್ಲ. ಅವಧಿ : 1980- 2000.

ಮರೆಯುವ ಮುನ್ನ.. ಪತ್ರಿಕೆಗೆ ಬರೆಯುತ್ತಿದ್ದ ಅನೇಕರನ್ನು ನೆನಪಿಸಿಕೊಳ್ಳಬೇಕು. ಅನೇಕರು ಇದ್ದಾರೆ, ಆಗಿ ಹೋಗಿದ್ದಾರೆ. ತೇಜಸ್ವಿ, ಸಿ ಎಸ್ ದ್ವಾರಕಾನಾಥ್, ಚಂದ್ರಶೇಖರ ಆಲೂರು, ರೇಖಾ ರಾಣಿ, ಪ್ರತಿಭಾ ನಂದಕುಮಾರ್, ಬೆಸಗರಹಳ್ಳಿ ರಾಮಣ್ಣ.. ಯಾರಾರ ನೆನೆಯಲಿ..

ಲಂಕೇಶ್ ಅವರು ಅಂದಿನ ಪತ್ರಿಕೋದ್ಯಮದ ಮುಖ್ಯ ವಾಹಿನಿಗೆ ಬರದೇ ಇದ್ದಿದ್ದೇ ಒಳಿತಾಯಿತು. ಆಗ ಪ್ರಜಾವಾಣಿಯಲ್ಲಿದ್ದ ವೈ ಎನ್ ಕೆ ಮತ್ತು ಲಂಕೇಶರಿಗೆ ಪರಸ್ಪರ ವೇವ್ ಲೆನ್ತ್ ಅಷ್ಟಕ್ಕಷ್ಟೆ ಇತ್ತು. ಇಬ್ಬರೂ ಪ್ರತಿಭಾವಂತರೆ ಆದರೆ, ಜಾತಕ ಕೂಡಿ ಬರುತ್ತಿರಲಿಲ್ಲ. ಹಾಗಾಗಿ ಇಬ್ಬರೂ ಬೇರೆ ಬೇರೆ ಬಾರುಗಳಲ್ಲಿ ಗುಂಡು ಹೊಡೆಯುತ್ತಿದ್ದರು. ಚೆನ್ನಾಗಿ ಬದುಕಿದರು, ಸತ್ತರು.

ಲಂಕೇಶ್ ಕುಟುಂಬದಲ್ಲಿ ನನಗೆ ಯಾರೂ ಹೆಚ್ಚಾಗಿ ಪರಿಚಿತರಲ್ಲ. ಸಭೆ ಸಮಾರಂಭಗಳಲ್ಲಿ ಸಿಕ್ಕಾಗ ಹಾಯ್.. ಹೇಗಿದ್ದೀರಾ ಎಂಬ ಉಭಯ ಕುಶಲೋಪರಿ ಬಿಟ್ಟರೆ ನಾನು ಗೌರಿ ಸಂಭಾಷಣೆ, ಸಂವಾದಕ್ಕೆ ಇಳಿದಿದ್ದೇ ಇಲ್ಲ. ಹೌ ಆರ್ ಯು ಎಂದು ಕೇಳುತ್ತಿದ್ದ ಚೂಪು ಮೂಗಿನ, ಹೊಳೆಯುವ ಕಣ್ಣುಗಳ, ಬಡಕಲು ದೇಹದ ಗೌರಿಯ ಬಗ್ಗೆ ನನಗೆ ಹೆಚ್ಚು ನೆನಪುಗಳಿಲ್ಲ.

ಎಂಭತ್ತರ ದಶಕದಲ್ಲಿ ನಾವೆಲ್ಲ ವರದಿಗಾರಿಕೆ ಮಾಡುವ ಹುಡುಗರು. ಆಗಾಗ ಚಿದು ಸಿಗುತ್ತಿದ್ದ. ಚಿದು ಮತ್ತು ಗೌರಿ ಲವ್ ಮಾಡ್ತಾ ಇದಾರೆ ಅಂತ ಪ್ರೆಸ್ ಕ್ಲಬ್ಬಿನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ನಾನು ಮತ್ತು ನನ್ನ ಪತ್ರಿಕಾ ಬಳಗದ ಸ್ನೇಹಿತರು ಇವಕ್ಕೆಲ್ಲ ಹೆಚ್ಚು ಸಮಯ ವೇಸ್ಟ್ ಮಾಡುತ್ತಿರಲಿಲ್ಲ. ಕವಿತಾ ಲಂಕೇಶ್ ಅವರನ್ನು ದೂರದಿಂದ ನೋಡಿದ್ದು ಬಿಟ್ಟರೆ ಅವರನ್ನು ಮಾತನಾಡಿಸುವ ಸಂದರ್ಭ ನನಗೆಂದೂ ಬರಲಿಲ್ಲ. ಇಂದ್ರಜಿತ್ ಗೊತ್ತಷ್ಟೇ.

