ವಿರಸವೆಂಬ ವಿಷಕೆ ಬಿಜೆಪಿ ಬಲಿ?

ನಗರದ ಗೃಹ ವಿಜ್ಞಾನ ಕಾಲೇಜಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರತಿ ಹಂತದಲ್ಲೂ ಬಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದರು. ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಪಕ್ಕಕ್ಕಿಟ್ಟು ಸಿಎಂ, "ನಾನು ಇಂದು ಆತಂಕದಲ್ಲಿದ್ದೇನೆ ನಿಜ. ಆದರೆ, ಅತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ" ಎಂದರು.
ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹವಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದರೇ ಹೇಗೆ? ಹೆತ್ತ ತಾಯಿ ಮಗುವಿಗೆ ವಿಷ ಉಣಿಸಿದರೆ ರಾಜ್ಯ ಮತ್ತು ದೇಶವನ್ನು ಕಾಪಾಡುವವರು ಯಾರು ಎಂದು ಪ್ರಶ್ನಿಸಿದ ಯಡಿಯೂರಪ್ಪ ಅವರ ಕಣ್ಣಂಚಲ್ಲಿ ನೀರು ಗಳಗಳ ಸುರಿಯಲಾರಂಭಿಸಿತು. ಒಳ್ಳೆಯ ಕೆಲಸ ಮಾಡುವುದು ಅಪರಾಧವೇ? ಪ್ರಾಮಾಣಿಕವಾಗಿರುವುದು ಅಪರಾಧವೇ? ಮೂರು ಗಂಟೆಗಳ ಕಾಲ ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ನಿರಂತರ ಚರ್ಚೆ ನಡೆಸಿ ಇಲ್ಲಿಗೆ ಬಂದಿರುವೆ ಎಂದು ಗದ್ಗದಿತರಾದರು.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಮನೆಗಳ ನಿರ್ಮಾಣ ಮಾಡುವುದು ಸರಕಾರದ ಗುರಿ. ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಸಂತ್ರಸ್ತರ ನೆರೆವಿಗೆ ರಾಜ್ಯದ ಜನತೆ ಸ್ಪಂದನೆಯನ್ನು ನೆನೆಪಿಸಿಕೊಂಡ ಅವರು, ಪಾದಯಾತ್ರೆ ಮೂಲಕ ಮೂರು ದಿನದಲ್ಲಿ 1000 ಕೋಟಿ ರುಪಾಯಿ ಸಂಗ್ರಹಿಸಿರುವೆ. ಈಗಲೂ ಕೂಡಾ ಅನೇಕ ಮಂದಿ ದೇಣಿಗೆ ಕೊಡಲು ಕಾತುರರಾಗಿದ್ದಾರೆ. ಆದರೆ, ಆ ಕೆಲಸವನ್ನು ಸಮರ್ಪಕವಾಗಿ ಮಾಡಲು ಸೂಕ್ತ ರೀತಿಯಲ್ಲಿ ಸಹಕಾರ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕಳೆದ ಎರಡು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ರೆಡ್ಡಿ ಸಹೋದರರನ್ನು ನೆರೆ ಪರಿಹಾರದಲ್ಲಿ ನಿರ್ಲಕ್ಷ ಹಾಗೂ ಲಾರಿ ಮೇಲೆ ಸುಂಕ ವಿಷಯದಲ್ಲಿ ರೆಡ್ಡಿ ಮತ್ತು ಮುಖ್ಯಮಂತ್ರಿ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ರೆಡ್ಡಿ ಪಟ್ಟು ಹಿಡಿದಿದ್ದಾರೆ. ಇಂದು ಬಿಜೆಪಿ ಪಾಳೆಯದಲ್ಲಿ ಭಾರಿ ಕೋಲಾಹಲ ಕೆರಳಿಸಿದೆ.
ಭಿನ್ನಮತೀಯ ಪಾಳೆಯದಲ್ಲಿ ತಲೆ ಎತ್ತಿರುವ ಈ ವಿರಸ ಹೇಗೆ ತಣ್ಣಗಾಗುತ್ತೆ ಗೊತ್ತಿಲ್ಲ. ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಬೆಂಕಿ ಆರಿಸಬೇಕು. ಅಥವಾ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಧುರೀಣರು ಬಿಗಿಪಟ್ಟನ್ನು ಸಡಿಲಗೊಳಿಸಿ ಮತ್ತೆ ಸಾಮರಸ್ಯ ಹಾಗೂ ಆಡಳಿತ ಚಟುವಟಿಕೆಗಳತ್ತ ಮುಖ ಮಾಡಬೇಕು. ಇವ್ಯಾವೂ ಆಗದೇ ಹೋದರೆ, "ಕೋಡಿಮಠ ಸ್ವಾಮೀಜಿಗಳು ನುಡಿದ ಭವಿಷ್ಯ ನಿಜವಾಗುವುದಂತೂ ಸತ್ಯ."
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications