ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ‘ಮುಂಗಾರು ಮಳೆ’ ಅಶ್ವಮೇಧ!!!‘ಮುಂಗಾರು ಮಳೆ’ ಭಾವಸಿಂಚನಕ್ಕೆ ಪುಳಕಗೊಂಡ ಪೂರ್ವಕರಾವಳಿ

By Staff
|
Google Oneindia Kannada News


ಒಂದು ಚಿತ್ರದ ಗೆಲುವು ಪಾವಗಡದಲ್ಲಿ ಮಳೆ ಸುರಿದಷ್ಟೇ ಅನಿರೀಕ್ಷಿತ, ಅಪ್ಯಾಯಮಾನ. ಮಳೆ ಕೆಲವರಿಗೆ ಹಿತ, ಕೆಲವರಿಗೆ ಸಾಕಪ್ಪಾ ಸಾಕು. ಸಾಕಪ್ಪಾ ಸಾಕು ಅನ್ನುವವರೂ ಬೇಕು ಬೇಕು ಅನ್ನುವಂಥ ‘.. ಮಳೆ’ ವಿಶ್ವದೆಲ್ಲೆಡೆ ಸುರಿಯುತ್ತಿದೆ! ಈಗ ಉತ್ತರ ಅಮೆರಿಕಾದ ಪೂರ್ವ ಕರಾವಳಿಯ ಸರದಿ. ಅಂಥ ಪ್ರೀತಿ ಮಳೆಯಲ್ಲಿ ತೊಯ್ಯುವ ಸುಖ..ಗೊತ್ತೇ ಇರಲಿಲ್ಲ. ಹೂಂ. ಅಂತೀರಾ? ಉಹೂಂ ಅಂತಿರಾ?

A still from Mungaru Maleಜೀವಮಾನದಲ್ಲಿ ಮತ್ತೆ ಕನ್ನಡಚಿತ್ರ ನೋಡಲೇಬಾರದು ಎಂದು ಭೀಷ್ಮ ಪ್ರತಿಜ್ಞೆ ಮಾಡುವುದಕ್ಕೆ ಪ್ರೇರಣೆ ನೀಡುವಷ್ಟು ಕೆಟ್ಟದಾಗಿರುವ ಅನೇಕಾನೇಕ ಚಲನಚಿತ್ರಗಳು, ಕರುನಾಡಿನಲ್ಲಿ ಬಂದುಹೋಗಿವೆ. ಪ್ರೇಕ್ಷಕರು ನಿರಾಶರಾಗಿ, ನಿರ್ದೇಶಕ ಹತಾಶನಾಗಿ ನಿರ್ಮಾಪಕರು ಚೆಂಬು ಹಿಡಿದುಕೊಂಡು ಹೋಗಿದ್ದಾರೆ. ಅಂತೆಯೇ, ಮರೆತೆನೆಂದರೆ ಮರೆಯಲಿ ಹ್ಯಾಂಗ ಎನ್ನುವಂಥ ಕೆಲವಾರು ಉತ್ತಮ ಚಲನಚಿತ್ರಗಳೂ ತೆರೆಕಂಡಿವೆ. ಬೈದವೆ, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಚಿತ್ರ ಯಾವುದು ? ಯಾಕೆ? ನಮಗೆ ಸ್ವಲ್ಪ ಹೇಳ್ತೀರಾ?

ಕೆಟ್ಟ ಸಿನಿಮಾಗಳು ಹಂಚಿಕೆದಾರನ, ಪ್ರದರ್ಶಕನ ಕೆಲವೊಮ್ಮೆ ನಾಯಕನ ಪ್ರಭಾವಳಿಯಿಂದ ಅಥವಾ ಜ್ಯೋತಿಲಕ್ಷ್ಮಿ, ಪದ್ಮಮಾಲಿನಿಯಂಥ ತುಂಬು ಎದೆಯ ಕಣ್ಮಣಿಗಳ ಮೋಹಕತೆಯಿಂದಾಗಿ ಹಣಗಳಿಸಿದ ಉದಾಹರಣೆಗಳು ಕನ್ನಡನಾಡಿನಲ್ಲಿ ಸಿಗುತ್ತವೆ. ವಿಮರ್ಶಕರ ಮನಗೆದ್ದು, ಪ್ರಶಸ್ತಿ ಪಡೆದುಕೊಂಡ ಅರ್ಥಗರ್ಭಿತ ಚಿತ್ರಗಳು ಇತರೆ ಕಾರಣಗಳಿಂದಾಗಿ ಗಲ್ಲಾಪೆಟ್ಟಿಗೆಯಲ್ಲಿ ಸೋತ ಉದಾಹರಣೆಗಳು ಬಹಳಷ್ಟಿವೆ. ನಿಮ್ಮ ಪಟ್ಟಿಯಲ್ಲಿರುವ ಈ ಬಗೆಯ ಸಿನಿಮಾಗಳ ಹೆಸರುಗಳನ್ನೂ ನಮಗೆ ಸ್ವಲ್ಪ ಬರೆದು ತಿಳಿಸಿಬಿಡ್ತೀರಾ?