ಬಸವನಗುಡಿ ನ್ಯಾಷನಲ್ ಕಾಲೇಜು ಪಕ್ಕದಲ್ಲಿ ಒಂದಸ್ತಿನ ಶಾಪಿಂಗ್ ಮಾಲ್ ಇತ್ತು. ಜೀವನದಲ್ಲಿ ಪ್ರಥಮವಾಗಿ ರುಚಿನೋಡಿದ ಬಟರ್ ನಾನ್ ತಿಂದದ್ದು ಅದೇ ಮಾಲಿನಲ್ಲಿದ್ದ ಪುಟ್ಟ ಹೋಟೆಲಿನಲ್ಲಿ. ಅದರ ಪಕ್ಕ ಕಸ್ತೂರಿ ಶಂಕರ್ ಅವರು ಇಟ್ಟಿದ್ದ ಸಂಗೀತ ವಾದ್ಯಗಳನ್ನು ಬಿಕರಿ ಮಾಡುವ ಅಂಗಡಿ. ಅದರ ಪಕ್ಕವೇ ಇದ್ದದ್ದು ಲಂಕೇಶರ ಪತ್ನಿ ಇಂದಿರಾ ಲಂಕೇಶ್ ಇಟ್ಟಿದ್ದ ಸೀರೆ ಅಂಗಡಿ. ನನಗೋ.. ಬಸವನಗುಡಿ ಮತ್ತು ಗಾಂಧೀಬಜಾರಿನ ನೆನಪುಗಳು ಮಾಸುವುದೇ ಇಲ್ಲ. ಲಂಕೇಶ್ ಮತ್ತು ಗೌರಿ ಮಣ್ಣಲ್ಲಿ ಅಂಗಾತ ಮಲಗಿದ್ದಾರೆ. ಕವಿತಾ ಮತ್ತು ಇಂದ್ರಜಿತ್ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇಂದಿರಾ ಲಂಕೇಶ್ ಮನೆಯಲ್ಲಿದ್ದಾರೆ. ಅಷ್ಟು ಮಾತ್ರ.

ಲಂಕೇಶ್ ಶಬ್ದ ನೆನಪಾದಾಗಲೆಲ್ಲ ಅವರ ಅಮೂಲ್ಯ ಅಂಕಣ ಟೀಕೆ - ಟಿಪ್ಪಣಿಯ ಓಣಿಗಳಲ್ಲಿ ಮನಸ್ಸು ದಾರಿತಪ್ಪುತ್ತದೆ. ಅದು ಕಲ್ಲು ಕರಗುವ ಸಮಯವೇ ಇರಬೇಕು. ಬಸವಣ್ಣ ಮತ್ತೆ ಹುಟ್ಟಿಬಾ, ರಾಜ್ ಕುಮಾರ್ ಮತ್ತೆ ಹುಟ್ಟಿಬಾ, ಕಾಳಿದಾಸ ಮತ್ತೊಮ್ಮೆ ಹುಟ್ಟಿಬಾ, ಹೆವಲಾಕ್ ಎಲಿಸ್ ಮತ್ತೆ ಹುಟ್ಟಿಬಾ, ಸರ್ವಜ್ಞ ಮತ್ತೊಮ್ಮೆ ಹುಟ್ಟಿಬಾ, ವರಕವಿ ಮತ್ತೊಮ್ಮೆ ಜನಿಸಿ ಬಾ.. ಹಲುಬಿ ಪ್ರಯೋಜನವಿಲ್ಲ.

English summary
Those were the days... S K Shama Sundara goes down the memory lane in his earlier days in journalism in Bengaluru as the editor of Rati Vijnan Darpan. At that time P Lankesh started Lankesh Patrike, Kannada tabloid... Gauri Lankesh and Chidu were love birds flirting in Gandhi Bazar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X