ನಾವು ನೀವು ಮತ್ತು ಬಿಜೆಪಿ ಕರೆಂಟು

SK Shama Sundara
ಬೆಂಗಳೂರು, ಅ.27 : "ಮತ್ತೆ ವಿದ್ಯುತ್ ಕಡಿತ, ನಗರದಲ್ಲಿ ದಿನಕ್ಕೆ 2 ಗಂಟೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಗಂಟೆ ಕರೆಂಟು ಖೋತಾ" ಎಂಬಂತಹ ಸುದ್ದಿ ಪತ್ರಗಳನ್ನು ಬರೆದೂ ಬರೆದೂ ನಮ್ಮ ಉಪಸಂಪಾದಕರಿಗೆ ಬೇಜಾರಾಗಿದೆಯಂತೆ. "ಈ ಭಾಜಪ ಸರಕಾರ ಬಂದನಂತರವಂತೂ ಬರೆದದ್ದನ್ನೇ ಬರೆಯಬೇಕಾಗಿರುವ ಕೆಲಸ ಸಾಕು ಸಾಕಾಗಿದೆ ಸಾರ್" ಎಂದು ಜನರೇಟರ್ ಕರೆಂಟಿನಿಂದ ಉದ್ದೀಪನಗೊಂಡ ಕಂಪ್ಯೂಟರ್ ನಲ್ಲಿ ಕನ್ನಡ ಯೂನಿಕೋಡ್ ಪದಗಳನ್ನು ಕುಟುಕುವ ನಮ್ಮ ನಿಲಯದ ಪತ್ರಕರ್ತರು ಜಿಗುಪ್ಸೆಪಟ್ಟುಕೊಳ್ಳುತ್ತಿದ್ದಾರೆ.

ಅವರು ಜಿಗುಪ್ಸೆಗೆ ಕಾರಣಗಳಿವೆ. ಲೋಡ್ ಶೆಡ್ಡಿಂಗ್ ಮಾಡುವುದಾಗಿ ಹೇಳಿಕೆಗಳನ್ನು ಕೊಡುವ ಮತ್ತು ಹೇಳಿಕೆ ಕೊಟ್ಟಹಾಗೆ ನಡೆದುಕೊಳ್ಳುವ ಕೆಪಿಟಿಸಿಎಲ್ ಕಂಪನಿಯ ನಿಯತ್ತಿನ ಬಗ್ಗೆಯೇ ಪತ್ರಕರ್ತರಿಗೆ ಬೇಸರವಿದೆ. ವರ್ಷಕ್ಕೆ ಏನಿಲ್ಲವೆಂದರೂ ಏಳೆಂಟು ಹತ್ತು ಬಾರಿ ವಿದ್ಯುತ್ ಖೋತಾ ಆಗುವ ಸುದ್ದಿಗಳನ್ನು ಬರೆಯಬೇಕು, ಬರೆದು ಬಿಸಾಕಬೇಕು. ಕರೆಂಟು ಖೋತಾದಿಂದ ಎಲ್ಲರಿಗೂ ಒಂದಲ್ಲಾ ಒಂದು ಬಗೆಯ ತೊಂದರೆಯಾಗುವುದು ನಿಸ್ಸಂಶಯ. ನಿಮ್ಮ ದಟ್ಸ್ ಕನ್ನಡ ಕಚೇರಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ.

ನಮ್ಮ ಅಡ್ಮಿನ್ ಬಾಲರಾಜ್ ತಂತ್ರಿ ಅವರ ವರದಿ ಪ್ರಕಾರ ಈ ವರ್ಷದಲ್ಲಿ (2009)ಕನಿಷ್ಠ ದಿನಕ್ಕೆ 2 ಗಂಟೆಯಂತೆ ಕರೆಂಟು ಕೈಕೊಟ್ಟಿದೆ. ಕರೆಂಟು ಹೋದಾಕ್ಷಣ ಆಪತ್ತಿನ ಕಾಲಕ್ಕೆ ಆಗುವ ನೆಂಟ 250 KVA, Diesel Genarator. ಈ ಹತ್ತು ತಿಂಗಳಲ್ಲಿ ಸರಾಸರಿ ದಿನಕ್ಕೆ ಎರಡು ಗಂಟೆ ಲೆಕ್ಕದಲ್ಲಿ ಒಟ್ಟು ಸುಮಾರು 600 ಗಂಟೆಗಳ ಕಾಲ ಡೀಸೆಲ್ ಜನರೇಟರ್ ಓಡಿದೆ. ಡೀಸೆಲ್ ಬೆಲೆ ಲೀಟರಿಗೆ 37.01 ರೂಪಾಯಿ. ಕುಡುಕ ಜನರೇಟರ್ ಒಂದು ಗಂಟೆಗೆ 20 ಲೀಟರ್ ಎಣ್ಣೆ ಗುಟಕರಿಸುತ್ತಾನೆ.