ಕನಸುಗಳನ್ನು ಮಾರುವ ಈ ಉದ್ಯಮದಲ್ಲಿ ಕಸ ರಸವಾಗುವುದು, ರಸವು ಕಸಕ್ಕಿಂತ ಕಡೆಯಾಗುವುದು ಸಹಜ. ಈ ಪ್ರವೃತ್ತಿಗೆ ಬೇಕಾದಷ್ಟು ದೃಷ್ಟಾಂತಗಳು ಲಭ್ಯವಿದೆ. ಒಂದು ಸಿನಿಮಾ ಏಕೆ ಗೆಲ್ಲುತ್ತದೆ ಮತ್ತು ಯಾಕೆ ಸೋಲುತ್ತದೆ ಎಂದು ನಿಖರವಾಗಿ ಹೇಳುವುದಕ್ಕೆ ಎಂಥ ಸಿನಿಮಾ ಕರ್ಮಚಾರಿಗೂ ಆಗುವುದಿಲ್ಲ. ರಾಜ್‌ಕಪೂರ್‌ ಕೂಡ ಕಷ್ಟಪಡುತ್ತಿದ್ದನು..

ಈ ನಡುವೆ, ಸೋಲುಗೆಲವುಗಳಾಚೆ ಸಪ್ತಸಾಗರಗಳಾಚೆ ಸಾಗಿರುವ ‘ಮುಂಗಾರುಮಳೆ’ ಚಿತ್ರದ ಜನಪ್ರಿಯತೆಯನ್ನು ಗಮನಿಸಿದರೆ, ಎಂಥ ನಟನಿಗಾದರೂ ಕಾಮಿಡಿ ಗಣೇಶನ ಮೇಲೆ ಅಸೂಯೆ ಬರುತ್ತದೆ. ಗಾಂಧೀನಗರದ ದೊಡ್ಡದೊಡ್ಡ ಬ್ಯಾನರ್‌ಗಳ ನಿರ್ಮಾಪಕರು ಕೃಷ್ಣಪ್ಪ ಛತ್ರಿ ಹಿಡಿದುಕೊಂಡು ಮಳೆದುಡ್ಡು ಎಣಿಸುವುದನ್ನು ನೋಡಿ ಹೊಟ್ಟೆ ಕಿವುಚಿಕೊಳ್ಳುತ್ತಿದ್ದಾರೆ. ಯೋಗರಾಜ್‌ ಭಟ್‌ ಕ್ಲೌಡ್‌ ಒಂಭತ್ತರಲ್ಲಿ ತಿರುಗುತ್ತಿರುವುದರಿಂದ ಯಾರ ಕೈಗೂ ಸಿಗುತ್ತಿಲ್ಲ.

ಕರ್ನಾಟಕದಲ್ಲಿ ‘ಮುಂಗಾರು ಮಳೆ’ ರಸಿಕರ ಮನಸ್ಸನ್ನು ಸೂರೆಗೊಂಡದ್ದು ಮತ್ತು ಹಣ ಬಾಚಿಕೊಳ್ಳುವುದು ನಿಮಗೆಲ್ಲ ಗೊತ್ತಿದೆ. ಅಂದಹಾಗೆ ನೀವು ಎಷ್ಟು ಸಲ ನೋಡಿದ್ರಿ ಆ ಸಿನಿಮಾನ? ಜೀವಕೆ ರೆಕ್ಕೆ ತರುವ ಆ ಹಾಡನ್ನು ಎಷ್ಟು ಬಾರಿ ಕೇಳಿದ್ರೀ?

ವಿದೇಶಗಳಲ್ಲಿ ಕನ್ನಡ ಸಿನಿಮಾ ಜಯಭೇರಿ ಬಾರಿಸುವ ವಿದ್ಯಮಾನಕ್ಕೆ ‘ಮುಂಗಾರು ಮಳೆ’ ಬಿಟ್ಟರೆ ಇನ್ನೊಂದು ಉದಾಹರಣೆ ನನಗೆ ಸಿಕ್ಕಿಲ್ಲ. ಲಂಡನ್‌ನಲ್ಲಿ, ದುಬೈನಲ್ಲಿ, ಅಮೆರಿಕಾದಲ್ಲಿ.. ಎಲ್ಲಂದರಲ್ಲಿ ಮುಂಗಾರು ಹನಿಗಳು ಒಣಗಿದ ನೆಲವನ್ನು ತಣಿಸುತ್ತಿರುವ ವಾರ್ತೆಗಳು ದಟ್ಸ್‌ಕನ್ನಡ ಸುದ್ದಿಮನೆಗೆ ನಿತ್ಯ ಬರುತ್ತಿವೆ.

