ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಮಾಣಿಕ ಕಮೆಂಟು ಓದುವುದೇ ಮಜಾ - ಗೋಪಿನಾಥ

By ಗೋಪಿನಾಥ ರಾವ್, ದುಬೈ
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಗೋಪಿನಾಥ ರಾವ್, ದುಬೈ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ನನಗೆ ಸಿಗುವ ವಿರಾಮ ದಿನಕ್ಕೆ ಅರ್ಧಗಂಟೆಯೋ ಒಂದುಗಂಟೆಯೋ. ಆಗ ಕಂಪ್ಯೂಟರ್ ಹಾಕಿ ಕುಳಿತು ವಿಶ್ವದ ವಿದ್ಯಮಾನಗಳ ಕಡೆಗೆ ಕಣ್ಣು ಹಾಯಿಸುತ್ತೇನೆ. ನನ್ನ ಮುಖ್ಯ ಆಸಕ್ತಿ ನಮ್ಮ ದೇಶದ ರಾಜಕೀಯ, ಹಣಕಾಸು, ಶೇರು ಮಾರುಕಟ್ಟೆ, ಕ್ರಿಕೆಟ್ ಮತ್ತು ಸಿನೆಮಾ. ಇವುಗಳೊಂದಿಗೆ ಕನ್ನಡ ಸಾಹಿತ್ಯ ನನ್ನ ಮೆಚ್ಚಿನ ಹವ್ಯಾಸ.

ನನ್ನ ಆಸಕ್ತಿಯ ವಿಷಯಗಳು ಕನ್ನಡದಲ್ಲಿ ತಾಜಾ ಸುದ್ದಿಗಳಾಗಿ ಸಿಗುವುದೂ ಇಲ್ಲ. ಸಿಕ್ಕಿದರೂ ಆ ವಾರ್ತೆಗಳಲ್ಲಿ ಆಳವಾದ ಚಿಂತನೆಗಳು, ಅಭಿಪ್ರಾಯಗಳು, ವಿವರಣೆಗಳು ಸಿಗುವುದಿಲ್ಲ. ಕನ್ನಡದಲ್ಲಿ ಅಪರೂಪವಾಗಿ ಸಿಗುವ ತಾಜಾ ರಿಪೋರ್ಟುಗಳು ಯಾವುದೋ ಇಂಗ್ಲಿಷ್ ಲೇಖನದ ಅಥವಾ ಕೆಲವು ಲೇಖನಗಳ ಕೆಲ ಲೈನುಗಳ ಕಾಟಾಚಾರದ ಅನುವಾದ. ಅದಕ್ಕಾಗಿಯೇ ನಾನು ನನ್ನೆಲ್ಲ ಆಸಕ್ತಿಯ ವಿಷಯಗಳಿಗೆ ಇಂಗ್ಲಿಷ್ ವೆಬ್ ಸೈಟುಗಳ ಮೊರೆ ಹೋಗುತ್ತೇನೆ.

ಮತ್ತೆ ಕನ್ನಡ ಸಾಹಿತ್ಯ. ಸಾಹಿತ್ಯಕ್ಕೆ ಮೀಸಲಾದ ಜಾಲತಾಣಗಳು ಅರಳಿದ ವೇಗದಲ್ಲಿಯೇ ಮುದುಡಿ ಹೋಗಿವೆ. ಕನ್ನಡಿಗರ ಬ್ಲಾಗುಗಳು ಬೇಕಾದಷ್ಟಿವೆ. ಕೆಲವು ಬ್ಲಾಗುಗಳು ಲೇಖಕರು ಈ ಹಿಂದೆ ಬರೆದ ಲೇಖನಗಳ ಉಗ್ರಾಣ ಅಷ್ಟೆ. ಅವರು ಈಗ ಬರೆಯುತ್ತಿಲ್ಲ. ಇನ್ನು ಕೆಲವು ಸಾಹಿತ್ಯವಲ್ಲದ, ತಮ್ಮ ಮೂಗಿನ ನೇರದ ಧೋರಣೆಗಳಿಗೆ, ಮರ್ಜಿ ಜರೂರತ್ತುಗಳಿಗೆ ಬೆಂಬಲಕ್ಕಾಗಿ ಬಳಸಲ್ಪಡುವ ಬ್ಲಾಗುಗಳು. ಸಾಹಿತ್ಯದ ಬ್ಲಾಗುಗಳಲ್ಲಿ ಇವತ್ತು ಈಗ ಹಾಕಿದ ಲೇಖನ ಎನ್ನುವ ತಾಜಾತನ ಬೇಕಿಲ್ಲ. ವಿಷಯದಲ್ಲಿ ನಿರೂಪಣೆಯಲ್ಲಿ ತಾಜಾತನ ಇರಬೇಕು.

Kannada online survey 2014 : My expectations - Gopinath Rao

ಆದರೆ ಕನ್ನಡದಲ್ಲಿ ಬರೆಯುವ ಯುವ ಜನಾಂಗಕ್ಕೆ ಆತುರ.. ಬರೆಯಬೇಕು, ಪ್ರಕಟಿಸಬೇಕು.. ಮಿತ್ರರಿಗೆ ತಿಳಿಸಬೇಕು, ಲೈಕುಗಳನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ಅವಸರ. ತಿಂಗಳಿಗೆ ಒಂದು ಲೇಖನ ಬರೆದರೂ ಸಾಕು, ಲೇಖನದಲ್ಲಿ ಗುಣಮಟ್ಟ ಬರಬೇಕು ಎನ್ನುವ ಅಪೇಕ್ಷೆ ಇಲ್ಲ. ಮೌಲ್ಯಯುತವಾದ ಒಂದು ಪ್ರತಿಕ್ರಿಯೆ ಬಂದರೂ ಸಾಕು ಎನ್ನುವ ಅರಿವು ಇಲ್ಲ. ಹೀಗಾಗಿ ಜೊಳ್ಳು ಮತ್ತು ಕಾಳುಗಳನ್ನು ಬೇರ್ಪಡಿಸುವುದು ದೊಡ್ಡ ಸಾಹಸ. ನನಗೆ ಸಿಗುವ ನಿಯಮಿತ ಅವಧಿಯಲ್ಲಿ ಕ್ಷಿಪ್ರವಾಗಿ ಜಾಲಾಡಿಸುವಾಗ ಜೊಳ್ಳುಗಳ ನಡುವೆ ಒಳ್ಳೆಯ ಕಾಳುಗಳು ಸಹ ಕಣ್ತಪ್ಪಿ ಹೋದದ್ದೇ ಹೆಚ್ಚು.

ಕನ್ನಡ ಜಾಲದಲ್ಲಿ ಒಂದಷ್ಟು ತಾಜಾ ಸುದ್ದಿ, ಸುದ್ದಿಗಳ ಬಗೆಗೆ ಮೌಲ್ವಿಕ ಟಿಪ್ಪಣಿಗಳು, ಗುಣಮಟ್ಟದ ಸಾಹಿತ್ಯ ಚರ್ಚೆಗಳು, ಪ್ರಾಮಾಣಿಕ ಕಮೆಂಟುಗಳು (ತಂಡ ಕಟ್ಟಿಕೊಂಡು ಅಟ್ಟಾಡಿಸಿ ಬಂದು ಜಾಲತಾಣದಿಂದಲೇ ಓಡಿಸುವ ಕಮೆಂಟುಗಳಲ್ಲ) ಇವೆಲ್ಲ ಇರಬೇಕು.. ವಿಭಿನ್ನ ವೈವಿಧ್ಯದ ಪ್ರಾಮಾಣಿಕ ಕಮೆಂಟುಗಳನ್ನು ಓದುವುದೇ ಒಂದು ಬೇರೆಯೇ ಮೋಜು. ಕರ್ನಾಟಕದ ಮೂಲೆ ಮೂಲೆಯ ಸುದ್ದಿಗಳು, ಬೇರೆಲ್ಲೂ ಸಿಗದ ಆಸಕ್ತಿಯ ವಿವರಗಳು, ನಾಲ್ಕಾರು ಬಾರಿ ನಗೆ ಬರಿಸುವ ಕ್ಷಣಗಳು ಸಿಕ್ಕಿದರೆ ಸಂತೋಷ. ಜೊಳ್ಳು ಮತ್ತು ಕಾಳುಗಳನ್ನು ಬೇರ್ಪಡಿಸಿ ಇದು ನೋಡಿ ಗಟ್ಟಿಕಾಳು ಎಂದು ಯಾರಾದರೂ ಕೊಂಡಿಗಳನ್ನು ದಯಪಾಲಿಸಿದರೆ ಮತ್ತೂ ಚೆನ್ನ..

ವಿಶ್ವದ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವ ಲೇಖನಗಳ ಹಾಗೆಯೇ ಕನ್ನಡದ ಪ್ರತಿಭೆಗಳನ್ನು ಕನ್ನಡಿರಿಗೆಲ್ಲ ಪರಿಚಯಿಸುವ ಲೇಖನಗಳು ಆಗಾಗ ಬರುತ್ತಾ ಇರಬೇಕು. ವಿಶಿಷ್ಟ ಸಾಧಕರ ಪರಿಚಯ ಲೇಖನ-ವಿಡಿಯೋ ತುಣುಕುಗಳ ಮಾಲೆಗಳೂ ಆಗಾಗ ಬಂದರೆ ಬೇಕಾದಷ್ಟಾಯಿತು. ಸಾಧ್ಯವಿದೆಯೇ? ಶೂನ್ಯ ರೆವೆನ್ಯೂ ಮೊಡೆಲುಗಳಲ್ಲಿ ಸಾಧ್ಯವಿಲ್ಲದ ಅಪೇಕ್ಷೆಗಳು ನನ್ನವು ಎಂಬುದನ್ನು ಅರಿತುಕೊಂಡೇ ಬರೆದಿದ್ದೇನೆ.. ಆಶಯಕ್ಕೂ ಮಿತಿಯಾಕೆ!

ನಾನು ಟ್ವಿಟ್ಟರಿನಲ್ಲಿದ್ದೇನೆ.. ಜಗತ್ತಿನ ಅದರಲ್ಲೂ ಮುಖ್ಯವಾಗಿ ಭಾರತದ ಆಗುಹೋಗುಗಳನ್ನು ತಿಳಿಹಾಸ್ಯದ ನನ್ನದೇ ಶೈಲಿಯಲ್ಲಿ ಚುಟುಕಾಗಿ ದಾಖಲಿಸುವ ಪ್ರಯತ್ನ. ಬಂದು ಹೋಗುತ್ತಿರಿ..

English summary
In-depth Kannada articles, quality debates, sincere comments, interesting news from all corners, some humorous write ups... These are the expectations of Gopinath Rao from Dubai, on Kannada online. He suggests, the writers should not write just for the sake of writing, but should concentrate on quality articles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X