ಗೌರಿ ಗಣೇಶರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು

By: * ಎಸ್ಕೆ. ಶಾಮ ಸುಂದರ
Subscribe to Oneindia Kannada
Happy Gowri Ganesha festival
ವಿರೋಧಿ ನಾಮ ಸಂವತ್ಸರದ ಗಣೇಶ ಚತುರ್ಥಿ, ಗೌರಿ ತೃತೀಯದ ಶುಭಾಶಯಗಳು. ಭಾದ್ರಪದ ಮಾಸ ಶುಕ್ಲಪಕ್ಷ ಆಗಸ್ಟ್ 22 ಶನಿವಾರ ಗೌರಿ ಹಬ್ಬ, ಸ್ವರ್ಣಗೌರೀ ವ್ರತ. 23ರ ಭಾನುವಾರ ಸಿದ್ದಿ ವಿನಾಯಕ, ಬುದ್ದಿ ವಿನಾಯಕ, ವಿಘ್ನನಾಶಕ ಗಣೇಶ ಚತುರ್ಥಿ. ಶನಿವಾರದಂದು ಸಾಮೋಪಕರ್ಮ ಇರುತ್ತದೆ. ಈ ಬಾರಿ ಹಬ್ಬಗಳು ವಾರಾಂತ್ಯದಲ್ಲಿ ಬಂದಿರುವುದರಿಂದ ಸರಕಾರಿ ರಜಾದಿನಗಳ ಲಾಭವನ್ನು ಹಿಂದೂ ಕುಂಟುಂಬಗಳು ಪಡೆಯಲಾರವು. ಶನಿವಾರ ರಾಜ್ಯ ಸರಕಾರಿ ಕಚೇರಿಗಳಿಗೆ ನಿರ್ಬಂಧಿತ ರಜೆ ಸೌಲಭ್ಯ ಉಂಟು. ನಮ್ಮ ಮಹಿಳಾ ಕಾರ್ಮಿಕರನೇಕರು ರಜೆ ಪಡೆದು ಪೂಜೆ, ವ್ರತ, ಅಡುಗೆ, ಹಬ್ಬದ ಕೆಲಸ ಕಾರ್ಯಗಳಲ್ಲಿ ತನ್ಮರಾಗುವುದರಿಂದ ಬಹುತೇಕ ಕಚೇರಿಗಳಲ್ಲಿ ಶನಿವಾರ ಕೇವಲ ಗಂಡುಮುಖಗಳೇ ಕಾಣಿಸುವುದು ಸಹಜ.

ಐಟಿ ಕ್ಷೇತ್ರದಲ್ಲಿ ಹೇಗಿದ್ದರೂ ವಾರಕ್ಕೆ ಐದು ದಿನ ತಾನೆ? ಶನಿವಾರ ರಜೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪಾಗುತ್ತದೆ. ನಾವು ಈಗ ಬದುಕುತ್ತಿರುವುದು ದುರ್ಭರ ಆರ್ಥಿಕ ಕಾಲದಲ್ಲಾದ್ದರಿಂದ ಅನೇಕ ಕಚೇರಿಗಳಲ್ಲಿ ಶನಿವಾರದಂದೂ ಕೇಜಿಗಟ್ಟಲೆ ಲೆಕ್ಕದಲ್ಲಿ ಪ್ರೋಗ್ರಾಮುಗಳನ್ನು ಬರೆಯುವ ಕೆಲಸಗಳಿರುತ್ತವೆ. ಜಡೆಯಲ್ಲಿ ಹಬ್ಬದ ಹೂವು ಮುಡೆಯಲಾಗದೆ ಕಿವಿಯಲ್ಲಿ ಫೋನು ಸಿಗಿಸಿಕೊಂಡು ಕರೆಗಳನ್ನು ಸ್ವೀಕರಿಸುವ ಕಾಲ್ ಸೆಂಟರ್ ಹುಡುಗಿಯರಿಗೆ ಈ ಬಾರಿಯ ಗೌರಿ ಹಬ್ಬದ ಸಂಭ್ರಮ ಅಷ್ಟಕ್ಕಷ್ಟೇನೆ. ಮುಂದಿನ ವರ್ಷ ಪರಿಸ್ಥಿತಿ ಹೇಗಿರತ್ತೋ ಏನೋ, ನೋಡಿಕೊಳ್ಳೋಣ.