ಅಮೆರಿಕಾದ ರಾಜಧಾನಿ ವಾಷಿಂಗ್‌ಟನ್‌ನಲ್ಲಿ ಇವತ್ತಿನಿಂದ ಆರಂಭವಾಗಿ ಸತತ 15 ಪ್ರದರ್ಶನಗಳನ್ನು ಕಾಣುತ್ತಿರುವ ಏಕೈಕ ಕನ್ನಡ ಚಿತ್ರ ‘ಮುಂಗಾರು ಮಳೆ’. ಜೂನ್‌ 8ರ ಶುಕ್ರವಾರ ಶುರುವಾಗಿ ಶನಿವಾರ, ಭಾನುವಾರ ಮಾರ್ನಿಂಗ್‌ ಶೋ, ಮ್ಯಾಟನಿ ಮತ್ತು ಫಸ್ಟ್‌ ಶೋ ಏರ್ಪಾಟಾಗಿದೆ. ಮತ್ತೆ ಮಂಗಳವಾರ ಬುಧವಾರ ಮ್ಯಾಟನಿ ಮತ್ತು ಫಸ್ಟ್‌ ಶೋ !!

ವಾಷಿಂಗ್‌ಟನ್‌, ಮೇರಿಲ್ಯಾಂಡ್‌, ವರ್ಜೀನಿಯ ಪ್ರಾಂತ್ಯಗಳಲ್ಲಿ ಸುಮಾರು 2000 ಕನ್ನಡ ಕುಟುಂಬಗಳು ಇವೆ. ಎಲ್ಲರಿಗೂ ಟಿಕೆಟ್‌ ಸಿಗಲಿ ಎನ್ನುವ ಉದ್ದೇಶದಿಂದ ಮತ್ತು ಎರಡನೇ ಸಲ ನೋಡುವವರಿಗೆ ಅನುಕೂಲವಾಗಲಿ ಎಂದು 15 ಪ್ರದರ್ಶನಗಳ ವ್ಯವಸ್ಥೆಯಾಗಿದೆ.

ಅಧ್ಯಕ್ಷ ಜಾರ್ಜ್‌ ಬುಷ್‌ ಕೂಡ ‘ಮುಂಗಾರು ಮಳೆ’ ಚಿತ್ರ ವೀಕ್ಷಿಸಲು ಬರುವವರಿದ್ದರೆಂತಲೂ, ಆದರೆ ಸೆಕ್ಯೂರಿಟಿ ಕಾರಣಗಳಿಗಾಗಿ ಕೊನೆ ಕ್ಷಣದಲ್ಲಿ ಕನ್ನಡ ಸಿನಿಮಾದ ಮಜ ತಪ್ಪಿಸಿಕೊಳ್ಳುತ್ತಿದ್ದಾರೆಂತಲೂ, ನಮ್ಮ ಕ್ಯಾಪಿಟಾಲ್‌ ವರದಿಗಾರರು ನ್ಯೂಸ್‌ ಅನ್ನು ಫ್ಯಾಕ್ಸ್‌ನಲ್ಲಿ ಕಳಿಸಿದ್ದಾರೆ.

ಸ್ಥಳೀಯ ಕನ್ನಡ ಸಂಘ ಕಾವೇರಿ ಆಶ್ರಯದಲ್ಲಿ ಏರ್ಪಾಟಾಗಿರುವ ಮುಂಗಾರು ಸಿನಿಮಾ ಹಬ್ಬಕ್ಕೆ ಕನ್ನಡಿಗರು ತುದಿಗಾಲಲ್ಲಿ ನಿಂತಿರುವುದಂತೂ ನಿಜ. ಮುಂಗಾರು ಮಳೆಯ ಹನಿಗಳ ಲೀಲೆಗಳ ಭಾವಸಿಂಚನಕ್ಕೆ ಒದ್ದೆಯಾಗಲು ಅವರೆಲ್ಲ ಸಿದ್ಧರಾಗಿದ್ದಾರೆ. ಶುಕ್ರವಾರ ಮೊದಲ ಪ್ರದರ್ಶನದ ನಂತರ ಆನ್‌ ದಿ ಬಾರ್ಡರ್‌ ರೆಸ್ಟೋರೆಂಟಿನಲ್ಲಿ 6.30 ಗಂಟೆಗೆ ‘ಮುಂಗಾರು ಮಳೆ’ ಹರಟೆಯೂ ಇದೆ. ಇಂಥ ಹರಟೆಗಳಿಗೆ ಅಮೆರಿಕನ್ನರು ಹ್ಯಾಪಿ ಅವರ್‌ ಎನ್ನುತ್ತಾರೆ.