ಇದು ನಾವು ನಿಮಗೊಪ್ಪಿಸುತ್ತಿರುವ ಒಂದೇ ಒಂದು ಪುಟಾಣಿ ಉದಾಹರಣೆ. ಕೆಪಿಟಿಸಿಎಲ್ ಸೋಮವಾರ (ಅ. 27) ರಂದು ಹೊರಡಿಸಿರುವ "ಮತ್ತೆ ಲೋಡ್ ಶೆಡ್ಡಿಂಗ್" ಪ್ರಕಟಣೆಯನ್ನು ಓದಿ ಇದೆಲ್ಲ ಬರೆಯಬೇಕಾಗಿ ಬಂತು. ಅಷ್ಟೇ ವಿನಃ ಮತ್ತೇನಿಲ್ಲ. ಇದು ನಮ್ಮ ಕತೆಯಾಯಿತು. ನಿಮ್ಮ ಕತೆ? ನೀವು ನಿಮ್ಮ ಅನುಭವಗಳನ್ನು ಹೇಳುವ ಮುಂಚೆ ಇನ್ನೊಂದು ಮಾತನ್ನು ನಿಮಗೆ ತಿಳಿಸಬೇಕು.

ಈ ಪವರ್ ಕಟ್ ಕಥಾಕಾಲಕ್ಷೇಪ ಮಾಡುವ ಸಮಯಕ್ಕೆ ಸರಿಯಾಗಿ ಬಿಜೆಪಿ ಸರಕಾರದಲ್ಲಿ ಪವರ್ ಸ್ಟ್ರಗಲ್ ಕೋಲಾಹಲ ಉಕ್ಕುತ್ತಿರುವುದು ಕಾಕತಾಳೀಯ ಅಂತೀರಾ? ಇದು ಇನ್ನೇನು ತಾರಕ್ಕೆ ಹೋದರೂ ಹೋಗಬಹುದು. ಒಳಜಗಳ, ರೆಡ್ಡಿಗಳ ಕಬಡ್ಡಿ, ಶೋಭಾ ಕರಂದ್ಲಾಜೆಯ ಅಧಿಕಪ್ರಸಂಗತನ ಮತ್ತು ಕೋಟೆ ಭದ್ರವಾಗಿಟ್ಟುಕೊಳ್ಳಲು ಯಡಿಯೂರಪ್ಪನವರು ಪಡುತ್ತಿರುವ ಪಾಡು ನಗೆ ತರಿಸುತ್ತಿದೆ.

ನಮ್ಮ ಕಚೇರಿಯಲ್ಲಿ ಕರೆಂಟು ಹೋದರೂ ಪರವಾಗಿಲ್ಲ, ಇನ್ನೂ 17 ತಿಂಗಳ ಅಧಿಕಾರ ಸರಿಯಾಗಿ ಪೂರೈಸದೆ, ಸಿಂಗಲ್ ಫೇಸಲ್ಲಿ ಮಿಣಕುತ್ತಿರುವ ಸರಕಾರದ ಕರೆಂಟು ಹೋಗದಿದ್ದರೆ ಸಾಕು, ತಿಮ್ಮಪ್ಪನೇ ಎಂದು ಪ್ರಾರ್ಥಿಸುತ್ತೇವೆ. ಯಾಕೆಂದರೆ, ಮತ್ತೆ ಮತ್ತೆ ಪ್ರಣಾಳಿಕೆ, ಚುನಾವಣೆ, ಫಲಿತಾಂಶ, ಮೈತ್ರಿ ಸರಕಾರ, ಪ್ರಮಾಣವಚನಗಳ ಬಗ್ಗೆ ಬರೆಯುವುದಕ್ಕೆ ನಮ್ಮ ಮೈಬಗ್ಗಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+