ಮಧ್ಯಮ ಮತ್ತು ಕೆಳ ಮಧ್ಯಮ ವರ್ಗಕ್ಕೆ ಸೇರಿದವರ ಮನೆಗಳಲ್ಲಿ ಹಣದ ಚಲಾವಣೆ ಕಡಿಮೆ ಆಗಿರುವುದರಿಂದ ಹಬ್ಬ ಅದ್ದೂರಿಯಾಗುವುದಿಲ್ಲ. ಸಾರ್ವಜನಿಕ ಗಣೇಶ ಕೂಡಿಸುವ ಸಂಘ ಸಂಸ್ಥೆಗಳ ಸ್ಥಿತಿಯೂ ಅಷ್ಟೆ. ಗಣೇಶನ ಕೂರಿಸ್ತೀವಿ, ಹುಂಡಿಗೆ ಕಾಸು ಹಾಕಿ ಎಂದು ಹುಡುಗರು ಕೇಳಿದರೆ, ಪ್ರಾಮಾಣಿಕವಾಗಿ ಡಬ್ಬಕ್ಕೆ ಕಾಸುಗಳು ಬೀಳುತ್ತವೆಯೇ ವಿನಾ ಕಾಗದದ ನೋಟುಗಳು ಬೀಳವು. ಮನೆಗಳಲ್ಲೂ ಅಷ್ಟೆ. ಬೆಲೆಗಳ ಸೂಚ್ಯಂಕವನ್ನು ಮತ್ತದರ ಪರಿಣಾಮಗಳನ್ನು ಅಕ್ಷರಶಃ ಅನುಭವಿಸುವ ಶ್ರೀಸಾಮಾನ್ಯರು ಆರ್ಥಿಕ ಸಂಕಷ್ಟಗಳಿಗೆ ಪ್ರತಿದಿನ ಭಾಷ್ಯ ಬರೆಯುತ್ತಲೇ ಇರುತ್ತಾರೆ. ತಮಾಷೆಗೆ ಹೇಳುವುದಾದರೆ, ನಮ್ಮ ಹೆಣ್ಣುಮಕ್ಕಳು ರಂಗೋಲಿಯಲ್ಲಿ ಬರೆಯುವ ಟಿಪ್ಪಣಿಗಳು ಸ್ವಾಮಿನಾಥನ್ ಅಯ್ಯರ್ ಅಥವಾ ಸಿ ವಿಠಲ್ ಬರೆಯುವ ಅಂಕಣಗಳಿಗಿಂತ ಸತ್ಯಕ್ಕೆ ಹತ್ತಿರವಾಗಿರುತ್ತವೆ.

ಉದಾಹರಣೆಗೆ, ಮೈಸೂರಿನ ಕುವೆಂಪು ನಗರದ ಶ್ರೀಲಕ್ಷ್ಮೀ ಜೆರಾಕ್ಸ್ ಕಾರ್ನರ್ ನಲ್ಲಿ ದಿನಕ್ಕೆ 60 ರೂಪಾಯಿ ಸಂಪಾದಿಸಿ ಸಂಸಾರ ತೂಗಿಸುವ ತನುಜ ಕೇಜಿಗೆ 180 ರೂಪಾಯಿ ತೆತ್ತು ಶಾವಂತಿಗೆ ಹೂವು ಎಲ್ಲಿಂದ ತಂದಾಳು. ಹೊಸ ಸೀರೆ ಖರೀದಿ ದೀಪಾವಳಿಗೆ ಮಾಡಿದರಾಯಿತು ಎನ್ನುವುದು ಅವಳ ನಿಲುವು. ಪರವಾಗಿಲ್ಲ ಬಿಡಿ. ಹಬ್ಬ, ವ್ರತ, ಪೂಜೆ ಪುನಸ್ಕಾರಗಳು ಖರ್ಚಿನ ಬಾಬತ್ತಾದರೂ ಗಣೇಶ ಗೌರಿ ಮನೆ ಬಾಗಿಲಿಗೆ ಬಂದು ಕಾಲಿಂಗ್ ಬೆಲ್ಲು ಒತ್ತಿ ತಮಗೆ ಹಬ್ಬದ ಬಿಲ್ಲು ಕಟ್ಟಿರಿ ಎಂದೇನು ಕೇಳುವುದಿಲ್ಲ. ಆಕಸ್ಮಾತ್ ಗಣೇಶ ನಿಮ್ಮನ್ನು ಕೇಳುವುದೇ ಆದರೆ 21 ಗರಿಕೆ ಮತ್ತು 21 ನಮಸ್ಕಾರಗಳನ್ನು ಮಾತ್ರ. ನಮ್ಮ ಗೌರಿನೂ ಅಷ್ಟೆ, ಕುಂಕುಮ ಅರಿಶಿನವನ್ನಷ್ಟೆ ಬೇಡುವ ನಿರಾಭರಣ ಸುಂದರಿ ಅವಳು. ಅವರು ಕೇಳಿದ್ದನ್ನು ಕೊಟ್ಟುಬಿಡಿ. ಹಬ್ಬ ಮಾಡಿ.

(ಗಣೇಶ ಹಬ್ಬದ ನಿಮಿತ್ತ ದಟ್ಸ್ ಕನ್ನಡ ಕಚೇರಿಗೆ ಭಾನುವಾರ ರಜಾ ಘೋಷಿಸಲಾಗಿದೆ.)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...