ನೀವು ಈ ಸುದ್ದಿ ಓದುವ ಹೊತ್ತಿಗೆ ಟಿಕೇಟುಗಳು ಸೋಲ್ಡ್‌ ಔಟ್‌ ಆಗಿದ್ದರೆ ನಾವು ಜವಾಬ್ದಾರರಲ್ಲ ನೆನಪಿಡಿ! ಯಾವುದಕ್ಕೂ ಸಿನಾಮಾಸಕ್ತರು ಈ ಕೆಳಕಂಡವರಲ್ಲಿ ಟ್ರೆೃ ಮಾಡಬೇಕು. ಟಿಕೀಟು ಸಿಕ್ಕರೆ ನೀನೇನೇ ನನ್ನವಳೆಂದು ಹಾಡು ಹೇಳಿ, ಸಿಗದಿದ್ದರೆ ನೀನು ನನ್ನವಳಲ್ಲವೇ ಅಲ್ಲ ರಾಜಿಮಾಡಿಕೊಳ್ಳಿ.

ಫೋನ್‌ ಮಾಡಿ : ಸ್ವಾಮಿ (703) 626-6565 ಅಥವಾ ನೀತಾ (571) 344 1539

ಕಡೆ ಮಾತು : ಈ ವಿಚಾರಗಳನ್ನು ನಿಮಗೆ ಬರೆದು ್ಠ ಹೇಳಿಮುಗಿಸುವ ಹೊತ್ತಿಗೆ ಸರಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್‌ ಭಟ್‌ ದಟ್ಸ್‌ಕನ್ನಡಕ್ಕೆ ಫೋನ್‌ ಮಾಡಿದರು. ಅವರಿಗೆ ‘ಮುಂಗಾರು ಮಳೆ’ಯ ಅಮೆರಿಕ ದಿಗ್ವಿಜಯದ ಬಗ್ಗೆ ಹೇಳಲಾಯಿತು. ಮುಂಗಾರು ಮಳೆಯ ಜನಪ್ರಿಯತೆ ಗುಟ್ಟೇನು ಭಟ್ಟರೆ? ಅಂತ ಅವರನ್ನು ಆನ್‌ ದಿ ಸ್ಪಾಟ್‌ ಸಂದರ್ಶನ ಮಾಡಲಾಯಿತು.

ಅವರ ಪ್ರಕಾರ : ‘ಮುಂಗಾರು ಮಳೆ’ ಅಂಥ ಗ್ರೇಟ್‌ ಸಿನಿಮಾ ಅಲ್ಲ. ಆದರೂ ಜನ ಮುಗಿಬಿದ್ದು ನೋಡ್ತಾರೆ. ಅದೇ ಸಿನಿಮಾದ ಸ್ವಾರಸ್ಯ, ಕನಸುಗಳ ರಾಜ್ಯ.

ಒಳ್ಳೆ ಸಿನಿಮಾ ನೋಡಿ ಅನುಭವಿಸಬೇಕೆಂಬ ಕನ್ನಡಿಗರ ದೀರ್ಘ ಕಾಲದ ಹಸಿವು ಮತ್ತು ಬಾಯಾರಿಕೆ ‘ಮುಂಗಾರು ಮಳೆ’ಯಲ್ಲಿ ಅಭಿವ್ಯಕ್ತಿಗೊಂಡಿದೆ. ಕನ್ನಡ ಜನ ಕನ್ನಡ ಸಿನಿಮಾ ನೋಡುವುದಕ್ಕೆ ಇನ್ನೂ ಆಸೆ ಇಟ್ಟುಕೊಂಡಿದ್ದಾರೆ ಎನ್ನುವುದಕ್ಕೆ ಮಳೆಸಾಕ್ಷಿ. ಈ ಚಿತ್ರ ಒಂದು ಬಗೆಯ ಸಮೂಹ ಸನ್ನಿಯಾದುದು ಏಕೆ ಎಂದು ಸಮಾಜ ವಿಜ್ಞಾನಿಗಳು ತನಿಖೆ ಮಾಡಿದರೆ ಒಳ್ಳೆಯದು. ಅಂಥವರು ನಮ್ಮಲ್ಲಿ ಯಾರಾದರೂ ಇದ್ದಾರಾ ಶಾಮ್‌?.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X